ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ನಿಂದ ರಾಜಭವನ ಚಲೋ ಆ.27ಕ್ಕೆ: ಪಾಟೀಲ ಗಣಿಹಾರ

ಸಿದ್ದರಾಮಯ್ಯ ತೇಜೋವಧೆ ಖಂಡಿಸಿ, ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ನಡೆಸುತ್ತಿರುವ ಕುತಂತ್ರ ವಿರೋಧಿಸಿ
Published : 24 ಆಗಸ್ಟ್ 2024, 13:54 IST
Last Updated : 24 ಆಗಸ್ಟ್ 2024, 13:54 IST
ಫಾಲೋ ಮಾಡಿ
Comments

ವಿಜಯಪುರ: ‘ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ‌ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ, ಸಿದ್ದರಾಮಯ್ಯ ಅವರ ತೇಜೋವಧೆ ಖಂಡಿಸಿ, ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ, ಜೆಡಿಎಸ್‌ ನಡೆಸುತ್ತಿರುವ ಕುತಂತ್ರವನ್ನು ವಿರೋಧಿಸಿ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಆ.27 ರಂದು ಬೆಳಿಗ್ಗೆ 11ಕ್ಕೆ ‘ರಾಜಭವನ ಚಲೋ’ ಹಮ್ಮಿಕೊಳ್ಳಲಾಗಿದೆ’ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ಕಾಂಗ್ರೆಸ್‌ ವತಿಯಿಂದ ನಡೆಯುವ ರಾಜಭವನ ಚಲೋದಲ್ಲಿ ವಿಜಯಪುರ ಜಿಲ್ಲೆಯಿಂದ ಸಹಸ್ರಾರು ಜನರು ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಅವರ ವಿರುದ್ದ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಸಂವಿಧಾನ ಬದ್ಧವಾಗಿಲ್ಲ, ತಪ್ಪಿದೆ ಎಂಬುದನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಡ್ವಕೇಟ್ ಜನರಲ್ ಆಗಿದ್ದ ಬಿ.ವಿ.ಆಚಾರ್ಯ ಮತ್ತು ಅಶೋಕ ಹಾರನಹಳ್ಳಿ ಅವರು ನೀಡಿರುವ ಹೇಳಿಕೆ ಗಮನಿಸಬೇಕಾದ ಸಂಗತಿ’ ಎಂದು ಹೇಳಿದರು.

‘ಬಿಜೆಪಿ, ಜೆಡಿಎಸ್‌ನ ಮಾಜಿ ಸಚಿವರು, ಮಾಜಿ ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ ಸುಮಾರು 12 ಪ್ರಕರಣಗಳು ರಾಜ್ಯಪಾಲರ ಅನುಮತಿಗಾಗಿ ವರ್ಷದಿಂದ ಕಾಯುತ್ತಿವೆ. ಅವುಗಳನ್ನು ಇದುವರೆಗೂ ಪರಿಶೀಲಿಸದ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಕರಣದ ತನಿಖೆಗೆ ತರಾತುರಿಯಲ್ಲಿ ಅನುಮತಿ ನೀಡುವ ಮೂಲಕ ಕೇಂದ್ರ  ಬಿಜೆಪಿ ಸರ್ಕಾರ ಮತ್ತು ಜೆಡಿಎಸ್ ಮುಖಂಡರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಬೇನಾಮಿ ಕಂಪನಿಗೆ 550 ಎಕರೆ ಸರ್ಕಾರಿ ಜಾಗವನ್ನು ಬರೆದುಕೊಟ್ಟು ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಇದೀಗ ಅದು ನನ್ನ ಸಹಿ ಅಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಹುದ್ದೆಗೆ ಅವಮಾನ ಮಾಡಿದ್ದಾರೆ. ಅವರ ಸಹಿ ಬೇರಾರೋ ನಕಲು ಮಾಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ಒಂದು ವೇಳೆ ಮುಡಾ ಹಗರಣ ನಡೆದಿದ್ದರೆ ಅಂದು ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಹೊಣೆಯಾಗಬೇಕಾಗುತ್ತದೆಯೇ ಹೊರತು, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ ಎಂದು ಹೇಳಿದರು.

ಕೆಪಿಸಿಸಿ ವೈದ್ಯಕೀಯ ಘಟಕದ ಪ್ರಮುಖ ಡಾ.ರವಿ ಬಿರಾದಾರ ಮಾತನಾಡಿ, ‘ರಾಜ್ಯಪಾಲರು ದಲಿತ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಬಿಜೆಪಿಯವರೇ ರಾಜ್ಯಪಾಲರ ಜಾತಿ ಎಳೆದುತಂದು ಗಲಾಟೆ ಮಾಡುತ್ತಿರುವುದು ಅವರ ಹತಾಶೆಯ ಕೊನೇ ಅಸ್ತ್ರವಾಗಿದೆ’ ಎಂದರು. 

ಕಾಂಗ್ರೆಸ್‌  ಮುಖಂಡರಾದ ಮಲ್ಲು ಬಿದರಿ, ಸಂಜು ಕಂಬಾಗಿ, ಫಯಾಜ್ ಕಲಾದಗಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಹಾಲುಮತ ಸಮುದಾಯಕ್ಕೆ ಸೇರಿದ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರುವುದನ್ನು ಸಹಿಸಲಾಗದೇ ಬಿಜೆಪಿಯವರು ಅವರ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ
-ಎಸ್.ಎಂ.ಪಾಟೀಲ ಗಣಿಹಾರ ಕೆಪಿಸಿಸಿ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT