ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರೂರು ಗುಡ್ಡ ಕುಸಿತ: ನದಿ ನೀರಿನಲ್ಲಿ ಕೇರಳ ಲಾರಿಯ ಕ್ಯಾಬಿನ್ ಪತ್ತೆ

ತಜ್ಞರಿಂದ ಶೋಧ ನಾಲ್ಕು ಕಡೆ ಲೋಹದ ವಸ್ತು
Published 25 ಜುಲೈ 2024, 20:31 IST
Last Updated 26 ಜುಲೈ 2024, 2:45 IST
ಅಕ್ಷರ ಗಾತ್ರ

ಕಾರವಾರ: ‘ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಕಣ್ಮರೆಯಾದ ಕೇರಳದ ಲಾರಿಯ ಕ್ಯಾಬಿನ್ ಗಂಗಾವಳಿ ನದಿಯಲ್ಲಿ ಐದು ಮೀಟರ್ ಆಳದಲ್ಲಿ ಇರುವುದು ಪತ್ತೆಯಾಗಿದೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದರು‌.

ನೊಯ್ಡಾದಿಂದ ತರಲಾದ ಡ್ರೋನ್ ಆಧಾರಿತ ಶೋಧನ ಯಂತ್ರದ ಮೂಲಕ ತಜ್ಞರು ದಿನವಿಡೀ ಲಾರಿ ಪತ್ತೆ ಕಾರ್ಯ ನಡೆಸಿದರು. ನದಿ ಮೇಲ್ಮೈನಲ್ಲಿ ಹಾರಾಟ ನಡೆಸಿದ ಯಂತ್ರ ನಾಲ್ಕು ಕಡೆ ಲೋಹದ ವಸ್ತುಗಳಿರುವುದನ್ನು ಪತ್ತೆ ಮಾಡಿತು.

‘ನದಿಯ ದಡದಿಂದ 60 ಮೀಟರ್ ದೂರ ಮತ್ತು 6 ಮೀಟರ್ ಆಳ ಲಾರಿಯ ಕ್ಯಾಬಿನ್ ಇರುವುದು ದೃಢಪಟ್ಟಿದೆ. ಕಬ್ಬಿಣದ ರೇಲಿಂಗ್ಸ್, ವಿದ್ಯುತ್ ಟವರ್ ಮಾದರಿಯ ವಸ್ತುಗಳಿರುವುದು ಗುರುತಿಸಿದೆ. ಇನ್ನೊಂದು ಕಡೆ ದೊಡ್ಡ ಗಾತ್ರದ ಲೋಹದ ವಸ್ತು ಇರುವುದನ್ನು ದೃಢಪಡಿಸಿದೆ. ಅದು ಬಹುಶಃ ನದಿಯಲ್ಲಿ ತೇಲಿ ಹೋಗಿದ್ದ ಟ್ಯಾಂಕರ್ ಹೊತ್ತಿದ್ದ ಟ್ರಕ್‍ನ ಕ್ಯಾಬಿನ್ ಆಗಿರುವ ಸಾಧ್ಯತೆ ಇದೆ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ಟ್ಯಾಂಕರ್ ಕ್ಯಾಬಿನ್‍‍ನೊಳಗೆ ಚಾಲಕ ಅರ್ಜುನ್ ಸಿಲುಕಿದ ಬಗ್ಗೆಯೂ ತಜ್ಞರು ಥರ್ಮಲ್ ಸ್ಕ್ಯಾನರ್ ಮೂಲಕ ಚಿತ್ರ ತೆಗೆದಿದ್ದಾರೆ. ಆದರೆ, ಆತ ಅಲ್ಲಿಯೇ ಇರುವ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಲಾರಿ ಕ್ಯಾಬಿನ್ ಗುರುತಿಸಿ ಹೊರತೆಗೆಯಲು ಮುಳುಗು ತಜ್ಞರು ನದಿಗೆ ಇಳಿಯಬೇಕು. ನದಿಯು ಗಂಟೆಗೆ 6 ನಾಟಿಕಲ್ ಮೈಲಿ ವೇಗದ ರಭಸ ಹೊಂದಿದ್ದು ಮುಳುಗು ತಜ್ಞರು ಇಳಿಯಲು ಅಗತ್ಯ ವಾತಾವರಣ ಇಲ್ಲ. ಹೀಗಾಗಿ ನೌಕದಳದ ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ನಡೆಸುವ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು’ ಎಂದರು.

‘ಥರ್ಮಲ್ ಸ್ಕ್ಯಾನರ್ ಮೂಲಕ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಲಾಗುವುದು. ಆಗ ಚಾಲಕ ನದಿಯೊಳಗೆ ಸಿಲುಕಿರುವ ಬಗ್ಗೆ ಸ್ಪಷ್ಟತೆ ಸಿಗಲಿದೆ. ಉಕ್ರವಾರವೂ ಪತ್ತೆ ಕಾರ್ಯ ಮುಂದುವರಿಸುತ್ತೇವೆ’ ಎಂದು ನೊಯ್ಡಾದ ಕ್ವಿಕ್ ಪೇ ಪ್ರೈವೇಟ್ ಲಿಮಿಟೆಡ್ ಆಪರೇಶನಲ್ ಸಲಹೆಗಾರ, ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ಹೇಳಿದರು.

- ಚಾಲಕನ ಮೃತದೇಹದ ಗುರುತು ಪತ್ತೆ

ಶಿರೂರು ದುರಂತದಲ್ಲಿ ಕಣ್ಮರೆಯಾಗಿದ್ದ ತಮಿಳುನಾಡಿನ ನಾಮಕ್ಕಲ್‍ನ ಚಾಲಕ ಶರವಣ ಅವರ ಮೃತದೇಹದ ಗುರುತು ಪತ್ತೆಯಾಗಿದೆ. ಜುಲೈ 19 ರಂದು ಬೆಳಂಬಾರದ ಕಡಲತೀರದಲ್ಲಿ ಅರ್ಧಭಾಗ ಮಾತ್ರ ದೊರೆತಿದ್ದ ದೇಹವನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದು ಶರವಣ ಅವರದ್ದು ಎಂಬುದು ದೃಢಪಟ್ಟಿದೆ. ಶರವಣ ಕುಟುಂಬದವರು ಶಿರೂರಿನಲ್ಲಿ 4 ದಿನಗಳಿಂದ ಬೀಡುಬಿಟ್ಟಿದ್ದು ಅವರಿಗೆ ಮೃತದೇಹ ಹಸ್ತಾಂತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT