ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ದೇಶದ 8 ರಾಜ್ಯಗಳಿಗೆ ಜಿಲ್ಲೆಯ ಹಲಸು ರವಾನೆ: ಎಲ್ಲೆಡೆ ಬೇಡಿಕೆ

Published 4 ಜುಲೈ 2024, 6:53 IST
Last Updated 4 ಜುಲೈ 2024, 6:53 IST
ಅಕ್ಷರ ಗಾತ್ರ

ತೋವಿನಕೆರೆ: ಹಲಸಿನ ಹಣ್ಣಿಗೂ ಜಿಲ್ಲೆಗೂ ಅವಿನಾಭಾವ ಸಂಬಂಧ. ರಾಜ್ಯದಲ್ಲಿಯೇ ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಹಲಸಿನ ಮರಗಳಿದ್ದು, ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿಯೇ ಹೆಚ್ಚು ಹಲಸಿನ ವಹಿವಾಟು ನಡೆಸುವ ಖ್ಯಾತಿಯನ್ನು ಚೇಳೂರು ಪಡೆದಿದೆ.

ಜಿಲ್ಲೆಯಲ್ಲಿ ಹಲಸಿನ ಮೌಲ್ಯವರ್ಧನೆ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ತಿಳಿದಿದೆ. 2013ರಲ್ಲಿ ತೋವಿನಕೆರೆಯಲ್ಲಿ ನಡೆದ ಹಲಸಿನ ಮೇಳದಲ್ಲಿ ಸ್ವಸಹಾಯ ಸಂಘದ ಮಹಿಳೆಯರು ಹಲಸಿನಿಂದ ತರಹೇವಾರಿ ಖಾದ್ಯ ಪ್ರದರ್ಶಿಸಿ ಗಮನ ಸೆಳೆದಿದ್ದರು.

ಗುಬ್ಬಿ ತಾಲ್ಲೂಕಿನ ಚೇಳೂರಿನಲ್ಲಿ ಐದು ದಶಕಗಳಿಂದ ಹಲಸಿನ ಮಾರುಕಟ್ಟೆ ಇದೆ. ತಮಿಳುನಾಡು, ಕೇರಳ, ಆಂದ್ರಪ್ರದೇಶ, ಮಹಾರಾಷ್ಟ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಾಜಸ್ತಾನ, ಗುಜರಾತ್, ನವದೆಹಲಿ ಮತ್ತು ಉತ್ತರ ಪ್ರದೇಶಗಳಿಗೆ ಅಲ್ಪ ಪ್ರಮಾಣದಲ್ಲಿ ಹಲಸಿನ ಹಣ್ಣು ಪ್ರತಿ ಶುಕ್ರವಾರ, ಶನಿವಾರ, ಭಾನುವಾರ ರವಾನೆ ಆಗುತ್ತದೆ. ತುಮಕೂರು ಹಲಸಿಗೆ ರಾಜ್ಯದ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಒಳ್ಳೆಯ ಬೇಡಿಕೆ ಇದ್ದು, ಉತ್ತಮ ಬೆಲೆಗೆ ಮಾರಾಟವಾಗುತ್ತಿದೆ.

‘ಜಿಲ್ಲೆಯ ಹಣ್ಣುಗಳಲ್ಲಿ ನೀರಿನ ಅಂಶ ಕಡಿಮೆ, ರುಚಿ, ವಾಸನೆ ಚೆನ್ನಾಗಿರುತ್ತದೆ. ಕೇಕ್ ರೀತಿ ಹಣ್ಣು ಇರುವುದರಿಂದ ಜನಪ್ರಿಯವಾಗಲು ಕಾರಣ’ ಎನ್ನುತ್ತಾರೆ ತೋವಿನಕೆರೆಯ ಮಂಜಮ್ಮ.

ಜಿಲ್ಲೆಯಿಂದ ಪ್ರತಿ ವರ್ಷ ನಾಲ್ಕು ತಿಂಗಳಲ್ಲಿ 500ಟನ್ ಹಣ್ಣು ಮತ್ತು 500 ಟನ್ ಎಳೆಯ ಕಾಯಿ ಜಿಲ್ಲೆಯಿಂದ ಹೊರಗಡೆ ಹೋಗುತ್ತದೆ.

2008ರ ಜುಲೈನಲ್ಲಿ ‘ಬೈಫ್’ ಸಂಸ್ಥೆಯವರು ತಿಪಟೂರಿನಲ್ಲಿ ಹಲಸು ಮೇಳ ಆಯೋಜಸಿದ್ದರು. ನಿಟ್ಟೂರಿನಲ್ಲಿ ಹಲಸಿನ ಹಣ್ಣಿನ ಹಬ್ಬ, ತುಮಕೂರು ಎಪಿಎಂಸಿಯಲ್ಲಿ ಅಲಕ್ಷ್ಯ ಹಣ್ಣುಗಳ ಮೇಳಗಳನ್ನು ಇಲಾಖೆ ನಡೆಸಿತ್ತು.

ತುಮಕೂರು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮಾವು ಮತ್ತು ಹಲಸಿನ ಮಾರಾಟವನ್ನು ಹಿಂದಿನ ತೋಟಗಾರಿಕೆ ಉಪ ನಿರ್ದೇಶಕಿ ಡಾ. ಸವಿತಾ ಏರ್ಪಡಿಸಿದ್ದರು.

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಕರುಣಾಕರನ್ ಜಿಲ್ಲೆಯ ಅನೇಕ ಹಳ್ಳಿಗಳಿಗೆ ಭೇಟಿ ನೀಡಿ ನೂರಾರು ಮರಗಳ ಸಮೀಕ್ಷೆ ನಡೆಸಿ ಬೆಳೆಗಾರನ ಹೆಸರಿನಲ್ಲಿ‌ ದೇಶದಲ್ಲಿ ಜನಪ್ರಿಯತೆ ಪಡೆದ ‘ಸಿದ್ಧು’ ಮತ್ತು ‘ಶಂಕರ’ ತಳಿಗಳನ್ನು ಬಿಡುಗಡೆ ಮಾಡಿದ್ದಾರೆ.

ತೋವಿನಕೆರೆ ರೈತರ ಜಮೀನಿನ ಕೆಂಪು ಹಲಸಿನ ಹಣ್ಣು (ಸಂಗ್ರಹ ಚಿತ್ರ)
ತೋವಿನಕೆರೆ ರೈತರ ಜಮೀನಿನ ಕೆಂಪು ಹಲಸಿನ ಹಣ್ಣು (ಸಂಗ್ರಹ ಚಿತ್ರ)
ಹಲಸಿನಿಂದ ತಯಾರಾದ ತರಹೇವಾರಿ ಖಾದ್ಯ
ಹಲಸಿನಿಂದ ತಯಾರಾದ ತರಹೇವಾರಿ ಖಾದ್ಯ
ಜಿಲ್ಲೆಯ ‘ಸಿದ್ಧು’ ಮತ್ತು ‘ಶಂಕರ’ ಹಲಸಿನ ಸಸಿಗಳು ದೇಶದ ವಿವಿಧೆಡೆ 2000 ಎಕರೆಯಷ್ಟು ವಿಸ್ತೀರ್ಣದಲ್ಲಿ ನಾಟಿಯಾಗಿದೆ. ಕೆಲವೇ ವರ್ಷಗಳಲ್ಲಿ ದೇಶದ ಎಲ್ಲೆಡೆ ಸಿಗಲಿದೆ.
ಡಾ.ಜಿ. ಕರುಣಾಕರಣ್ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ವಿಜ್ಞಾನಿ
ತಿಪಟೂರಿನಲ್ಲಿ ಜುಲೈ 13 ಮತ್ತು 14ರಂದು ನಡೆಯುವ ಹಲಸಿನ ಹಬ್ಬಕ್ಕೆ ಶಾಲೆಗಳಿಗೆ ಬೇಟಿ ನೀಡಿ ಪೋಷಕರು ಸಿಬ್ಬಂದಿ ಹಾಗೂ ಮಕ್ಕಳನ್ನು ಆಹ್ವಾನಿಸಲಾಗುತ್ತಿದೆ. ಈಗಾಗಲೇ 30ಕ್ಕೂ ಹೆಚ್ಚು ಶಾಲೆಗಳ ಭೇಟಿ ಮುಗಿದಿದೆ.
ಸಿರಿಗಂಧಗುರು ಸಂಘಟನೆ ಅಧ್ಯಕ್ಷ
ಇತ್ತೀಚೆಗೆ ಜಯಪ್ರಿಯ ಪಡೆದ ಖಾದ್ಯ
ಹಲಸಿನ ಕಬಾಬ್‌ ಮಂಚೂರಿ ಬೋಂಡಾ ಹಲ್ವಾ ಪಾಯಸ ಜಾಮೂನು ಕೇಸರಿ ಬಾತ್ ರೊಟ್ಟಿ ಶಾವಿಗೆ ಬಿರಿಯಾನಿ ಸೂಪ್ ಕೆತ್ತಕಾಯಿ ಸಾಂಬಾರು ಇಡ್ಲಿ ದೋಸೆ ಹಪ್ಪಳ ಚಿಪ್ಸ್ ಹಲಸಿನ ಬೀಜದ ಸಾರು ಹಣ್ಣು ಮತ್ತು ಬೀಜದ ಮಿಲ್ಕ್ ಶೇಕ್ ಐಸ್ ಕ್ರೀಂ ಬೀಜದ ಕುಲ್ಫಿ ಜಿಲ್ಲೆಯಲ್ಲಿಯೂ ಇತ್ತೀಚಿನ ದಿನಗಳಲ್ಲಿ ಜಯಪ್ರಿಯವಾಗಿವೆ. ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಮತ್ತು ಪತ್ನಿ ಮಂಜುಳಾ ದೇವಿ ದಂಪತಿ ಕಳೆದ ವರ್ಷದಿಂದ ಸಮೀಪದ ಹಲವು ಹಳ್ಳಿಗಳಿಗೆ ತೆರಳಿ ಸ್ವಸಹಾಯ ಸಂಘದ ಮಹಿಳೆಯರಿಗೆ ಹಲಸಿನ ದೋಸೆ ಮಾಡುವ ವಿಧಾನ ತೋರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT