ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎರಡು ವರ್ಷದಲ್ಲಿ ಜೆಜೆಎಂ ಪೂರ್ಣ: ಸೋಮಣ್ಣ

ಗಾಂಧೀಜಿ, ಲಾಲ್‌ ಬಹದ್ದೂರ್ ಶಾಸ್ತ್ರಿ ಜಯಂತಿ
Published : 3 ಅಕ್ಟೋಬರ್ 2024, 6:20 IST
Last Updated : 3 ಅಕ್ಟೋಬರ್ 2024, 6:20 IST
ಫಾಲೋ ಮಾಡಿ
Comments

ತುಮಕೂರು: ರಾಜ್ಯದಲ್ಲಿ ಜಲ ಜೀವನ್‌ ಮಿಷನ್‌ (ಜೆಜೆಎಂ) ಯೋಜನೆಯ ಶೇ 22ರಷ್ಟು ಕೆಲಸ ಬಾಕಿ ಇದ್ದು, 2026ರ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ನಗರದಲ್ಲಿ ಬುಧವಾರ ಜಿಲ್ಲಾ ಆಡಳಿತ, ಮಹಾನಗರ ಪಾಲಿಕೆಯಿಂದ ಹಮ್ಮಿಕೊಂಡಿದ್ದ ಗಾಂಧೀಜಿ, ಲಾಲ್‌ ಬಹದ್ದೂರ್ ಶಾಸ್ತ್ರಿ ಜಯಂತಿ, ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುಡಿಯುವ ನೀರಿನ ಬವಣೆ ಹೋಗಲಾಡಿಸಲು ಜೆಜೆಎಂ ಅನುಷ್ಠಾನಕ್ಕೆ ತರಲಾಗಿದೆ. ಈ ಯೋಜನೆಯಡಿ ದೇಶದ 19.03 ಕೋಟಿ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಗುರಿ ನಿಗದಿ ಪಡಿಸಲಾಗಿತ್ತು. ಈ ಪೈಕಿ 15 ಕೋಟಿ (ಶೇ 78ರಷ್ಟು) ಮನೆಗೆ ಸಂಪರ್ಕ ನೀಡಲಾಗಿದೆ. ರಾಜ್ಯದಲ್ಲಿ 2019ರಲ್ಲಿ 24 ಲಕ್ಷ ಮನೆಗಳಲ್ಲಿ ಕುಡಿಯುವ ನೀರಿನ ನಲ್ಲಿ ಇತ್ತು. ಈಗ ಆ ಸಂಖ್ಯೆ 80 ಲಕ್ಷ ದಾಟಿದೆ ಎಂದರು.

‘ಗಾಂಧೀಜಿಯವರ ಸ್ವಚ್ಛ ಭಾರತ ಕನಸು ನನಸು ಮಾಡಲು ಸ್ವಚ್ಛ ಭಾರತ್‌ ಮಿಷನ್‌ ಯೋಜನೆ ಜಾರಿಗೊಳಿಸಿದ್ದು, ದೇಶವನ್ನು ಬಯಲು ಮುಕ್ತ ಶೌಚ ಮಾಡಲು 10.15 ಕೋಟಿ ಮನೆಗಳಿಗೆ ಶೌಚಾಲಯ ಒದಗಿಸಲಾಗಿದೆ. ಜಿಲ್ಲೆಯಲ್ಲಿ 4.55 ಲಕ್ಷ ಮನೆಗೆ ಶೌಚಾಲಯ ಕಲ್ಪಿಸಲಾಗಿದೆ. 5 ಕೋಟಿ ಹಳ್ಳಿಗಳನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿದೆ. ಯೋಜನೆಯ ಮುಂದಿನ ಭಾಗವಾಗಿ ಘನ ತ್ಯಾಜ್ಯ ನಿರ್ವಹಣೆಗೂ ಶ್ರಮಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ‘ಗಾಂಧೀಜಿ ಜನರ ಮನಸ್ಸು, ಪರಿಸರ, ಇಡೀ ಸಮಾಜ ಸ್ವಚ್ಛವಾಗಿರಬೇಕು ಎಂಬ ಪರಿಕಲ್ಪನೆ ಹೊಂದಿದ್ದರು. ಸ್ಮರಣೆಯ ಜತೆಗೆ ಅವರ ದಾರಿಯಲ್ಲಿ ‌ಸಾಗುತ್ತಾ, ಆದರ್ಶ ಪಾಲನೆ ಮಾಡಬೇಕು. ಮುಂದಿನ ಪೀಳಿಗೆಗೆ ಅವರ ತತ್ವ, ಸಿದ್ಧಾಂತ ಪರಿಚಯಿಸಬೇಕು. ಇದೇ ಉದ್ದೇಶದಿಂದ ಪ್ರತಿ ವರ್ಷ ಗಾಂಧಿ ಜಯಂತಿ ಆಚರಿಸಲಾಗುತ್ತಿದೆ’ ಎಂದು ತಿಳಿಸಿದರು.

ಇದೇ ಮೊದಲ ಬಾರಿಗೆ ಸರ್ಕಾರದಿಂದ ‘ತುಮಕೂರು ದಸರಾ’ ಆಚರಿಸಲಾಗುತ್ತಿದೆ. ಬಹಳ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ನಟ ಶಿವರಾಜ್‌ಕುಮಾರ್‌ ಸೇರಿ ಪ್ರಮುಖ ಸಿನಿ ತಾರೆಯರು ಭಾಗವಹಿಸಲಿದ್ದಾರೆ. ದೀಪಾಲಂಕಾರ, ಸಿಡಿಮದ್ದಿನ ಪ್ರದರ್ಶನ, ವಿಂಟೇಜ್ ಕಾರ್‌ ಪ್ರದರ್ಶನ ಇತರೆ ಕಾರ್ಯಕ್ರಮ ಏರ್ಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಪೌರ ಕಾರ್ಮಿಕರಿಗೆ ಕಾಯಮಾತಿ ಆದೇಶ ಪತ್ರ ನೀಡಲಾಯಿತು. ದಸರಾ ಉತ್ಸವದ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ನಗರದ ಸ್ವಚ್ಛತೆಗೆ ದುಡಿಯುವ ಪೌರ ಕಾರ್ಮಿಕರು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.

ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT