ಶಿವಮೊಗ್ಗದ ಬೊಮ್ಮನಕಟ್ಟೆ ಮುಖ್ಯರಸ್ತೆಯಲ್ಲಿರುವ ಕೆರೆಯ ಬಳಿ ಸುರಿದಿರುವ ಕಸದಲ್ಲಿ ಹಸು ಆಹಾರ ಹುಡುಕುತ್ತಿರುವುದು
ತೀರ್ಥಹಳ್ಳಿ ತಾಲ್ಲೂಕು ಮುನ್ನೂರು ಗ್ರಾಮದ ಬಳಿ ಘನ ತ್ಯಾಜ್ಯ ಸುರಿದಿರುವುದು
ಹೊಸನಗರ ತಾಲ್ಲೂಕಿನ ಘಾಟ್ ರಸ್ತೆಯಲ್ಲಿ ಬಿದ್ದ ತ್ಯಾಜ್ಯವನ್ನು ಪರಿಸರ ಪ್ರೇಮಿಗಳು ಹೆಕ್ಕಿ ಸ್ವಚ್ಛ ಮಾಡುತ್ತಿರುವುದು
ಭದ್ರಾವತಿ ನಗರದ ಖಾಲಿ ಜಾಗಗಳಲ್ಲಿ ಕಸ ಸುರಿದಿರುವುದು
ಶಿಕಾರಿಪುರದ ಹುಚ್ಚರಾಯನ ಕೆರೆ ಪಕ್ಕದ ರಸ್ತೆ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಗೂಳಿಯೊಂದು ತಿನ್ನುತ್ತಿರುವುದು
ಮಳೆ ಆರಂಭವಾಗುತ್ತಿದ್ದಂತೆ ಘಟಕದ ಕೊಳಚೆ ನೀರು ಸುತ್ತಲಿನ ಜಮೀನು ಸೇರುತ್ತಿದೆ. ಕುಡಿಯುವ ನೀರಿನ ಬಾವಿಗೂ ಸೇರಿ ಅಂತರ್ಜಲ ಕಲುಷಿತಗೊಳ್ಳುತ್ತಿದೆ
–ಸುಧಾಕರ ಮುನ್ನೂರು ಸ್ಥಳೀಯಪ್ರವಾಸಿಗರು ಪರಿಸರ ಮಲಿನಗೊಳ್ಳದಂತೆ ಜಾಗ್ರತೆ ವಹಿಸಬೇಕು. ಸ್ವಚ್ಛತೆ ಕಾಪಾಡುವ ಕೆಲಸಕ್ಕೆ ಸಹಕಾರ ನೀಡಬೇಕು
– ಮಾಯಣ್ಣ ಗೌಡ ಮಹಾನಗರ ಪಾಲಿಕೆ ಆಯುಕ್ತದುರ್ವಾಸನೆಯಿಂದ ಕಂಗೆಟ್ಟ ಗ್ರಾಮಸ್ಥರು- ನಿರಂಜನ ವಿ. ತೀರ್ಥಹಳ್ಳಿ:
ಮುನ್ನೂರು ಗ್ರಾಮದ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಸ ಸಂಸ್ಕರಣೆ ಆಗುತ್ತಿಲ್ಲ. ಸಂಗ್ರಹಿಸಿದ ತ್ಯಾಜ್ಯವು ನಾಯಿ ದನ ನರಿ ಕಾಗೆ ಕೊಕ್ಕರೆ ಸೇರಿ ಪ್ರಾಣಿ-ಪಕ್ಷಿಗಳಿಗೆ ಆಹಾರವಾಗುತ್ತಿದೆ. ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವತಿಯಿಂದ 2004ರಲ್ಲಿ 6 ಎಕರೆ ಪ್ರದೇಶದಲ್ಲಿ ಘಟಕ ಸ್ಥಾಪಿಸಲಾಗಿದೆ. ದುರ್ವಾಸನೆ ಕಾರಣ ನಿತ್ಯ ಈ ದಾರಿಯಲ್ಲಿ ಜನ ಮೂಗು ಮುಚ್ಚಿಕೊಂಡು ತಿರುಗಾಡುವ ಸ್ಥಿತಿ ಇದೆ. ಹಸಿ ಕಸ ಒಣಕಸ ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆಗಾಗಿ ಪ್ರತಿ ವರ್ಷ ಪಟ್ಟಣ ಪಂಚಾಯಿತಿಯಿಂದ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಲಾಗುತ್ತಿದೆ. ಆದರೆ ಕೆಲಸಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಮೀನು ಮಾಂಸದ ತ್ಯಾಜ್ಯ ಹಾಗೂ ಕೊಳೆತ ತರಕಾರಿಗಳನ್ನು ಬೇಕಾಬಿಟ್ಟಿ ಚೆಲ್ಲಲಾಗುತ್ತಿದೆ. ಈ ತ್ಯಾಜ್ಯವನ್ನು ತಿನ್ನುವ ನಾಯಿಗಳು ವಾರಸುದಾರರ ಮನೆಗೆ ಮರಳಿದ ನಂತರ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಮಲೆನಾಡಿಗೆ ಶಾಪವಾಗಿರುವ ಪ್ರವಾಸಿಗರು- ಎಂ.ರಾಘವೇಂದ್ರ
ಸಾಗರ: ಈ ಭಾಗದ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದಾಗಿ ಇಲ್ಲಿನ ಕೆಲ ಉದ್ಯಮ ಬೆಳೆಯಲು ಸಹಕಾರಿಯಾಗಿದ್ದರೂ ತ್ಯಾಜ್ಯದ ವಿಷಯದಲ್ಲಿ ಪ್ರವಾಸಿಗರೇ ಶಾಪವಾಗಿದ್ದಾರೆ. ಮಳೆಗಾಲದಲ್ಲಿ ಜೋಗ ಜಲಪಾತ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರು ಸಿಗಂದೂರು ಕ್ಷೇತ್ರಕ್ಕೆ ಹುಣ್ಣಿಮೆ ಅಮಾವಾಸ್ಯೆ ಸೇರಿ ಹಲವು ಸಂದರ್ಭಗಳಲ್ಲಿ ಬರುವ ಭಕ್ತರು ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ನಗರದ ಹೊರ ವಲಯಗಳಲ್ಲಿ ಪ್ಲಾಸ್ಟಿಕ್ ಕವರ್ ಬಾಟಲ್ ಸೇರಿ ತ್ಯಾಜ್ಯಗಳನ್ನು ಎಸೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಮೋಜು ಮಸ್ತಿ ಮಾಡುವವರಿಂದಲೂ ಕಸದ ರಾಶಿ ಸೃಷ್ಟಿಯಾಗುತ್ತಿದೆ. ಸಾಗರಕ್ಕೆ ಸಮೀಪದ ಗ್ರಾಮಗಳ ಅರಣ್ಯ ಪ್ರದೇಶ ಸಂಜೆಯಾಗುತ್ತಿದ್ದಂತೆ ಮದ್ಯವ್ಯಸನಿಗಳ ತಾಣವಾಗುತ್ತಿದೆ. ಮದ್ಯದ ಬಾಟಲಿ ಪ್ಲಾಸ್ಟಿಕ್ ಲೋಟ ಪ್ಲೇಟ್‌ಗಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಕೆಲವೆಡೆ ಹಗಲಿನಲ್ಲೂ ಇಂತಹ ಚಟುವಟಿಕೆ ನಡೆಯುತ್ತಿದ್ದು ಹೆಣ್ಣುಮಕ್ಕಳು ತಿರುಗಾಡಲು ಭಯ ಪಡಬೇಕಾದ ಸ್ಥಿತಿ ಇದೆ. ಹೀಗೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯುತ್ತಿರುವುದರಿಂದ ಜಾನುವಾರುಗಳ ಮೇಲೂ ಪರಿಣಾಮ ಬೀರುತ್ತಿದೆ. ಆರೋಗ್ಯ ಹದಗೆಟ್ಟ ಜಾನುವಾರುಗಳ ಶಸ್ತ್ರ ಚಿಕಿತ್ಸೆ ನಡೆಸಿ ಅವುಗಳ ಹೊಟ್ಟೆಯಿಂದ ಕೆ.ಜಿ.ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಹೊರತೆಗೆದ ಉದಾಹರಣೆಗಳೂ ಇವೆ. ಈ ಭಾಗದ ಅಂಗಡಿಗಳಲ್ಲಿ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ರಾಜಾರೋಷವಾಗಿ ಮಾರಾಟ ಮಾಡುತ್ತಿರುವುದಕ್ಕೆ ತಡೆಯೊಡ್ಡಬೇಕು ಎಂದು ಒತ್ತಾಯಿಸಿ ಸಾಗರ ತಾಲ್ಲೂಕಿನ ಚಿಪ್ಪಳಿ- ಲಿಂಗದಹಳ್ಳಿ ಶಿವಪ್ಪನಾಯಕ ಗ್ರಾಮ ಅರಣ್ಯ ಸಮಿತಿ ಮುಖಂಡರು ಪೌರಾಯುಕ್ತರು ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ ಮಾಡಿದ್ದಾರೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದಕ್ಕೆ ನಿಯಂತ್ರಣ ಹೇರದಿದ್ದರೆ ಜಾನುವಾರುಗಳಿಗೆ ಅನಾಹುತ ಕಟ್ಟಿಟ್ಟ ಬುತ್ತಿ ಎಂದು ನಿವೃತ್ತ ಪಶು ವೈದ್ಯ ಶ್ರೀಪಾದರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.
ಶರಾವತಿ ಒಡಲು ಸೇರುತ್ತಿದೆ ಪಟ್ಟಣದ ತ್ಯಾಜ್ಯ- ರವಿ ನಾಗರಕೊಡಿಗೆ
ಹೊಸನಗರ: ತಾಲ್ಲೂಕಿನ ಶರಾವತಿ ನದಿ ಒಡಲಿಗೆ ಪಟ್ಟಣದ ತ್ಯಾಜ್ಯ ಸೇರುತ್ತಿದ್ದು ಜೀವನದಿ ಕಲುಷಿತವಾಗುತ್ತಿದೆ. ಇಲ್ಲಿನ ಕಲ್ಲುಹಳ್ಳ ಜಯನಗರ ಸೇತುವೆ ಮತ್ತಿತರ ಹಿನ್ನೀರ ಪ್ರದೇಶದಲ್ಲಿ ತ್ಯಾಜ್ಯವನ್ನು ಸುರಿಯುವ ಪರಿಪಾಠ ಮುಂದುವರಿದಿದೆ. ಇದರಿಂದ ಶರಾವತಿ ನದಿ ದಡದ ತುಂಬೆಲ್ಲಾ ಪಟ್ಟಣದ ಘನತ್ಯಾಜ್ಯ ಶೇಖರಣೆಯಾಗುತ್ತಿದೆ. ಇದು ನೇರವಾಗಿ ನದಿ ಸೇರಿ ಶುದ್ಧ ನೀರು ಕಲುಷಿತವಾಗುತ್ತಿದೆ. ಶರಾವತಿ ನದಿ ನೀರನ್ನು ಅನೇಕ ಕಡೆಗಳಲ್ಲಿ ಕುಡಿಯಲು ಬಳಸುತ್ತಿದ್ದು ಈ ಪ್ಲಾಸ್ಟಿಕ್ ಅಂಶವು ಮನುಷ್ಯರ ಉದರ ಸೇರಿ ಆರೋಗ್ಯ ಸಮಸ್ಯೆ ಸೃಷ್ಟಿಸುತ್ತಿದೆ. ಶರಾವತಿ ನದಿ ಮತ್ತು ಕಾಡಂಚಿನಲ್ಲಿ ಪಟ್ಟಣದ ತ್ಯಾಜ್ಯವನ್ನು ಸುರಿಯುವುದರಿಂದ ಜಾನುವಾರುಗಳು ತಿಂದು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಇಲ್ಲಿನ ಹುಲಿಕಲ್ ಮತ್ತು ನಾಗೋಡಿ ಘಾಟ್ ರಸ್ತೆ ತುಂಬೆಲ್ಲಾ ಕಸದ ರಾಶಿ ಬಿದ್ದಿದೆ. ಪ್ರವಾಸಿಗರು ತಿಂದೆಸೆದ ಕಸ ಸೇರಿ ಅಕ್ರಮವಾಗಿ ಎಸೆಯುತ್ತಿರುವ ಕಸದ ರಾಶಿಯಿಂದ ಇಲ್ಲಿನ ಪರಿಸರ ಹಾಳಾಗುತ್ತಿದೆ. ಸುತ್ತಮುತ್ತಲಿನ ಕೋಳಿ ಫಾರಂಗಳ ತ್ಯಾಜ್ಯವನ್ನು ಘಾಟ್ ರಸ್ತೆ ಕಣಿವೆಯಲ್ಲಿ ಎಸೆಯುವ ಪರಿಪಾಠ ಮುಂದುವರಿದಿದೆ. ಈ ತ್ಯಾಜ್ಯ ಘಾಟಿಯ ತುಂಬಾ ವ್ಯಾಪಿಸುತ್ತಿದೆ. ಪ್ರಾಣಿ ಪಕ್ಷಿಗಳು ಈ ತ್ಯಾಜ್ಯವನ್ನು ಪರಮಾನ್ನವೆಂದು ತಿಂದು ಸಮಸ್ಯೆಗೆ ತುತ್ತಾಗುತ್ತಿವೆ. ಈ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿನ ಸಮಾನ ಮನಸ್ಕ ಪರಿಸರ ಪ್ರೇಮಿಗಳ ತಂಡ ವರ್ಷಕ್ಕೊಮ್ಮೆ ರಸ್ತೆಯಲ್ಲಿ ಬಿದ್ದ ಕಸ ಹೆಕ್ಕಿ ಸ್ವಚ್ಛ ಮಾಡುತ್ತಿದೆ.
ಮದ್ಯ ವ್ಯಸನಿಗಳ ತಾಣವಾದ ಕುಂಸಿ ರೈಲು ನಿಲ್ದಾಣ, ರಸ್ತೆ- ವರುಣ್ ಕುಮಾರ್ ಡಿ.
ಕುಂಸಿ: ಇಲ್ಲಿನ ರೈಲು ನಿಲ್ದಾಣ ರಸ್ತೆ ಕುಡುಕರ ನೆಚ್ಚಿನ ತಾಣವಾಗಿದೆ. ರಸ್ತೆಯ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳ ಚೂರುಗಳು ಬಿದ್ದಿವೆ. ಇದರಿಂದ ಜನಸಾಮಾನ್ಯರು ಓಡಾಡುವುದು ಕಷ್ಟವಾಗಿದೆ. ರೈಲು ನಿಲ್ದಾಣದ ರಸ್ತೆ ಬಯಲು ಪ್ರದೇಶವಾದ್ದರಿಂದ ಸ್ಥಳೀಯರು ಹಾಗೂ ಜನರು ಊರಿನ ಎಲ್ಲಾ ತ್ಯಾಜ್ಯವನ್ನು ತಂದು ರಸ್ತೆಯ ಪಕ್ಕದಲ್ಲಿಯೇ ಸುರಿಯುತ್ತಿದ್ದಾರೆ. ಅದು ಕೊಳೆತು ದುರ್ವಾಸನೆ ಬೀರುತ್ತಿದೆ. ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ. ರೈಲು ನಿಲ್ದಾಣದ ರಸ್ತೆಯಲ್ಲಿ ತ್ಯಾಜ್ಯವನ್ನು ತಂದು ಸುರಿಯಬಾರದು. ಸರ್ಕಾರಿ ಆಸ್ತಿಯನ್ನು ಕಾಪಾಡಿಕೊಳ್ಳಬೇಕು ಎಂದು ರೈಲ್ವೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಖಾಲಿ ನಿವೇಶನಗಳಲ್ಲಿ ಕಸದ ರಾಶಿ- ಕಿರಣ್ ಕುಮಾರ್
ಭದ್ರಾವತಿ: ನಗರದ ಖಾಲಿ ನಿವೇಶನಗಳಲ್ಲಿ ಕಸದ ರಾಶಿ ಹೆಚ್ಚುತ್ತಿದೆ. ಚಿಕ್ಕ ಪುಟ್ಟ ಸಭೆ ಸಮಾರಂಭ ನಡೆಸುವವರು ಮತ್ತು ಕ್ಯಾಂಟೀನ್ ವ್ಯಾಪಾರಿಗಳು ತ್ಯಾಜ್ಯ ವಸ್ತುಗಳನ್ನು ಖಾಲಿ ನಿವೇಶನಗಳಲ್ಲಿ ಮತ್ತು ಅಡ್ಡರಸ್ತೆಗಳಲ್ಲಿ ಬಿಸಾಡುತ್ತಿದ್ದು ದನ ಕರುಗಳು ಹಾಗೂ ನಗರದ ಸ್ವಚ್ಛತೆಗೆ ಹಾನಿಯಾಗುತ್ತಿದೆ. ಖಾಲಿ ನಿವೇಶನಗಳ ಸ್ವಚ್ಛತೆ ನಗರಸಭೆ ವ್ಯಾಪ್ತಿಗೆ ಬಾರದಿರುವುದರಿಂದ ನಿವೇಶನಗಳ ಮಾಲೀಕರೇ ಅದರ ಸ್ವಚ್ಛತೆ ಕಾಪಾಡಬೇಕಿದೆ. ಸಾಧ್ಯವಾದಲ್ಲಿ ಬೇಲಿಗಳನ್ನು ನಿರ್ಮಿಸಬೇಕು. ನಗರದ ಸ್ವಚ್ಛತೆಗಾಗಿ ಪೌರ ಕಾರ್ಮಿಕರ ಜೊತೆ ಎಲ್ಲರೂ ಕೈ ಜೋಡಿಸಬೇಕು ಎಂದು ನಗರ ಸಭೆ ಆಯುಕ್ತ ಮನು ಕುಮಾರ್ ಮನವಿ ಮಾಡಿದರು. ನಗರ ಸಭೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಏರ್ಪಡಿಸಿದರೂ ಮನೆಗಳ ಬಾಗಿಲಿಗೇ ಕಸದ ಗಾಡಿಗಳು ಬಂದರೂ ಅಲ್ಲಲ್ಲಿ ಕಸ ಬಿಸಾಡುವ ಪ್ರವೃತ್ತಿ ಕಡಿಮೆಯಾಗಿಲ್ಲ. ಅಡ್ಡ ರಸ್ತೆಗಳಲ್ಲಿ ಖಾಲಿ ನಿವೇಶನಗಳಲ್ಲಿ ಕಸದ ರಾಶಿ ಹೆಚ್ಚುತ್ತಿದೆ. ಇದು ಹೀಗೆಯೇ ಮುಂದುವರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಟ್ಟಣದ ಸೌಂದರ್ಯಕ್ಕೆ ಮಾರಕ- ಎಚ್.ಎಸ್. ರಘು
ಶಿಕಾರಿಪುರ: ಪಟ್ಟಣದ ಗಡಿಭಾಗದ ರಸ್ತೆ ಬದಿಗಳಲ್ಲಿ ತ್ಯಾಜ್ಯದ ರಾಶಿ ಕಾಣ ಸಿಗುತ್ತಿದ್ದು ಪಟ್ಟಣದ ಸೌಂದರ್ಯಕ್ಕೆ ಧಕ್ಕೆಯಾಗಿದೆ. ಪಟ್ಟಣದಿಂದ ಹೊನ್ನಾಳಿಗೆ ತೆರಳುವ ರಸ್ತೆ ಹುಚ್ಚರಾಯನಕೆರೆ ದಡದ ಪಕ್ಕದ ರಸ್ತೆ ಬದಿಯಲ್ಲಿ ಹಾಗೂ ಶಿರಾಳಕೊಪ್ಪ ರಸ್ತೆ ಬದಿಯಲ್ಲಿ ತ್ಯಾಜ್ಯ ವಸ್ತುಗಳು ಕಾಣ ಸಿಗುತ್ತವೆ. ಪ್ಲಾಸ್ಟಿಕ್ ಕವರ್ ಹಾಗೂ ಪ್ಲಾಸ್ಟಿಕ್ ಬಾಟಲಿಗಳ ರಾಶಿ ಕಂಡು ಬರುತ್ತಿದೆ. ಈ ರಸ್ತೆಗಳಲ್ಲಿರುವ ರುದ್ರಭೂಮಿಯ ಮುಂಭಾಗ ಹಾಸಿಗೆ ಹಾಗೂ ಉಡುಪುಗಳನ್ನು ಬಿಸಾಡಲಾಗಿದೆ. ರಂಗಮಂದಿರ ತಾಲ್ಲೂಕು ಕಚೇರಿ ಹಾಗೂ ಆಡಳಿತ ಸೌಧ ಕಟ್ಟಡಗಳ ಆವರಣ ಯಾತ್ರಿ ನಿವಾಸ ಮದ್ಯವ್ಯಸನಿಗಳ ತಾಣವಾಗಿ ಮಾರ್ಪಟ್ಟಿದ್ದು ಮದ್ಯದ ಖಾಲಿ ಬಾಟಲಿಗಳು ಹಾಗೂ ಪೌಚ್‌ಗಳು ಕಾಣಸಿಗುತ್ತವೆ. ಕಸದ ರಾಶಿ ಹಾಕದಂತೆ ನಾಗರಿಕರಿಗೆ ಹಲವು ಬಾರಿ ಸೂಚನೆ ನೀಡಲಾಗಿದೆ. ಪುರಸಭೆ ಸಿಬ್ಬಂದಿ ಪ್ರತಿ ವಾರ ಕಸದ ರಾಶಿ ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೂ ನಾಗರಿಕರು ಪದೇ ಪದೇ ಕಸ ಹಾಕುತ್ತಿದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಭರತ್ ತಿಳಿಸಿದರು.