ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ಮೀನಿಗೆ ಬರ ದುರಸ್ತಿ ವೆಚ್ಚದ ಬರೆ

ನಿಷೇಧದ ಅವಧಿ: ದುರಸ್ತಿಗಾಗಿ ದಡ ಏರಿ ನಿಂತ ಬೋಟ್‍ಗಳು
Published 19 ಜುಲೈ 2024, 4:30 IST
Last Updated 19 ಜುಲೈ 2024, 4:30 IST
ಅಕ್ಷರ ಗಾತ್ರ

ಕಾರವಾರ: ಹವಾಮಾನ ವೈಪರೀತ್ಯ, ತಾಪಮಾನ ಏರಿಕೆ, ಅವೈಜ್ಞಾನಿಕ ಮೀನುಗಾರಿಕೆ...ಹೀಗೆ ನಾನಾ ಕಾರಣದಿಂದ ಕಳೆದ ಅವಧಿಯಲ್ಲಿ ಮೀನಿನ ಬರ ಎದುರಿಸಿರುವ ಮೀನುಗಾರಿಕಾ ಬೋಟ್‍ಗಳ ಮಾಲೀಕರಿಗೆ ಈಗ ದುರಸ್ತಿ ವೆಚ್ಚ ಚಿಂತೆ ತಂದಿದೆ.

ಯಾಂತ್ರೀಕೃತ ಮೀನುಗಾರಿಕೆ ನಿಷೇಧವಿರುವ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಮೀನುಗಾರಿಕೆ ಬಂದರಿನಲ್ಲಿ ಬೋಟ್‍ಗಳ ದುರಸ್ತಿ, ನಿರ್ವಹಣೆಯ ಕೆಲಸ ಜೋರಾಗಿ ನಡೆದಿದೆ. ಹಿಂದಿನ ಹತ್ತು ತಿಂಗಳ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮತ್ಸ್ಯ ಬೇಟೆ ಮಾಡಲಾಗದೆ ಆರ್ಥಿಕ ಸಂಕಷ್ಟ ಎದುರಿಸುವ ಬೋಟ್‍ಗಳ ಮಾಲೀಕರು ಲಕ್ಷಾಂತರ ವೆಚ್ಚ ಮಾಡಿ ಬೋಟ್‍ಗಳ ದುರಸ್ತಿ ಮಾಡಿಸಬೇಕಾಗಿ ಬಂದಿದೆ.

ಬೈತಕೋಲದ ಮೀನುಗಾರಿಕೆ ಬಂದರಿನಲ್ಲಿ ಹತ್ತಕ್ಕೂ ಹೆಚ್ಚು ಟ್ರಾಲರ್ ಬೋಟ್‍ಗಳು, ಪರ್ಸಿನ್ ಬೋಟ್‍ಗಳು ದಡಕ್ಕೆ ಬಂದು ನಿಂತಿವೆ. ಅವುಗಳಿಗೆ ಹೊಸದಾಗಿ ಹಲಗೆ ಜೋಡಿಸುವ, ಬಣ್ಣ ಬಳಿಯುವ, ಎಂಜಿನ್ ಬದಲಿಸುವ ಕಾರ್ಯಗಳಲ್ಲಿ ಹತ್ತಾರು ಕಾರ್ಮಿಕರು ನಿರತರಾಗಿದ್ದಾರೆ. ಹಲವು ಬೋಟ್‍ಗಳು ಸಮುದ್ರದಲ್ಲಿ ಲಂಗರು ಹಾಕಿರುವ ಸ್ಥಳದಲ್ಲೇ ಸಣ್ಣ ಪುಟ್ಟ ದುರಸ್ತಿ ಕೆಲಸ ನಡೆದಿದೆ.

‘ಟ್ರಾಲರ್ ಅಥವಾ ಪರ್ಸಿನ್ ಬೋಟ್‍ಗಳನ್ನು ಪ್ರತಿ ಐದು ಅಥವಾ ಆರು ವರ್ಷಕ್ಕೊಮ್ಮೆ ದಡಕ್ಕೆ ತಂದು ದುರಸ್ತಿ ಮಾಡಿಸಬೇಕಾಗುತ್ತದೆ. ಬೋಟ್‍ಗಳ ತಳಪಾಯದಲ್ಲಿರುವ ಹಲಗೆಗಳ ಸ್ಥಿತಿ ಪರಿಶೀಲಿಸುವ ಜತೆಗೆ ಅವುಗಳಿಗೆ ಹಾನಿಯಾಗಿದ್ದರೆ ಬದಲಿಸುವ ಕೆಲಸ ಮಾಡಬೇಕಾಗುತ್ತದೆ. ದೋಣಿಗಳಿಗೆ ಬಣ್ಣ ಬಳಿಸಬೇಕಾಗುತ್ತದೆ. ಇವೆಲ್ಲವುಗಳಿಗೆ ಸರಾಸರಿ ₹4 ಲಕ್ಷದಿಂದ ₹5 ಲಕ್ಷದವರೆಗೆ ವೆಚ್ಚ ತಗಲುತ್ತದೆ’ ಎನ್ನುತ್ತಾರೆ ಟ್ರಾಲರ್ ಬೋಟ್ ಮಾಲೀಕ ಸುಧಾಕರ ಹರಿಕಂತ್ರ.

‘ಹಿಂದಿನ ವರ್ಷ ಮೀನುಗಳ ಕೊರತೆಯ ಕಾರಣದಿಂದ ದೋಣಿಗಳ ಮಾಲೀಕರು ಆರ್ಥಿಕ ನಷ್ಟದಲ್ಲಿದ್ದಾರೆ. ಪುನಃ ಮೀನುಗಾರಿಕೆ ಆರಂಭಗೊಳ್ಳುವುದರೊಳಗೆ ಬೋಟ್‍ಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ದುರಸ್ತಿ ಅನಿವಾರ್ಯ. ಮರದ ಹಲಗೆ, ಬಣ್ಣ ಬಳಿಯುವ, ಮರಗೆಲಸ ಸೇರಿದಂತೆ ಕಾರ್ಮಿಕರ ವೆಚ್ಚ ಹೆಚ್ಚಿರುವುದರಿಂದ ದುರಸ್ತಿ ವೆಚ್ಚ ದುಪ್ಪಟ್ಟಾಗಿದೆ. ಇದು ಆರ್ಥಿಕ ಹೊರೆಯಾಗಿದೆ’ ಎನ್ನುತ್ತಾರೆ ಪರ್ಸಿನ್ ಬೋಟ್ ಯನಿಯನ್ ಅಧ್ಯಕ್ಷ ರಾಜು ತಾಂಡೇಲ.

ಕಾರವರದ ಬೈತಕೋಲದಲ್ಲಿ ಮೀನುಗಾರಿಕೆ ಬೋಟ್‍ವೊಂದರ ದುರಸ್ತಿಯಲ್ಲಿ ಕಾರ್ಮಿಕರು ತೊಡಗಿಕೊಂಡಿರುವುದು.
ಕಾರವರದ ಬೈತಕೋಲದಲ್ಲಿ ಮೀನುಗಾರಿಕೆ ಬೋಟ್‍ವೊಂದರ ದುರಸ್ತಿಯಲ್ಲಿ ಕಾರ್ಮಿಕರು ತೊಡಗಿಕೊಂಡಿರುವುದು.
ಬೈತಕೋಲ ಮೀನುಗಾರಿಕೆ ಬಂದರಿನಲ್ಲಿ ಹಳತಾಗಿದ್ದ ಬೋಟ್‍ವೊಂದನ್ನು ಒಡೆದು ಅದರ ಹಲಗೆಗಳನ್ನು ತೆಗೆಯುವಲ್ಲಿ ಕಾರ್ಮಿಕರು ನಿರತರಾಗಿದ್ದರು.
ಬೈತಕೋಲ ಮೀನುಗಾರಿಕೆ ಬಂದರಿನಲ್ಲಿ ಹಳತಾಗಿದ್ದ ಬೋಟ್‍ವೊಂದನ್ನು ಒಡೆದು ಅದರ ಹಲಗೆಗಳನ್ನು ತೆಗೆಯುವಲ್ಲಿ ಕಾರ್ಮಿಕರು ನಿರತರಾಗಿದ್ದರು.

ಟ್ರಾಲಿ ಇಲ್ಲದೆ ಸಮಸ್ಯೆ

‘ಬೈತಕೋಲ ಮೀನುಗಾರಿಕೆ ಬಂದರಿನಲ್ಲಿ ಬೋಟ್‍ಗಳನ್ನು ದಡಕ್ಕೆ ತರಲು ಮತ್ತು ಸಮುದ್ರಕ್ಕೆ ಇಳಿಸಲು ಅಗತ್ಯವಾಗಿರುವ ಟ್ರಾಲಿ ವ್ಯವಸ್ಥೆ ಇಲ್ಲ. ಸದ್ಯ ಎಂಜಿನ್‍ಗಳನ್ನು ಬಳಕೆ ಮಾಡಿ ದೋಣಿಗಳನ್ನು ಮೇಲಕ್ಕೆ ತರಲಾಗುತ್ತಿದೆ. ಒಂದು ಪರ್ಸಿನ್ ಬೋಟ್ ದಡಕ್ಕೆ ಎಳೆದು ತರಲು ಕನಿಷ್ಠ ₹40 ಸಾವಿರ ಮತ್ತು ಟ್ರಾಲರ್ ಬೋಟ್ ತರಲು ₹30 ರಿಂದ 35 ಸಾವಿರ ವೆಚ್ಚವಾಗುತ್ತಿದೆ. ಟ್ರಾಲಿ ವ್ಯವಸ್ಥೆ ಇದ್ದರೆ ವೆಚ್ಚ ತಗ್ಗಲಿದೆ’ ಎನ್ನುತ್ತಾರೆ ಯುವ ಮೀನುಗಾರ ಸಂಘರ್ಷ ಸಮಿತಿಯ ಅಧ್ಯಕ್ಷ ವಿನಾಯಕ ಹರಿಕಂತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT