ಉಡುಪಿ: ಸಾರ್ವಜನಿಕರ ಹಾಗೂ ಖಾಸಗಿ ಸಂಸ್ಥೆಗಳ ನಾಮಫಲಕಗಳನ್ನು ಕನ್ನಡ ಭಾಷೆಯಲ್ಲಿಯೇ ಹಾಕಬೇಕು ಎಂಬ ಸರ್ಕಾರದ ನಿಯಮ ಜಾರಿಗೆ ಬಂದಿದ್ದರೂ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಪಾಲನೆಯಾಗಿಲ್ಲ. ಕನ್ನಡನಾಡಿನಲ್ಲಿ ಕನ್ನಡವೇ ಸಂಪೂರ್ಣ ಕಡೆಗಣನೆಗೆ ಒಳಪಟ್ಟಿದೆ.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿದೇಯಕ–2022 ಹಾಗೂ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿದೇಯಕ 2024ರ ಪ್ರಕಾರ ಎಲ್ಲ ವಾಣಿಜ್ಯ ಸಂಸ್ಥೆಗಳು, ಆಸ್ಪತ್ರೆ, ನರ್ಸಿಂಗ್ ಹೋಂ, ಕ್ಲಿನಿಕಲ್ ಲ್ಯಾಬೋರೇಟರಿ, ಹೋಂ ಸ್ಟೇ, ರೆಸಾರ್ಟ್, ಶಿಕ್ಷಣ ಸಂಸ್ಥೆಗಳು, ಟ್ರಾವೆಲ್ ಏಜೆನ್ಸಿ, ಕೈಗಾರಿಕೆಗಳು ಸೇರಿದಂತೆ ಎಲ್ಲ ಸಾರ್ವಜನಿಕರ ಹಾಗೂ ಖಾಸಗಿ ಸಂಸ್ಥೆಗಳ ನಾಮಫಲಕಗಳು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿಯೇ ಇರಬೇಕು.

ನಾಮಫಲಕಗಳ ಮೇಲ್ಭಾಗದಲ್ಲಿ ಶೇ 60ರ ಗಾತ್ರದಲ್ಲಿ ಕನ್ನಡದಲ್ಲಿ ಸಂಸ್ಥೆಯ ಹೆಸರನ್ನು ಪ್ರದರ್ಶಿಸಬೇಕು. ಉಳಿದ ಶೇ 40ರಷ್ಟು ಭಾಗದಲ್ಲಿ ಇಂಗ್ಲಿಷ್ ಸೇರಿದಂತೆ ಇತರ ಯಾವುದೇ ಭಾಷೆಗಳ ಬಳಕೆಗೆ ಅಡ್ಡಿ ಇಲ್ಲ.

ಆದರೆ, ಜಿಲ್ಲೆಯಲ್ಲಿ ‘ಕನ್ನಡ’ವನ್ನು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶೇ 80ಕ್ಕಿಂತ ಹೆಚ್ಚಿನ ಸಂಸ್ಥೆಗಳ ನಾಮಫಲಕಗಳಲ್ಲಿ ಇಂಗ್ಲಿಷ್ ಮೇಲ್ಭಾಗದಲ್ಲಿ ಮೆರೆದಾಡುತ್ತಿದ್ದರೆ, ಕನ್ನಡ ಭಾಷೆಯು ಮೂಲೆ ಸೇರಿಕೊಂಡಿದೆ. ಕೆಲವು ಸಂಸ್ಥೆಗಳ ಫಲಕಗಳಲ್ಲಂತೂ ‘ಕನ್ನಡ’ವೇ ಕಣ್ಮರೆಯಾಗಿದೆ.

ಉಡುಪಿಯ ಹೃದಯ ಭಾಗವಾಗಿರುವ ಸಿಟಿ ಸೆಂಟರ್ ಮಾಲ್ ಹಾಗೂ ಸುತ್ತಮುತ್ತಲಿನ ಸಂಸ್ಥೆಗಳಲ್ಲಿ ಕನ್ನಡ ನಗಣ್ಯವಾಗಿದೆ. ಈ ಭಾಗದಲ್ಲಿ ನೆಲೆಯೂರಿರುವ ಶೇ 70ಕ್ಕಿಂತ ಹೆಚ್ಚು ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ಭಾಷೆಯನ್ನು ಮೂಲೆಗುಂಪು ಮಾಡಲಾಗಿದೆ. ಶಾಪಿಂಗ್ ಮಾಲ್, ಬಟ್ಟೆ ಮಳಿಗೆ, ಪ್ಲಾಸ್ಟಿಕ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೊಬೈಲ್, ಚಿನ್ನಾಭರಣ, ಹೋಟೆಲ್, ರೆಸ್ಟೊರೆಂಟ್, ಲಾಡ್ಜ್, ಪೆಟ್ರೋಲ್ ಬಂಕ್, ವಾಹನಗಳ ಶೋರೂಂ, ಕಿರಾಣಿ ಅಂಗಡಿಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳಲ್ಲಿ ಕನ್ನಡಕ್ಕೆ ದ್ವಿತೀಯ ದರ್ಜೆಯ ಸ್ಥಾನ ಮಾನ ನೀಡಲಾಗಿದ್ದು ಎಲ್ಲೆಡೆ ಇಂಗ್ಲಿಷ್ ರಾರಾಜಿಸುತ್ತಿವೆ.

ವಿಶೇಷವಾಗಿ ಮಣಿಪಾಲದಲ್ಲಿ ‘ಕನ್ನಡ’ ಭಾಷೆಯ ಪರಿಸ್ಥಿತಿ ಗಂಭೀರವಾಗಿದೆ. ಮಣಿಪಾಲದ ವೈದ್ಯಕೀಯ, ಎಂಜಿನಿಯರಿಂಗ್, ನರ್ಸಿಂಗ್ ಕಾಲೇಜುಗಳಲ್ಲಿ ಹೊರ ರಾಜ್ಯಗಳ ಕನ್ನಡ ಭಾಷೆ ಗೊತ್ತಿಲ್ಲದ 30,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಜತೆಗೆ, ಸಾವಿರಾರು ಮಂದಿ ಹೊರ ರಾಜ್ಯಗಳ ಕಾರ್ಮಿಕರು ಇಲ್ಲಿ ನೆಲೆಸಿದ್ದಾರೆ.

ಮಣಿಪಾಲದ ಬಹುತೇಕ ವ್ಯಾಪಾರಿಗಳು ಕನ್ನಡೇತರರನ್ನು ಸೆಳೆಯುವ ಉದ್ದೇಶದಿಂದ ವಾಣಿಜ್ಯ ಮಳಿಗೆಗಳ ನಾಮಫಲಕಗಳನ್ನು ಇಂಗ್ಲಿಷ್ನಲ್ಲಿಯೇ ಹಾಕಿದ್ದಾರೆ. ಈ ಭಾಗದಲ್ಲಿ ಕನ್ನಡವನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೊರ ರಾಜ್ಯಗಳಿಂದ ಬಂದು ನೆಲೆಸಿರುವ ಬಹುತೇಕ ವ್ಯಾಪಾರಿಗಳು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ನಾಮಫಲಕಗಳನ್ನು ಹಾಕುತ್ತಿದ್ದು ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ ಎನ್ನುತ್ತಾರೆ ಕನ್ನಡಪರ ಹೋರಾಟಗಾರರು.

ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲೂ ಕನ್ನಡ ಮಾಯ: ಕೇಂದ್ರ ಸರ್ಕಾರಿ ಸ್ವಾಮ್ಯದಲ್ಲಿರುವ ಅಂಚೆ ಇಲಾಖೆ, ವಿಮಾ ಕಚೇರಿ, ರೈಲು ನಿಲ್ದಾಣ, ಇಎಸ್ಐ, ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಬಹುತೇಕ ಸಾರ್ವಜನಿಕ ಸಂಸ್ಥೆಗಳಲ್ಲಿ ಕನ್ನಡಕ್ಕೆ ಸಿಗಬೇಕಾದ ಪ್ರಾಶಸ್ತ್ಯ ಸಿಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ಹಳ್ಳಿಗಾಡಿನ ಜನರು ಇಲ್ಲಿಗೆ ಬಂದರೆ ಕನ್ನಡ ಭಾಷೆಯಲ್ಲಿ ಸೇವೆ ಸಿಗುತ್ತಿಲ್ಲ. ಭದ್ರತಾ ಸಿಬ್ಬಂದಿಯಿಂದ ಹಿಡಿದು ಅಧಿಕಾರಿ ಹಂತದವರೆಗೂ ಸಂಪೂರ್ಣವಾಗಿ ಪರಭಾಷಿಕರೇ ತುಂಬಿದ್ದಾರೆ. ಕನ್ನಡ ನೆಲದಲ್ಲಿ ಕನ್ನಡ ಭಾಷೆಯಲ್ಲಿ ಸೇವೆ ನಿರೀಕ್ಷಿಸುವುದು ಕನ್ನಡಿಗರ ಹಕ್ಕಲ್ಲವೇ ಎಂದು ಪ್ರಶ್ನಿಸುತ್ತಾರೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ.

ಪರವಾನಗಿಗೆ ಕನ್ನಡ ನಾಮಫಲಕ ಕಡ್ಡಾಯ: ನಗರಸಭೆ ವ್ಯಾಪ್ತಿಯಲ್ಲಿರುವ ವಾಣಿಜ್ಯ ವ್ಯಾಪಾರ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಲಾಗಿದ್ದು ಪ್ರಾಥಮಿಕ ಹಂತದಲ್ಲಿ ಕನ್ನಡ ಭಾಷೆಯ ಬಳಕೆಯ ಬಗ್ಗೆ ಅರಿವು ಮೂಡಿಸಲಾಗಿದೆ. ಉದ್ದಿಮೆ ಪರವಾನಗಿ ಪಡೆಯುವ ಹಂತದಲ್ಲಿಯೇ ಅರ್ಜಿಯೊಂದಿಗೆ ಕನ್ನಡ ಭಾಷೆಯ ನಾಮಫಲಕ ಅಳವಡಿಕೆ ಮಾಡಿರುವ ಬಗ್ಗೆ ಫೋಟೊ ಲಗ್ಗತಿಸಿದರೆ ಮಾತ್ರ ಉದ್ದಿಮೆದಾರರಿಗೆ ಪರವಾನಗಿ ನೀಡಲಾಗುತ್ತಿದೆ. ತಿಂಗಳೊಳಗೆ ಉಡುಪಿ–ಮಣಿಪಾಲ ನಗರದಲ್ಲಿ ಕನ್ನಡ ಭಾಷೆಯ ಕಂಪು ಹರಡಲಿದೆ ಎನ್ನುತ್ತಾರೆ ಪೌರಾಯುಕ್ತ ರಾಯಪ್ಪ.

‘ಕರುನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರಲಿ’

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿದೇಯಕ ಜಾರಿಯಾಗಲೇಬೇಕು. ಕರುನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರಬೇಕು. ನನ್ನೂರಿನಲ್ಲಿ ನನ್ನ ಭಾಷೆಯಲ್ಲೇ ಎಲ್ಲ ಸೇವೆಗಳು ಸಿಗಬೇಕು ಎಂಬುದು ಕನ್ನಡಿಗರ ಹಕ್ಕು. ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಅನುಷ್ಠಾನಕ್ಕೆ ಜಿಲ್ಲಾಡಳಿತ ಸಮಿತಿ ರಚಿಸಿ ಕಾರ್ಯ ಪ್ರವೃತ್ತವಾಗಿದ್ದು ಪರಿಣಾಮಕಾರಿಯಾಗಿ ಜಾರಿಯಾಗಬೇಕು.

ಕನ್ನಡ ಭಾಷೆ ಬಗ್ಗೆ ನಿರ್ಲಕ್ಷ್ಯ ಹೊಂದಿರುವವರ ವಿರುದ್ಧ ಕ್ರಮ ಜರುಗಿಸಬೇಕು. ಕನ್ನಡ ನಾಮಫಲಕಗಳ ಅಳವಡಿಕೆ ಮಾತ್ರವಲ್ಲ ಕೇಂದ್ರ ಸರ್ಕಾರದ ಕಚೇರಿಗಳಲ್ಲೂ ಕನ್ನಡ ಭಾಷೆಯಲ್ಲಿ ಸಂವಹನ ಹಾಗೂ ಸೇವೆಗಳು ದೊರೆಯಬೇಕು. ಬ್ಯಾಂಕ್ಗಳಲ್ಲಿ ಪೋಸ್ಟ್ ಆಫೀಸ್ಗಳಲ್ಲಿ ಹಣ ತುಂಬುವ ಅರ್ಜಿಯಿಂದ ಹಿಡಿದು ಸಾಲದ ಕರಾರು ಪತ್ರದವರೆಗಿನ ಎಲ್ಲ ಮಾಹಿತಿಗಳು ಗ್ರಾಹಕರಿಗೆ ಕನ್ನಡದಲ್ಲಿ ಲಭ್ಯವಾಗಬೇಕು. ರೈಲು ನಿಲ್ದಾಣದಲ್ಲಿ ಕನ್ನಡದಲ್ಲಿಯೇ ಪ್ರಯಾಣಿಕರಿಗೆ ಮಾಹಿತಿ ದೊರೆಯಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.

ನಿಯಮ ಉಲ್ಲಂಘಿಸಿದರೆ ದಂಡ ಏನು?

ಸರ್ಕಾರದ ಆದೇಶದ ಅನ್ವಯ ಸ್ಥಳೀಯ ಪ್ರಾಧಿಕಾರ ನಗರಸಭೆ ಪುರಸಭೆ ಗ್ರಾಮ ಪಂಚಾಯತಿಗಳಿಂದ ಅನುಮತಿ ಪಡೆದು ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸಂಸ್ಥೆಗಳು ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿರಬೇಕು. ರಸ್ತೆಗಳು ಬಡಾವಣೆ ಹೆಸರು ಸರ್ಕಾರಿ ಇಲಾಖೆ ಮತ್ತು ಸ್ಥಳೀಯ ಪ್ರಾಧಿಕಾರಗಳ ಫಲಕಗಳಲ್ಲೂ ಕನ್ನಡ ಕಡ್ಡಾಯವಾಗಿರಬೇಕು. ನಿಯಮಾನುಸಾರ ನಾಮಫಲಕ ಅಳವಡಿಸದಿದ್ದರೆ 7 ದಿನಗಳ ಕಾಲಾವಕಾಶ ನೀಡಿ ಕಾನೂನು ಹಾಗೂ ಕಾಯ್ದೆಯ ಬಗ್ಗೆ ಅರಿವು ಮೂಡಿಸಬೇಕು. ಕಾಲಾವಕಾಶ ನೀಡಿಯೂ ಅಳವಡಿಸಿಕೊಳ್ಳದಿದ್ದರೆ ಮೊದಲ ಸಲದ ಅಪರಾಧಕ್ಕೆ ₹5 ಸಾವಿರ ದಂಡ ಎರಡನೇ ಬಾರಿ ಉಲ್ಲಂಘನೆಗೆ ₹10 ಸಾವಿರ ಹಾಗೂ ನಂತರದ ಪ್ರತಿ ಉಲ್ಲಂಘನೆಗೆ ₹20 ಸಾವಿರ ದಂಡದೊಂದಿಗೆ ಪರವಾನಗಿ ರದ್ದುಗೊಳಿಸಬಹುದು.

ಕನ್ನಡ ಭಾಷೆ ಸುತ್ತೋಲೆ ಜಾರಿ

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿದೇಯಕದ ಪ್ರಕಾರ ಗ್ರಾಮ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳ ನಾಮಫಲಕಗಳು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿರುವಂತೆ ಆದೇಶ ನೀಡಲಾಗಿದ್ದು ಜಿಲ್ಲಾಮಟ್ಟದ ಅಧಿಕಾರಿಗಳನ್ನು ಅನುಷ್ಠಾನ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ನೂತನ ವಿಧೇಯಕದ ಪ್ರಕಾರ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಪ್ರದರ್ಶಿಸಲು ಕೇಂದ್ರ ಸರ್ಕಾರದ ಇಲಾಖೆಗಳಾದ ಬ್ಯಾಂಕ್ ಎಲ್ಐಸಿ ರೈಲ್ವೆ ಹಾಗೂ ಇತರ ಇಲಾಖೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. 10 ದಿನಗಳೊಳಗೆ ಕನ್ನಡ ನಾಮಫಲಕ ಅಳವಡಿಸಿಕೊಳ್ಳುವಂತೆ ಎಲ್ಲ ಸಂಸ್ಥೆಗಳಿಗೆ ಮಾಹಿತಿ ನೀಡುವಂತೆ ಸ್ಥಳೀಯ ಆಡಳಿತದ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಕನ್ನಡ ಭಾಷೆ ಬಳಕೆ ಅನುಷ್ಠಾನ ಕುರಿತು ರಚಿಸಲಾಗಿರುವ ಸಮಿತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹೇಳಿದರು.

‘ನೋಟಿಸ್ ಜಾರಿ’

ಉಡುಪಿ ಹಾಗೂ ಮಣಿಪಾಲ ನಗರದಲ್ಲಿ ಶೇ 75ರಷ್ಟು ವಾಣಿಜ್ಯ ಮಳಿಗೆಗಳ ಫಲಕಗಳಲ್ಲಿ ಶೇ 60 ಗಾತ್ರದಲ್ಲಿ ಕನ್ನಡ ಭಾಷೆ ಬಳಕೆ ಮಾಡದಿರುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ನಗರಸಭೆ ಎಲ್ಲ ಸಂಸ್ಥೆಗಳಿಗೂ ನೋಟಿಸ್ ಜಾರಿ ಮಾಡುತ್ತಿದ್ದು ವಾರದೊಳಗೆ ಕನ್ನಡ ನಾಮಫಲಕಗಳ ಅಳವಡಿಕೆಗೆ ಸೂಚನೆ ನೀಡಲಾಗುತ್ತಿದೆ. ನಿಯಮ ಪಾಲನೆ ಮಾಡದವರ ಪರವಾನಗಿಗಳನ್ನು ರದ್ದು ಮಾಡಲಾಗುವುದು ಎಂದು ಪೌರಾಯುಕ್ತ ರಾಯಪ್ಪ ಹೇಳಿದರು.

‘ಅನ್ಯಭಾಷೆಯ ಫಲಕಗಳಿಗೆ ಮಸಿ’

ಕಡ್ಡಾಯ ಕನ್ನಡ ನಾಮಫಲಕ ಹಾಕುವಂತೆ ಒತ್ತಾಯಿಸಿ ಈಚೆಗೆ ನಗರಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗಿದೆ. ವಾರದೊಳಗೆ ಕನ್ನಡ ನಾಮಫಲಕ ಅಳವಡಿಕೆಗೆ ಕ್ರಮ ತೆಗೆದುಕೊಳ್ಳುವುದಾಗಿ ನಗರಸಭೆ ಹಾಗೂ ಜಿಲ್ಲಾಡಳಿತ ಭರವಸೆ ನೀಡಿದೆ. ಭರವಸೆ ಈಡೇರದಿದ್ದರೆ ಕರವೇ ಅನ್ಯ ಭಾಷೆಯ ನಾಮಫಲಕಗಳಿಗೆ ಮಸಿ ಬಳಿಯಲಿದೆ. ಹೋರಾಟ ತೀವ್ರಗೊಳಿಸಲಿದೆ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ (ನಾರಾಯಣ ಗೌಡ ಬಣ) ಸುಜಯ ಪೂಜಾರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.