ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಅಪಘಾತ ವಲಯಗಳ ಕೃತಕ ಸೃಷ್ಟಿ!

ಲೋಕಾಯುಕ್ತಕ್ಕೆ ಮೊರೆ ಹೋಗಲು ಜನತೆ ಸಿದ್ಧತೆ
Published : 21 ಸೆಪ್ಟೆಂಬರ್ 2024, 5:18 IST
Last Updated : 21 ಸೆಪ್ಟೆಂಬರ್ 2024, 5:18 IST
ಫಾಲೋ ಮಾಡಿ
Comments

ಶಿರಸಿ: ‘ಅರೆಬರೆಯಾಗಿರುವ ರಸ್ತೆ ವಿಸ್ತರಣೆ, ಕೊಚ್ಚಿ ಹೋಗಿರುವ ಡಾಂಬರ್, ಅಪಾಯಕ್ಕೆ ಎಡೆ ಮಾಡುವ ಜೆಲ್ಲಿಕಲ್ಲುಗಳು, ಅವೈಜ್ಞಾನಿಕವಾಗಿ ನಿರ್ಮಿಸಿದ ಗಟಾರ, ಅಪೂರ್ಣ ಕಾಮಗಾರಿಯಿಂದ ಅಪಘಾತ ವಲಯ ಸೃಷ್ಟಿ...ಈ ಎಲ್ಲ ಸಮಸ್ಯೆಗಳನ್ನು ಒಮ್ಮೇಲೆ ನೋಡುವುದಿದ್ದರೆ ತಾಲ್ಲೂಕಿನ ತಣ್ಣೀರಹೊಳೆ- ವಾನಳ್ಳಿ ರಸ್ತೆಯಲ್ಲಿ ಹೋಗಬೇಕು! 

ಸೊಣಗಿನಮನೆ-ಉಂಚಳ್ಳಿ ಫಾಲ್ಸ್ ಸಂಪರ್ಕಿಸುವ ರಾಜ್ಯ ಹೆದ್ದಾರಿ ಕಾಮಗಾರಿಯು ವಾನಳ್ಳಿಯಿಂದ ತಣ್ಣೀರಹೊಳೆವರೆಗೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ 6 ಕಿ.ಮೀ. ರಸ್ತೆ ವಿಸ್ತರಣೆ ಕಾಮಗಾರಿಯನ್ನು ಒಂದೂವರೆ ವರ್ಷದ ಹಿಂದೆ ಆರಂಭಿಸಲಾಗಿದೆ. ರಸ್ತೆಗೆ 6 ತಿಂಗಳ ಹಿಂದೆ ಮೊದಲ ಹಂತದ ಡಾಂಬರೀಕರಣ ಮಾಡಲಾಗಿದ್ದು, ಈಗಾಗಲೇ ಡಾಂಬ‌ರ್ ರಸ್ತೆಯ ಜೆಲ್ಲಿಕಲ್ಲು ಕಿತ್ತು ಹೋಗಿದೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸಿರುವ ಹಲವು ಸವಾರರು ಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ. ನಿತ್ಯವೂ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿದ್ದು, ಅವೈಜ್ಞಾನಿಕ ಕಾಮಗಾರಿಗೆ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. 

‘ತಣ್ಣೀರಹೊಳೆ ಶಾಲೆ ಸಮೀಪದ ಘಟ್ಟದಲ್ಲಿ ರಸ್ತೆ ಸಂಪೂರ್ಣ ಕಿತ್ತು ಹೋಗಿರುವುದರಿಂದ ತೀರಾ ಅಪಾಯಕಾರಿಯಾಗಿ ಮಾರ್ಪಟ್ಟಿದೆ. ಮಂಡೇಮನೆ ಬಸ್ ತಂಗುದಾಣದ ಬಳಿ ಕಿರು ಸೇತುವೆ ನಿರ್ಮಾಣಕ್ಕೆ ರಸ್ತೆ ಅಗೆದು ಹಾಗೇ ಬಿಡಲಾಗಿದೆ. ರಾತ್ರಿ ಸಮಯದಲ್ಲಿ ಇದು ಗೋಚರಿಸದೇ ದ್ವಿಚಕ್ರ ವಾಹನ ಸವಾರರು ಗುಂಡಿಯೊಳಗೆ ಬಿದ್ದು ಗಾಯಗೊಂಡಿದ್ದಾರೆ. ಈ ಸ್ಥಳ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಕೆಲವು ಕಡೆಗಳಲ್ಲಿ ಜೆಲ್ಲಿಕಲ್ಲಿನ ರಾಶಿ ರಸ್ತೆಯ ಮೇಲೆ ಇಟ್ಟಿದ್ದಾರೆ.  ಕಾಮಗಾರಿಯು ಸಂಪೂರ್ಣ ಅವೈಜ್ಞಾನಿಕವಾಗಿದೆ’ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

‘ರಸ್ತೆ ವಿಸ್ತರಣೆ ವೇಳೆ ಅವೈಜ್ಞಾನಿಕವಾಗಿ ಗಟಾರ ನಿರ್ಮಿಸಿದ್ದರಿಂದ ಮಳೆಯ ನೀರು ಗಟಾರದಲ್ಲಿ ಹರಿದು ಹೋಗುವ ಬದಲು ರಸ್ತೆಯ ಮೇಲೆ ಹರಿದು ರಸ್ತೆ ಕಿತ್ತುಹೋಗಿದೆ. ನೀರಿನ ರಭಸಕ್ಕೆ ಗಟಾರವು ರಸ್ತೆಯನ್ನು ನುಂಗುತ್ತಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಗಮನಕ್ಕೆ ತಂದರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ’ ಎಂದು ಸ್ಥಳೀಯರಾದ ರಮೇಶ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮಳೆಗಾಲದ ನಂತರ ಡಾಂಬರ್ ಹಾಕಿ ರಸ್ತೆ ಕಾಮಗಾರಿ ಮುಗಿಸಲು ಗುತ್ತಿಗೆದಾರರು ಮುಂದಾಗಿದ್ದಾರೆ. ಇದೇ ರೀತಿ ಕಳಪೆ ಕಾಮಗಾರಿಯಾದರೆ ಮುಂದಿನ ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಕಿತ್ತು ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸಿದ್ದರಿಂದ ವಾಹನ ಸವಾರರು ತೊಂದರೆ ಎದುರಿಸುವಂತಾಗಿದೆ’ ಎನ್ನುತ್ತಾರೆ ಅವರು. 

ಮೊದಲ ಹಂತದ ಡಾಂಬರ್ ಕೋಟಿಂಗ್ ಅನ್ನು ಮೇ ತಿಂಗಳಿನಲ್ಲಿ ಹಾಕಿದ್ದಾರೆ. ನಂತರ ಮಳೆಯ ಆರ್ಭಟಕ್ಕೆ ಕಿತ್ತು ಬಿದ್ದಿದೆ. ಕಾಮಗಾರಿಯ ಲೋಪದ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ನಿರ್ಧರಿಸಲಾಗಿದೆ‌.
ಪ್ರವೀಣ ಹೆಗಡೆ, ಕೋಡ್ನಗದ್ದೆ ಗ್ರಾಮ ಪಂಚಾಯಿತಿ ಸದಸ್ಯ
ಸಧ್ಯ ಮಳೆಯಿದ್ದು ಮಳೆ ನಂತರ ಎರಡನೇ ಹಂತದ ಡಾಂಬರ್ ಹಾಕುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ.
ನಾಗರಾಜ ನಾಯ್ಕ, ಲೋಕೋಪಯೋಗಿ ಇಲಾಖೆ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT