‘ನನಗೆ ನಟನಾಜೀವನದ ಬಗ್ಗೆ ಮಹತ್ವಾಕಾಂಕ್ಷೆಯೇನೂ ಇರಲಿಲ್ಲ. ಸಿನಿಮಾವೇ ನನ್ನ ಬದುಕು ಎಂದು ನನಗೆಂದೂ ಅನಿಸಿಲ್ಲ. ನಟನೆ ನನ್ನ ಪಾಲಿಗೆ ಬದುಕಿನ ಒಂದು ಭಾಗ ಅಷ್ಟೇ. ಅದರ ಹೊರತಾಗಿಯೂ ನನ್ನ ಬದುಕಿನಲ್ಲಿ ಹಲವು ಪ್ರಾತಿನಿಧ್ಯಗಳಿವೆ’

ಇಷ್ಟು ಹೇಳಿ ಒಂದು ನಗೆ ನಕ್ಕು ಮುಂದಿನ ಪ್ರಶ್ನೆಯನ್ನು ಎದುರು ನೋಡುವಂತೆ ಸುಮ್ಮನಾದರು ನೀತು ಶೆಟ್ಟಿ. ಅವರ ಮಾತಿನಲ್ಲಿ ಸ್ಪಷ್ಟತೆ ಎದ್ದು ಕಾಣುತ್ತಿತ್ತು; ನಗುವಿನ ಅಡಿಯಲ್ಲಿ ಆಳವಾದ ವಿಷಾದವೂ ಇದ್ದಂತಿತ್ತು.

‘ಪೂಜಾರಿ’ ಚಿತ್ರದ ಮೂಲಕ ಗಮನಸೆಳೆದ ನೀತು ಶೆಟ್ಟಿ ‘ಗಾಳಿಪಟ’ ಚಿತ್ರದ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದರು. ಆದರೆ ಆ ಜನಪ್ರಿಯತೆ ಅವರಿಗೆ ಅವಕಾಶಗಳ ದಿಡ್ಡಿಬಾಗಿಲನ್ನೇನೂ ತೆರೆಯಲಿಲ್ಲ. ಬದಲಿಗೆ ಹಂತಹಂತವಾಗಿ ಚಿತ್ರರಂಗದ ಮುಖ್ಯವಾಹಿನಿಯಿಂದ ಅವರು ಹಿನ್ನೆಲೆಗೆ ಸರಿಯುತ್ತಲೇ ಹೋದರು. ‘ನಾಯಕಿಯೆಂದರೆ ತೆಳ್ಳಗೆ ಬೆಳ್ಳಗೆ ಬಳುಕುವ ಬಳ್ಳಿಯಾಗಿರಬೇಕು’ ಎಂಬ ಚಿತ್ರರಂಗದ ಅಲಿಖಿತ ಸೂತ್ರಕ್ಕೆ ಒಗ್ಗಿಕೊಳ್ಳದೇ ಹೋಗಿದ್ದೂ ಅದಕ್ಕೆ ಕಾರಣ. ಈ ಸೂತ್ರದ ಕುರಿತು ಪ್ರಶ್ನಿಸಿದರೆ ‘ನಾಯಕಿ ಆಗಬೇಕು ಅಂದ್ರೆ ಪ್ರತಿಭೆ ಒಂದು ಬಿಟ್ಟು ಮತ್ತೆಲ್ಲ ಇರಬೇಕು’ ಎಂದು ಮತ್ತೊಂದು ನಗೆ ನಕ್ಕು ಮರಳಿ ಮಹತ್ವಾಕಾಂಕ್ಷೆಯ ಮಾತುಗಳನ್ನೇ ವಿಸ್ತರಿಸಿದರು ನೀತು.

‘ನನಗೆ ನಾಯಕಿಯಾಗಿಯೇ ಮುಂದುವರಿಯಬೇಕು ಎಂಬ ಮಹತ್ವಾಕಾಂಕ್ಷೆ ಇದ್ದರೆ ಹೇಗೋ ಸರ್ಕಸ್ ಮಾಡಿಯಾದರೂ ತೆಳ್ಳಗಾಗುವ ಪ್ರಯತ್ನ ಮಾಡುತ್ತಿದ್ದೆ. ಆದರೆ ನನಗದು ಬೇಕಿರಲಿಲ್ಲ. ಪ್ರತಿಭೆಗಿಂತ ಮೈಮಾಟವೇ ಮುಖ್ಯ ಎನ್ನುವುದನ್ನು ಒಪ್ಪಿಕೊಳ್ಳಲೂ ನನಗೆ ಮನಸ್ಸಿರಲಿಲ್ಲ. ಆ ಹಂತದಲ್ಲಿ ಆತ್ಮವಿಶ್ವಾಸವೂ ಕುಂದಿಬಿಡುತ್ತದೆ. ಆದರೆ ನಾನು ದಪ್ಪಗಿರುವ ಬಗ್ಗೆ ನನಗೆ ಯಾವ ಬೇಸರವೂ ಇಲ್ಲ. ನಾನು ಯಾವತ್ತಿಗೂ ನನ್ನ ಕರಿಯರ್ ಅನ್ನು ಪ್ಲ್ಯಾನ್ ಮಾಡಿಲ್ಲ. ಅವಕಾಶ ಬಂದರೆ, ಅದು ಇಷ್ಟವಾದರೆ ಒಪ್ಪಿಕೊಂಡು ನಟಿಸುತ್ತ ಬಂದಿದ್ದೇನೆ’ ಎನ್ನುವ ಅವರು ತನ್ನತನವನ್ನು ಕಳೆದುಕೊಳ್ಳದೆ ಚಿತ್ರರಂಗದಲ್ಲಿ ಉಳಿದುಕೊಳ್ಳುವ ಸಾಧ್ಯತೆಯ ಬಗ್ಗೆಯಷ್ಟೇ ದೃಷ್ಟಿಹಾಯಿಸುತ್ತಿದ್ದಾರೆ. ಹಾಗೆಂದು ಇದು ಎಲ್ಲರಿಗೂ ಸಾಧ್ಯವಾಗುವ ಮಾತಲ್ಲ ಎಂಬ ವಾಸ್ತವದ ಅರಿವೂ ಅವರಿಗಿದೆ.

‘ನನಗೆ ನನ್ನ ಕುಟುಂಬ ಆರ್ಥಿಕವಾಗಿ ಬೆಂಬಲ ನೀಡುತ್ತಿದೆ. ಹಾಗಾಗಿ ನಾನು ನಾನಾಗಿಯೇ ಇರಲು ಸಾಧ್ಯವಾಗಿದೆ. ಆದರೆ ಇದು ಎಲ್ಲರಿಗೂ ಸಾಧ್ಯವಿಲ್ಲ. ಒಮ್ಮೆ ನಟಿಯಾದ ಮೇಲೆ ಬೇರೆ ಕೆಲಸ ಮಾಡುವುದೂ ಸಾಧ್ಯವಿಲ್ಲ. ನಟಿಯಾದವರು ಯಾವಾಗಲೂ ರಾಯಲ್ ಆಗಿಯೇ ಬದುಕಬೇಕು ಎಂದು ಜನರು ಬಯಸುತ್ತಾರೆ. ಹೀಗಾದಾಗ ಅವಕಾಶಕ್ಕಾಗಿ ಏನಾದರೂ ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ’ ಎಂದು ಬಣ್ಣದ ಲೋಕದ ಸುಳಿಯೊಳಗೆ ಸಿಲುಕಿದ ಹೆಣ್ಣು ಎದುರಿಸಬೇಕಾದ ಸವಾಲುಗಳ ಬಗ್ಗೆ ಅವರು ಗಮನಸೆಳೆಯುತ್ತಾರೆ.

ಒಂದು ಹಂತದಲ್ಲಿ ಆತ್ಮವಿಶ್ವಾಸ ಕಳೆದುಕೊಂಡಿದ್ದ ನೀತು ಈಗ ಅದನ್ನು ಮತ್ತೆ ಗಳಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಅದಕ್ಕೆ ಕಾರಣ ಅವರನ್ನು ಅರಸಿಕೊಂಡು ಬರುತ್ತಿರುವ ಅವಕಾಶಗಳು. ಸದ್ಯಕ್ಕೆ ಅವರು ನಾಯಕಿಯಾಗಿ ನಟಿಸಿರುವ ‘ವಜ್ರಮುಖಿ’ ಎಂಬ ಹಾರರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದರ ನಂತರ ‘ಇರಲಾರದೆ ಇರುವೆ ಬಿಟ್ಕೊಂಡೆ’ ಚಿತ್ರವೂ ಬಿಡುಗಡೆಯಾಗುವ ನಿರೀಕ್ಷೆ ಇದೆ. ‘1888’ ಎಂಬ ಪ್ರಯೋಗಶೀಲ ಸಿನಿಮಾದಲ್ಲಿಯೂ ಅವರು ನಟಿಸುತ್ತಿದ್ದಾರೆ. ಈ ಚಿತ್ರದ ಕುರಿತು ಅವರ ನಿರೀಕ್ಷೆಯೂ ಹಿರಿದಾಗಿದೆ.

‘1888’ ಎನ್ನುವುದು ನನ್ನ ಸ್ನೇಹಿತರೇ ಸೇರಿಕೊಂಡು ಮಾಡುತ್ತಿರುವ ಸಿನಿಮಾ. ಅದಕ್ಕೆ ನಿರ್ಮಾಪಕರಿಲ್ಲ. ದುಬಾರಿ ಕ್ಯಾಮೆರಾ, ಸೆಟ್, ಕ್ಯಾರಾವಾನ್ಗಳ ರೂಢಿಗತ ಚಿತ್ರೀಕರಣ ಬಿಟ್ಟು ಹೊಸ ಬಗೆಯಲ್ಲಿ ರೂಪಿಸುತ್ತಿದ್ದಾರೆ. ಇಲ್ಲಿ ಪಾತ್ರಗಳು ತುಂಬ ಸಹಜವಾಗಿ ವರ್ತಿಸುತ್ತಿರುತ್ತವೆ. ಅವುಗಳನ್ನು ಕ್ಯಾಮೆರಾ ಯಾವುದೇ ನಾಟಕೀಯ ತಂತ್ರಗಳಿಲ್ಲದೆ ಸೆರೆಹಿಡಿಯುತ್ತದೆ. ಈ ಚಿತ್ರದಲ್ಲಿ ನಾನು ಸಂಧ್ಯಾ ಶೆಟ್ಟಿ ಎನ್ನುವ ಟಾಪ್ ನಾಯಕಿಯ ಪಾತ್ರದಲ್ಲಿ ನಟಿಸಿದ್ದೇನೆ. ರಾಜಕೀಯ ಪ್ರವೇಶದ ಸಿದ್ಧತೆಯಲ್ಲಿರುವ ನಾಯಕಿಯೊಬ್ಬಳ ಬದುಕಿನಲ್ಲಿ ಡಿಮಾನಿಟೈಜೇಶನ್ ಏನೆಲ್ಲ ಪಲ್ಲಟಗಳನ್ನು ತರುತ್ತದೆ ಎನ್ನುವುದು ಕಥೆ. ತುಂಬ ವಿಭಿನ್ನವಾದ ಪಾತ್ರ’ ಎಂದು ಅವರು ವಿವರಿಸುತ್ತಾರೆ.

‘ಇನ್ನು ಮುಂದೆಯೂ ಅವಕಾಶಕ್ಕಾಗಿ ಅಲೆದಾಡಲಾರೆ’ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳುವ ಅವರು ‘ಈಗ ಚಿತ್ರರಂಗದಲ್ಲಿ ನಾಯಕಿಯರನ್ನು ನೋಡುವ ರೀತಿ ನಿಧಾನಕ್ಕೆ ಬದಲಾಗುತ್ತಿದೆ. ಈ ಬದಲಾದ ಪರಿಸ್ಥಿತಿಯಲ್ಲಿ ನನಗೆ ಒಳ್ಳೆಯ ಪಾತ್ರಗಳು ಸಿಗುತ್ತವೆ ಎನ್ನುವ ನಂಬಿಕೆ ಇದೆ’ ಎಂದು ಭವಿಷ್ಯದ ಬಗ್ಗೆ ಮನಸಲ್ಲಿ ನಿರೀಕ್ಷೆಯ ದೀಪ ಹಚ್ಚಿಕೊಂಡು ಕಾಯುತ್ತಿದ್ದಾರೆ ನೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.