ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉದ್ಘಾಟನೆಯಾಗದ ಶಾಲೆಯ ಕಟ್ಟಡ: ವರಾಂಡದಲ್ಲೇ ಮಕ್ಕಳಿಗೆ ಪಾಠ

Published : 15 ಜನವರಿ 2024, 14:33 IST
Last Updated : 15 ಜನವರಿ 2024, 14:33 IST
ಫಾಲೋ ಮಾಡಿ
Comments

ತುಮಕೂರು: ನಗರದ ಬಾಲಭವನದ ಆವರಣದಲ್ಲಿರುವ ಕೃಷ್ಣರಾಜೇಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಕಾಮಗಾರಿ ಮುಗಿದು 3 ತಿಂಗಳು ಕಳೆದರೂ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ. ಕೊಠಡಿಗಳ ಕೊರತೆಯಿಂದ ಶಾಲೆಯ ಹಳೆಯ ಕಟ್ಟಡದ ವರಾಂಡದಲ್ಲೇ ಮಕ್ಕಳ ಕಲಿಕೆ ಮುಂದುವರಿದೆ.

ಈಗಿರುವ ಶಾಲೆಯ ಕಟ್ಟಡದ ಮುಂಭಾಗದಲ್ಲಿ ಸರ್ಕಾರದ ವಿವಿಧ ಯೋಜನೆಗಳಡಿ ಸುಮಾರು ₹70 ಲಕ್ಷ ವೆಚ್ಚದಲ್ಲಿ ಐದು ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಲಾಗಿದೆ. ನಿರ್ಮಾಣ ಕಾಮಗಾರಿ ಮುಗಿದರೂ ಇದುವರೆಗೆ ಮಕ್ಕಳ ಪ್ರವೇಶಕ್ಕೆ ಮಾತ್ರ ಅವಕಾಶ ಕಲ್ಪಿಸಿಲ್ಲ. ಶಾಲೆಯಲ್ಲಿ ಎಲ್‌ಕೆಜಿಯಿಂದ 7ನೇ ತರಗತಿಯ ವರೆಗೆ ಒಟ್ಟು 200 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಕೊಠಡಿಗಳ ಸಮಸ್ಯೆಯಿಂದಾಗಿ ಎಂಪ್ರೆಸ್‌ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳು ನಡೆಯುತ್ತಿವೆ. 1ರಿಂದ 7ನೇ ತರಗತಿಯ 140 ಮಕ್ಕಳಿದ್ದು, ಇವರಿಗೆ ಕೇವಲ 2 ಕೊಠಡಿಗಳಿವೆ. ಇಷ್ಟು ಸಂಖ್ಯೆಯ ಮಕ್ಕಳಿಗೆ ಈಗಿರುವ ಕೊಠಡಿಗಳು ಸಾಲುತ್ತಿಲ್ಲ. ಒಂದು ಕೊಠಡಿಯಲ್ಲಿ ಎರಡು ತರಗತಿಗಳನ್ನು ನಡೆಸುತ್ತಿದ್ದಾರೆ.

ಹಳೆಯ ಕಟ್ಟಡದಲ್ಲಿ ಒಟ್ಟು ಮೂರು ಕೊಠಡಿಗಳಿವೆ. 2ರಲ್ಲಿ ಮಕ್ಕಳ ಕಲಿಕೆ ನಡೆದರೆ, ಮತ್ತೊಂದರಲ್ಲಿ ಬಿಸಿಯೂಟ ತಯಾರಿಸಲಾಗುತ್ತಿದೆ. ಅದೇ ಕೊಠಡಿಯನ್ನು ಶಿಕ್ಷಕರೂ ಬಳಸಿಕೊಳ್ಳುತ್ತಿದ್ದಾರೆ. ಅಡುಗೆ ಕೋಣೆಯೇ ಕಚೇರಿಯಾಗಿ ಪರಿವರ್ತನೆಯಾಗಿದೆ. ಕೊಠಡಿಗಳ ಕೊರತೆ ನೀಗಿಸಲು ಹೊಸ ಕಟ್ಟಡದ ಉದ್ಘಾಟನೆಗೂ ಮುನ್ನವೇ ಒಂದು ಕೊಠಡಿ ಪಡೆದು ಅದರಲ್ಲಿ 5ನೇ ತರಗತಿಯ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ.

ಕೊಠಡಿ ಸೇರಿದಂತೆ ಅಗತ್ಯ ಸೌಲಭ್ಯಗಳು ಸಿಗದೆ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಇಲ್ಲಿನ ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಸ್ವಂತ ಕಟ್ಟಡಕ್ಕಾಗಿ ಜನಪ್ರತಿನಿಧಿಗಳು ಮತ್ತು ಸರ್ಕಾರದ ಮೇಲೆ ಒತ್ತಡ ತಂದಿದ್ದರು. ಮಕ್ಕಳು ಶಾಲೆಯ ಆವರಣದಲ್ಲಿ ಕೂತು ಕಲಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಗತ್ಯ ಕೊಠಡಿಗಳನ್ನು ನಿರ್ಮಿಸುವಂತೆ ಮನವಿ ಮಾಡಿದ್ದರು. ಎಲ್ಲರ ಪ್ರಯತ್ನದ ಫಲವಾಗಿ ಶಾಲೆಗೆ ಕೊಠಡಿಗಳ ನಿರ್ಮಾಣ ಕಾರ್ಯ ಮುಗಿದಿದೆ.

ಸರ್ಕಾರ ಹಲವು ಸೌಕರ್ಯಗಳನ್ನು ಕಲ್ಪಿಸಿದರೂ ಅವುಗಳನ್ನು ಅರ್ಹರಿಗೆ ತಲುಪಿಸುವ ಕೆಲಸ ಆಡಳಿತ ವರ್ಗದಿಂದ ಆಗುತ್ತಿಲ್ಲ. ಅಧಿಕಾರಿಗಳು ಮಕ್ಕಳ ಕಲಿಕೆಯ ವಿಷಯದಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುವುದಕ್ಕೆ ಶಾಲೆಯ ಸದ್ಯದ ಪರಿಸ್ಥಿತಿ ಒಂದು ಉದಾಹರಣೆಯಾಗಿದೆ.

ನಗರದ ಪ್ರಮುಖ ವ್ಯಾಪಾರ ವಲಯ ಎಂ.ಜಿ.ರಸ್ತೆಗೆ ಹೊಂದಿಕೊಂಡಂತೆ ಇರುವ, ಜಿಲ್ಲಾಧಿಕಾರಿ ಕಚೇರಿಯಿಂದ ಕೂಗಳತೆ ದೂರದಲ್ಲಿರುವ ಶಾಲೆಯ ಬಗ್ಗೆ ನಿರ್ಲಕ್ಷ್ಯ ಸಲ್ಲ. ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸಿ, ಶಾಲೆಯ ಕಟ್ಟಡವನ್ನು ಮಕ್ಕಳಿಗೆ ಕಲಿಕೆಗೆ ನೀಡಬೇಕು ಎಂಬುವುದು ಜಿಲ್ಲೆಯ ಶಿಕ್ಷಣ ಪ್ರೇಮಿಗಳ ಒತ್ತಾಯವಾಗಿದೆ.

ಜ. 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಾಲೆಯ ಕೊಠಡಿಗಳನ್ನು ಉದ್ಘಾಟಿಸುವ ಯೋಜನೆ ಇದೆ. ಹೊಸ ಕಟ್ಟಡಕ್ಕೆ ಚಾಲನೆ ನೀಡಿದರೆ ಶಾಲೆಯ ಮಕ್ಕಳಿಗೂ ಅನುಕೂಲವಾಗಲಿದೆ
ಎನ್‌.ಎಸ್‌.ಮಹೇಶ್‌ ಮುಖ್ಯ ಶಿಕ್ಷಕ ಕೃಷ್ಣರಾಜೇಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT