1. ನಾನು ಈ ವರ್ಷ ಪಿಯುಸಿ ಮುಗಿಸುತ್ತಿದ್ದು ಎಂಬಿಬಿಎಸ್ ಮಾಡಲು ನೀಟ್ ಪರೀಕ್ಷೆಗೆ ತಯಾರಿ ಮಾಡುತ್ತಿದ್ದೇನೆ. ಬೆಂಗಳೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಸೀಟ್ ಪಡೆಯಲು ನೀಟ್ ಪರೀಕ್ಷೆಯಲ್ಲಿ ಎಷ್ಟು ಅಂಕಗಳು ಪಡೆಯಬೇಕು ತಿಳಿಸಿ.
ಹೆಸರು, ಊರು ತಿಳಿಸಿಲ್ಲ.
ಈ ವರ್ಷದ ನೀಟ್ ಪರೀಕ್ಷೆಯ ಪಠ್ಯಕ್ರಮದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ ವಿಭಾಗಗಳಿಂದ ಕೆಲವು ವಿಷಯಗಳನ್ನು ತೆಗೆದು; ಕೆಲವನ್ನು ಸೇರಿಸಲಾಗಿದೆ. ಒಟ್ಟಾರೆ, ಕಳೆದ ವರ್ಷ 97 ಅಧ್ಯಾಯಗಳಿದ್ದು, ಈ ವರ್ಷ 79 ಅಧ್ಯಾಯಗಳಿವೆ ಎನ್ನಲಾಗಿದೆ. ಈ ವರ್ಷದ ರ‍್ಯಾಂಕ್ ಮತ್ತು ಅಂಕಗಳಲ್ಲಿ ವ್ಯತ್ಯಾಸಗಳಾಗುವ ನಿರೀಕ್ಷೆಯಿದ್ದು, ಸರ್ಕಾರಿ ಕಾಲೇಜುಗಳ ಕಟ್ ಆಫ್ ರ‍್ಯಾಂಕ್ ಅನ್ನು ನಿಖರವಾಗಿ ಅಂದಾಜಿಸುವುದು ಕಷ್ಟಸಾಧ್ಯ. ಅಖಿಲ ಭಾರತ ಮಟ್ಟದ ಈ ಪರೀಕ್ಷೆಯಲ್ಲಿ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳು 650 ಅಂಕಗಳನ್ನು ಪಡೆದರೆ, ಸರ್ಕಾರಿ ಕಾಲೇಜುಗಳಲ್ಲಿ ಸೀಟ್ ಸಿಗಬಹುದು.
ಪರಿಷ್ಕರಿಸಿದ ಪಠ್ಯಕ್ರಮದ ವಿವರಗಳಿಗಾಗಿ: https://www.nmc.org.in/MCIRest/open/getDocument?path=/Documents/Public/Portal/LatestNews/NEET%20UG%202024_Approved_Final.pdf
2. ನಾನು ಕೆಎಎಸ್ ಪರೀಕ್ಷೆಗೆ ತಯಾರಾಗುತ್ತಿದ್ದೀನಿ. ಯಾವ ರೀತಿ ಓದಬೇಕು ತಿಳಿಯುತ್ತಿಲ್ಲ. ಹೆಸರು,
ಊರು ತಿಳಿಸಿಲ್ಲ.
ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗೆ ಈ ಸಲಹೆಗಳನ್ನು ಗಮನಿಸಿ:
l→ಪದವಿ ಕೋರ್ಸ್‌ಗಳಿಗೆ ಮಾಡುವ ಅಧ್ಯಯನಕ್ಕೂ ಕೆಎಎಸ್ ಪರೀಕ್ಷೆಗೆ ಮಾಡಬೇಕಾದ ಅಧ್ಯಯನಕ್ಕೂ ಇರುವ ವ್ಯತ್ಯಾಸಗಳನ್ನು ಗಮನಿಸಿ, ಪರಿಣಾಮಕಾರಿ ಅಧ್ಯಯನದ ಕಾರ್ಯತಂತ್ರವನ್ನು ರೂಪಿಸಬೇಕು.
l→ಪರೀಕ್ಷೆಯ ಮಾದರಿಯನ್ನು ಅರ್ಥೈಸಿಕೊಂಡು, ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ, ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಾಗಬಹುದು.
l→ಕರ್ನಾಟಕ ರಾಜ್ಯದ ಇತಿಹಾಸ, ಭೂಗೋಳ, ಯೋಜನೆಗಳು, ಆರ್ಥಿಕ ಸ್ಥಿತಿ ಮತ್ತು ಪ್ರಸ್ತುತ ವಿದ್ಯಮಾನಗಳು ವಿಷಯಗಳನ್ನು ಕೂಲಂಕಷವಾಗಿ ಓದಿ, ಅರ್ಥೈಸಿಕೊಳ್ಳಬೇಕು.
l→ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ, ಅಣಕು-ಪರೀಕ್ಷೆ ಆಧಾರಿತ ತಯಾರಿಯನ್ನು ಮಾಡುತ್ತಿರಬೇಕು.
l→ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ಉಪಯುಕ್ತ ವಿಡಿಯೊಗಳನ್ನು ವೀಕ್ಷಿಸಿ.
l→ಸಾಮಾಜಿಕ ಜಾಲತಾಣದಿಂದ ದೂರವಿದ್ದರೆ ಏಕಾಗ್ರತೆ ಸುಲಭ.
l→ಈ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಮಗ್ರವಾದ ಮತ್ತು ಆಳವಾದ ಓದುವಿಕೆ ಇರಬೇಕು. ಜೊತೆಗೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ.
ಪರಿಣಾಮಕಾರಿ ಅಧ್ಯಯನ ಕಾರ್ಯತಂತ್ರದ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk
3.ನಾನು ಬಿ.ಎಸ್ಸಿ, ಬಿ.ಇಡಿ ಮಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿದ್ದೇನೆ. ನಂತರ ಕುವೆಂಪು ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣದ ಮೂಲಕ ಎಂ.ಎಸ್ಸಿ ಮಾಡಿರುತ್ತೇನೆ. ಎನ್‌ಇಟಿ ತಯಾರಿ ಬಗ್ಗೆ ತಿಳಿಸಿ.
4 ಕನ್ನಡದಲ್ಲಿ ಸಹಾಯಕ ಪ್ರಾಧ್ಯಾಪಕರಾಗಬೇಕಾದರೆ ನನ್ನ ತಯಾರಿ ಹೇಗೆ ಇರಬೇಕು?
ಉತ್ತಮ ಸಹಾಯಕ ಪ್ರಾಧ್ಯಾಪಕರಾಗಲು ವಿಷಯದ ಕುರಿತ ಆಳವಾದ ಜ್ಞಾನದ ಜೊತೆಗೆ ಸಂವಹನ ಕೌಶಲ, ಸಮಯದ ನಿರ್ವಹಣೆ, ತಾಳ್ಮೆ, ಸಹನೆ, ನಾಯಕತ್ವದ ಕೌಶಲ ಮತ್ತು ಈ ವೃತ್ತಿಯ ಬಗ್ಗೆ ಅಭಿರುಚಿಯಿರಬೇಕು. ಇವೆಲ್ಲವೂ ನಿಮ್ಮಲ್ಲಿದ್ದು, ಈ ವೃತ್ತಿಯನ್ನು ಸಮರ್ಥವಾಗಿ ನಿಭಾಯಿಸುವ ಆತ್ಮವಿಶ್ವಾಸವಿದ್ದರೆ, ಈ ವೃತ್ತಿಯನ್ನು ಅನುಸರಿಸಬಹುದು. ಎಂಎ (ಕನ್ನಡ) ದಲ್ಲಿ ಕನಿಷ್ಠ ಶೇ 55 ಅಂಕಗಳನ್ನು ಪಡೆದು, ಎನ್‌ಇಟಿ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಅಥವಾ ಕೆಸ್‌ಇಟಿ (ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ) ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಎನ್‌ಇಟಿ /ಕೆಸ್‌ಇಟಿ ಪರೀಕ್ಷೆಯಲ್ಲಿ ಒಟ್ಟು ಎರಡು ಪ್ರಶ್ನೆ ಪತ್ರಿಕೆಗಳಿರುತ್ತದೆ. ಮೂರು ಗಂಟೆಗಳ ಅವಧಿಯ ಈ ಪರೀಕ್ಷೆಯಲ್ಲಿ ಒಟ್ಟು 150 ಪ್ರಶ್ನೆಗಳಿರುತ್ತದೆ (300 ಅಂಕಗಳು). ಮೊದಲನೇ ಪತ್ರಿಕೆ ಭೋಧನೆ/ ಸಂಶೋಧನಾ ಕ್ರಮ, ಅಭಿರುಚಿ ಇತ್ಯಾದಿ ಕುರಿತದ್ದಾಗಿದ್ದು, ಎರಡನೇ ಪತ್ರಿಕೆ ನೀವು ಭೋಧಿಸುವ ವಿಷಯಕ್ಕೆ ಸಂಬಂಧಪಟ್ಟಿರುತ್ತದೆ. ವಿಷಯಸೂಚಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಜಾಲತಾಣದಲ್ಲಿ ಲಭ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.