ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಕೆರೆ, ಕೃಷಿಹೊಂಡಕ್ಕೆ ಬೇಕಿದೆ ಸುರಕ್ಷಾ ಕವಚ

ಅಪಾಯಕ್ಕೆ ಆಹ್ವಾನ ನೀಡುವ ರಸ್ತೆಯಂಚಿನ ಕೆರೆಗಳು
Published : 5 ಅಕ್ಟೋಬರ್ 2024, 6:01 IST
Last Updated : 5 ಅಕ್ಟೋಬರ್ 2024, 6:01 IST
ಫಾಲೋ ಮಾಡಿ
Comments

ಶಿರಸಿ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ರಸ್ತೆಯಂಚಿನ ಕೆರೆ, ಕೃಷಿ ಹೊಂಡಗಳಿಗೆ ಸೂಕ್ತ ರಕ್ಷಣಾ ಬೇಲಿಯಾಗಲಿ, ತಡೆಗೋಡೆಯಾಗಲಿ ಇಲ್ಲದ ಪರಿಣಾಮ ಶಾಲಾ ಮಕ್ಕಳು, ಸಂಚಾರಿಗಳ ಪಾಲಿಗೆ ಮೃತ್ಯುಕೂಪಗಳಾಗಿ ಬದಲಾಗುತ್ತಿವೆ. 

ತಾಲ್ಲೂಕಿನ ಬಿಸಲಕೊಪ್ಪ, ಉಳ್ಳಾಲ, ಮಳಲಗಾಂವ್, ಗೌಡಳ್ಳಿ, ಕಲಕರಡಿ, ಬೆಂಗಳೆ, ಗೌಡಳ್ಳಿ, ಗುಡ್ನಾಪುರ ಸೇರಿ ಹಲವು ಕೆರೆಗಳು ಮಳೆಗಾಲದ ವೇಳೆ ತುಂಬಿವೆ. ಆದರೆ ಬಹುತೇಕ ಕೆರೆಗಳಿಗೆ ಸೂಕ್ತ ರಕ್ಷಣಾ ಬೇಲಿಯಾಗಲೀ, ತಡೆಗೋಡೆಯಾಗಲೀ ಇಲ್ಲ. ಹೀಗಾಗಿ ಇವು ಜನ, ಜಾನುವಾರುಗಳಿಗೆ ಜೀವಾಪಾಯಕ್ಕೆ ಕಾರಣವಾಗುತ್ತಿವೆ. 

‘ಇತ್ತೀಚೆಗೆ ಗೌಡಳ್ಳಿ ಸಮೀಪ ಹೆದ್ದಾರಿ ಪಕ್ಕದಲ್ಲಿರುವ ಕೆರೆಯಲ್ಲಿ ಹಸುವೊಂದು ನೀರು ಕುಡಿಯಲು ಹೋಗಿ ಆಯತಪ್ಪಿ ಬಿದ್ದಿತ್ತು. ಇದನ್ನು ಕಂಡ ಕೆಲ ಸಾರ್ವಜನಿಕರು ರಕ್ಷಣಾ ಕಾರ್ಯ ನಡೆಸಿ ಜೀವ ಉಳಿಸಿದ್ದರು. ಇಲ್ಲಿ ರಸ್ತೆಗೆ ತಾಗಿಕೊಂಡೇ ಕೆರೆಯಿದ್ದು, ಯಾವುದೇ ಸುರಕ್ಷೆಯಿಲ್ಲ. ವಾಹನಗಳನ್ನು ಪಕ್ಕಕ್ಕೆ ಇಳಿಸಲು ಸಮಸ್ಯೆಯಾಗುತ್ತಿದ್ದು, ಜೀವಾಪಾಯ ಕಾಡುತ್ತದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದವರು ಯಾವುದೇ ಕ್ರಮವಹಿಸದಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ಸ್ಥಳಿಕರಾದ ಶಫಿವುಲ್ಲಾ ಖಾನ್. 

‘ಗುಡ್ನಾಪುರದಂಥ ಕ್ಷೇತ್ರಕ್ಕೆ ವರ್ಷದಲ್ಲಿ ಸಾವಿರಾರು ಪ್ರವಾಸಿಗರು ಆಗಮಿಸುವ ಐತಿಹಾಸಿಕ ಪ್ರಸಿದ್ಧ ಕೆರೆಯ ಏರಿಗೆ ಯಾವುದೇ ರಕ್ಷಣೆ ಅನುಸರಿಸಿಲ್ಲ. ಇಲ್ಲಿ ಏರಿಯೇ ರಸ್ತೆಯಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಹೆಚ್ಚಿನ ವಾಹನಗಳು ಸಂಚರಿಸುವ ಈ ಪ್ರದೇಶ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ’ ಎನ್ನುತ್ತಾರೆ ಗ್ರಾಮಸ್ಥರು. 

‘ಮಳೆಗಾಲದ ನಂತರ ತುಂಬಿರುವ ಕೆರೆಗಳು ಮಕ್ಕಳಿಗೆ ಆಕರ್ಷಣೀ ಯವಾಗಿ ಕಾಣುತ್ತಿದ್ದು, ಕೈ ಬೀಸಿ ಕರೆಯುತ್ತವೆ. ಈಗಾಗಲೇ ನೀರಿಗೆ ಬಿದ್ದು ದುರಂತ ಸಂಭವಿಸುವ ಘಟನೆಗಳು ನಡೆಯುತ್ತಲೇ ಇದೆ. ಆದರೆ ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ. ಸಾಕಷ್ಟು ಬಾರಿ ಆಡಳಿತದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ’ ಎಂಬುದು ಹಾಡಲಗಿಯ ಶಂಕರ ಗೌಡ ಮಾತು. 

‘ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಸೇರಿ ಸ್ಥಳೀಯ ಗ್ರಾಮ ಪಂಚಾಯಿತಿ ಇದರ ಬಗ್ಗೆ ಗಮನ ಹರಿಸಿದರೆ ಒಳಿತು. ಎಲ್ಲ ಪಂಚಾಯಿತಿಗಳು ಅಪಾಯ ಆಗುವ ಮುನ್ನವೇ ಶಾಲೆ, ರಸ್ತೆ, ಜನವಸತಿ, ಕಾಲೊನಿಗಳ ಬಳಿ ಇರುವ ಇಂತಹ ಅಪಾಯಕಾರಿ ಕೆರೆ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು. 

‘ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಕ್ಷತೆಯಿಲ್ಲದ ಕೆರೆಗಳು ಇದ್ದಲ್ಲಿ, ಅಲ್ಲಿ ಎಚ್ಚರಿಕೆ ಫಲಕ, ಫೆನ್ಸಿಂಗ್ ಅಥವಾ ತಡೆಗೋಡೆ ನಿರ್ಮಿಸಿ ಮುಂದೆ ಬರುವ ಅಪಾಯ ತಡೆಗಟ್ಟಬೇಕು’ ಎಂಬುದು ಸ್ಥಳೀಯರ ಆಗ್ರಹ. 

ಎಲ್ಲಿ ಕೆರೆಗಳು ಅಪಾಯಕಾರಿಯಾಗಿವೆ ಅಂಥ ಕಡೆ ಸುರಕ್ಷತಾ ಕ್ರಮ ಅನುಸರಿಸುವಂತೆ ಸಂಬಂಧಿತ ಪಂಚಾಯಿತಿಗಳಿಗೆ ಸೂಚನೆ ನೀಡಲಾಗುವುದು.
ಶ್ರೀಧರ ಮುಂದಲಮನಿ, ತಹಶೀಲ್ದಾರ್‌, ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT