ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಓದಿನ ಸಖ್ಯ ಮಕ್ಕಳಿಗೆ ಮುಖ್ಯ

Published : 16 ಸೆಪ್ಟೆಂಬರ್ 2024, 0:20 IST
Last Updated : 16 ಸೆಪ್ಟೆಂಬರ್ 2024, 0:20 IST
ಫಾಲೋ ಮಾಡಿ
Comments

‘ಸರ್, ನನ್ನ ಮಗಳು ಯಾವಾಗಲೂ ಬರಿತಾನೆ ಇರ್ತಾಳೆ. ಓದೋದೇ ಇಲ್ಲ. ಓದುವುದಕ್ಕೆ ಏನಾದರೂ ಸಲಹೆ ಕೊಡಿ’ ಇದು ಶಾಲೆಗೆ ಆಗಾಗ ಬರುವ ಕೆಲ ಪೋಷಕರ ಅಳಲು.

‘ಸರ್ ಇವನು ಎಂಟನೆ ತರಗತಿ. ಹೀಗಿದ್ದೂ ವೃತ್ತಪತ್ರಿಕೆ ಓದುವುದಕ್ಕೂ ಬರುವುದಿಲ್ಲ’ ಮತ್ತೊಬ್ಬರ ಪಾಲಕರ ಬೇಸರ. ಓದಿಗೆ ಸಂಬಂಧಿಸಿದ ಇಂಥ ತರಹೇವಾರಿ ದೂರುಗಳು ಬರುವುದು ಸಹಜ. ಓದು ಒಂದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಓದುಗ ಮತ್ತು ಪಠ್ಯದ ನಡುವಿನ ಪರಸ್ಪರ ಕ್ರಿಯೆಯಾಗಿದೆ. ಪಠ್ಯವನ್ನು ಅರ್ಥ ಮಾಡಿಕೊಳ್ಳುವ ಮೂಲಕ ಓದುಗರು ತಮ್ಮ ಜ್ಞಾನವನ್ನು ವೃದ್ದಿಸಿಕೊಳ್ಳಬಹುದು.

ಓದಿನ ಹವ್ಯಾಸ ಬೆಳೆಸಲು ಇರುವ ಮಾರ್ಗಗಳು

ದೈನಂದಿನ ಅಭ್ಯಾಸವನ್ನಾಗಿಸಿ: ಮಗುವಿಗೆ ಬಾಲ್ಯದಿಂದಲೇ ಓದಿನ ತುಡಿತವನ್ನು ಬೆಳೆಸಬೇಕು. ಮಕ್ಕಳ ವಯೋಮಾನಕ್ಕೆ ಹೊಂದಿಕೆಯಾಗುವಂಥ ಪುಸ್ತಕಗಳು, ಕಥೆ, ಕಾಮಿಕ್ಸ್‌, ಶಿಶುಪ್ರಾಸ ಗೀತೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದಿಸಬೇಕು. ಮಲಗುವ ಮುನ್ನ ಮಗುವಿಗೆ ಬಣ್ಣ ಬಣ್ಣದ ಪುಸ್ತಕಗಳನ್ನು ತೋರಿಸಿ, ಕಥೆ ಹೇಳಬೇಕು.

ಮಗುವಿನ ಮುಂದೆ ಓದಿ: ಮಕ್ಕಳಿಗೆ ಇಷ್ಟವಾಗುವ ಪುಸ್ತಕಗಳು, ನಿಯತಕಾಲಿಕೆಗಳು ಅಥವಾ ಗ್ರಾಫಿಕ್ ಕಾದಂಬರಿಗಳನ್ನು ಮಕ್ಕಳ ಮುಂದೆ ಓದಿ. ನೀವು ಓದುವುದನ್ನೂ ಮಗು ನೋಡಲಿ. ಏಕೆಂದರೆ ಮಕ್ಕಳು ಏನನ್ನು ಗಮನಿಸುತ್ತಾರೋ ಅದರಿಂದ ಕಲಿಯುತ್ತಾರೆ. ಪೋಷಕರು ಓದುವುದರಲ್ಲಿ ಉತ್ಸುಕರಾಗಿದ್ದರೆ, ಮಗುವು ಓದಲು ಆಸಕ್ತಿ ತೋರುತ್ತದೆ.

ಓದುವ ಜಾಗವನ್ನು ನಿರ್ಮಿಸಿ: ಓದುವ ಸ್ಥಳವು ದೊಡ್ಡದಾಗಿರಬೇಕಾಗಿಲ್ಲ. ಕಪಾಟಿನಲ್ಲಿ ಬಹಳಷ್ಟು ಪುಸ್ತಕಗಳು ಇರಬೇಕೆಂದು ಇಲ್ಲ. ಮಂಚದ ಮೂಲೆಯಾಗಿರಬಹುದು ಅಥವಾ ಮಗು ಮಲಗುವ ಸ್ಥಳವಾಗಿರಬಹುದು, ಮಗು ಪದೇ ಪದೇ ಓಡಾಡುವ ಜಾಗವಾಗಿರಬಹುದು. ಅಲ್ಲಿ ಮಗುವಿಗೆ ಇಷ್ಟವಾಗುವ ಒಂದೆರಡು ಆಕರ್ಷಕ ಪುಸ್ತಕಗಳನ್ನಿಡಿ. ಮಗು ಸ್ವಯಂ ಓದಿನಲ್ಲಿ ತೊಡಗಿಸಿಕೊಳ್ಳುತ್ತದೆ. ಮಗು ಓದುವ ಜಾಗವು ಒಂಚೂರು ಆರಾಮದಾಯಕವಾಗಿರಲಿ. ಸಾಕಷ್ಟು ಬೆಳಕು ಮತ್ತು ಗಾಳಿ ಹೊಂದಿರುವ ಆರಾಮದಾಯಕ ಸ್ಥಳವನ್ನು ಆರಿಸಿ.

ಗ್ರಂಥಾಲಯಕ್ಕೆ ಭೇಟಿ ಮಾಡಿಸಿ: ಮಗುವಿಗೆ ಸ್ವತಂತ್ರ ಓದಿನ ಸಖ್ಯವನ್ನು ಬೆಳೆಸಲು ನಿಯಮಿತವಾಗಿ ಗ್ರಂಥಾಲಯಕ್ಕೆ ಕರೆದುಕೊಂಡು ಹೋಗಿ. ಅಲ್ಲಿ ಮಗುವಿನ ವಯಸ್ಸು ಮತ್ತು ಆಸಕ್ತಿಗನುಗುಣವಾದ ಅನೇಕ ಪುಸ್ತಕಗಳು ದೊರೆಯುತ್ತವೆ. ಜ್ಞಾನಾರ್ಜನೆಗೆ ಗ್ರಂಥಾಲಯವು ಉತ್ತಮ ಸಂಪನ್ಮೂಲವಾಗಿದೆ.

ಓದಿನ ಆಯ್ಕೆ ಮಗುವಿನದ್ದಾಗಲಿ: ಮಕ್ಕಳು ತಾವು ಏನನ್ನು ಓದಲು ಬಯಸುತ್ತಾರೋ ಅದನ್ನೇ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿ. ಪುಸ್ತಕದಂಗಡಿ ಅಥವಾ ಗ್ರಂಥಾಲಯಕ್ಕೆ ಮಗುವನ್ನು ಕರೆದುಕೊಂಡು ಹೋದಾಗ ಅವರಿಗಿಷ್ಟವಾದ ಪುಸ್ತಕ ಆರಿಸಿಕೊಳ್ಳಲು ಅವಕಾಶ ನೀಡಿ. ಇದರಿಂದ ಅವರ ಓದಿನ ವೇಗ ಮತ್ತು ಗ್ರಹಿಕೆ ಹೆಚ್ಚುತ್ತದೆ. ಹಾಸ್ಯ, ನಾಟಕ, ವೈಜ್ಞಾನಿಕ ಕಾದಂಬರಿ ಮತ್ತು ಫ್ಯಾಂಟಸಿಗಳಂಥ ಪ್ರಕಾರಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿ.

ದೈನಂದಿನ ಜೀವನದಲ್ಲಿ ಓದುವ ಕ್ಷಣಗಳನ್ನು ಹುಡುಕಿ: ಓದುವುದೆಂದರೆ ಕೇವಲ ಪುಸ್ತಕದೊಂದಿಗೆ ಕುಳಿತುಕೊಳ್ಳುವುದಲ್ಲ. ಓದು ದೈನಂದಿನ ಜೀವನದ ಒಂದು ಭಾಗವೂ ಆಗಿದೆ. ಮಗು ಮನೆಯ ಹೊರಗಿದ್ದಾಗಲೂ ಓದಲು ಅನೇಕ ಅವಕಾಶಗಳಿವೆ. ಅವು ರಸ್ತೆ ಹೆಸರು, ಚಿಹ್ನೆಗಳು, ಸೂಚನಾ ಫಲಕಗಳು, ವಾಹನಗಳ ಬೋರ್ಡ್ ಆಗಿರಬಹುದು, ಅಂಗಡಿಗಳ ನಾಮಫಲಕಗಳಾಗಿರಬಹುದು, ದಿನಸಿ ಪಟ್ಟಿಗಳಾಗಿರಬಹುದು ಹೀಗೆ ವಿವಿಧ ಓದಿನ ಅವಕಾಶಗಳನ್ನು ಮಗುವಿಗೆ ಒದಗಿಸಿ ಓದಲು ತಿಳಿಸಿ. ಇದು ಹೊರಗಿನ ಜ್ಞಾನಾರ್ಜನೆಗೆ ತುಂಬಾ ಸಹಕಾರಿ.

ಮೆಚ್ಚಿನ ಪುಸ್ತಕಗಳನ್ನು ಮತ್ತೆ ಓದಲು ಅವಕಾಶ ನೀಡಿ: ಕೆಲವು ಪುಸ್ತಕಗಳು ಮಕ್ಕಳನ್ನು ಪದೇ ಪದೇ ಓದಿಗೆ ಪ್ರೇರೇಪಿಸುತ್ತವೆ. ಅಂತಹ ಪುಸ್ತಕಗಳನ್ನು ಪದೇ ಪದೇ ಓದಲು ಅವಕಾಶ ನೀಡಿ. ಮೊದಲ ಬಾರಿಗೆ ತಪ್ಪಿಸಿಕೊಂಡ ವಿಷಯಗಳನ್ನು ಗುರುತಿಸಲು ಇಷ್ಟಪಡುತ್ತಾರೆ.

ಮೇಲ್ವಿಚಾರಣೆ ಮಾಡಿ: ನೀವು ಶಿಕ್ಷಕರಲ್ಲದಿರಬಹುದು. ಆದರೆ ನೀವು ನಿಮ್ಮ ಮಗುವಿನ ಮೊದಲ ಶಿಕ್ಷಕರು ಎಂಬುದನ್ನು ಮರೆಯಬೇಡಿ. ಮಗುವಿನ ಓದಿನ ಮೇಲೆ ನಿಗಾವಹಿಸಿ ಓದುವ ಕೌಶಲವನ್ನು ವೃದ್ಧಿಸಿಕೊಳ್ಳಲು ಸಹಾಯ ಮಾಡಿ. ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ. ದೋಷಗಳನ್ನು ಸರಿಪಡಿಸಿ.

ಓದಿನ ಹಿನ್ನಡೆಗೆ ಕಾರಣಗಳು

  • ಸಾಮಾಜಿಕ ಜಾಲತಾಣಗಳು, ಸಮೂಹ ಮಾಧ್ಯಮಗಳು, ವಿಡಿಯೊ ಗೇಮ್‌ಗಳು ಮತ್ತು ಆನ್‌ಲೈನ್ ವಿಡಿಯೊಗಳು ಓದುವಿಕೆಗೆ ಪ್ರತಿಸ್ಪರ್ಧಿಗಳಾಗಿವೆ.

  • ಇಂಟರ್‌ನೆಟ್‌ ಮತ್ತು ಮಲ್ಟಿಮೀಡಿಯಾದಲ್ಲಿ ಸುಲಭ ಪ್ರವೇಶವು ಮಕ್ಕಳಲ್ಲಿ ಓದಿನ ಗೊಂದಲವನ್ನು ಉಂಟುಮಾಡಿದೆ.

  • ಪಠ್ಯಕ್ರಮ ಮತ್ತು ಮನೆಗೆಲಸದ ಹೊರೆಯೂ ಓದಿಗೆ ತೊಡಕಾಗಬಹುದು.‌

  • ಸಂಪೂರ್ಣವಾಗಿ ಶೈಕ್ಷಣಿಕ ಪುಸ್ತಕಗಳು ಅಥವಾ ಅಸಮರ್ಪಕ ಓದುವ ಸಾಮಗ್ರಿಗಳಿಂದ ಮಕ್ಕಳು ಓದಿನಿಂದ ವಿಮುಖರಾಗಬಹುದು. ಉತ್ತಮ ಓದಿನ ಸಾಮಗ್ರಿಗಳ ಕೊರತೆಯಿದೆ.

  • ಪೋಷಕರ ಅನಕ್ಷರತೆ, ಓದದಿರುವ ಮನೋಭಾವ ಮತ್ತು ಅಸಮರ್ಪಕ ಓದುವ ವಾತಾವರಣವು ಪ್ರಕ್ರಿಯೆಗೆ ಹಿನ್ನಡೆಯಾಗಿದೆ.

  • ಕೆಲವು ಮಕ್ಕಳು ಕಲಿಕೆಯಲ್ಲಿ ಅಸಮರ್ಥತೆಯನ್ನು ಹೊಂದಿರುವುದರಿಂದ ಓದುವುದು ಇಷ್ಟವಾಗದೇ ಹೋಗಬಹುದು.

  • ಮಕ್ಕಳ ಆಸಕ್ತಿಗೆ ಪೂರಕವಾದ ಪುಸ್ತಕಗಳಿಲ್ಲದೇ ಇರುವುದು.

  • ದೂರದರ್ಶನ, ಮೊಬೈಲ್, ಗ್ಯಾಜೆಟ್‌ಗಳು ಓದಿನ ಗೀಳಿಗೆ ಅಡ್ಡಿಯನ್ನುಂಟು ಮಾಡುವುದು.

ಪ್ರಯೋಜನಗಳೇನು?

  • ಓದುವ ಪ್ರಕ್ರಿಯೆಯಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ.

  • ಶಬ್ದಭಂಡಾರ ವಿಸ್ತಾರಗೊಳ್ಳುತ್ತದೆ.

  • ಅರಿವಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

  • ಸೃಜನಶೀಲತೆ ಹೆಚ್ಚಿ, ಕಲ್ಪನಾಶಕ್ತಿ ವೃದ್ಧಿಯಾಗುತ್ತದೆ.

  • ಮಕ್ಕಳ ಸಂವಹನ ಶಕ್ತಿ ಉತ್ತಮಗೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT