ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ತುಟ್ಟಿಯಾದ ಮೀನು: ಮತ್ಸ್ಯ ಪ್ರಿಯರಿಗೆ ಬರೆ

ದೋಣಿಗಳು ಕಡಲಿಗಿಳಿದರೂ ಸಿಗುತ್ತಿಲ್ಲ ಮೀನು: ಸ್ಥಳೀಯ ಮಾರುಕಟ್ಟೆಗಳಲ್ಲಿ ದರ ಏರಿಕೆ
ನವೀನ್‌ ಕುಮಾರ್‌ ಜಿ.
Published : 20 ಸೆಪ್ಟೆಂಬರ್ 2024, 7:09 IST
Last Updated : 20 ಸೆಪ್ಟೆಂಬರ್ 2024, 7:09 IST
ಫಾಲೋ ಮಾಡಿ
Comments

ಉಡುಪಿ: ಟ್ರಾಲಿಂಗ್ ನಿಷೇಧ ತೆರವಾಗಿ ಒಂದೂವರೆ ತಿಂಗಳು ಕಳೆದರೂ ಮಾರುಕಟ್ಟೆಯಲ್ಲಿ ಮೀನುಗಳು ಅಗ್ಗವಾಗದೇ ಇರುವುದು ಮತ್ಸಪ್ರಿಯರ ಜೇಬಿಗೆ ಹೊರೆಯಾಗಿದೆ.

ಬಂಗುಡೆ, ಬೂತಾಯಿಯಂತಹ ಮೀನುಗಳು ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬರುತ್ತಿರುವುದರಿಂದ ಗ್ರಾಹಕರಿಗೆ ನಿರಾಸೆಯಾಗಿದೆ.

ಸಾಮಾನ್ಯವಾಗಿ ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಲ್ಲಿ ಉಡುಪಿ ಮಾರುಕಟ್ಟೆಗೆ ಭರಪೂರ ಮೀನುಗಳು ಬರುವುದರಿಂದ ಬೆಲೆ ಇಳಿಕೆಯಾಗುತ್ತಿತ್ತು. ಈ ಬಾರಿ ಮೀನುಗಳ ಲಭ್ಯತೆ ಕೊರತೆಯಿಂದಾಗಿ ದರ ಏರುಮುಖವಾಗಿದೆ.

ಉಡುಪಿ ಮೀನು ಮಾರುಕಟ್ಟೆಯಲ್ಲಿ ಸಣ್ಣ ಗಾತ್ರದ ಅಂಜಲ್ ಮೀನಿಗೆ ಕೆ.ಜಿ.ಗೆ ₹500, ಬಿಳಿ ಮಾಂಜಿ ಮೀನು (ಪಾಂಫ್ರೆಟ್) ಕೆ.ಜಿ.ಗೆ ₹1,200, ಕಾಣೆ ಮೀನಿಗೆ ಕೆ.ಜಿ.ಗೆ ₹600 ಇದೆ. ಪ್ರತಿವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಈ ಮೀನುಗಳಿಗೆ ದರ ಕಡಿಮೆಯಾಗುತ್ತಿತ್ತು. ಈ ಬಾರಿ ಮೀನು ತುಂಬಾ ತುಟ್ಟಿಯಾಗಿದೆ ಎನ್ನುತ್ತಾರೆ ಗ್ರಾಹಕರು.

ಆಗಸ್ಟ್ ತಿಂಗಳಲ್ಲಿ ತೂಫಾನ್ ಕಾರಣದಿಂದ ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ದೋಣಿಗಳು ಕಡಲಿಗಿಳಿದಿರಲಿಲ್ಲ. ಸೆಪ್ಟೆಂಬರ್‌ ತಿಂಗಳಲ್ಲೂ ಸಮರ್ಪಕವಾಗಿ ಮೀನುಗಾರಿಕೆ ನಡೆದಿಲ್ಲ. ಈ ಕಾರಣಕ್ಕೆ ಮೀನು ತುಟ್ಟಿಯಾಗಿದೆ ಎನ್ನುತ್ತಾರೆ ಮೀನುಗಾರರು.

ಮಳೆಗಾಲದ ಎರಡು ತಿಂಗಳು ಕಳೆದ ಕೂಡಲೇ ಮಾರುಕಟ್ಟೆಗೆ ಸಾಕಷ್ಟು ಮೀನುಗಳು ಬರುತ್ತವೆ ಮತ್ತು ಈ ಅವಧಿಯಲ್ಲೇ ಬೇಡಿಕೆಯೂ ಜಾಸ್ತಿ ಇರುತ್ತದೆ. ಸದ್ಯ ಎಲ್ಲ ಸ್ಥಳೀಯ ಮೀನು ಮಾರುಕಟ್ಟೆಗಳಲ್ಲೂ ಮೀನುಗಳ ಕೊರತೆ ಇದೆ ಮತ್ತು ದರವೂ ಅಧಿಕವಾಗಿದೆ ಎನ್ನುತ್ತಾರೆ ಗ್ರಾಹಕ ಸದಾನಂದ.

ಬಂಗುಡೆ ಮತ್ತು ಬೂತಾಯಿ ಮೀನು ಪ್ರತಿವರ್ಷವೂ ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಬರುತ್ತಿದ್ದವು ಈ ಸಲ ಬಂದಿಲ್ಲ ಎಂದು ಹೇಳುತ್ತಾರೆ ಅವರು.

ಮತ್ಸಕ್ಷಾಮ: ಈ ಬಾರಿ ಆಳ ಕಡಲಿಗೆ ತೆರಳಿದರೂ ಸಾಕಷ್ಟು ಮೀನುಗಳು ಸಿಗುತ್ತಿಲ್ಲ. ಬಗೆ ಬಗೆಯ ಮೀನುಗಳು ಅಪರೂಪಕ್ಕೆ ಸಿಗುತ್ತಿವೆ. ಸಮುದ್ರದಲ್ಲಿ ತೂಫಾನ್ ಎದ್ದರೆ ಹೆಚ್ಚು ಮೀನುಗಳು ಸಿಗುತ್ತವೆ ಎಂಬ ನಂಬಿಕೆ ಇದೆ. ಆದರೆ, ಈ ಬಾರಿ ಪದೇ ಪದೇ ತೂಫಾನ್ ಎದ್ದರೂ ಮೀನುಗಳು ಸಿಗುತ್ತಿಲ್ಲ ಎನ್ನುತ್ತಾರೆ ಮಲ್ಪೆಯ ಮೀನುಗಾರ ರತನ್.

ಮೀನುಗಾರಿಕೆಗೆ ತೆರಳುವ ದೋಣಿಗಳೂ ಕೆಲವೊಮ್ಮೆ ಗಾಳಿ, ಅಲೆಗಳ ಅಬ್ಬರಕ್ಕೆ ವಾಪಸ್‌ ಬರುತ್ತವೆ. ಈ ಕಾರಣಕ್ಕೆ ಕಡಲಲ್ಲಿ ಮೀನು ಹುಡುಕಲು. ಮೀನುಗಾರಿಕೆ ನಡೆಸಲು ಕೆಲವೊಮ್ಮ ಸಾಧ್ಯವಾಗುತ್ತಿಲ್ಲ ಎಂದು ವಿವರಿಸುತ್ತಾರೆ ಅವರು.

ಕಾಣೆ ಮೀನು
ಕಾಣೆ ಮೀನು
ದೋಣಿಯವರಿಗೆ ಈ ಸಲ ಹೆಚ್ಚಿನ ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ. ಆ ಕಾರಣಕ್ಕೆ ದರ ಜಾಸ್ತಿ ಇದೆ. ಹೆಚ್ಚಿನ ಗ್ರಾಹಕರು ಅಂಜಲ್ ಮಾಂಜಿ ಮೀನು ಖರೀದಿಸುತ್ತಿಲ್ಲ
ಸುಮತಿ ಮೀನು ಮಾರಾಟ ಮಾಡುವ ಮಹಿಳೆ
ಮೀನಿನ ಬೆಲೆ ವಿಪರೀತ ಜಾಸ್ತಿಯಾಗಿದೆ. ಬಂಗುಡೆ ಬೂತಾಯಿಯಂತಹ ಮೀನುಗಳು ಮಾರುಕಟ್ಟೆಯಲ್ಲಿ ಕಾಣಸಿಗುವುದೇ ಅಪರೂಪವಾಗಿದೆ
ಇಕ್ಬಾಲ್ ಗ್ರಾಹಕ
ಈ ಸಲ ಮಲ್ಪೆಗೆ ಹೋದರೂ ಒಳ್ಳೆಯ ಮೀನು ಸಿಗುತ್ತಿಲ್ಲ. ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾಂಜಿ ಅಂಜಲ್ ಕಾಣೆ ಮೀನುಗಳು ಬಹಳಷ್ಟು ದುಬಾರಿಯಾಗಿವೆ
ಸದಾನಂದ ಗ್ರಾಹಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT