ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ಆಮೆ ವೇಗದಲ್ಲಿ ಸಾಗಿವೆ. ಎತ್ತಿನಹೊಳೆ ಭದ್ರಾ ಮೇಲ್ಡಂಡೆ ಕಾಮಗಾರಿಗಳು ಮುಂದಕ್ಕೆ ಸಾಗುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಈ ವರ್ಷದ ಸೆಪ್ಟೆಂಬರ್‌ಗೆ ಎತ್ತಿನಹೊಳೆ ಕಾಮಗಾರಿ ಮುಗಿಸಿ ನೀರು ಹರಿಸಲಾಗುವುದು ಎಂದು ಹೇಳಿತ್ತು. ಕಾಂಗ್ರೆಸ್ ಸರ್ಕಾರ ಮುಂದಿನ ವರ್ಷ ಪೂರ್ಣಗೊಳಿಸಲಾಗುವುದು ಎಂದು ಹೇಳುತ್ತಿದೆ. ಅಗತ್ಯ ಅನುದಾನ ನೀಡಿ ಕೆಲಸ ಚುರುಕು ಮಾಡದಿದ್ದರೆ ಮುಂದಿನ ವರ್ಷವಲ್ಲ ಇನ್ನೂ ಐದಾರು ವರ್ಷಗಳಾದರೂ ಯೋಜನೆ ಪೂರ್ಣಗೊಳ್ಳುವುದಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ₹5300 ಕೋಟಿ ನೆರವು ಪ್ರಕಟಿಸಿದೆ. ಆದರೆ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಯೋಜನೆಗೆ ಬೇಕಾದ ಭೂಮಿಯಲ್ಲಿ ಕಾಲು ಭಾಗದಷ್ಟೂ ಸ್ವಾಧೀನ ಪೂರ್ಣಗೊಂಡಿಲ್ಲ. ರಾಜ್ಯ ಸರ್ಕಾರ ಸಹ ಅಗತ್ಯ ಅನುದಾನ ನೀಡಿ ಚುರುಕುಗೊಳಿಸಬೇಕಿದೆ. ಈಗಿನ ವೇಗದಲ್ಲೇ ಸಾಗಿದರೆ ಇನ್ನೂ ಹತ್ತು ವರ್ಷ ಕಳೆದರೂ ಯೋಜನೆ ಪೂರ್ಣಗೊಳ್ಳುವುದಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಅಗತ್ಯ ಹಣ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ತೆವಳುತ್ತಿದೆ ರೈಲ್ವೆ ಯೋಜನೆ
ಜಿಲ್ಲೆಯಲ್ಲಿ ಎರಡು ಪ್ರಮುಖ ರೈಲ್ವೆ ಯೋಜನೆಗಳು ಜಾರಿಯಲ್ಲಿ ಇದ್ದರೂ ಕೇಂದ್ರ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಹಣವನ್ನು ಸಕಾಲದಲ್ಲಿ ನೀಡದೆ ತೆವಳುತ್ತಲೇ ಸಾಗಿವೆ. ತುಮಕೂರು– ರಾಯದುರ್ಗ ತುಮಕೂರು– ದಾವಣಗೆರೆ ರೈಲು ಮಾರ್ಗದ ಕಾಮಗಾರಿಗೆ ಚಾಲನೆ ನೀಡಿ ದಶಕವೇ ಕಳೆದಿದ್ದರೂ ಇನ್ನೂ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ರಾಯದುರ್ಗದಿಂದ ಪಾವಗಡದವರೆಗೆ ಕೆಲಸ ಪೂರ್ಣಗೊಂಡು ಪರೀಕ್ಷಾರ್ಥ ರೈಲು ಸಂಚಾರ ಮಾಡಿದೆ. ಆದರೆ ತುಮಕೂರು– ಪಾವಗಡ ನಡುವಿನ ಕೆಲಸ ಮುಂದಕ್ಕೆ ಸಾಗುತ್ತಿಲ್ಲ.