ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಣೇಕಲ್: ಗ್ರಾಮಸ್ಥರಿಗಿಲ್ಲ ಶುದ್ಧ ನೀರಿನ ಭಾಗ್ಯ

ಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನಿರುಪಯುಕ್ತವಾದ ನೀರಿನ ಘಟಕಗಳು
–ಮಲ್ಲಿಕಾರ್ಜುನ. ಬಿ ಅರಕೇರಕರ್
Published : 13 ಸೆಪ್ಟೆಂಬರ್ 2024, 6:00 IST
Last Updated : 13 ಸೆಪ್ಟೆಂಬರ್ 2024, 6:00 IST
ಫಾಲೋ ಮಾಡಿ
Comments

ಕಣೇಕಲ್(ಸೈದಾಪುರ): ಗ್ರಾಮೀಣ ಜನರ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ವಿವಿಧ ಯೋಜನೆಗಳಡಿ ಸರ್ಕಾರ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳು ಸಾರ್ವಜನಿಕ ಬಳಕೆಗೆ ಬಾರದೆ ನಿರುಪಯುಕ್ತವಾಗಿದ್ದು, ಸರ್ಕಾರದ ಲಕ್ಷ ಲಕ್ಷ ಹಣ ಪೋಲಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಸಮೀಪದ ಕಾಳೆಬೆಳಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಣೇಕಲ್ ಗ್ರಾಮದಲ್ಲಿ 2 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ಜನರಿಗೆ ಶುದ್ಧ ನೀರು ಇಲ್ಲದಿರುವುದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸ್ಥಳೀಯ ನಿವಾಸಿ ಸುಭಾಸ ವಿಶ್ವಕರ್ಮ ಕಣೇಕಲ್ ಆಕ್ರೋಶ ವ್ಯಕ್ತಪಡಿಸಿದರು.

ದುರಸ್ತಿ ಭಾಗ್ಯ ಕಾಣದ ಘಟಕಗಳು: ಗ್ರಾಮದಲ್ಲಿ ಸುಮಾರು 3000 ರಿಂದ 4000 ಜನ ವಾಸಿಸುತ್ತಿದ್ದಾರೆ. ಗ್ರಾಮಸ್ಥರ ಆರೋಗ್ಯದ ಅನೂಕೂಲಕ್ಕಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಂಭಾಗದಲ್ಲಿ ಹಾಗೂ ಪರಿಶಿಷ್ಟ ಜಾತಿ ಓಣಿಯಲ್ಲಿ ಬರುವ ಅಂಗನವಾಡಿ ಕೇಂದ್ರದ ಹತ್ತಿರದಲ್ಲಿ ನಿರ್ಮಿಸಲಾಗಿದೆ. 2 ಘಟಕಗಳು ಕೆಟ್ಟು ಸುಮಾರು ನಾಲ್ಕೈದು ವರ್ಷಗಳು ಕಳೆದರೂ ದುರಸ್ತಿ ಮಾಡಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ. ಸುತ್ತಮುತ್ತ ಮುಳ್ಳು ಗಿಡಗಂಟಿಗಳು ಬೆಳೆದು ನಿಂತಿವೆ. ಬಿಸಿಲು, ಮಳೆ ಗಾಳಿಯಿಂದ ಸರಿಯಾದ ನಿರ್ವಹಣೆ ಇಲ್ಲದೆ ಯಂತ್ರೋಪಕರಣಗಳು ತುಕ್ಕು ಹಿಡಿದು ಕರಗುತ್ತಿವೆ ಎಂದು ಗ್ರಾಮಸ್ಥ ಮಲ್ಲಿಕಾರ್ಜುನ ಹುಲಿಬೆಟ್ಟ ತಿಳಿಸಿದರು.

ನಿತ್ಯ 8 ಕಿ.ಮೀ ದೂರದಿಂದ ನೀರು ತರಬೇಕು: ದಿನನಿತ್ಯ ಕುಡಿಯಲು ಹಾಗೂ ಸಭೆ ಸಮಾರಂಭಗಳಿಗೆ ಶುದ್ಧ ಕುಡಿಯುವ ನೀರು ತರಲು ದ್ವಿಚಕ್ರ ಹಾಗೂ ಇತರೆ ವಾಹನ ಇರುವವರು ಸುಮಾರು 8 ಕಿ.ಮೀ ದೂರದ ಸೈದಾಪುರದ ಖಾಸಗಿ ವ್ಯಕ್ತಿಗಳ ಹತ್ತಿರ ಒಂದು ಕ್ಯಾನ್‍ಗೆ 10 ರೂಪಾಯಿ ದುಡ್ಡು ನೀಡಿ ತೆಗೆದುಕೊಂಡು ಬರುತ್ತಾರೆ. ಬಡವರು ಹಾಗೂ ವಾಹನ ಸೌಲಭ್ಯ ಇಲ್ಲದವರಿಗೆ ಕೈಪಂಪಿನ ಪ್ಲೋರೈಡ್‍ಯುಕ್ತ ನೀರೇ ಗತಿ ಎನ್ನುವಂತಾಗಿದೆ ಎಂದು ಗ್ರಾಮದ ನಿವಾಸಿ ಶರಣಯ್ಯ ಸ್ವಾಮಿ ಪ್ರಚಂಡಿ ತಮ್ಮ ಅಳಲು ತೋಡಿಕೊಂಡರು.

ಅಶುದ್ಧ ಮತ್ತು ಪ್ಲೋರೈಡ್ ಮಿಶ್ರಿತ ನೀರು ಸೇವನೆಯಿಂದ ಸಾರ್ವಜನಿಕರಲ್ಲಿ ಕೈಕಾಲು, ಮೂಳೆ ಸವೆತ, ಬೆನ್ನು, ಮಂಡಿ ನೋವು, ಹಲ್ಲು ನೋವು, ಮಾಸಖಂಡಗಳಲ್ಲಿ ನೋವು, ಹೃದಯ ಸಂಬಂಧಿ ಕಾಯಿಲೆ, ಚರ್ಮವ್ಯಾಧಿ, ಮೂತ್ರಪಿಂಡ ವೈಫಲ್ಯ, ಹಾರ್ಮೋನ್‍ಗಳ ಏರುಪೇರು, ಮಧುಮೇಹ, ಕಣ್ಣಿನ ಸಮಸ್ಯೆ, ಜೀರ್ಣಾಂಗ ಸಮಸ್ಯೆ, ಥೈರಾಯ್ಡ್ ಸೇರಿದಂತೆ ಇತರೆ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಶುದ್ಧಿಕರಿಸಿದ ಹಾಗೂ ಕಾಯಿಸಿ ಆರಿಸಿದ ನೀರು ಕುಡಿಯಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ಪ್ರಭಾರಿ ಆಡಳಿತ ವೈದ್ಯಾಧಿಕಾರಿ ಡಾ. ಮುದಸಿರ್ ಅಹ್ಮದ್ ತಿಳಿಸಿದರು.

ಸುರೇಶ ವಿಶ್ವಕರ್ಮ
ಸುರೇಶ ವಿಶ್ವಕರ್ಮ
ಶ್ರೀನಿವಾಸ ಶೆಟ್ಟಿ
ಶ್ರೀನಿವಾಸ ಶೆಟ್ಟಿ
ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕರ ಉತ್ತಮ ಆರೋಗ್ಯಕ್ಕೆ ಶುದ್ಧ ನೀರು ಪೂರೈಸಿ ಅನುಕೂಲ ಮಾಡಿಕೊಡಬೇಕು.
–ಸುರೇಶ ವಿಶ್ವಕರ್ಮ ಕಣೇಕಲ್
ಜನಸಾಮಾನ್ಯರು ವಿವಿಧ ರೋಗಗಳಿಗೆ ತುತ್ತಾಗದಂತೆ ತಡೆಯಲು ಶೀಘ್ರದಲ್ಲಿ ಸಂಬಂಧಿಸಿದವರು ನೀರಿನ ಘಟಕಗಳನ್ನು ದುರಸ್ತಿಗೊಳಿಸಿ ಶುದ್ಧ ನೀರು ನೀಡಬೇಕು.
ಶ್ರೀನಿವಾಸ ಶೆಟ್ಟಿ ಕಣೇಕಲ್
ಘಟಕಗಳ ನಿರ್ವಹಣೆಗೆ ಸಂಪನ್ಮೂಲದ ಕೊರತೆಯಿದೆ. 15ನೇ ಹಣಕಾಸು ಯೋಜನೆಯಡಿ ಶೀಘ್ರ ಕ್ರಿಯಾ ಯೋಜನೆ ರೂಪಿಸಿ ದುರಸ್ತಿಗೊಳಿಸುತ್ತೇವೆ.
ಶಿವಶರಣಪ್ಪ ಪಿಡಿಒ ಕಾಳೆಬೆಳಗುಂದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT