ಲೋಕಸಭಾ ಚುನಾವಣೆಯಲ್ಲಿ ಮೂರನೇ ಹಂತದ ಮತದಾನ ಮುಗಿದಿದೆ. ಕಾಂಗ್ರೆಸ್ ನಿರೀಕ್ಷೆಗಳೇನು?
ಬಿಹಾರ, ಮಹಾರಾಷ್ಟ್ರ, ರಾಜಸ್ಥಾನ, ಹರಿಯಾಣ, ಜಾರ್ಖಂಡ್ ಮತ್ತಿತರ ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಉತ್ತಮ ಸಾಧನೆ ಮಾಡಲಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು 15ರಿಂದ 18 ಸ್ಥಾನಗಳನ್ನು ಗೆಲ್ಲಲಿದೆ. ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಲಿದೆ ಎಂದು ಗೊತ್ತಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ಶೈಲಿ ಸಂಪೂರ್ಣ ಬದಲಾಗಿದೆ. ಅವರು ಮಂಗಳಸೂತ್ರ, ಮುಸ್ಲಿಮರು, ಮೀಸಲಾತಿ, ಪಿತ್ರಾರ್ಜಿತ ಆಸ್ತಿ ತೆರಿಗೆಯಂತಹ ವಿಷಯಗಳ ಬಗ್ಗೆಯೇ ಮಾತನಾಡುತ್ತಿದ್ದಾರೆ.
ಮೋದಿ ಹಾಗೂ ಬಿಜೆಪಿಯ ಪ್ರಚಾರದ ಕಣವನ್ನು ಕಾಂಗ್ರೆಸ್ ಸಮರ್ಥವಾಗಿ ಎದುರಿಸುತ್ತಿದೆಯೇ?
ಮೋದಿ ಹಾಗೂ ಬಿಜೆಪಿಯವರು ನಮಗೆ ಬಲೆ ಬೀಸುತ್ತಿದ್ದಾರೆ. ನಾವು ಬ್ಯಾಟ್ ಮಾಡಲು ಮುಸ್ಲಿಂ ಪಿಚ್, ಮಂಗಳ ಸೂತ್ರದ ಪಿಚ್ ನಿರ್ಮಿಸುತ್ತಿದ್ದಾರೆ. ಆದರೆ, ಮೋದಿಯವರ ಪಿಚ್‌ನಲ್ಲಿ ನಾವು ಆಡುವುದಿಲ್ಲ. ನಾವು ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಮೀಸಲಾತಿ ಹಾಗೂ ಸಂವಿಧಾನ ಬದಲಾವಣೆಯಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದೇವೆ. ಮೋದಿಯವರು ಸ್ಪಷ್ಟವಾಗಿ ಕೋಮುವಾದಿ ಅಜೆಂಡಾಕ್ಕೆ ಹೋಗಿದ್ದಾರೆ. ಮೋದಿ ಅವರು ಮೊದಲು ಕೋಮುಭಾವನೆ ಕೆರಳಿಸುವ ಕೆಲಸಗಳನ್ನೇ ಮಾಡುತ್ತಿದ್ದರು. ಪ್ರಧಾನಿಯಾದ ಬಳಿಕ ಸ್ವಲ್ಪ ಸಮಯ ಮುಖವಾಡ ಹಾಕಿಕೊಂಡಿದ್ದರು. ಈಗ ಮುಖವಾಡ ಕಳಚಿದ್ದಾರೆ. ಸರಳ ಬಹುಮತಕ್ಕೆ ಬೇಕಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿಲ್ಲ ಎಂದು ಮೋದಿ ಅಪಪ್ರಚಾರ ಮಾಡುತ್ತಿದ್ದಾರೆ. ಸರಳ ಬಹುಮತಕ್ಕೆ ಬೇಕಿರುವ ಸ್ಥಾನಗಳು 272. ಕಾಂಗ್ರೆಸ್ 330 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ನಮ್ಮ ಪ್ರಣಾಳಿಕೆಯಲ್ಲಿ ಇಲ್ಲದ ವಿಷಯಗಳ ಬಗ್ಗೆ ಮೋದಿಯವರು ಮಾತನಾಡುತ್ತಿದ್ದಾರೆ. ಅವರು ಹತಾಶರಾಗಿದ್ದಾರೆ. ಹಾಗಾಗಿ, ನಿತ್ಯವೂ ಸುಳ್ಳು ಹೇಳುತ್ತಿದ್ದಾರೆ.
‘ಇಂಡಿಯಾ ಮೈತ್ರಿಕೂಟ’ಕ್ಕೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮವೇ ಇಲ್ಲವಲ್ಲ?
ಮೈತ್ರಿಕೂಟದಲ್ಲಿ ಯಾವುದೇ ಗೊಂದಲಗಳಿಲ್ಲ. ಮೈತ್ರಿಕೂಟದ ನಾಯಕರು ಸೀಟು ಹಂಚಿಕೆಯನ್ನು ಸುಸೂತ್ರವಾಗಿ ನಡೆಸಿದ್ದಾರೆ. 2004ರಲ್ಲಿ ಚುನಾವಣೆ ನಡೆದ ಬಳಿಕ ಯುಪಿಎ ಮೈತ್ರಿಕೂಟ ರೂಪುಗೊಂಡಿತು. ಆಗ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ಈಗಿನ ಸನ್ನಿವೇಶ ಭಿನ್ನ. ಮೈತ್ರಿಕೂಟದ ನಾಯಕರು ಪಟ್ನಾ ಬೆಂಗಳೂರು ಹಾಗೂ ಮುಂಬೈನಲ್ಲಿ ಸಭೆ ಸೇರಿ ಮೈತ್ರಿಕೂಟದ ಸ್ವರೂಪ ನಿರ್ಧರಿಸಿದ್ದಾರೆ. ‘ಇಂಡಿಯಾ’ ಕೂಟದ ಒಗ್ಗಟ್ಟಿಗೆ ಬಿಜೆಪಿ ಬೆದರಿದೆ.
ಸೂರತ್ ಹಾಗೂ ಇಂದೋರ್‌ನಲ್ಲಿ ನಡೆದ ಬೆಳವಣಿಗೆಗಳು ಕಾಂಗ್ರೆಸ್‌ಗೆ ಹಿನ್ನಡೆ ಅಲ್ಲವೇ?
ಇಂದೋರ್ ಹಾಗೂ ಸೂರತ್ ಕ್ಷೇತ್ರಗಳಲ್ಲಿ 1984ರಿಂದಲೇ ಬಿಜೆಪಿ ಗೆಲ್ಲುತ್ತಿದೆ. ಭದ್ರಕೋಟೆಯಲ್ಲೇ ಈ ಸಲ ಅವರಿಗೆ ಸೋಲಿನ ಸುಳಿವು ಸಿಕ್ಕಿತು. ಹಾಗಾಗಿ ಹಳೆಯ ಪ್ರಕರಣಗಳನ್ನು ಮುಂದಿಟ್ಟುಕೊಂಡು ಬೆದರಿಸಿದರು. ಅಶೋಕ್ ಚವಾಣ್ ಅಜಿತ್ ಪವಾರ್ ಹಾಗೂ ಪ್ರಫುಲ್ ಪಟೇಲ್ ಅವರಂತಹ ನಾಯಕರನ್ನು ಬೆದರಿಸಿಯೇ ಬಿಜೆಪಿ ಹಾಗೂ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಲಾಗಿದೆ. ಕಾಂಗ್ರೆಸ್‌ನ ಕೆಲವು ನಾಯಕರಲ್ಲೂ ದೌರ್ಬಲ್ಯಗಳಿವೆ. ಎಲ್ಲರೂ ಡಿ.ಕೆ.ಶಿವಕುಮಾರ್ ಅವರಂತೆ ಅಲ್ಲ. ಬಿಜೆಪಿಯ ಬೆದರಿಕೆಗಳಿಗೆ ಶಿವಕುಮಾರ್ ಮಣಿಯಲಿಲ್ಲ.
ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಒತ್ತಾಯಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಿಲುವೇನು?
ಪ್ರಜ್ವಲ್ ಲೈಂಗಿಕ ಹಗರಣದ ಬಗ್ಗೆ ಪ್ರಧಾನಿ ಅವರಿಗೆ 2023ರ ಡಿಸೆಂಬರ್ 13ರಂದೇ ಗೊತ್ತಿತ್ತು. ಪೆನ್ ಡ್ರೈನ್ ಬಗ್ಗೆಯೂ ಅವರಿಗೆ ಮಾಹಿತಿ ಇತ್ತು. ಆದರೂ ಅವರು ಪ್ರಜ್ವಲ್ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಇಷ್ಟೆಲ್ಲ ಗೊತ್ತಿದ್ದ ಮೇಲೆ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡಿದ್ದು ಏಕೆ? ಈಗ ರಾಜಕೀಯ ಕಾರಣಕ್ಕೆ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಮೊದಲು ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲಿ.
ಪೆನ್ ಡ್ರೈವ್ ಹಂಚಿಕೆ ಹಿಂದೆ ಡಿ.ಕೆ. ಶಿವಕುಮಾರ್ ಪಾತ್ರವಿದೆ ಎಂದು ಜೆಡಿಎಸ್ ನಾಯಕರು ಆರೋಪಿಸಿದ್ದಾರಲ್ಲ?
ಈ ಹಗರಣದ ಬಗ್ಗೆ ಬಿಜೆಪಿ ಮುಖಂಡರೊಬ್ಬರು ವರಿಷ್ಠರಿಗೆ ಪತ್ರ ಬರೆದಿದ್ದರು. ಆಗಲೇ ಪೆನ್ ಡ್ರೈವ್ ಬಗ್ಗೆ ಉಲ್ಲೇಖಿಸಿದ್ದರು. ಇದೀಗ ದುರುದ್ದೇಶದಿಂದ ಶಿವಕುಮಾರ್ ಹೆಸರು ಎಳೆದು ತಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.