ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ಆನ್‌ಲೈನ್‌ ವಂಚನೆ; 8 ತಿಂಗಳಲ್ಲಿ ₹4.96 ಕೋಟಿ ಪಂಗನಾಮ!

ಎಚ್ಚರ; ಷೇರು ಟ್ರೇಡ್ ಬ್ಯುಸಿನೆಸ್‌ ಹೆಸರಲ್ಲಿ ವಂಚಕರು ಬಲೆ ಬೀಸುತ್ತಾರೆ
Published : 11 ಸೆಪ್ಟೆಂಬರ್ 2024, 6:22 IST
Last Updated : 11 ಸೆಪ್ಟೆಂಬರ್ 2024, 6:22 IST
ಫಾಲೋ ಮಾಡಿ
Comments

ಶಿವಮೊಗ್ಗ: ಅಧಿಕ ಲಾಭದ ನಿರೀಕ್ಷೆಯ ಹೂಡಿಕೆದಾರರು ಹಾಗೂ ದಿಢೀರ್‌ ಶ್ರೀಮಂತರಾಗುವ ಕನಸಿನವರನ್ನೇ ಗುರಿಯಾಗಿಸಿಕೊಂಡು ಷೇರು ಟ್ರೇಡ್ ಬ್ಯುಸಿನೆಸ್‌ ಹೆಸರಲ್ಲಿ ಆನ್‌ಲೈನ್‌ ವಂಚನೆ ಮಾಡಲಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 21 ತಿಂಗಳಲ್ಲಿ 25 ಮಂದಿ ಅನಧಿಕೃತ ಷೇರು ವಹಿವಾಟಿನ ಆ್ಯಪ್‌ನ ವಂಚಕರ ಜಾಲಕ್ಕೆ ಸಿಲುಕಿದ್ದಾರೆ. ಬರೋಬ್ಬರಿ ₹ 6.27 ಕೋಟಿ ಹಣ ಕಳೆದುಕೊಂಡಿದ್ದಾರೆ.

ಎಂಟು ತಿಂಗಳಲ್ಲೇ ಹೆಚ್ಚು:

ಟ್ರೇಡ್ ಬ್ಯುಸಿನೆಸ್ ಹೆಸರಲ್ಲಿ 2023ರಲ್ಲಿ ₹ 1.30 ಕೋಟಿ ವಂಚನೆ ಆಗಿದ್ದರೆ, 2024ರಲ್ಲಿ ಜನವರಿಯಿಂದ ಆಗಸ್ಟ್ ಅಂತ್ಯದವರೆಗೆ 8 ತಿಂಗಳ ಅವಧಿಯಲ್ಲಿ ಹೂಡಿಕೆ ಮಾಡಿದವರು ₹ 4.96 ಕೋಟಿ ಕಳೆದುಕೊಂಡಿದ್ದಾರೆ. ದಿನೇದಿನೇ ಇಂತಹ ಪ್ರಕರಣ ಹೆಚ್ಚಳಗೊಳ್ಳುತ್ತಿವೆ. ವಂಚಕರೂ ಭಿನ್ನಭಿನ್ನ ರೀತಿಯಲ್ಲಿ ಬಲೆ ಬೀಸುತ್ತಿದ್ದಾರೆ. ಇದು ಪೊಲೀಸರಿಗೂ ತಲೆನೋವಾಗಿದೆ.

ವಂಚನೆ ಹೇಗೆ?:

‘ಡಿಮ್ಯಾಟ್ ಅಕೌಂಟ್ ಇಲ್ಲದೆಯೂ ಷೇರು ವಹಿವಾಟು ಮಾಡಬಹುದು ಎಂದು ನಂಬಿಸಿ ಹೂಡಿಕೆ ಮಾಡುವವರನ್ನು ಬಲೆಗೆ ಬೀಳಿಸಿಕೊಳ್ಳಲಾಗುತ್ತಿದೆ. ಟ್ರೇಡಿಂಗ್ ಹೆಸರಲ್ಲಿ ವಾಟ್ಸ್‌ ಆ್ಯಪ್‌ ಗುಂಪು ರಚಿಸಿ ಆಸಕ್ತರ ಮೊಬೈಲ್ ಫೋನ್‌ ಸಂಖ್ಯೆಯನ್ನು ಆ ಗುಂಪಿಗೆ ಸೇರಿಸಲಾಗುತ್ತದೆ. ಅದನ್ನು ತೆರೆದಾಗ ವಂಚಕರು ಸಂಪರ್ಕಕ್ಕೆ ಬರುತ್ತಾರೆ. ಷೇರು ಟ್ರೇಡಿಂಗ್‌ನಲ್ಲಿ ಒಳ್ಳೊಳ್ಳೆಯ ಅವಕಾಶಗಳು ಇವೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ನಿಮಗೆ ನಾವು ಸಹಾಯ ಮಾಡುತ್ತೇವೆ. ಜಾಸ್ತಿ ದುಡ್ಡು ಮಾಡಿಕೊಡುತ್ತೇವೆ ಎಂದು ಮಾತಿನಲ್ಲೇ ಮೋಡಿ ಮಾಡುತ್ತಾರೆ’ ಎಂದು ಶಿವಮೊಗ್ಗದ ಸಿಇಎನ್‌ (ಸೈಬರ್, ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್) ಪೊಲೀಸ್ ಠಾಣೆಯ ಡಿವೈಎಸ್‌ಪಿ ಕೆ.ಕೃಷ್ಣಮೂರ್ತಿ ವಂಚನೆಯ ಬಗೆಯನ್ನು ಬಿಚ್ಚಿಡುತ್ತಾರೆ.

ವಂಚಕರ ಮಾತು ನಂಬಿ ಲಿಂಕ್ ಒತ್ತಿದಾಗ ಟ್ರೇಡಿಂಗ್‌ ಆ್ಯಪ್ ಡೌನ್ಲೋಡ್ ಆಗುತ್ತದೆ. ಅದರಲ್ಲಿ ಮೊದಲು ಹೂಡಿಕೆ ಮಾಡಿದಾಗ ಅದು ನಮ್ಮ ಗಳಿಕೆ ತೋರಿಸುತ್ತಾ ಹೋಗುತ್ತದೆ. ಒಂದು ಲಕ್ಷ ಹೂಡಿಕೆ ಮಾಡಿದರೆ ಎರಡು ದಿನಗಳಲ್ಲಿ ಅದರಲ್ಲಿ ಲಾಭವೂ ಸೇರಿ ₹ 2 ಲಕ್ಷ ಆಗಿದೆ ಎಂದು ವರ್ಚ್ಯುವಲ್‌ನಲ್ಲಿ ಮಾತ್ರ ಕಾಣಿಸುತ್ತದೆ. ಆದರೆ ಬ್ಯಾಂಕ್ ಖಾತೆಯಲ್ಲಿ ಆ ಹಣ ಇರುವುದಿಲ್ಲ. ಇದು ಕೂಡ ವಂಚನೆಯ ಭಾಗ. ಅದೇ ರೀತಿ ಎರಡು ವಾರಗಳ ಕಾಲ ವಹಿವಾಟು ಮುಂದುವರೆಯುತ್ತದೆ. ಖಾತೆಯಲ್ಲಿ ಹೆಚ್ಚು ಹಣ ಜಮಾ ಆಗಿದೆ ಎಂದು ತೆಗೆದುಕೊಳ್ಳಲು ಮುಂದಾದರೆ ಆದಾಯ ತೆರಿಗೆ, ಜಿಎಸ್‌ಟಿ ನೆಪವೊಡ್ಡಿ ಇಷ್ಟು ಹಣ ಹಾಕಿದರೆ ಟ್ರೇಡಿಂಗ್‌ನಲ್ಲಿ ಗಳಿಸಿರುವ ಹಣ ಖಾತೆಯಿಂದ ಬಿಡಿಸಿಕೊಳ್ಳಲು ಸಾಧ್ಯ ಎಂದು ನಂಬಿಸಲಾಗುತ್ತದೆ. ಇಡೀ ಪ್ರಕ್ರಿಯೆ ಒಂದು ತಿಂಗಳವರೆಗೆ ಆಗುತ್ತದೆ. ಅವರು ಹೇಳಿದಷ್ಟು ಹಣ ಹಾಕಿ ಗಳಿಕೆಯ ಮೊತ್ತ ಬಿಡಿಸಿಕೊಳ್ಳಲು ಹೋದಾಗ ಮೋಸ ಆಗಿರುವುದು ಗೊತ್ತಾಗುತ್ತದೆ. ಸೈಬರ್ ಅಪರಾಧಗಳಲ್ಲಿ ಇದು ಈಗ ಅತಿಹೆಚ್ಚಿನ ಟ್ರೆಂಡಿಂಗ್‌ನಲ್ಲಿದೆ ಎಂದು ಅವರು ವಿವರಿಸುತ್ತಾರೆ.

‘ಪಾರ್ಟ್‌ ಟೈಂ ಜಾಬ್ ಹೆಸರಲ್ಲೂ ಇದೇ ರೀತಿ ಯಾವುದಾದರೂ ಹೋಟೆಲ್ ಇಲ್ಲವೇ ಜಾಗದ ಬಗ್ಗೆ ಅಭಿಪ್ರಾಯ (ರಿವೀವ್) ಬರೆಯುವಂತೆ ಹೇಳುತ್ತಾರೆ. ಬರೆಯುತ್ತಿದ್ದಂತೆಯೇ ಪಾಯಿಂಟ್ಸ್ ಸೇರಿಸುತ್ತಾ ಹೋಗುತ್ತಾರೆ. ಅದಕ್ಕೆ ತಕ್ಕಂತೆ ವರ್ಚ್ಯುವಲ್‌ನಲ್ಲಿ ನಮ್ಮ ಖಾತೆಗೆ ಹಣ ಹಾಕಲಾಗುತ್ತಿದೆ ಎಂದು ಬಿಂಬಿಸಲಾಗುತ್ತದೆ. ಇದೂ ಕೂಡ ವಂಚನೆಯ ಇನ್ನೊಂದು ಮಾದರಿ’ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ಮಾಹಿತಿ ನೀಡುತ್ತಾರೆ.

ವಂಚಕರ ಜಾಲ, ಉತ್ತರ ಭಾರತದವರೇ ಹೆಚ್ಚು:

ವಂಚಕರ ಜಾಲಗಳು ಬಹುತೇಕ ಬಿಹಾರ, ಉತ್ತರ ಪ್ರದೇಶ, ದೆಹಲಿ, ಪಂಜಾಬ್‌ ಸೇರಿದಂತೆ ಉತ್ತರ ಭಾರತದಿಂದ ಕಾರ್ಯಾಚರಣೆ ನಡೆಸುತ್ತವೆ. ಯಾರದ್ದೋ ಅಮಾಯಕರ ಹೆಸರಲ್ಲಿ ನಕಲಿ ದಾಖಲೆ ಕೊಟ್ಟು ಬ್ಯಾಂಕ್ ಖಾತೆ ಹಾಗೂ ಸಿಮ್ ಕಾರ್ಡ್ ಪಡೆದು ವಂಚನೆ ಪ್ರಕ್ರಿಯೆ ನಡೆಸುತ್ತಾರೆ. ವಂಚಕರ ಮಾತು ನಂಬಿ ಖಾತೆಗೆ ಹಣ ಹಾಕುತ್ತಿದ್ದಂತೆಯೇ ಕ್ಷಣ ಮಾತ್ರದಲ್ಲಿ ಅದು ವರ್ಗಾವಣೆ ಆಗುತ್ತದೆ. ಹೀಗಾಗಿ ಅವರನ್ನು ಪತ್ತೆ ಮಾಡುವುದು ಕಷ್ಟ ಆಗುತ್ತಿದೆ ಎಂಬುದು ಪೊಲೀಸರ ಅಭಿಮತ.

ಕೆ.ಕೃಷ್ಣಮೂರ್ತಿ ಸಿಇಎನ್ ಠಾಣೆ ಡಿವೈಎಸ್ಪಿ
ಕೆ.ಕೃಷ್ಣಮೂರ್ತಿ ಸಿಇಎನ್ ಠಾಣೆ ಡಿವೈಎಸ್ಪಿ

ವೈದ್ಯನಿಗೆ ₹ 84.85 ಲಕ್ಷ ವಂಚನೆ!

ಶಿವಮೊಗ್ಗ ಜಿಲ್ಲೆಯಲ್ಲಿ ಷೇರು ಟ್ರೇಡ್‌ ಹೆಸರಲ್ಲಿ ವಂಚನೆಗೆ ಒಳಗಾದವರಲ್ಲಿ ಸುಶಿಕ್ಷತರು ಹಾಗೂ ವ್ಯಾಪಾರಸ್ಥರೇ ಅತಿ ಹೆಚ್ಚು. ಸಾಗರದ ವೈದ್ಯರೊಬ್ಬರು ಕಳೆದ ಫೆಬ್ರುವರಿಯಲ್ಲಿ ₹ 84.85 ಲಕ್ಷ ಹಣ ಕಳೆದುಕೊಂಡಿದ್ದಾರೆ. ಆ ಬಗ್ಗೆ ಇಲ್ಲಿನ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿವಮೊಗ್ಗದ ಗೋಪಾಳದಲ್ಲಿ ವ್ಯಾಪಾರಿಯೊಬ್ಬರು ₹ 52 ಲಕ್ಷ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಅರಣ್ಯ ಇಲಾಖೆ ನೌಕರರೊಬ್ಬರು ₹ 32.45 ಲಕ್ಷ ವಿಜಯ ನಗರದಲ್ಲಿ ವ್ಯಾಪಾರಸ್ಥರೊಬ್ಬರು ₹ 11.88 ಲಕ್ಷ ಕಳೆದುಕೊಂಡಿದ್ದಾರೆ. ವಂಚನೆಗೊಳಗಾದವರು ತಕ್ಷಣ 1930ಗೆ ಕರೆ ಮಾಡಿ ಇಲ್ಲವೇ ಸಿಇಎನ್ ಠಾಣೆಗೆ ಬಂದು ದೂರು ಕೊಡಿ ಎಂದು  ಕೃಷ್ಣಮೂರ್ತಿ ಹೇಳುತ್ತಾರೆ.

ಷೇರು ಟ್ರೇಡಿಂಗ್ ಎಚ್ಚರ ವಹಿಸಿ: ಎಸ್‌.ಪಿ

ಷೇರು ಟ್ರೇಡಿಂಗ್ ಹೆಸರಲ್ಲಿ ಅಪರಿಚಿತರೊಂದಿಗೆ ವಹಿವಾಟು ನಡೆಸುವುದು ಸಂಕಷ್ಟಕ್ಕೆ ದಾರಿ ಆಗಲಿದೆ. ಹೀಗಾಗಿ ಹೂಡಿಕೆಯ ನಂಬಿಕೆಗೆ ಆರ್‌ಬಿಐನಿಂದ ಮನ್ನಣೆ ಪಡೆದ ಅರ್ಹ ಮೂಲಗಳೊಂದಿಗೆ ಮಾತ್ರ ವ್ಯವಹರಿಸಿ. ದಿನೇದಿನೇ ವಂಚನೆ ಪ್ರಕರಣ ಹೆಚ್ಚುತ್ತಿವೆ. ಜಿಲ್ಲೆಯ ಜನರು ಹೆಚ್ಚಿನ ಜಾಗೃತಿ ವಹಿಸಿ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ಹೇಳುತ್ತಾರೆ. ಸುತ್ತಲಿನ ಪರಿಸರದಲ್ಲೂ ಅರಿವು ಮೂಡಿಸಿ. ಮೊಬೈಲ್‌ ಫೋನ್‌ನ ವಾಟ್ಸ್‌ ಆ್ಯಪ್ ಹಾಗೂ ಫೇಸ್‌ಬುಕ್‌ನಲ್ಲಿ ಅನಾಮಧೇಯ ಲಿಂಕ್‌ಗಳನ್ನು ಒತ್ತಬೇಡಿ. ಭಾರೀ ಪ್ರಮಾಣದಲ್ಲಿ ಲಾಭಾಂಶ ಕೊಡುವ ಅಮಿಷಗಳಿಗೆ ಬಲಿಯಾಗಬೇಡಿ ಎಂದು ಮನವಿ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT