ಸುಬ್ರತೋ ರಾಯ್ ಯೋಚನಾಶಾಲೆಯಲ್ಲಿ ಬೆಳೆದುಬಂದ ಸಿನಿಮಾಟೊಗ್ರಾಫರ್ ಜಿ.ಎಸ್. ಭಾಸ್ಕರ್, ಸಿನಿಮಾಶಾಸ್ತ್ರದ ಗಂಭೀರ ವಿದ್ಯಾರ್ಥಿ. ರಿಚರ್ಡ್ ಅಟೆನ್‌ಬರೊ ನಿರ್ದೇಶನದ ‘ಗಾಂಧಿ’ (1982) ಸಿನಿಮಾದಲ್ಲಿ ಕೆಲಸ ಮಾಡಿರುವ ಭಾಸ್ಕರ್, ಕನ್ನಡದಲ್ಲಿ ಗಿರೀಶ ಕಾಸರವಳ್ಳಿ ನಿರ್ದೇಶನದ ‘ಕೂರ್ಮಾವತಾರ’ (2011) ಮತ್ತು ಶೇಷಾದ್ರಿ ನಿರ್ದೇಶನದ ‘ಮೋಹನದಾಸ’ (2019) ಸಿನಿಮಾಗಳಿಗೂ ಸಿನಿಮಾಟೊಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ಹೀಗೆ ಗಾಂಧಿಯನ್ನು ಕೇಂದ್ರದಲ್ಲಿಟ್ಟುಕೊಂಡು ತಯಾರಾದ ಮೂರು ಸಿನಿಮಾಗಳಿಗೆ ಕೆಲಸ ಮಾಡಿರುವ ಹೆಗ್ಗಳಿಕೆ ಅವರದ್ದು. ಗಾಂಧೀಜಿ ಹತ್ಯೆಯಾದ ಜನವರಿ ತಿಂಗಳಲ್ಲಿ (ಜ. 20) ಭಾಸ್ಕರ್ ಅವರು ಹಂಚಿಕೊಂಡಿರುವ ‘ಗಾಂಧಿ’ ಸಿನಿಮಾಗಳ ನೆನಪುಗಳು, ಗಾಂಧಿ ಸ್ಮರಣೆಯ ಜೊತೆಗೆ ಸಿನಿಮಾ ವಿದ್ಯಾರ್ಥಿಗಳಿಗೆ ಪಠ್ಯವಾಗಿಯೂ ಒದಗಬಲ್ಲವು.

ರಿಚರ್ಡ್ ಅಟೆನ್‍ಬರೊ ಅವರು ‘ಗಾಂಧಿ’ ಮಾಡುವ ಕಾಲಕ್ಕೆ ನಾನು ಪುಣೆ ಫಿಲ್ಮ್ ಇನ್‍ಸ್ಟಿಟ್ಯೂಟ್‍ನಿಂದ ಆಗಷ್ಟೇ ಪದವಿ ಮುಗಿಸಿದ್ದೆ. ಅಲ್ಲಿಂದ ಹೊರಬಂದ ಮೇಲೆ ನಾನು ಕೆಲಸ ಮಾಡಿದ ಮೊದಲ ಪೂರ್ಣಪ್ರಮಾಣದ ಸಿನಿಮಾ ಅದು. ಅಲ್ಲಿ ನಾನು ಸಹಾಯಕನಾಗಿ ಕೆಲಸ ಮಾಡಿದ್ದೆ.

ಅಲ್ಲಿ ಫಸ್ಟ್ ಯೂನಿಟ್, ಸೆಕೆಂಡ್ ಯೂನಿಟ್ ಅಂತ ಇರುತ್ತದೆ. ‘ಗಾಂಧಿ’ ಸಿನಿಮಾ ಭಾರತ ಸರ್ಕಾರದೊಂದಿಗೆ ರಿಚರ್ಡ್ ಅಟೆನ್‌ಬರೊ ಅವರ ಸಹ ನಿರ್ಮಾಣವಾದುದರಿಂದ ಚಿತ್ರತಂಡದಲ್ಲಿ ಕನಿಷ್ಠ ಶೇ 40ರಷ್ಟು ಭಾರತೀಯರು ಇರಬೇಕು ಎಂಬ ಷರತ್ತೂ ಇತ್ತು. ಹಾಗಾಗಿ ಅವರು ಭಾರತೀಯರನ್ನು ತಮ್ಮ ತಂಡದಲ್ಲಿ ಸೇರಿಸಿಕೊಂಡರು. ಗೋವಿಂದ ನಿಹಲಾನಿ ಸೆಕೆಂಡ್ ಯೂನಿಟ್ ಕ್ಯಾಮೆರಾಮನ್ ಆಗಿದ್ದರು. ಎ.ಕೆ. ಬೀರ್ ಇದ್ದರು. ಅವರು ಫಸ್ಟ್ ಯೂನಿಟ್‍ನಲ್ಲಿ ಆಪರೇಟಿವ್ ಕ್ಯಾಮೆರಾಮನ್ ಆಗಿದ್ದರು. ನಾನು ಬೀರ್ ಅವರಿಗೆ ಸಹಾಯಕನಾಗಿದ್ದೆ.

ನಾನು ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಪದವಿ ಮುಗಿಸುವ ಹೊತ್ತಿಗೆ ದೇವಧರ ಅವರು ಒಂದು ಮರಾಠಿ ಸಿನಿಮಾ ಮಾಡುತ್ತಿದ್ದರು. ಅವರ ಜತೆಗೆ ಕೆಲಸ ಮಾಡಬೇಕು ಎಂದು ನನಗೂ ತುಂಬ ಆಸೆ ಇತ್ತು. ನಾನು ದೇವಧರ ಮಾಡುತ್ತಿದ್ದ ಮರಾಠಿ ಸಿನಿಮಾ ಸೆಟ್‍ಗೆ ಹೋಗಬೇಕಾಗಿದ್ದ ಹಿಂದಿನ ದಿನ ಸಂಜೆ, ನನ್ನ ಸಹಪಾಠಿ ಅಶ್ವಿನಿ ಕೌಲ್ ಭೇಟಿಯಾದ. ‘ನೀನು ಇವತ್ತೇ ಮುಂಬೈಗೆ ಹೊರಡು. ಬೀರ್ ಅವರು ನಿನ್ನನ್ನು ಕರೆದಿದ್ದಾರೆ’ ಎಂದು ಅವಸರಿಸಿದ. ‘ಇಲ್ಲ, ನಾನು ದೇವಧರ ಅವರ ಸಿನಿಮಾಗೆ ಕೆಲಸ ಮಾಡಲು ಹೋಗಬೇಕು’ ಎಂದೆ. ‘ಇದನ್ನು ನಾನು ಹೇಗೋ ಹ್ಯಾಂಡಲ್ ಮಾಡ್ತೀನಿ. ನೀನು ಅಲ್ಲಿಗೆ ಹೋಗು’ ಎಂದು ನನ್ನನ್ನು ಮುಂಬೈಗೆ ಕಳಿಸಿದ. ನಾವು ಮೂರು ಜನ ಬೀರ್ ಅವರಿಗೆ ಸಹಾಯಕರಾಗಿದ್ದೆವು. ‘ಗಾಂಧಿ’ ಸಿನಿಮಾದ ಜೊತೆ ನನ್ನ ಪ್ರಯಾಣ ಶುರುವಾಗಿದ್ದು ಹೀಗೆ.

ಫಿಲ್ಮ್ ಇನ್‍ಸ್ಟಿಟ್ಯೂಟ್‍ನಿಂದ ಆಗಷ್ಟೇ ಬಂದಿದ್ದರಿಂದ ನಮಗೆ ಒಂದು ಅಡ್ವಾಂಟೇಜೂ ಇತ್ತು, ಉತ್ಸಾಹವೂ ಇತ್ತು. ಇನ್‍ಸ್ಟಿಟ್ಯೂಟ್‌ನಲ್ಲಿ ಓದುವಾಗ ಭಾರತೀಯ ಸಿನಿಮಾಗಳಿಗಿಂತ ಹೆಚ್ಚಾಗಿ ಯುರೋಪಿಯನ್ ಸಿನಿಮಾಗಳಿಗೆ ತೆರೆದುಕೊಂಡಿರುತ್ತೇವೆ. ತಾಂತ್ರಿಕ ವಿದ್ಯಾರ್ಥಿಗಳೂ ಹೆಚ್ಚಾಗಿ ಹಾಲಿವುಡ್ ಕಡೆಗೆ ವಾಲಿರುತ್ತಾರೆ. ನಾವು ಇಂಡಿಯಾದಲ್ಲಿದ್ದೇವೆ ಅನ್ನುವುದನ್ನು ಬಿಟ್ಟರೆ ನಮ್ಮ ಮನಸ್ಸು, ಆಲೋಚನಾಕ್ರಮ, ಕಲಿಕೆ ಎಲ್ಲವೂ ಹಾಲಿವುಡ್‍ನಲ್ಲೇ ಇರುತ್ತದೆ. ಹಾಗಾಗಿ, ಯುರೋಪಿನ ತಂತ್ರಜ್ಞರು ಏನು ಮಾಡುತ್ತಾರೆ ಎನ್ನುವುದೆಲ್ಲವೂ ನಮಗೆ ಒಂದು ರೀತಿಯಲ್ಲಿ ತಿಳಿದಿರುತ್ತಿತ್ತು. ನಾನು ಮತ್ತು ಅಶ್ವಿನಿ ಕೌಲ್ ಆಗಿನ ಯುರೋಪಿಯನ್ ಸಿನಿಮಾ ತಾಂತ್ರಿಕತೆಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೆವು.

ಎಲ್‍ಇಡಿ ತಂತ್ರಜ್ಞಾನ ಪಶ್ಚಿಮದಲ್ಲಿ ಆಗಷ್ಟೇ ಪರಿಚಯವಾಗುತ್ತಿತ್ತು. ನಮ್ಮಲ್ಲಿನ್ನೂ ಬಂದಿರಲಿಲ್ಲ. ಆಗ ಹಗಲಿನ ಚಿತ್ರೀಕರಣಕ್ಕೆ ಆರ್ಕ್‌ಲೈಟ್ ಮಾತ್ರ ಬಳಸುತ್ತಿದ್ದರು. ಆರ್ಕ್‌ಲೈಟ್ ಎಷ್ಟು ದೊಡ್ಡದಾಗಿರುತ್ತಿತ್ತು ಎಂದರೆ ಅದನ್ನು ನಿರ್ವಹಣೆ ಮಾಡಲಿಕ್ಕೆ ಹನ್ನೆರಡು ಜನ ಬೇಕಾಗಿದ್ದರು. ಒಂದು ಟ್ರಕ್ ಬೇಕಾಗಿತ್ತು. ಪಶ್ಚಿಮದಲ್ಲಿ ಆ ಲೈಟ್ ಬದಲಿಗೆ ಎಚ್‍ಎಂಐ ಲೈಟ್‍ಗಳನ್ನು ಬಳಸಲು ಶುರುಮಾಡಿದ್ದರು. ಈ ಎಲ್ಲ ತಂತ್ರಜ್ಞಾನಗಳನ್ನು ಪಠ್ಯಪುಸ್ತಕ, ಅಮೆರಿಕನ್ ಸಿನಿಮಾಟೊಗ್ರಾಫರ್ ಮ್ಯಾನುವಲ್‍ಗಳ ಮೂಲಕ ಓದಿ ಅರ್ಥ ಮಾಡಿಕೊಂಡುಬಿಟ್ಟಿದ್ದೆವು. ಅವುಗಳನ್ನು ಮುಟ್ಟಿರಲಿಲ್ಲ ಅಷ್ಟೆ.

ಗಾಂಧಿ ನಮಗೆ ಪರಿಚಿತರೇ ಆಗಿದ್ದರಿಂದ ‘ಗಾಂಧಿ’ ಸಿನಿಮಾ ವಸ್ತುವಿನ ಬಗ್ಗೆ ಅಂಥ ಆಸಕ್ತಿ ಏನಿರಲಿಲ್ಲ. ಆ ವಯಸ್ಸೂ ಅದಕ್ಕೆ ಕಾರಣವಾಗಿರಬಹುದು. ತಂತ್ರಜ್ಞನಾಗಿ ಹೊಸ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಳ್ಳಲು ಮನಸ್ಸು ತವಕಿಸುತ್ತಿತ್ತು. ಪಶ್ಚಿಮದ ತಂತ್ರಜ್ಞಾನವನ್ನು ಸುಲಭವಾಗಿಯೇ ಅರ್ಥಮಾಡಿಕೊಂಡು ನಿರ್ವಹಣೆ ಮಾಡಿದೆವು. ಅಲ್ಲಿನ ತಂತ್ರಜ್ಞರು ಇದನ್ನು ನೋಡಿ ಅಚ್ಚರಿಯಿಂದ, ‘ನೀವು ಹೇಗೆ ಈ ತಂತ್ರಜ್ಞಾನವನ್ನು ಇಷ್ಟು ಸುಲಭವಾಗಿ ನಿರ್ವಹಿಸುತ್ತಿದ್ದೀರಾ?’ ಎಂದು ಕೇಳಿದ್ದರು. ಅವರ ಮೆಚ್ಚುಗೆ ನಮಗೆ ಒಂದು ರೀತಿಯ ವಿಶ್ವಾಸವನ್ನು ತಂದುಕೊಟ್ಟಿತು.

ನಾವು ಮಾಡುತ್ತಿದ್ದದ್ದು ತಾಂತ್ರಿಕ ಕೆಲಸಗಳೇ. ಆದರೆ ಪಶ್ಚಿಮದ ಸಿನಿಮಾ ನಿರ್ಮಾಣದ ರೀತಿಯನ್ನು ಹತ್ತಿರದಿಂದ ನೋಡಲು ಸಾಧ್ಯವಾಯ್ತು.

‘ಗಾಂಧಿ’ ಸಿನಿಮಾ ಶುರುವಾಗುವುದೇ ಗಾಂಧಿಯ ಅಂತಿಮ ಮೆರವಣಿಗೆ ದೃಶ್ಯದಿಂದ. ಬಹುಶಃ ಪ್ರಪಂಚದಲ್ಲಿ ಬೇರೆ ಯಾವುದೇ ಜಾಗದಲ್ಲಿ ಚಿತ್ರೀಕರಣ ಮಾಡಿದ್ದರೂ ಆ ದೃಶ್ಯದಲ್ಲಿ ಈಗಿರುವ ಸಂಚಲನ ಇರುವುದು ಸಾಧ್ಯವಾಗುತ್ತಿರಲಿಲ್ಲ. ಭಾರತ ಸರ್ಕಾರ ಈ ಸಿನಿಮಾವನ್ನು ನಿರ್ಮಾಣ ಮಾಡಿರದಿದ್ದರೆ, ಅಟೆನ್‍ಬರೊ ಕೈಯಲ್ಲಿ ಆ ಚಿತ್ರ ಇರದೇ ಹೋಗಿದ್ದರೆ ಆ ದೃಶ್ಯ ಹಾಗೆ ಮೂಡಿಬರುವುದೂ ಸಾಧ್ಯವಾಗುತ್ತಿರಲಿಲ್ಲ. ಆ ಇಡೀ ದೃಶ್ಯದಲ್ಲಿ ಕನಿಷ್ಠವೆಂದರೂ ಎರಡು ಲಕ್ಷ ಜನರಿದ್ದಾರೆ. ಸಿನಿಮಾಗೋಸ್ಕರವೇ ಬಂದಿದ್ದ ಜನರು.

ನಾವೊಂದು ವ್ಯವಸ್ಥಿತ ಯೋಜನೆ ಹಾಕಿಕೊಂಡಿದ್ದೆವು. ಅದರ ಪ್ರಕಾರ ಆ ದೃಶ್ಯವನ್ನು ಜನವರಿ 30ರಂದು ಚಿತ್ರೀಕರಿಸಿದೆವು. ಗಾಂಧೀಜಿ ಗುಂಡಿನ ದಾಳಿಗೆ ಒಳಗಾಗಿದ್ದು ಅದೇ ದಿನ. ಅಂದು ಇಡೀ ದೆಹಲಿಗೆ ರಜಾದಿನ.

ಹರಿಯಾಣ, ರಾಜಸ್ಥಾನಗಳಿಂದ ಸಾಕಷ್ಟು ಜನರನ್ನು ಚಿತ್ರೀಕರಣಕ್ಕಾಗಿ ಕರೆದುಕೊಂಡು ಬರಲಾಗಿತ್ತು. ಅವರಿಗೆಲ್ಲ ಸಂಭಾವನೆ ಕೊಟ್ಟಿದ್ದರು. ಪ್ರತಿಯೊಬ್ಬರಿಗೂ ಊಟ ತಿಂಡಿ ನೋಡಿಕೊಂಡರು. ಮೊದಲ ಸಾಲಿನಲ್ಲಿರುವವರಿಗೆಲ್ಲ ಕಾಸ್ಟ್ಯೂಮ್ ಇತ್ತು. ಇಂಡಿಯಾ ಗೇಟ್‍ನಿಂದ ರಾಷ್ಟ್ರಪತಿ ಭವನದವರೆಗೆ ಇರುವ ಮೆರವಣಿಗೆಯಲ್ಲಿ ಬರೀ ನಾಲ್ಕು ಸಾಲಿನಲ್ಲಿರುವ ಮೆರವಣಿಗೆ ಎಂದರೆ ಎಷ್ಟು ಜನರಾಗುತ್ತಾರೆ ಯೋಚಿಸಿ. ಅಷ್ಟು ಜನರಿಗೆ ಬಿಳಿ ಸಮವಸ್ತ್ರ ಕೊಡಬೇಕು. ಅಷ್ಟು ಜನರನ್ನು ಡ್ರೆಸ್ ಮಾಡಬೇಕು. ಅದಕ್ಕೆ ಮಾಡಿಕೊಂಡ ಸಿದ್ಧತೆ ಇದೆಯಲ್ಲ, ಅದು ಸಮರಸಿದ್ಧತೆಗೆ ಸಮ.

ಗುರುಗ್ರಾಮದಲ್ಲಿ ಆಶ್ರಮದ ಸೆಟ್
ನಾವು ಸಾಬರಮತಿ ಆಶ್ರಮದ ಸೆಟ್ ಹಾಕಿದ್ದು ಗುರುಗ್ರಾಮದಲ್ಲಿ. ಅದು ದೆಹಲಿಯಿಂದ 60 ಕಿಲೋಮೀಟರ್ ದೂರದಲ್ಲಿತ್ತು. ಪ್ರತಿದಿನ ಅರವತ್ತು ಕಿಲೋಮೀಟರ್. ಪ್ರಯಾಣಿಸಿ ಗುರುಗ್ರಾಮ ತಲುಪುತ್ತಿದ್ದೆವು. ಅಲ್ಲಿ ಚಿತ್ರೀಕರಣ ನಡೆಸಿ, ಐದೂವರೆಗೆ ಪ್ಯಾಕಪ್ ಮಾಡಿ ಆರೂವರೆಗೆ ದೆಹಲಿಗೆ ವಾಪಸಾಗುತ್ತಿದ್ದೆವು. ಏಳುಗಂಟೆಗೆ ಬ್ಯಾಂಕ್ವೆಟ್ ಹಾಲ್‍ನಲ್ಲಿ ಮೀಟಿಂಗ್ ಇರುತ್ತಿತ್ತು. ಅಲ್ಲಿಯೇ ರಿಫ್ರೆಷ್‍ಮೆಂಟ್ ಇರುತ್ತಿತ್ತು. ನಮ್ಮ ಯೂನಿಟ್‍ನವರಿಗೆ ಜನಪಥ ರಸ್ತೆಯಲ್ಲಿ ವಸತಿಗೆ ವ್ಯವಸ್ಥೆ ಮಾಡಲಾಗಿತ್ತು. ಒಂಬತ್ತು ಗಂಟೆಗೆ ಲಾಡ್ಜ್‌ಗೆ ಹೋಗುತ್ತಿದ್ದೆವು.

ನಮ್ಮಲ್ಲಿರುವಂತೆ ಅಲ್ಲಿ ನಿರ್ದೇಶಕ ಆ್ಯಕ್ಷನ್–ಕಟ್ ಹೇಳುವುದಿಲ್ಲ. ಡಿಓಪಿ (ಡೈರೆಕ್ಟರ್ ಆಫ್ ಫೋಟೊಗ್ರಫಿ)ಗಳಿಗೆ ಕೊಡಬೇಕಾದ ಸೂಚನೆಗಳನ್ನೆಲ್ಲ ಕೊಟ್ಟ ನಂತರ ಕಲಾವಿದರನ್ನು ಕರೆದುಕೊಂಡು ಬರುತ್ತಾನೆ. ಅವರನ್ನು ಸಜ್ಜುಗೊಳಿಸಿ ಸಹಾಯಕ ನಿರ್ದೇಶಕನಿಗೆ ಗ್ರೀನ್ ಸಿಗ್ನಲ್ ಕೊಡುತ್ತಾನೆ. ಡೇವಿಡ್ ಥಾಂಬ್ಲಿನ್ ‘ಗಾಂಧಿ’ ಸಿನಿಮಾದ ಸಹಾಯಕ ನಿರ್ದೇಶಕರಾಗಿದ್ದರು. ಕಟ್, ರೋಲ್, ಆ್ಯಕ್ಷನ್ ಎಂಬುದನ್ನೆಲ್ಲ ಹೇಳುತ್ತಿದ್ದುದು ಆತನೇ. ಭಾರತೀಯ ಸಿನಿಮಾಗಳಲ್ಲಿ ಕೆಲಸ ಮಾಡಿ ‘ಗಾಂಧಿ’ ಸಿನಿಮಾ ಸೆಟ್‍ಗೆ ಹೋದವರಿಗೆ ನಿರ್ದೇಶಕ ಡೇವಿಡ್ ಅವರಾ ಅಥವಾ ಅಟೆನ್‍ಬರೊ ಅವರಾ ಎನ್ನುವುದು ಸುಲಭಕ್ಕೆ ಗೊತ್ತಾಗುತ್ತಿರಲಿಲ್ಲ.

ಕ್ಯಾಮೆರಾ ರೋಲ್ ಆದ ಮೇಲೆ ಫಿಲ್ಮ್ ರೋಲ್ ಆಗ್ತಿದೆ ಎಂಬ ಗಡಿಬಿಡಿಯೂ ಅಲ್ಲಿ ಇರುವುದಿಲ್ಲ. ಕ್ಯಾಮೆರಾ ರೋಲ್ ಆದಮೇಲೆ ಅಟೆನ್‌ಬರೊ ಆ ಪಾತ್ರದ ಹಿನ್ನೆಲೆಯನ್ನು ನಟನಿಗೆ ವಿವರಿಸುತ್ತಿದ್ದರು. ಹಾಗೆ ಮಾಡುವುದರ ಮೂಲಕ ಅವರು ಆ ನಟನಲ್ಲಿ ಎಮೋಷನ್‍ಗಳನ್ನು ಹುಟ್ಟಿಸುತ್ತಿದ್ದರು. ಒಂದು ರೀತಿಯ ರೋಮಾಂಚನಕಾರಿ ಕ್ಷಣಗಳು ಅವೆಲ್ಲ. ನನಗೆ ಈಗಲೂ ಅವೆಲ್ಲ ಕಣ್ಣಿಗೆ ಕಟ್ಟಿದ ಹಾಗೆ ನೆನಪಿನಲ್ಲಿವೆ. ಅಷ್ಟರಮಟ್ಟಿಗೆ ಇಡೀ ತಂಡ ಆ ಸಿನಿಮಾದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿತ್ತು.

‘ಕೂರ್ಮಾವತಾರ’ದಿಂದ ಪಿ. ಶೇಷಾದ್ರಿ ಅವರ ‘ಮೋಹನದಾಸ’ ಸಿನಿಮಾಗೆ ಬರುವಷ್ಟರಲ್ಲಿ ಮತ್ತೆ ಸುಮಾರು ಒಂದು ದಶಕ ಕಳೆದಿತ್ತು. ಆದರೆ ಇಲ್ಲಿನ ಗಾಂಧಿ, ಬಾಲಕ ಮೋಹನದಾಸ. ಬೆಳೆದ ಗಾಂಧಿ ಅಲ್ಲವೇ ಅಲ್ಲ. ಹಾಗಾಗಿ ನನಗೆ ಸಾಕಷ್ಟು ಸ್ವಾತಂತ್ರ್ಯ ಇತ್ತು. ಗಾಂಧಿ ಪಾತ್ರ ಅನ್ನುವ ತೂಕ ಇರಲಿಲ್ಲ. ಇಡೀ ಚಿತ್ರವನ್ನು ಮಕ್ಕಳ ಚಿತ್ರ ಅನ್ನುವ ರೀತಿಯಲ್ಲಿಯೇ ಮಾಡಲು ಸಾಧ್ಯವಾಯ್ತು.

ಬಾಲಕ ಗಾಂಧಿ ಅಪ್ಪನೆದುರು ತಪ್ಪೊಪ್ಪಿಗೆ ಮಾಡಿಕೊಳ್ಳಲು ಕಾರಿಡಾರ್‌ನಲ್ಲಿ ದೀಪ ಹಿಡಿದುಕೊಂಡು ನಡೆದುಕೊಂಡು ಬರುವ ದೃಶ್ಯವೊಂದಿದೆ. ಅದರಲ್ಲಿ ಅವನ ಮನಸ್ಸಿನ ತೊಳಲಾಟಗಳನ್ನೆಲ್ಲ ಹಿಡಿದಿಡಲು ಪ್ರಯತ್ನಿಸಿದ್ದೇವೆ. ಆ ರೀತಿಯ ಸಾಧ್ಯತೆಗಳೆಲ್ಲ ಹೊಳೆದಿದ್ದಕ್ಕೆ ಒಂದು ಕಾರಣ ನಾವು ನಿಜವಾಗಿ ಗಾಂಧಿ ಬದುಕಿದ ರಾಜ್‍ಕೋಟ್, ಸಾಬರಮತಿ ಆಶ್ರಮಗಳನ್ನು ನೋಡಿ ಬಂದಿದ್ದರಿಂದ. ಇನ್ನೊಂದು, ನಾನು ಈ ಹಿಂದೆ ‘ಗಾಂಧಿ’ ಮತ್ತು ‘ಕೂರ್ಮಾವತಾರ’ ಎರಡೂ ಸಿನಿಮಾಗಳಲ್ಲಿ ಕೆಲಸ ಮಾಡಿದ್ದು.

ಗಾಂಧಿ ಬಗೆಗಿನ ಮೂರು ಪ್ರಮುಖ ಸಿನಿಮಾಗಳಲ್ಲಿ ನಾನು ಕೆಲಸ ಮಾಡಿದ್ದು ಒಂದು ರೀತಿ ಯೋಗವೇ ಇರಬೇಕು. ಆ ಚಿತ್ರಗಳು ಹಾಗಿವೆ. ಆ ಹೊತ್ತಿಗೆ ನಾನು ಅಲ್ಲಿದ್ದು ಅವುಗಳನ್ನು ಅನುಭವಿಸಿದೆ ಅಷ್ಟೆ. ಆ ಸಿನಿಮಾಗಳ ವಿಶ್ಲೇಷಣೆ ಮಾಡಿದ್ದೇನೆ ಅನ್ನುವುದಕ್ಕಿಂತ, ಈ ಸಿನಿಮಾಗಳನ್ನು ಮಾಡುತ್ತಲೇ ನಾನು ಬೆಳೆದು ಬಂದ ರೀತಿಯನ್ನು ಗುರ್ತಿಸಿಕೊಳ್ಳುವ ಪ್ರಯತ್ನ ಇದು ಎಂದೇ ಹೇಳಿಕೊಳ್ಳಲು ಇಷ್ಟಪಡುತ್ತೇನೆ.

‘ಕೂರ್ಮಾವತಾರ’ದ ಸವಾಲು
‘ಗಾಂಧಿ’ ಸಿನಿಮಾ ನಂತರ ನಾನು ಗಿರೀಶ ಕಾಸರವಳ್ಳಿ ನಿರ್ದೇಶನದ ‘ಕೂರ್ಮಾವತಾರ’ ಸಿನಿಮಾಗೆ ಕೆಲಸ ಮಾಡುವಾಗ ಸುಮಾರು ಮೂವತ್ತು ವರ್ಷ ಕಳೆದಿತ್ತು. 2010ರಲ್ಲಿ ‘ಕೂರ್ಮಾವತಾರ’ ಚಿತ್ರೀಕರಣವಾಗಿದ್ದು. ಈ ಸಿನಿಮಾದಲ್ಲಿ ನಾನು ಡೈರೆಕ್ಟರ್ ಆಫ್ ಫೋಟೊಗ್ರಫಿ ಕಮ್ ಆಪರೇಟಿವ್ ಕ್ಯಾಮೆರಾಮನ್ ಆಗಿದ್ದೆ. ಇಡೀ ಚಿತ್ರದ ದೃಶ್ಯಪ್ರಸ್ತುತಿಯ ಜವಾಬ್ದಾರಿ ನನ್ನ ಮೇಲಿತ್ತು. ಅದನ್ನು ಹೇಗೆ ವಿನ್ಯಾಸ ಮಾಡಬೇಕು, ಹೇಗೆ ನಿರ್ವಹಣೆ ಮಾಡಬೇಕು ಎನ್ನುವುದು ಕಾಸರವಳ್ಳಿ ಅವರ ಮಾರ್ಗದರ್ಶನದಲ್ಲಿ ನನಗೆ ಸ್ಪಷ್ಟವಾದ ಕಲ್ಪನೆ ಮೂಡಿತ್ತು.

ಬಹುಶಃ ಕಾಸರವಳ್ಳಿ ಅವರು ನನ್ನನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ, ನಾನು ಅಟೆನ್‍ಬರೊ ನಿರ್ದೇಶನದ ‘ಗಾಂಧಿ’ ಸಿನಿಮಾದಲ್ಲಿ ಕೆಲಸ ಮಾಡಿದ್ದೆ ಎಂಬುದೂ ಒಂದು ಕಾರಣ ಆಗಿರಬಹುದು. ಆ ರೀತಿಯ ಕೆಲವು ದೃಶ್ಯಗಳು ಬಂದಾಗ ‘ಗಾಂಧಿ’ ಸಿನಿಮಾದಲ್ಲಿನ ರೀತಿಯದ್ದೇ ಲೈಟಿಂಗ್ಸ್, ಪೊಸಿಷನ್‍ಗಳನ್ನು ಇಲ್ಲಿಯೂ ತರಲು ಯತ್ನಿಸಿದೆ. ಅವು ಬರೀ ಎರಡು ಮೂರು ದೃಶ್ಯಗಳಷ್ಟೆ. ಕಸ್ತೂರ ಬಾ ಅವರ ಸಾವಿನ ಸನ್ನಿವೇಶ ಅಂಥ ದೃಶ್ಯಗಳಲ್ಲೊಂದು. ಮತ್ತೊಂದು, ಬಾಪುವನ್ನು ಪ್ರಾರ್ಥನೆಗೆ ಕರೆದುಕೊಂಡು ಹೋಗುವ ದೃಶ್ಯ. ಅದು ಇಡೀ ಸಿನಿಮಾದಲ್ಲಿ ಏಳು ಸಲ ಪುನರಾವರ್ತನೆ ಆಗುತ್ತದೆ. ಆ ದೃಶ್ಯವನ್ನು ‘ಗಾಂಧಿ’ ಸಿನಿಮಾದೊಂದಿಗೆ ಹೋಲಿಸಿದರೆ ನಿಮಗೆ ಇನ್ನಷ್ಟು ಸ್ಪಷ್ಟವಾಗುತ್ತದೆ. ಇದು ಭೌತಿಕ ಮಟ್ಟದಲ್ಲಿ ಆದ ಬಳಕೆ. ಆದರೆ ಅದನ್ನು ಬಳಸಿಕೊಂಡು ಕಾಸರವಳ್ಳಿ ತಮ್ಮದೇ ಆದ ಧ್ವನಿಸಾಧ್ಯತೆಗಳನ್ನು ಹುಟ್ಟಿಸಿದ ರೀತಿ ಅನನ್ಯವಾದದ್ದು.

‘ಕೂರ್ಮಾವತಾರ’ದಲ್ಲಿ ಸಿನಿಮಾದೊಳಗಿನ ನಿರ್ದೇಶಕ, ಗಾಂಧಿ ಪಾತ್ರಧಾರಿಗೆ ಬೈದು ‘ಗಾಂಧಿ’ ಸಿನಿಮಾದ ಕ್ಲಿಪಿಂಗ್ ತೋರಿಸುವ ಒಂದು ಸನ್ನಿವೇಶವಿದೆ. ಅಲ್ಲಿಗೆ ಹೋಗುವಾಗ ಗಿರೀಶ್, ‘ಗಾಂಧಿ ನೆರಳು ಪಾಸ್ ಆಗುವ ಹಾಗೆ ಮಾಡೋಣ’ ಎಂದು ಅದ್ಭುತ ಐಡಿಯಾ ಕೊಟ್ಟರು. ಆ ದೃಶ್ಯವನ್ನು ನೋಡಿದರೆ ರೋಮಾಂಚನವಾಗಿಬಿಡುತ್ತದೆ. ಈ ರೀತಿಯ ಐಡಿಯಾಗಳು ಬೇರೆ ಬೇರೆ ಅರ್ಥಗಳನ್ನೇ ಕೊಟ್ಟುಬಿಡುತ್ತವೆ. ಇದೇ ನೆರಳಿನ ಐಡಿಯಾವನ್ನು ಅವರು ಮತ್ತೊಂದು ಕಡೆ ಬಳಸಿಕೊಳ್ಳುತ್ತಾರೆ. ಗಾಂಧಿ ಪಾತ್ರಧಾರಿ ಮಗನ ರೂಮಿಗೆ ಬಂದು, ಅಲ್ಲಿಂದ ಹೋಗುವಾಗ ಅವನ ನೆರಳು ಕರ್ಟನ್ ಮೇಲೆ ಬೆಳೆಯುತ್ತಾ ಹೋಗುತ್ತದೆ. ಅದಕ್ಕೆ ಸಿಗುವ ಧ್ವನ್ಯಾರ್ಥಗಳು ಇವೆಯಲ್ಲ, ಅದು ಕಾಸರವಳ್ಳಿಯವರ ಪ್ರತಿಭೆಗೆ ಸಾಕ್ಷಿ. ಅದಕ್ಕೆ ಕೊಡುಗೆ ನೀಡಲು ನನಗೆ ಯಾಕೆ ಸಾಧ್ಯವಾಯ್ತು ಅಂದರೆ ಆ ಮೂರು ದಶಕಗಳ ಬೆಳವಣಿಗೆ ಮತ್ತು ಒಂದಲ್ಲ ಒಂದು ರೀತಿಯಲ್ಲಿ ಕಾಸರವಳ್ಳಿ ಅವರ ಸಿನಿಮಾಗಳನ್ನು ನೋಡುತ್ತಲೇ ಬೆಳೆದಿದ್ದರಿಂದ; ಹಾಲಿವುಡ್, ಬೇರೆ ದೇಶಗಳ ಸಿನಿಮಾಗಳನ್ನು ನೋಡುತ್ತ, ಚರ್ಚೆ ಮಾಡುತ್ತ ಬೆಳೆದಿದ್ದರಿಂದ.

ನಿರೂಪಣೆ: ರಘುನಾಥ ಚ.ಹ./ಪದ್ಮನಾಭ ಭಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.