ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿ ಸಮ್ಮಾನ ಪ್ರತಿಕ್ರಿಯೆಗಳು: ಸಿಂಪಲ್‌ ಸುನಿ, ಸಂತೋಷ್‌ ಆನಂದ್‌ರಾಮ್‌

Published 11 ಮೇ 2023, 20:32 IST
Last Updated 11 ಮೇ 2023, 20:32 IST
ಅಕ್ಷರ ಗಾತ್ರ

ಏರ್‌ ಕೂಲರ್‌ ಗೆದ್ದಿದ್ದೆ!

‘ಪ್ರಜಾವಾಣಿ’ ಎಂದರೆ ನನಗೆ ಒಂದು ರೀತಿ ಹಳೆಯ ನೆನಪುಗಳ ಬುತ್ತಿ. ಚಿಕ್ಕವನಿದ್ದಾಗನಿಂದ ಓದಿಕೊಂಡು ಬಂದಿದ್ದು ‘ಪ್ರಜಾವಾಣಿ’ಯಾಗಿದ್ದರಿಂದ ನನಗೆ ಅದೊಂದು ಬೇರೆ ರೀತಿಯ ಅನುಭವ. ಮನೆಗೆ ಪತ್ರಿಕೆ ಬಂದ ತಕ್ಷಣ ಹಿಂಬದಿಯ ಕ್ರೀಡಾಪುಟದಿಂದ ಓದಲು ಶುರು ಮಾಡುತ್ತಿದ್ದೆ. ಶುಕ್ರವಾರದ ಸಿನಿಮಾ ರಂಜನೆ, ವಾಣಿಜ್ಯ, ಸಿನಿಮಾ ವಿಮರ್ಶೆ ಆಸಕ್ತಿಯ ವಿಷಯಗಳಾಗಿದ್ದವು. ನಾನು, ಅಮ್ಮ ಕುಳಿತುಕೊಂಡು ಸುಡೊಕೋ, ಪದಬಂಧ ತುಂಬುತ್ತಿದ್ದೆವು. ಕ್ರಿಕೆಟ್‌ ಪಂದ್ಯಗಳು ನಡೆಯುವಾಗ ‘ಪ್ರಜಾವಾಣಿ’ಯಲ್ಲಿ ಕ್ವಿಜ್‌ ಇರುತ್ತಿತ್ತು. ಒಮ್ಮೆ ನಾನು ಈ ಕ್ವಿಜ್‌ನಲ್ಲಿ ಏರ್‌ ಕೂಲರ್‌ ಗೆದ್ದಿದ್ದೆ. ಅದನ್ನು ಎಂ.ಜಿ ರಸ್ತೆಯಲ್ಲಿನ ಪತ್ರಿಕಾ ಕಚೇರಿಗೆ ಬಂದು ಪಡೆದುಕೊಂಡಿದ್ದೆ. ಈಗಲೂ ಆ ಏರ್‌ಕೂಲರ್‌ ಮನೆಯಲ್ಲಿದೆ. ನನ್ನ ಮೊದಲ ಲೇಖನ ‘ಪ್ರಜಾವಾಣಿ’ಯಲ್ಲಿ ಓದಿದ್ದು ಬಹಳ ಖುಷಿಕೊಡುವ ವಿಷಯ. ಆಗಿನ ಕಾಲದಲ್ಲಿ ತುಂಬ ಕಡಿಮೆ ಸಿನಿಮಾ ವಿಮರ್ಶೆಗಳು ಬರುತ್ತಿದ್ದವು. ಈಗ ಸಿನಿಮಾ ನೋಡಿದವರೆಲ್ಲ ವಿಮರ್ಶಕರಾಗಿದ್ದಾರೆ. ಆಗ ಹಾಗಲ್ಲ, ವೃತ್ತಿಪರರು ಮಾತ್ರ ವಿಮರ್ಶೆ ಬರೆಯುತ್ತಿದ್ದರು. ಅದನ್ನು ಓದಿ ಕಲಿತಿದ್ದು ಬಹಳವಿದೆ.ಪತ್ರಿಕೆಯ ವಿಮರ್ಶೆ ಬಹಳ ಖುಷಿ ಕೊಡುತ್ತಿತ್ತು. ಈ ರೀತಿ ಒಡನಾಟ ಹೊಂದಿರುವ ಪತ್ರಿಕೆ ‘ಸಿನಿಮಾ ಸಮ್ಮಾನ’ ಪ್ರಾರಂಭಿಸಿರುವುದು ಬಹಳ ಖುಷಿಯ ವಿಷಯ. ಅದಕ್ಕಿಂತ ಹೆಚ್ಚಾಗಿ ಈ ಪ್ರಶಸ್ತಿ ಆಯ್ಕೆಗಾಗಿ ಮತ ಹಾಕಲು ಕೂಡ ಸಿನಿಮಾ ಬಗ್ಗೆ ಜ್ಞಾನ, ಅನುಭವ ಹೊಂದಿರುವವರನ್ನು ಪರಿಗಣಿಸಿದ್ದಾರೆ. ಮುಕ್ತ ಆಯ್ಕೆಯಲ್ಲಿ ಅಭಿಮಾನಿಗಳು ಹೆಚ್ಚಿರುವವರು ಗೆಲ್ಲುತ್ತಾರೆ. ಆದರಿಲ್ಲಿ ತಂತ್ರಜ್ಞರೇ ಮತ ಹಾಕುವುದರಿಂದ ಉತ್ತಮ ಕೃತಿ ಗೆಲ್ಲುತ್ತದೆ, ಕೆಲಸಕ್ಕೆ ಗೌರವ ಸಿಗುತ್ತದೆ. ಮುಖ್ಯ ತೀರ್ಪುಗಾರರ ಮಂಡಳಿಯಲ್ಲಿಯೂ ಅನುಭವ ಹೊಂದಿರುವವರೇ ಇದ್ದಾರೆ. 

–ಸಿಂಪಲ್‌ ಸುನಿ, ನಿರ್ದೇಶಕ

ಬಹಳ ಒಳ್ಳೆಯ ಹೆಜ್ಜೆ

‘ಪ್ರಜಾವಾಣಿ’ ಪತ್ರಿಕೆಗೆ ಅದರದ್ದೇ ಆದ ವಿಶ್ವಾಸಾರ್ಹತೆ ಇದೆ. ನಾವೆಲ್ಲ ಬಾಲ್ಯದಿಂದ ಓದಿಕೊಂಡು ಬಂದ ಪತ್ರಿಕೆ. ನಮ್ಮ ಸಿನಿಮಾ ಸುದ್ದಿಗಳನ್ನು ಪ್ರೇಕ್ಷಕರಿಗೆ ತಲುಪಿಸುತ್ತಿರುವ ಪತ್ರಿಕೆ 75 ವರ್ಷಗಳನ್ನು ಪೂರೈಸುತ್ತಿರುವುದಕ್ಕೆ ಅಭಿನಂದನೆಗಳು. ಈ ಐತಿಹಾಸಿಕ ಕ್ಷಣದಲ್ಲಿ ‘ಸಿನಿ ಸಮ್ಮಾನ’ ಎಂಬ ಕಾರ್ಯಕ್ರಮದ ಮೂಲಕ ಸಿನಿಮಾ ರಂಗವನ್ನು ಗೌರವಿಸಲು ಹೊರಟಿರುವುದು ಬಹಳ ಒಳ್ಳೆಯ ಹೆಜ್ಜೆ. ಈ ರೀತಿಯ ಸಮ್ಮಾನ ಇನ್ನೊಂದಷ್ಟು ಜನಕ್ಕೆ ಉತ್ತೇಜನ ನೀಡುತ್ತದೆ. ತೀರ್ಪುಗಾರರ ಮಂಡಳಿಯೇ ಬಹಳ ತೂಕಬದ್ಧವಾಗಿದೆ. ಕಾಸರವಳ್ಳಿ, ಹಂಸಲೇಖ ಅವರಂತಹ ಹಿರಿಯರು ಇರುವುದು ಪ್ರಶಸ್ತಿಯ ಘನತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ‘ಪ್ರಜಾವಾಣಿ’ಯಂತಹ ವಿಶ್ವಾಸಾರ್ಹ ಪತ್ರಿಕೆ ಪ್ರಶಸ್ತಿ ನೀಡುವುದು ಉದ್ಯಮಕ್ಕೆ ಬಹಳ ಉತ್ತೇಜನ ನೀಡುತ್ತದೆ. ಈ ಪ್ರೋತ್ಸಾಹ ಸದಾ ಇರಲಿ.

ಸಂತೋಷ್‌ ಆನಂದ್‌ರಾಮ್‌, ನಿರ್ದೇಶಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT