ಲಾಕ್‌ಡೌನ್ ಅವಧಿಯಲ್ಲಿ ನಗರಗಳಿಂದ ತಮ್ಮೂರಿಗೆ ಮರಳಿ ಹೋದವರದು ಒಂದೊಂದು ಕಥೆ. ‘ಊರ ಉಸಾಬರಿ ಬೇಡ’ ಅಂದುಕೊಂಡು ವಲಸೆ ಹೋದವರು ಮರಳಿ ತವರಿಗೆ ಹೊರಳಿದ ದಾರಿಯಲ್ಲಿ, ಸಾವಿರಾರು ಜನರ ಬದುಕಿನ ಕಥೆಗಳು ಎದುರುಬದುರಾದವು; ಜೊತೆ ಜೊತೆಗೇ ನಡೆದವು. ಕಸುವು ಸಾಲದಾದಾಗ ನಿಂತ ನೆಲದಲ್ಲೇ ಕುಸಿದು, ಕಳೆದುಹೋದವು. ಉಳಿದ ಕಥೆಗಳು ಜೊತೆಗಾರನನ್ನು ಒಮ್ಮೆ ನೆನೆಯುತ್ತ, ಮತ್ತೊಮ್ಮೆ ಮರೆಯುತ್ತ ತೆವಳಿಕೊಂಡು ಸಾಗಿದವು. ಹೀಗೆ ಸಾಗಿ ಹೋದವುಗಳಿಗೆಲ್ಲ ‘ಗಮ್ಯ ಸಿಕ್ಕಿತು’ ಎಂದು ತಂತಮ್ಮಲ್ಲೇ ಸಮಾಧಾನ ಹೇಳಿಕೊಂಡವು. ಅವು ಮತ್ತೆ ಎದುರುಬದುರು ಆದಾವೇ? ಗೊತ್ತಿಲ್ಲ. ಆದರೆ, ಆ ಕಥೆಗಳ ಕಥೆಯನ್ನು ಅವುಗಳಲ್ಲದೇ ಬೇರಾರೂ ಹೇಳಲಾಗದು.

ಅವು ಹೇಳುವ ಕಾಲ ಬಂದಾಗ ಕಿವಿಯಾಗುವ ಸಹನೆ, ಸ್ಪಂದಿಸುವಸಹಾನುಭೂತಿ ನಮ್ಮಲ್ಲಿ ಉಳಿದಿರಬೇಕು ಅಷ್ಟೆ.

ಮುಂದೆ ಹೇಗೋ ಏನೋ ಎಂದುಕೊಂಡು ದುಗುಡದ ದಿನ ದೂಡುತ್ತಿದ್ದ ಲಾಕ್‌ಡೌನ್ ಅವಧಿಯಲ್ಲಿ, ಎಲ್ಲರೆದೆಯಲ್ಲೂ ಹುಟ್ಟೂರಿನ ನೆನಪುಗಳದೇ ಮೆರವಣಿಗೆ. ಇಲ್ಲದ ಅವ್ವ ನೆನಪಾಗಿದ್ದು; ಕಳೆದುಕೊಂಡ ಸ್ನೇಹಿತರಿಗಾಗಿ ಹಂಬಲಿಸಿದ್ದು; ಸಡಿಲವಾಗಿದ್ದ ಸಂಬಂಧಗಳೆಲ್ಲ ಜೇನುಮೇಣದ ಜಿಗುಟು ಅಂಟಿಸಿಕೊಂಡಂತೆ ಬಿಗಿದಪ್ಪಿಕೊಂಡಿದ್ದು; ಈಗ ಇದ್ದು ಇನ್ನೊಂದು ಕ್ಷಣಕ್ಕೆ ಇಲ್ಲವಾಗುತ್ತಿರುವ ಸಂಬಂಧಗಳ ಕ್ಷಣಿಕತೆಯ ಅರಿವಾಗಿದ್ದು ಈ ಹೊತ್ತಲ್ಲೇ.

ಊರಿಗೆ ಊರೇ, ದೇಶಕ್ಕೆ ದೇಶವೇ ವಿಷಾದ, ಖಿನ್ನತೆ, ನಿಟ್ಟುಸಿರಿನಲ್ಲಿ ಬೇಯುತ್ತಿದ್ದ ಆ ಹೊತ್ತಲ್ಲಿ ಇಲ್ಲೊಂದು ಗೆಳೆಯರ ಗುಂಪು, ತನಗೆ ತಾನೇ ಭರವಸೆ ಹೇಳಿಕೊಳ್ಳಲೆಂಬಂತೆ ಹಾಗೂ ಕೊರೊನಾ ಜಾಗೃತಿ ಮತ್ತು ಭರವಸೆ ಮೂಡಿಸುವ ಉದ್ದೇಶದಿಂದ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಬಿಸಲಹಳ್ಳಿಗೆ ಬಂತು. ಹೀಗೆ ಊರಿಗೆ ಬಂದ ಆ ತಂಡದ ಹೆಸರು ‘ನಂ ನಮ್ಮಂದಿ’. ಎಲ್ಲರೂ ಚಿತ್ರ ಕಲಾವಿದರು. ಗೊತ್ತಿರುವುದು ಕುಂಚ–ಬಣ್ಣದ ಕೆಲಸ. ಬದುಕು ಬಣ್ಣಗೆಡುತ್ತಿದೆ ಎಂದು ಸ್ವತಃ ಅಂದುಕೊಂಡವರೇ ಊರಿನ ಶಾಲೆಯ ಗೋಡೆಗಳ ಮೇಲೆ ಚಿತ್ರ ಬರೆದರು. ಆ ಮೂಲಕ ಊರವರ ಹೃದಯ ಭಿತ್ತಿಯಲ್ಲಿ ತಮ್ಮ ಚಿತ್ರವನ್ನು, ಆ ಊರಿನ ಹೃದಯ ವೈಶಾಲ್ಯವನ್ನು ತಮ್ಮೆದೆಯಲ್ಲಿ ಬರೆದುಕೊಂಡು ಬಂದರು. ಊರಿನ ಶಾಲೆಯಲ್ಲಿ ಬಣ್ಣದ ಬಿಡಾರ ಹೂಡಿದವರಿಗೆ, ಊರವರಿಗೆ ಶಾಲೆಯ ಗೋಡೆಗಳೆಲ್ಲ ಭರವಸೆಯ ಬುಗ್ಗೆಗಳಾಗಿ ಚಿಮ್ಮತೊಡಗಿದವು.

ಆಗಿದ್ದೇನು?

ಲಾಕ್‌ಡೌನ್ ಅವಧಿಯಲ್ಲಿ ‘ನಂ ನಮ್ಮಂದಿ’ಯ ಚಿತ್ರಕಲಾವಿದರು/ಚಿತ್ರಕಲಾ ಶಿಕ್ಷಕರು ತಮ್ಮ ಗೆಳೆಯರೊಂದಿಗೆ ಬಿಸಲಹಳ್ಳಿಗೆ ಬಂದರು. ನೇತೃತ್ವ ವಹಿಸಿ ಹುಬ್ಬಳ್ಳಿಯಿಂದ ಹೊರಟ ಕಲಾವಿದ ಸುರೇಶ ಅರ್ಕಸಾಲಿ ಅವರಿಗೆ ನವಲಗುಂದದ ಶಿಶುವಿನಹಳ್ಳಿಯಿಂದ ದೇವೇಂದ್ರಪ್ಪ ಬಡಿಗೇರ, ಕಲಘಟಗಿ ತಾಲ್ಲೂಕು ಮುತಗಿಯಿಂದ ವಿಜಯಕುಮಾರ ಗಾಯಕವಾಡ, ಕುಂದಗೋಳದ ಮಳಲಿಯಿಂದ ರವಿಶಂಕರ ಪತ್ತಾರ, ಹುಬ್ಬಳ್ಳಿಯ ಮಂಜಣ್ಣ ಭಂಡಾರೆ ಜೊತೆಯಾದರು. ‘ನಾವೂ ನಿಮ್ಮ ಜೋಡಿ ಬಂದು ಒಂಚೂರು ಕಲ್ಕೊಂತೇವ್ರಿ’ ಎಂದವರು ಚಿತ್ರಕಲಾ ಪದವಿ ಓದುತ್ತಿರುವ ಹರೀಶ ಮಲ್ಲಿಗವಾಡ, ಹರೀಶ ಗುರೇಮಟ್ಟಿ. ಎಲ್ಲರೂ ಸೇರಿ ಮೇ–ಜೂನ್ ಅವಧಿಯಲ್ಲಿ 18 ದಿನಗಳ ಕಾಲ ಶಾಲೆಯ ಗೋಡೆಯ ಮೇಲೆ ಚಿತ್ತಾರ ಬಿಡಿಸಿದರು.

ಆ ಕಲಾ ಶಿಬಿರದಲ್ಲಿ ಶಾಲೆಯ ಗೋಡೆಯ ಮೇಲೆ ಮೂಡಿದ ಚಿತ್ರಗಳಾದರೂ ಎಂಥವು? ಅವರದೇ ಊರಿನ ಹೆಮ್ಮೆ ಎನಿಸಿದ ಜೋಡೆತ್ತು ‘ಗಾಡಾಹುಲಿ’, ಗೊಂಬೆಯಾಟ, ಭಜಂತ್ರಿ ತಂಡ, ಆ ಭಾಗದ ಹೆಸರಾಂತ ದೇವಸ್ಥಾನಗಳು, ಶರಣರು, ಚಿಂತಕರು, ಕಲೆ–ಸಂಸ್ಕೃತಿ ಬಿಂಬಿಸುವ 52 ಚಿತ್ರಗಳು ಅಲ್ಲಿ ಮೂಡಿಬಂದವು. ಚಿತ್ರ ಬಿಡಿಸುವಾಗಲೇ ಬೆನ್ನು ತಟ್ಟಿ ಹುರಿದುಂಬಿಸುತ್ತಿದ್ದ ಊರ ಹಿರಿಯರು ಒಮ್ಮೆ ಮಾರ್ಗದರ್ಶಕರಾಗಿ ನಿಂತರೆ, ಮತ್ತೊಮ್ಮೆ ಅವರದು ವಿಮರ್ಶಕರ ನೋಟ.

ಪ್ರಾದೇಶಿಕ ವೈಶಿಷ್ಟ್ಯಗಳೊಂದಿಗೆ, ವಿದ್ಯಾರ್ಥಿಗಳಿಗಾಗಿ ಅವರ ಪಠ್ಯದಲ್ಲಿ ಇರುವ ವಿಜ್ಞಾನ ಮಾದರಿಯ ಚಿತ್ರಗಳು, ಸರ್ಕಾರದ ಯೋಜನೆಗಳ ಮಾಹಿತಿ ಅಲ್ಲಿ ಮೂಡಿಬಂದಾಗ ಸ್ಥಳೀಯ ಶಾಲೆಯ ಶಿಕ್ಷಕರು, ಮುಖ್ಯಶಿಕ್ಷಕರು ಮೆಚ್ಚುಗೆಯ ಮಹಾಪೂರ. ಶಾಲಾ ಆವರಣ ಗೋಡೆಯ ಮೇಲೆ ಕೊರೊನಾ ಜಾಗೃತಿ ಸಂದೇಶ–ಚಿತ್ರಗಳನ್ನು ಬಿಡಿಸಿ ಕೊರೊನಾ ಜಾಗೃತಿ ಸಂದೇಶವನ್ನೂ ಸಾರಿದ್ದಾರೆ. ಕೊರೊನಾ ವಾರಿಯರ್‌ಗಳಿಗೆ ಸೆಲ್ಯೂಟ್ ಮಾಡಿದ ಚಿತ್ರ ಊರವರಿಗೆ ‘ಅಗದೀ ಪಸಂದ್’ ಎನಿಸಿತು.

ಬೇರೆ ಊರವರನ್ನು ತಮ್ಮೂರಿಗೆ ಬಿಟ್ಟುಕೊಳ್ಳಲು ಅಂಜುತ್ತಿದ್ದ, ಅವರನ್ನು ತಡೆಯುವುದಕ್ಕಾಗಿ ರಸ್ತೆಯನ್ನು ಅಗೆಯುತ್ತಿದ್ದ, ಅಡ್ಡಲಾಗಿ ಮುಳ್ಳುಕಂಟಿಗಳನ್ನು ಇಡುತ್ತಿದ್ದ ಕೋವಿಡ್ ಕಾಲದಲ್ಲಿ, ಈ ಊರವರು ತಮ್ಮನ್ನು ಮನೆ ಮಕ್ಕಳಂತೆ ಕಂಡಿದ್ದಾಗಿ ಹೇಳುತ್ತಾರೆ ಕಲಾವಿದರಾದ ರವಿಶಂಕರ ಪತ್ತಾರ, ಮಂಜಣ್ಣ ಭಂಡಾರೆ. ಊರವರ ಅಭಿಮಾನವನ್ನು ‘ಮರೆತೇನಂದರ ಮರೆಯಲಿ ಹೆಂಗ?’ ಎನ್ನುತ್ತಾರೆ ರಾಮನಕೊಪ್ಪ ಶಾಲೆಯ ಚಿತ್ರಕಲಾ ಶಿಕ್ಷಕ, ಕಲಾವಿದ ಸುರೇಶ ಅರ್ಕಸಾಲಿ.

ಎರಡು ತಿಂಗಳು ಕಾಲ ಥಂಡು ಹೊಡೆದಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಆವರಣದಲ್ಲಿ, ಊರಲ್ಲಿ ಏಕಾಏಕಿ ಹಬ್ಬದ ವಾತಾವರಣ ಮೂಡಿತ್ತು. ಹುಟ್ಟೂರಿಗೆ ಏನಾದರೂ ಮಾಡಬೇಕು ಎಂಬ ಉಮೇದಿನಲ್ಲಿ ಬಂದವರಿಗೆ ಹುಟ್ಟಿದ ಊರೇ ಸಾಥ್ ನೀಡಿತು. ಊರವರೇ ಬ್ರಶ್, ಬಣ್ಣ ಖರೀದಿಸಿ ಕೊಟ್ಟರು. ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು. ಉಣಿಸಿ–ತಿನಿಸಿ ಉಪಚರಿಸಿದರು. ಕೊಡುವ ಕೈಗೆ ಬಡತನವೆಲ್ಲಿ? ಚಿತ್ರ ಬಿಡಿಸುವವರು ತಂಡದ ಕಲಾವಿದರಾಗಿದ್ದರೂ ಎಸ್‌ಡಿಎಂಸಿ ಸದಸ್ಯರು, ಗ್ರಾಮ ಪಂಚಾಯಿತಿಯವರು, ಊರ ಹಿರಿಯರು, ಸಣ್ಣ ಹುಡುಗರು, ಹರೆಯದ ಹೈಕಳು, ಸಾಲಿಗುಡಿಯ ಬಗ್ಗೆ ಎಲ್ಲಿಲ್ಲದ ಅಭಿಮಾನ ಇಟ್ಟುಕೊಂಡ ತಾಯಂದಿರು ಎಲ್ಲರೂ ಅಕ್ಷರಶಃ ಬಣಗಾರರ ಜೊತೆಗೆ ನಿಂತರು. ತಮ್ಮೂರ ಶಾಲೆಯನ್ನು ಚೆಂದಗಾಣಿಸಲು, ತಾವೇ ಕಾಣಿಕೆ ನೀಡಿ ಮಾದರಿಯಾದರು. ಕಲಾವಿದರನ್ನೂ ಸನ್ಮಾನಿಸಿ ಹರುಷಪಟ್ಟರು.

ಕಲಾವಿದರಿಗೆ ವಸತಿ ವ್ಯವಸ್ಥೆ ಮಾಡಿದರು. ನಿತ್ಯವೂ ಒಂದೊಂದು ಮನೆಮನೆಯಿಂದ ಹಬ್ಬದ ಊಟವೇ ಬಂದಿತು. ತಾಯಂದಿರ ಕೈಯಲ್ಲಿ ಸಿದ್ಧವಾದ ಜವಾರಿ ಊಟ ಮಾಡಿ ಸಂಭ್ರಮಿಸಿದರು. ಹಿರಿಯರು ಕೊಟ್ಟ ಎಲೆ–ಅಡಿಕೆಯನ್ನು ಮೆಲ್ಲುವಾಗಕೊರೊನಾ ಭಯವಿರಲಿಲ್ಲ; ತಾಂಬೂಲ ಮೆಲ್ಲುವಾಗ ಹೊರಹೊಮ್ಮುವ ಬೆಚ್ಚನೆಯ ಭಾವವಿತ್ತು. ಕೊರೊನಾದ್ದೇ ಮಾತಾಗಿದ್ದ ಹೊತ್ತಿನಲ್ಲಿ, ಶಾಲೆಯದ್ದೇ ಮಾತಾಯಿತು. ನಿತ್ಯವೂ ಹಬ್ಬದಡುಗೆ ಮಾಡಿ ಕಳುಹಿಸಿದ ಅವ್ವಂದಿರ ಅಡುಗೆ ರುಚಿಯ ಮಾತು ಬಂತು; ಬದುಕಿಗೂ ಬಂತು ಮತ್ತೆ ಸೊಗಸು!

ಅನಿಶ್ಚಿತತೆಯ ವಾತಾವರಣದಲ್ಲಿ ಹುಟ್ಟಿದೂರಿಗೆ ಹೋದ ಇವರೆಲ್ಲ, ಇದೀಗ ಊರಿಗೆ ತಾವೇನಾದರೂ ಮಾಡಿದೆವೋ ಅಥವಾ ತಮ್ಮೂರೇ ತಮ್ಮಲ್ಲಿ ಹೊಸ ಹುರುಪು ತುಂಬಿ ಕಳುಹಿಸಿಕೊಟ್ಟಿತೋ ಎನ್ನುತ್ತಿದ್ದಾರೆ. ಮನ ಮೆಚ್ಚಿ ನಡಕೊಂಡವರನ್ನು ಜನವೂ ಮೆಚ್ಚಿದ ಸಾರ್ಥಕ ಭಾವದಲ್ಲಿ ಮರಳಿರುವ ಅವರು 18 ದಿನಗಳ ‘ಕಲಾ ಶಿಬಿರ’ದಿಂದ ಹೊಸದನ್ನು ಕಲಿತ ಹುಮ್ಮಸ್ಸಿನಲ್ಲಿದ್ದಾರೆ.

ಚಿತ್ರಗಳಿಂದ ಸಿಂಗಾರಗೊಂಡ ಶಾಲೆ ಶಿಕ್ಷಕರನ್ನು ಈಗಾಗಲೇ ಸ್ವಾಗತಿಸಿಯಾಗಿದೆ. ಅಂಗಳದಲ್ಲಿ ಆಡಲಿರುವ ಮಕ್ಕಳ ನಿರೀಕ್ಷೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.