ಗುರುಮಠಕಲ್ ಹತ್ತಿರದ ಕಾಕಲವಾರ ಗ್ರಾಮಕ್ಕೆ ಜಿ.ಪಂ. ಸಿಇಒ ಗರಿಮಾ ಪಂವಾರ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು
ಕಳೆದ ವರ್ಷದಿಂದ ನಮ್ಮ ತಾಲ್ಲೂಕಿನಲ್ಲಿ ವಾಂತಿ-ಭೇದಿ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಪ್ರತಿ ಬಾರಿಯೂ ಕಠಿಣ ಕ್ರಮವಹಿಸುವ ಭರವಸೆ ನೀಡುತ್ತಾರೆ. ಆದರೆ ಅದು ಮಾತಿನಲ್ಲೇ ಉಳಿಯುತ್ತಿದೆ. ಆಡಳಿತದ ನಿರ್ಲಕ್ಷದಿಂದ ಸಾಮಾನ್ಯ ಜನ ಬೆಲೆ ತೆರುವಂತಾಗಿದೆ
- ಶರಣಬಸಪ್ಪ ಎಲ್ಲೆರಿ ಕರವೇ ಅಧ್ಯಕ್ಷ
ವಿಚಾರಣೆ ಕಾಯ್ದಿರಿಸಿ ಪಿಡಿಒ ಅಮಾನತು:
ತಾಲ್ಲೂಕಿನ ಕಾಕಲವಾರ ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಮೇಲೆ ಕಾಕಲವಾರ ಪಂಚಾಯಿತಿ ಪಿಡಿಒ ಮಲ್ಲಾರೆಡ್ಡಿ ಅವರ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ಜಿಲ್ಲಾ ಪಂಚಾಯಿತಿ ಸಿಇಒ ಗರಿಮಾ ಪಂವಾರ್ ಶನಿವಾರ ತಡರಾತ್ರಿ ಅಮಾನತು ಆದೇಶ ಹೊರಡಿಸಿದ್ದಾರೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನೀಡಿದ ವರದಿಯಂತೆ ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಗ್ರಾಮದ 3 ಬೋರ್‌ವೆಲ್‌ಗಳ ನೀರು ಕುಡಿಯಲು ಯೋಗ್ಯವಿಲ್ಲದ ಕಾರಣ ಅವುಗಳಿಂದ ನೀರು ಸರಬರಾಜು ಮಾಡದಂತೆ ಮತ್ತು ಸೋರಿಕೆಯ ಪೈಪ್‌ಲೈನ್ ದುರಸ್ತಿಗೆ ಸೂಚಿಸಿದರೂ ಕ್ರಮವಹಿಸದಿರುವುದು. ಜಿಲ್ಲಾ ಪಂಚಾಯಿತಿಯಿಂದ ಗ್ರಾಮಗಳಲ್ಲಿ ಚರಂಡಿ ಸೇರಿದಂತೆ ಸ್ವಚ್ಛತೆಗೆ ಕ್ರಮವಹಿಸಲು ಸೂಚಿಸಿದರೂ ನಿರ್ಲಕ್ಷಿಸಿದ್ದು ಹಾಗೂ ಗ್ರಾಮದಲ್ಲಿ ಅಗತ್ಯ ಜಾಗೃತಿ ಮೂಡಿಸದೇ ಕರ್ತವ್ಯ ಲೋಪ ಎಸಗಿದ ಹಿನ್ನಲೆ ಪಿಡಿಒ ಮಲ್ಲರೆಡ್ಡಿ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.