ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

IND vs BAN 1st Test | ರೋಹಿತ್, ಕೊಹ್ಲಿ ಪತನ; ಭಾರತಕ್ಕೆ 308 ರನ್ ಮುನ್ನಡೆ

Published : 20 ಸೆಪ್ಟೆಂಬರ್ 2024, 9:02 IST
Last Updated : 20 ಸೆಪ್ಟೆಂಬರ್ 2024, 9:02 IST
ಫಾಲೋ ಮಾಡಿ
Comments

ಚೆನ್ನೈ: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡವು ತನ್ನ ಎರಡನೇ ಇನಿಂಗ್ಸ್‌ನಲ್ಲಿ 23 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ.

ಆ ಮೂಲಕ ಒಟ್ಟು 308 ರನ್‌ಗಳ ಮುನ್ನಡೆ ಗಳಿಸಿದ್ದು, ಪಂದ್ಯದಲ್ಲಿ ಹಿಡಿತ ಸಾಧಿಸಿದೆ.

ಇಂದು ಭಾರತ ಮೊದಲ ಇನಿಂಗ್ಸ್‌ನಲ್ಲಿ 376 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಬಳಿಕ ಜಸ್‌ಪ್ರೀತ್ ಬೂಮ್ರಾ ಸೇರಿದಂತೆ ಭಾರತೀಯ ಬೌಲರ್‌ಗಳ ನಿಖರ ದಾಳಿಗೆ ತತ್ತರಿಸಿದ ಪ್ರವಾಸಿ ಬಾಂಗ್ಲಾದೇಶ ತಂಡವು, ಮೊದಲ ಇನಿಂಗ್ಸ್‌ನಲ್ಲಿ 47.1 ಓವರ್‌ಗಳಲ್ಲಿ ಕೇವಲ 149 ರನ್‌ಗಳಿಗೆ ಆಲೌಟ್ ಆಯಿತು.

ಇದರೊಂದಿಗೆ ರೋಹಿತ್ ಶರ್ಮಾ ಬಳಗವು ಮೊದಲ ಇನಿಂಗ್ಸ್‌ನಲ್ಲಿ 227 ರನ್‌ಗಳ ಬೃಹತ್ ಮುನ್ನಡೆ ಗಳಿಸಿತು.

ರೋಹಿತ್, ಕೊಹ್ಲಿ ವಿಕೆಟ್ ಪತನ...

ದ್ವಿತೀಯ ಇನಿಂಗ್ಸ್‌ನಲ್ಲೂ ಭಾರತದ ನಾಯಕ ರೋಹಿತ್ ಶರ್ಮಾ (5) ಹಾಗೂ ವಿರಾಟ್ ಕೊಹ್ಲಿ (17) ಬ್ಯಾಟಿಂಗ್ ವೈಫಲ್ಯವನ್ನು ಕಂಡರು. ಮೊದಲ ಇನಿಂಗ್ಸ್‌ನಲ್ಲಿ ರೋಹಿತ್ ಹಾಗೂ ಕೊಹ್ಲಿ ತಲಾ 6 ರನ್ ಗಳಿಸಿ ಔಟ್ ಆಗಿದ್ದರು.

ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದ (56) ಯಶಸ್ವಿ ಜೈಸ್ವಾಲ್ ವಿಕೆಟ್ (10) ಕೂಡ ಭಾರತಕ್ಕೆ ನಷ್ಟವಾಗಿದೆ. ಶುಭಮನ್ ಗಿಲ್ (33*) ಹಾಗೂ ರಿಷಭ್ ಪಂತ್ (12*) ಕ್ರೀಸಿನಲ್ಲಿದ್ದು, ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಬೂಮ್ರಾಗೆ 4 ವಿಕೆಟ್...

ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಎರಡನೇ ದಿನದಾಟದಲ್ಲಿ ಭಾರತೀಯ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ.

ಭಾರತದ 376 ರನ್‌ಗಳಿಗೆ ಉತ್ತರವಾಗಿ ಬಾಂಗ್ಲಾದೇಶದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು.

ಕೇವಲ 40 ರನ್ ಗಳಿಸುವಷ್ಟರಲ್ಲಿ ಬಾಂಗ್ಲಾದೇಶ ತಂಡ ಐದು ವಿಕೆಟ್ ಕಳೆದುಕೊಂಡಿತ್ತು. ಶದ್ಮಾನ್ ಇಸ್ಲಾಂ (2), ಝಾಕೀರ್ ಹಸನ್ (3), ಮೊಮಿನುಲ್ ಹಕ್ (0), ನಾಯಕ ನಜ್ಮುಲ್ ಹುಸೇನ್ ಶಾಂತೊ (20) ಮತ್ತು ಮುಷ್ಫೀಕುರ್ ರಹೀಂ (8) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.

ಶಕಿಬ್ ಅಲ್ ಹಸನ್ (32) ಹಾಗೂ ಲಿಟನ್ ದಾಸ್ (22) ಆರನೇ ವಿಕೆಟ್‌ಗೆ ಅಲ್ಪ ಪ್ರತಿರೋಧ ಒಡ್ಡಿದರು. ಆದರೆ ಅವರಿಬ್ಬರನ್ನು ಹೊರದಬ್ಬಿದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಬಾಂಗ್ಲಾ ಓಟಕ್ಕೆ ಕಡಿವಾಣ ಹಾಕಿದರು.

ಟೀ ವಿರಾಮದ ಬೆನ್ನಲ್ಲೇ ಬಾಂಗ್ಲಾದೇಶ 149 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಇನ್ನುಳಿದಂತೆ ಮೆಹದಿ ಹಸನ್ ಮಿರಾಜ್ 27 ರನ್ ಗಳಿಸಿದರು.

ಭಾರತದ ಪರ ಬೂಮ್ರಾ ನಾಲ್ಕು ಮತ್ತು ಆಕಾಶ್ ದೀಪ್, ಮೊಹಮ್ಮದ್ ಸಿರಾಜ್ ಹಾಗೂ ರವಿಂದ್ರ ಜಡೇಜ ತಲಾ ಎರಡು ವಿಕೆಟ್ ಗಳಿಸಿದರು. ಈ ಪೈಕಿ ಬೂಮ್ರಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ 400 ವಿಕೆಟ್‌ಗಳ ಸಾಧನೆ ಮಾಡಿದರು.

ಬಳಿಕ ಎದುರಾಳಿ ಬಾಂಗ್ಲಾದೇಶ ತಂಡಕ್ಕೆ ಫಾಲೋ ಆನ್ ಹೇರದೇ ಭಾರತ ಎರಡನೇ ಇನಿಂಗ್ಸ್ ಮುಂದುವರಿಸಿತು.

ಭಾರತ 376ಕ್ಕೆ ಆಲೌಟ್; ಶತಕ ವಂಚಿತ ಜಡೇಜ...

ಈ ಮೊದಲು ಭಾರತ ತಂಡ 91.2 ಓವರ್‌ಗಳಲ್ಲಿ 376 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ರವೀಂದ್ರ ಜಡೇಜ ಹಾಗೂ ರವಿಚಂದ್ರನ್ ಅಶ್ವಿನ್ ಏಳನೇ ವಿಕೆಟ್‌ಗೆ 199 ರನ್‌ಗಳ ಜೊತೆಯಾಟ ಕಟ್ಟಿದರು. 86 ರನ್ ಗಳಿಸಿದ ಜಡೇಜ ಶತಕ ವಂಚಿತರಾದರು.

ಮೊದಲ ದಿನದಾಟದಲ್ಲಿ ಟೆಸ್ಟ್ ಕ್ರಿಕೆಟ್‌ನ ಆರನೇ ಶತಕ ಸಾಧನೆ ಮಾಡಿದ ಅಶ್ವಿನ್ 133 ಎಸೆತಗಳಲ್ಲಿ 113 ರನ್ ಗಳಿಸಿ ಔಟ್ ಆದರು.

ಬಾಂಗ್ಲಾದೇಶದ ಪರ ಹಸನ್ ಮೆಹಮೂದ್ ಐದು ಮತ್ತು ತಸ್ಕಿನ್ ಅಹಮದ್ ಮೂರು ವಿಕೆಟ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT