ಜನರ ಸ್ಪಂದನೆ ಹೇಗಿದೆ?
ಚೆನ್ನಾಗಿದೆ. ಜೋಶ್ ಇದೆ. ಭವಿಷ್ಯಕ್ಕಾಗಿ ಒಳ್ಳೆ ಅಭ್ಯರ್ಥಿ ಸಿಕ್ಕಿದ್ದಾರೆ. ಪದವೀದರ, ನಾಲ್ಕು ಸಲ ಶಾಸಕ ಎಂಬುದು ಜನರ ಮನಸ್ಸಿನಲ್ಲಿದೆ. ಯಾವುದೇ ಪ್ರಕರಣಗಳು, ಕಳಂಕ ನಮ್ಮ ಅಭ್ಯರ್ಥಿಗಿಲ್ಲ ಎಂಬ ಖುಷಿ ಜನರಲ್ಲಿದೆ.
ಮೊದಲಿಗೆ ನಿಮ್ಮ ಮಗಳಿಗೆ ಟಿಕೆಟ್ ಕೇಳಲಾಗಿತ್ತಲ್ಲ?
ಉಪ ಚುನಾವಣೆ ಯಾಕೆ ಎಂಬ ಉದ್ದೇಶದಿಂದ ಯುವಕರಿಗೆ ಟಿಕೆಟ್ ಕೇಳಿದೆವು. ಆದರೆ, ಹೈಕಮಾಂಡ್ ನೀವೇ ನಿಲ್ಲಿ ಎಂದು ಹೇಳಿತು. ಹೀಗಾಗಿ ನಾನೇ ಸ್ಪರ್ಧಿಸುತ್ತಿದ್ದೇನೆ.
ಪಕ್ಷದಲ್ಲಿ ಹಲವರು ಟಿಕೆಟ್ ಕೇಳಿದ್ದರಲ್ಲ. ಟಿಕೆಟ್ ಸಿಗದವರಿಗೆ ಮುನಿಸಿಲ್ಲವೇ?
ಹಲವರು ಕೇಳಿದ್ದರು. ಆದರೆ, ಯಾರಾದರೂ ಒಬ್ಬರಿಗಷ್ಟೇ ಟಿಕೆಟ್ ಕೊಡಲು ಸಾಧ್ಯ. ಈ ಸಲ ಏನಾದರೂ ಮಾಡಿ ಗೆಲ್ಲಲೇ ಬೇಕು ಎಂದು ನನಗೆ ಟಿಕೆಟ್ ಕೊಡಲಾಗಿದೆ. ಎಲ್ಲರೂ ಒಟ್ಟಾಗಿದ್ದೇವೆ. ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ.
ಬಳ್ಳಾರಿಯನ್ನು ಹಿಡಿತಕ್ಕೆ ಪಡೆಯಬೇಕು ಎಂಬ ಸಂತೋಷ್ ಲಾಡ್ ಅವರ ತಂತ್ರದ ಭಾಗವಾಗಿ ತುಕಾರಂ ಅಭ್ಯರ್ಥಿಯಾಗಿದ್ದಾರೆ ಎಂಬ ಮಾತಿದೆ?
ಅವರು ಹಿಂದೆ ಇಲ್ಲಿ ಉಸ್ತುವಾರಿ ಸಚಿವರಾಗಿದ್ದವರು. ಬಡವರ ಪರ ಕೆಲಸ ಮಾಡಿದವರು. ಎಲ್ಲರೂ ಕಲೆತು ಕೆಲಸ ಮಾಡಬೇಕು ಎಂಬುದು ನಮ್ಮ ಉದ್ದೇಶ. ಹಲವರು ಅವರಿಷ್ಟದಂತೆ ಮಾತನಾಡುತ್ತಾರೆ. ಅದಕ್ಕೆ ನಾವು ತಲೆ ಕಡಿಸಿಕೊಳ್ಳದೇ ಮುಂದೆ ಸಾಗಬೇಕು.
ಪುನರ್ಜನ್ಮ ಕೊಡಿ ಎಂದು ಶ್ರೀರಾಮುಲು ಕೇಳುತ್ತಿದ್ದಾರೆ. ಗೆದ್ದು ಸೋನಿಯಾಗೆ ಉಡುಗೊರೆ ನೀಡುತ್ತೇವೆ ಎಂದು ನೀವು ಹೇಳುತ್ತೀರಿ. ಇಲ್ಲಿ ಕ್ಷೇತ್ರದ ಸಮಸ್ಯೆಗಳು ಮರೆಯಾಗುತ್ತಿಲ್ಲವೇ?
ನಾವು ನಮ್ಮ ಹೊಣೆಗಾರಿಕೆಗಳ ಬಗ್ಗೆ ಮಾತನಾಡಬೇಕು. ರಾಜಕೀಯ ಪುನರ್ಜನ್ಮ ಕೇಳುವ ಮಾತುಗಳಿಗೆ ನಾನು ಪ್ರತಿಕ್ರಿಯಿಸಲಾರೆ. ಆದರೆ, ಸೋನಿಯಾ ಗಾಂಧಿ ಅವರು ಇಲ್ಲಿಂದ ಗೆದ್ದ ಮೇಲೆ ₹3,300 ಕೋಟಿ ಪ್ಯಾಕೇಜ್ ಕೊಟ್ಟರು. ₹2,500 ಕೋಟಿಯ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರವನ್ನು ನೀಡಿದರು. ₹ 800 ಕೋಟಿಗೆ ಆರೋಗ್ಯ, ಶಿಕ್ಷಣ ಮೂಲಸೌಲಭ್ಯ ಅಭಿವೃದ್ಧಿ ಮಾಡಿದರು. ಜನಕ್ಕೆ ನ್ಯಾಯ ನೀಡಿದ್ದಾರೆ. ಆದರೆ ಹಿಂದಿನ ಸಂಸದರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಈ ವಿಚಾರವನ್ನೇ ನಾವು ಚರ್ಚೆ ಮಾಡುತ್ತಿದ್ದೇವೆ.
ಜನಾರ್ದನ ರೆಡ್ಡಿ ಬಿಜೆಪಿ ಸೇರಿರುವುದು ಏನಾದರೂ ಪ್ರಭಾವ ಬೀರಬಹುದೇ?
ನಾನು 2008ರಿಂದ ಶಾಸಕ. ಅವತ್ತು ಜನಾರ್ದನ ರೆಡ್ಡಿ ಜತೆಗೆ ಎಲ್ಲರೂ ಇದ್ದರು. ಅವತ್ತಿನಿಂದ ಸತತವಾಗಿ ನಾನು ಗೆಲ್ಲುತ್ತಿದ್ದೇನೆ. ಅವರ ಸೇರ್ಪಡೆ ಏನೂ ಕೆಲಸ ಮಾಡುವುದಿಲ್ಲ. ಜನರಿಗೆ ಗೊತ್ತು ಯಾರನ್ನು ಗೆಲ್ಲಿಸಬೇಕು ಎಂಬುದು. ಚುನಾವಣೆಯಲ್ಲಿ ಅವರು ಸೂಕ್ತ ತೀರ್ಮಾನ ಮಾಡುತ್ತಾರೆ.
ಗ್ಯಾರಂಟಿ ಯೋಜನೆಗಳು ಫಲ ನೀಡುತ್ತವೆಯೇ?
ಬದುಕಿಗೆ ಬೇಕಾದದ್ದನ್ನು ನಾವು ಕೊಟ್ಟಿದ್ದೇವೆ. ಜನ ಸುಖವಾಗಿದ್ದಾರೆ. ಅವರ ಬದುಕು ನೆಮ್ಮದಿಯಾಗಿದೆ. ಅವರ ಭಾವನೆಗಳು ನಮಗೆ ಅನುಕೂಲಕಾರಿಯಾಗಿದೆ.
ಸಂಸದರಾಗಿ ಏನೆಲ್ಲ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಉದ್ದೇಶಿಸಿದ್ದೀರಿ?
ಹಲವು ಕೆಲಸ ಅಪೂರ್ಣವಾಗಿವೆ. ಅವುಗಳತ್ತ ಗಮನ ಹರಿಸಬೇಕು. ಇಲ್ಲಿ ಗಣಿಗಾರಿಕೆ, ಉದ್ಯಮಗಳು ಇದ್ದರೂ ನಿರುದ್ಯೋಗ ಇದೆ. ಯುವಕರಲ್ಲಿ ಕೌಶಲ ಅಭಿವೃದ್ಧಿ ಮಾಡಬೇಕು. ಇಲ್ಲಿನ ಹಲವು ಮೇಲ್ಸೇತುವೆಗಳು ಬಾಕಿ ಇವೆ. ಅವುಗಳನ್ನು ತ್ವರಿತವಾಗಿ ಆರಂಭಿಸಬೇಕು. ಬಳ್ಳಾರಿ ಸ್ಮಾರ್ಟ್ ಸಿಟಿ ಮಾಡಬೇಕು. ತುಂಗಭದ್ರಾದಿಂದ ಬಳ್ಳಾರಿ ನಗರಕ್ಕೆ ನೀರು ಒದಗಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.