ಉಡುಪಿ: ಅಷ್ಠಮಠಗಳಲ್ಲಿ ಒಂದಾಗಿರುವ ಪುತ್ತಿಗೆ ಮಠದ ಪರ್ಯಾಯ ಮಹೋತ್ಸವಕ್ಕೆ ಕೃಷ್ಣನೂರು ಉಡುಪಿ ಸರ್ವಾಲಂಕೃತಗೊಂಡು ಶೋಭಿಸುತ್ತಿದೆ. ಪರ್ಯಾಯಕ್ಕೆ ಸ್ವಾಗತ ಕೋರುವ ಕಮಾನುಗಳು, ಪುತ್ತಿಗೆ ಮಠದ ಯತಿ ಪರಂಪರೆಯನ್ನು ಬಿಂಬಿಸುವ ತೀರ್ಥ ಮಂಟಪಗಳು, ಕಣ್ಮನ ಸೆಳೆಯುವ ವಿದ್ಯುತ್ ದೀಪಾಲಂಕಾರ ಮನಸ್ಸಿಗೆ ಮುದ ನೀಡುತ್ತಿದೆ. ನಾಡಹಬ್ಬದ ಮಾದರಿಯಲ್ಲಿ ಪರ್ಯಾಯ ಮಹೋತ್ಸವದ ಸಂಭ್ರಮ ಮನೆ ಮಾಡಿದೆ.

ಕೃಷ್ಣಮಠ, ಕನಕ ಗೋಪುರ, ಕನಕ ಮಂಟಪ, ಕೃಷ್ಣ ಹಾಗೂ ಕೃಷ್ಣ ಮುಖ್ಯಪ್ರಾಣರ ಗುಡಿಗಳಿಗೆ ಬಣ್ಣ ಬಳಿದು ಸಿಂಗಾರ ಮಾಡಲಾಗಿದೆ. ಇಡೀ ರಥಬೀದಿಯ ಪರಿಸರ ನೋಡುಗರನ್ನು ಆಕರ್ಷಿಸುತ್ತಿದೆ. ದಿನ ಕಳೆದಂತೆ ಪರ್ಯಾಯದ ರಂಗು ಹೆಚ್ಚಾಗುತ್ತಿದೆ.

ಪುತ್ತಿಗೆ ಮಠವನ್ನು ಅರಮನೆಯ ಮಾದರಿಯಲ್ಲಿ ಅಲಂಕರಿಸಲಾಗಿದ್ದು ಮಠದ ಎರಡೂ ಕಡೆಗಳಲ್ಲಿ ಕೃಷ್ಣ ಕಂಗೊಳಿಸುತ್ತಿದ್ದಾನೆ. ಮಠದ ಮಧ್ಯ ಭಾಗದಲ್ಲಿ ಮಹಾಭಾರತದ ಸನ್ನಿವೇಶವನ್ನು ವಿದ್ಯುತ್ ದೀಪಗಳಲ್ಲಿ ಚಿತ್ರಿಸಲಾಗಿದೆ.

ಪುತ್ತಿಗೆ ಮಠದ ಒಳಾಂಗಣವೂ ಕಣ್ಮನ ಸೆಳೆಯುತ್ತಿದೆ. ಮಠದ ಆವರಣ ಗೋಡೆಯಲ್ಲಿ ಖಾವಿ ಕಲೆಯ ಸೊಬಗಿನ ಚಿತ್ತಾರ ಮೂಡಿದೆ. ಕಲಾವಿದ ಪುರಂದರ ಅವರ ಕುಂಚದಲ್ಲಿ ಪ್ರಭಾವಳಿ, ಶಂಕ, ಚಕ್ರ, ಜಯ ವಿಜಯ ಕಲಾಕೃತಿಗಳನ್ನು ಚಿತ್ರಿಸಲಾಗಿದ್ದು ಅರೆಕ್ಷಣ ಎಲ್ಲರ ಚಿತ್ತವನ್ನು ಸೆಳೆಯುವಂತಿದೆ.

ಉಡುಪಿ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಹಾಗೂ ರಥಬೀದಿಯ ಪ್ರಮುಖ ದ್ವಾರಗಳಲ್ಲಿ ಅಳವಡಿಸಲಾಗಿರುವ ಸ್ವಾಗತ ಕಮಾನುಗಳಿಗೆ ನಾವೀನ್ಯತೆ, ವೈವಿಧ್ಯತೆ ಹಾಗೂ ಪಾರಂಪರಿಕ ಸ್ಪರ್ಶ ನೀಡಲಾಗಿದೆ. ಕೊರಗ ಸಮುದಾಯ ಬುಟ್ಟಿ ಹೆಣೆಯುವ ಉತ್ಪನ್ನಗಳನ್ನು ಬಳಸಿ ನಿರ್ಮಾಣ ಮಾಡಿರುವ ಸ್ವಾಗತ ಕಮಾನು, ಹೊಸಪೇಟೆಯ ಕಲಾವಿದರೊಬ್ಬರು ಹುರಿ ಹಗ್ಗವನ್ನು ಇಡೀ ಕಮಾನಿಗೆ ಸುತ್ತಿ ನಿರ್ಮಿಸಿರುವ ಎರಡು ಸ್ವಾಗತ ಕಮಾನು, ಕಾಣಿಯೂರು ಮಠದ ಬಳಿ ಉತ್ಸವ ಮೂರ್ತಿಗೆ ಹಾಕುವ ಪ್ರಭಾವಳಿ ಮಾದರಿಯ ಕಮಾನು ಪುತ್ತಿಗೆ ಪರ್ಯಾಯದ ವೈವಿಧ್ಯತೆಗೆ ಸಾಕ್ಷಿಯಾಗಿದೆ.

ಜತೆಗೆ ಪುತ್ತಿಗೆ ಮಠದ ಯತಿ ಪರಂಪರೆಯನ್ನು ಸ್ಮರಿಸಲು, ಗೌರವಿಸಲು ನಗರದ 30 ಕಡೆಗಳಲ್ಲಿ ತೀರ್ಥ ಮಂಟಪಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.

ನಿರಂತರ ಗೀತಾ ಪಠಣ: ಸುಗುಣೇಂದ್ರ ತೀರ್ಥ ಶ್ರೀಗಳ ವಿಶ್ವ ಗೀತಾ ಪರ್ಯಾಯದ ಆಶಯದಂತೆ ರಾಜಾಂಗಣದ ಎದುರಿಗಿರುವ ಗೀತಾ ಮಂದಿರದಲ್ಲಿ ಪುತ್ತಿಗೆ ಮಠದ ಪರ್ಯಾಯ ಆರಂಭವಾದ ದಿನದಿಂದ ಮುಂದಿನ 2 ವರ್ಷಗಳವರೆಗೆ ಉದಯಾಸ್ತಮಾನ ಅಖಂಡ ಭಗವದ್ಗೀತೆಯ ಪಾರಾಯಣ ನಡೆಯಲಿದೆ. ಜ. 17, 2026ರವರೆಗೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಭಕ್ತರು ನಿರಂತರವಾಗಿ ಗೀತೆಯ ಸ್ಮರಣೆ ಮಾಡಲಿದ್ದಾರೆ.

ಈಗಾಗಲೇ ಒಂದು ತಿಂಗಳಿಗೂ ಹೆಚ್ಚು ಕಾಲ ಗೀತಾ ಪಾರಾಯಣ ಮಾಡಲು ಭಕ್ತರು, ಸಂಘ ಸಂಸ್ಥೆಗಳು, ಭಜನಾ ಮಂದಿರಗಳು ಹೆಸರು ನೋಂದಾಯಿಸಿಕೊಂಡಿದ್ದು ಜಾತಿ, ಮತ ಬೇಧವಿಲ್ಲದೆ ಎಲ್ಲರೂ ಭಾಗವಹಿಸಬಹುದು. ಮಹಿಳೆಯರು, ಮಕ್ಕಳು, ಅನ್ಯ ರಾಜ್ಯದವರು, ವಿದೇಶಿಗರಿಗೂ ಗೀತಾ ಪಾರಾಯಣಕ್ಕೆ ಅವಕಾಶ ಇದೆ. ಅನುದಿನವೂ, ಅನುಕ್ಷಣವೂ ಗೀತೆ ಅನುರಣಿಸಬೇಕು ಎಂಬುದು ಸುಗುಣೇಂದ್ರ ತೀರ್ಥ ಶ್ರೀಗಳ ಆಶಯ ಎನ್ನುತ್ತಾರೆ ಪುತ್ತಿಗೆ ಮಠದ ರಮೇಶ್ ಭಟ್.

ಪರ್ಯಾಯದಲ್ಲಿ ಜನಸಾಗರ ನಿರೀಕ್ಷೆ: ಕೋವಿಡ್ನಿಂದಾಗಿ ಕಳೆದ ಅದಮಾರು ಮಠ ಹಾಗೂ ಕೃಷ್ಣಾಪುರ ಮಠದ ಪರ್ಯಾಯದಲ್ಲಿ ಅದ್ಧೂರಿತನ ಇರಲಿಲ್ಲ. ಕೋವಿಡ್ ಆತಂಕ ದೂರವಾಗಿರುವ ಹಿನ್ನೆಲೆಯಲ್ಲಿ ಪುತ್ತಿಗೆ ಮಠದ ಪರ್ಯಾಯದಲ್ಲಿ ಅದ್ಧೂರಿತನ ಎದ್ದು ಕಾಣುತ್ತಿದೆ. ಈ ಬಾರಿಯ ಪರ್ಯಾಯದಲ್ಲಿ 1 ಲಕ್ಷದಷ್ಟು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಪುತ್ತಿಗೆ ಶ್ರೀಗಳ ವಿದೇಶಿ ಭಕ್ತರು, ಅನುಯಾಯಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.

ಪರ್ಯಾಯಕ್ಕೂ ಮುನ್ನವೇ ಉಡುಪಿ, ಬ್ರಹ್ಮಾವರ, ಕಾಪು, ಕುಂದಾಪುರದವರೆಗೂ ವಸತಿಗೃಹಗಳು ಮುಂಗಡ ಬುಕ್ಕಿಂಗ್ ಮಾಡಲಾಗುತ್ತಿದೆ. ಪರ್ಯಾಯಕ್ಕೆ ಬರುವ ಅತಿಥಿಗಳಿಗೆ ಪುತ್ತಿಗೆ ಮಠದ ವತಿಯಿಂದ ಉಡುಪಿಯಿಂದ ಮಂಗಳೂರು ಹಾಗೂ ಉಡುಪಿಯಿಂದ ಕುಂದಾಪುರದವರೆಗಿನ ಲಾಡ್ಜ್ಗಳಲ್ಲಿ 300ರಿಂದ 400 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.

ವೈಯಕ್ತಿಕವಾಗಿ ಪರ್ಯಾಯ ವೀಕ್ಷಣೆಗೆ ಬರುವವರ ಸಂಖ್ಯೆಯೂ ದೊಡ್ಡದಿದ್ದು ಪರ್ಯಾಯದ ದಿನ ಹೋಂಸ್ಟೇ, ರೆಸಾರ್ಟ್ಗಳನ್ನು ಬುಕ್ಕಿಂಗ್ ಮಾಡಿಕೊಂಡಿದ್ದಾರೆ.

ಪುತ್ತಿಗೆ ಮಠದ ಯತಿ ಪರಂಪರೆ

ಆನಂದ ತೀರ್ಥ ಸ್ವಾಮೀಜಿ

ಉಪೇಂದ್ರ ತೀರ್ಥ ಸ್ವಾಮೀಜಿ

ಕವಿಂದ್ರ ತೀರ್ಥ ಸ್ವಾಮೀಜಿ

ಹಂಸೇಂದ್ರ ತೀರ್ಥ ಸ್ವಾಮೀಜಿ

ಧರಣೀಂದ್ರ ತೀರ್ಥ ಸ್ವಾಮೀಜಿ

ಯೋಗೇಂದ್ರ ತೀರ್ಥ ಸ್ವಾಮೀಜಿ

ದಾಮೋದರ ತೀರ್ಥ ಸ್ವಾಮೀಜಿ

ರಘುನಾಥ ತೀರ್ಥ ಸ್ವಾಮೀಜಿ

ಶ್ರೀವತ್ಸಂಕ ತೀರ್ಥ ಸ್ವಾಮೀಜಿ

ಗೋಪಿನಾಥ ತೀರ್ಥ ಸ್ವಾಮೀಜಿ

ರಂಗನಾಥ ತೀರ್ಥ ಸ್ವಾಮೀಜಿ

ಲೋಕನಾಥ ತೀರ್ಥ ಸ್ವಾಮೀಜಿ

ರಾಮನಾಥ ತೀರ್ಥ ಸ್ವಾಮೀಜಿ

ಶ್ರೀವಲ್ಲಭ ತೀರ್ಥ ಸ್ವಾಮೀಜಿ

ಶ್ರೀನಿವಾಸ ತೀರ್ಥ ಸ್ವಾಮೀಜಿ

ಶ್ರೀನಿಧಿ ತೀರ್ಥ ಸ್ವಾಮೀಜಿ

ಗುಣನಿಧಿ ತೀರ್ಥ ಸ್ವಾಮೀಜಿ

ಆನಂದ ನಿಧಿ ತೀರ್ಥ ಸ್ವಾಮೀಜಿ

ತಪೋನಿಧಿ ತೀರ್ಥ ಸ್ವಾಮೀಜಿ

ಯಾದವೇಂದ್ರ ತೀರ್ಥ ಸ್ವಾಮೀಜಿ

ಕವೀಂದ್ರ ತೀರ್ಥ ಸ್ವಾಮೀಜಿ

ರಾಘವೇಂದ್ರ ತೀರ್ಥ ಸ್ವಾಮೀಜಿ

ವಿಭುದೇಂದ್ರ ತೀರ್ಥ ಸ್ವಾಮೀಜಿ

ಸುರೇಂದ್ರ ತೀರ್ಥ ಸ್ವಾಮೀಜಿ

ಭುವನೇಂದ್ರ ತೀರ್ಥ ಸ್ವಾಮೀಜಿ

ರಾಜೇಂದ್ರ ತೀರ್ಥ ಸ್ವಾಮೀಜಿ

ಯೋಗೀದ್ರ ತೀರ್ಥ ಸ್ವಾಮೀಜಿ

ಸುಮತೀಂದ್ರ ತೀರ್ಥ ಸ್ವಾಮೀಜಿ

ವಿಜಯೀಂದ್ರ ತೀರ್ಥ ಸ್ವಾಮೀಜಿ

ಸುಧೀಂದ್ರ ತೀರ್ಥ ಸ್ವಾಮೀಜಿ

ಸುಜ್ಞಾನೇಂದ್ರ ತೀರ್ಥ ಸ್ವಾಮೀಜಿ

ಸುಗುಣೇಂದ್ರ ತೀರ್ಥ ಸ್ವಾಮೀಜಿ

ಸುಶ್ರೀಂದ್ರ ತೀರ್ಥ ಸ್ವಾಮೀಜಿ

ಪುತ್ತಿಗೆ ಶ್ರೀಗಳ ಸಾಧನೆ

ಅಮೆರಿಕದಲ್ಲಿ 11 ಕೃಷ್ಣ ವೃಂದಾವನ ಸ್ಥಾಪನೆ

ಆಸ್ಟ್ರೇಲಿಯಾದಲ್ಲಿ 2, ಕೆನಡಾದಲ್ಲಿ 1, ಇಂಗ್ಲೆಂಡ್ನಲ್ಲಿ 1 ಕೃಷ್ಣ ವೃಂದಾವನ

ಪುತ್ತಿಗೆ ಶ್ರೀಗಳ ನೇತೃತ್ವದಲ್ಲಿ ನಡೆಯುವ ಪೂಜಾ ಕೇಂದ್ರಗಳು–7

ನೂತನವಾಗಿ ನಿರ್ಮಿಸಿರುವ ದೇವಮಂದಿರಗಳು–6

ಪುತ್ತಿಗೆ ಶ್ರೀಗಳ ಪರ್ಯಾಯ ಅವಧಿ

ಮೊದಲ ಪರ್ಯಾಯ;1976–1978

ದ್ವಿತೀಯ ಪರ್ಯಾಯ;1992–1994

ತೃತೀಯ ಪರ್ಯಾಯ;2008–2010

ಚತುರ್ಥ ಪರ್ಯಾಯ;2024–2026

ಮನೆಯಲ್ಲಿ ಆತಿಥ್ಯ

ಪುತ್ತಿಗೆ ಪರ್ಯಾಯಕ್ಕೆ ಬರುವ ಅತಿಥಿಗಳಿಗೆ ತಮ್ಮ ಮನೆಗಳಲ್ಲಿ ಆತಿಥ್ಯ ನೀಡಲು ಉಡುಪಿ ನಗರದ ಸಾರ್ವಜನಿಕರು ಮುಂದಾಗುವ ಮೂಲಕ ಸಹಕಾರ ನೀಡುತ್ತಿದ್ದಾರೆ. ನಗರದ ವ್ಯಾಪ್ತಿಯ ಸುತ್ತಮುತ್ತಲು ವಾಸವಾಗಿರುವ ಭಕ್ತರು ಪರ್ಯಾಯಕ್ಕೆ ಬರುವವರಿಗೆ ಎರಡು ದಿನಗಳ ಕಾಲ ವಾಸ್ತವ್ಯದ ವ್ಯವಸ್ಥೆ ಮಾಡಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಈಗಾಗಲೇ 70ಕ್ಕೂ ಹೆಚ್ಚು ಮಂದಿ ಆತಿಥ್ಯಕ್ಕೆ ನೋಂದಾಯಿಸಿದ್ದು ಪರ್ಯಾಯ ದಿನದ ಹೊತ್ತಿಗೆ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಹಿಂದೂ ಯುವ ಸೇನೆ, ಎಬಿವಿಪಿ ಹಾಗೂ ಆರ್ಎಸ್ಎಸ್ ಆತಿಥ್ಯ ನೋಂದಣಿ ಹೆಚ್ಚಾಗಲು ಶ್ರಮವಹಿಸುತ್ತಿವೆ ಎನ್ನುತ್ತಾರೆ ಮಠದ ಸಿಬ್ಬಂದಿ.

ಸ್ವಯಂ ಸೇವಕರ ದಂಡು

ಪರ್ಯಾಯಕ್ಕೆ ನೂರಾರು ಸ್ವಯಂ ಸೇವಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ವೈದ್ಯರು, ಶಿಕ್ಷಕರು, ಬ್ಯಾಂಕ್ ನೌಕರರು, ಲೆಕ್ಕ ಪರಿಶೋಧಕರು, ಸ್ವಸಹಾಯ ಸಂಘಗಳ ಸದಸ್ಯರು, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಂಘ ಸಂಸ್ಥೆಗಳು ಸ್ವಚ್ಛತಾ ಕಾರ್ಯ, ಪರ್ಯಾಯ ಚಟುವಟಿಕೆಗಳಲ್ಲಿ ಕೈಜೋಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.