ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರಧ್ವಜಕ್ಕೆ ಅನುಮತಿ ಪಡೆದು ಕೇಸರಿ ಧ್ವಜ ಹಾರಿಸಿದ್ದಾರೆ: ಸಚಿವ ಪರಮೇಶ್ವರ

Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
ಅಕ್ಷರ ಗಾತ್ರ

ತುಮಕೂರು: ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು ಕೇಸರಿ ಧ್ವಜ ಹಾರಿಸಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಸರಿ ಧ್ವಜ ಹಾರಿಸಲು ಅನುಮತಿ‌ ನೀಡಿರಲಿಲ್ಲ. ಹಾಗಾಗಿ ಪಂಚಾಯಿತಿ ಅಧಿಕಾರಿಗಳು ಕೇಸರಿ ಧ್ವಜ ತೆಗೆದು, ರಾಷ್ಟ್ರಧ್ವಜ ಹಾರಿಸಿದ್ದಾರೆ ಎಂದು ಸಮರ್ಥಿಸಿಕೊಂಡರು.

ಇದರಿಂದ ಗಲಾಟೆಯಾಗಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಬೇರೆ ಬೇರೆ ಕಡೆಯಲ್ಲಿ ಕೇಸರಿ ಧ್ವಜ ಹಾರಿಸಲು ಯಾರದ್ದು ತಕರಾರು ಇಲ್ಲ. ಆದರೆ ಸರ್ಕಾರಿ ಜಾಗದಲ್ಲಿ ಹಾರಿಸಬಾರದು. ಇದು ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ನವರು ಹಿಂದೂ ವಿರೋಧಿಗಳು ಎಂದು ಬಿಂಬಿಸಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ನಾವು ಸಹ ಹಿಂದೂಗಳೇ, ನೀವು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿ ಎಂದು ಹೇಳುತ್ತಿದ್ದೇವೆ. ರಾಜ್ಯದ ಕಾನೂನು ಮುರಿಯುವ ಕೆಲಸ ಮಾಡಬೇಡಿ ಅಂತ ಹೇಳಿದರೂ ಅವರು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ’ ಎಂದು ಪರಮೇಶ್ವರ ಬೇಸರ ವ್ಯಕ್ತಪಡಿಸಿದರು. 

ಅಶೋಕ ವಶಕ್ಕೆ

ಮಂಡ್ಯ: ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಸೇರಿದಂತೆ ಹಲವು ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ಗ್ರಾಮದಲ್ಲಿ ಪ್ರತಿಭಟನಕಾರ ರೊಂದಿಗೆ ಧ್ವಜಸ್ತಂಭ ಸ್ಥಳಕ್ಕೆ ತೆರಳಲು ಮುಂದಾದಾಗ ಪೊಲೀಸರು ತಡೆದರು. ಬ್ಯಾರಿಕೇಡ್‌ ತಳ್ಳಿ ಮುಂದಕ್ಕೆ ಬರುವಾಗ ಪೊಲೀಸರು ಅಶೋಕ, ಶಾಸಕ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಸೇರಿ ಹಲವರನ್ನು ವಶಕ್ಕೆ ಪಡೆದರು.

ಆಕ್ರೋಶ ವ್ಯಕ್ತಪಡಿಸಿದ ಅಶೋಕ, ‘ಕಳ್ಳರ ರೀತಿಯಲ್ಲಿ ರಾತ್ರೋರಾತ್ರಿ ಹನುಮ ಧ್ವಜ ಇಳಿಸಿದ್ದಾರೆ. ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದು, ಸೋಮವಾರದಿಂದಲೇ (ಜ.29) ರಾಜ್ಯದಾದ್ಯಂತ ಹೋರಾಟ ಆರಂಭಿಸ ಲಾಗುವುದು. ಇದಕ್ಕೆ ಜೆಡಿಎಸ್‌ ಕೈಜೋಡಿಸಲಿದೆ’ ಎಂದು ತಿಳಿಸಿದರು.

ಮುಖ್ಯಮಂತ್ರಿ ಪ್ರತಿಕ್ರಿಯೆ: ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ‘ನಿಯಮ ಉಲ್ಲಂಘನೆ ಕಾರಣಕ್ಕೆ ಜಿಲ್ಲಾಡಳಿತ ಧ್ವಜ ಇಳಿಸುವಂತೆ ಸೂಚಿಸಿದೆ. ಆದರೆ, ಜಿಲ್ಲಾಡಳಿತದ ಸೂಚನೆ ತಿರಸ್ಕರಿಸಿ ಬಿಜೆಪಿ ನಾಯಕರು ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗುವಂತೆ ಮಾಡಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಹಾಕಿರುವ ಅವರು, ‘ಉದ್ದೇಶ ಪೂರ್ವಕವಾಗಿ ನಿಯಮ ಉಲ್ಲಂಘಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ಬಿಜೆಪಿ ಹಾಗೂ ಸಂಘ ಪರಿವಾರದ ಪೂರ್ವಯೋಜಿತ ಕೃತ್ಯ. ಮಂಡ್ಯದಲ್ಲಿ ಕೋಮು ಗಲಭೆ ಎಬ್ಬಿಸುವ ಸಂಚು ರೂಪಿಸಿರುವುದು ಬಿಜೆಪಿ ನಾಯಕರು ಲೋಕಸಭೆ ಚುನಾವಣೆಗೆ ನಡೆಸಿರುವ ತಯಾರಿಯಾಗಿದೆ’ ಎಂದು ಆರೋಪಿಸಿದ್ದಾರೆ.

ಫೆ. 9ಕ್ಕೆ ಮಂಡ್ಯ ಬಂದ್‌ಗೆ ಕರೆ

‘ಹನುಮ ದೇವರಿಗೆ ಕಾಂಗ್ರೆಸ್‌ ಸರ್ಕಾರ ಅಪಮಾನ ಮಾಡಿದೆ’ ಎಂದು ಆರೋಪಿಸಿರುವ ಬಜರಂಗದಳ ಫೆ.9ರಂದು ಮಂಡ್ಯ ನಗರ ಬಂದ್‌ಗೆ ಕರೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT