ಜಾಹೀರಾತು ಚಿತ್ರಗಳಿಗೆ ಜಿಂಗಲ್ ಮಾಡಿಕೊಂಡು, ಕೀಬೋರ್ಡ್ ನುಡಿಸಿಕೊಂಡಿದ್ದ ತನಗೆ ‘ರೋಜಾ’ ಚಿತ್ರದ ಸಂಗೀತ ನಿರ್ದೇಶನದ ಅವಕಾಶ ನೀಡಿ ದೇಶವ್ಯಾಪಿ ಖ್ಯಾತಿ ತಂದುಕೊಟ್ಟ ಮಣಿರತ್ನಂ ಅವರನ್ನು ಎ.ಆರ್. ರೆಹಮಾನ್ ಗುರುವಾಗಿ ಕಾಣುವುದು ಸಹಜ. ಅಂಥ ಮಣಿರತ್ನಂರ ಚಿತ್ರಯಾತ್ರೆಯನ್ನು ದಾಖಲಿಸುವ ಭಾರದ್ವಾಜ ರಂಗನ್ ಅವರ ‘ಇನ್ ಕಾನ್ವರ್ಸೇಷನ್ಸ್ ವಿತ್ ಮಣಿರತ್ನಂ’ ಪುಸ್ತಕಕ್ಕೆ ಈ ಆಸ್ಕರ್ ಪ್ರಶಸ್ತಿ ವಿಜೇತನದೇ ಮುನ್ನುಡಿ. ಆ ಮೂಲಕ ತಮ್ಮ ಗುರು ಬಗ್ಗೆ ರೆಹಮಾನ್ ಹೃದಯಸ್ಪರ್ಶಿಯಾಗಿ ಮೆಲುಕು ಹಾಕಿರುವುದು ಇಲ್ಲಿದೆ.

ನಾನು ನನ್ನ ಹದಿವಯದಲ್ಲಿ(1980ರ ದಶಕದಲ್ಲಿ) ಹಾಲಿವುಡ್ಡಿನತ್ತ ಬೆರಗುಗಣ್ಣು ಬೀರುತ್ತ ಬೆಳೆದೆ. ಡೇವಿಡ್ ಲೀನ್, ಸ್ಟೀವನ್ ಸ್ಪೀಲ್ಬರ್ಗ್, ರಿಡ್ಲೀ ಸ್ಕಾಟ್ ಮತ್ತು ಆ ದರ್ಜೆಯ ಚಿತ್ರ ನಿರ್ದೇಶಕರು. ಆದರೆ, ನಾನು ಮಣಿರತ್ನಂ ಚಿತ್ರಗಳನ್ನು ನೋಡಲಾರಂಭಿಸಿದಂತೆ ನನ್ನ ನಿಷ್ಠೆ ಬದಲಾಯಿತು. ಈ ಮನುಷ್ಯ ನನ್ನದೇ ಸಂಸ್ಕೃತಿಯಲ್ಲಿ ಬೇರು ಬಿಟ್ಟು ಸೂಕ್ಷ್ಮ ಸಂವೇದನೆಯ ಹೃದಯಸ್ಪರ್ಶಿ ಚಿತ್ರಗಳನ್ನು ತೆರೆಗೆ ತಂದರು. ಆ ಚಿತ್ರಗಳಲ್ಲಿ ಒಂದು ಬಗೆಯ ವಾಸ್ತವಾತೀತ ಗುಣವಿತ್ತು. ಅದು ನನಗೆ ಇಷ್ಟವಾಗುತ್ತಿತ್ತು! ಅದೇ ವ್ಯಕ್ತಿ- ನಾನು ದೂರದಿಂದ ಮೆಚ್ಚಿಕೊಳ್ಳುತ್ತಿದ್ದ ಅದೇ ನಿರ್ದೇಶಕ, ತನ್ನ ಮುಂದಿನ ಚಿತ್ರಕ್ಕೆ ಸಂಗೀತ ಸಂಯೋಜಿಸಬೇಕೆಂದು ನನ್ನನ್ನೇ ಕೇಳಿಕೊಂಡು ಬಂದಾಗ ‘ನನ್ನ ಜೀವನದಲ್ಲಿ ಇದಕ್ಕಿಂತ ಇನ್ನೇನು ಒಳ್ಳೆಯದಾಗಲು ಸಾಧ್ಯ’ ಎಂದು ಸಂಭ್ರಮಪಟ್ಟೆ. ಹೀಗಾಗಬಹುದೆಂದು ನಾನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ.

ಮಣಿರತ್ನಂ ‘ರೋಜಾ’ ಚಿತ್ರದ ತಯಾರಿಯಲ್ಲಿದ್ದಾಗ ನಾನು ಅವರನ್ನು ಭೇಟಿಯಾದೆ. ಅದೇ ತಾನೇ ಸೂಫಿ ವಲಯವನ್ನು ನಾನು ಕಂಡುಕೊಳ್ಳುತ್ತಿದ್ದ ಸಮಯ. ಸೋಲು, ಗೆಲುವುಗಳ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದಿದ್ದ ಕಾಲವದು. ಏಕಕಾಲದಲ್ಲಿ ನಾನು ಸುಖಿಯೂ ದುಃಖಿಯೂ ಆಗಿದ್ದೆ. ಹಾಗಾಗಿ, 1990ರಲ್ಲಿ ಅವರು ನಮ್ಮ ಪುಟ್ಟ ಸ್ಟುಡಿಯೊಗೆ ಬಂದಾಗ ನಾನು ತೀರಾ ಬೀಗಲಿಲ್ಲ. ಯಾಕೆಂದರೆ ನನ್ನ ಕೆಲಸ ಹಿಡಿಸದಿದ್ದರೆ ಅವರು ಆ ಸಂಗೀತವನ್ನು ನನ್ನ ಮುಖದ ಮೇಲೆ ಬಿಸಾಕಿ ಹೊರಟುಬಿಡಬಹುದಿತ್ತು. ಏನು ಸಂಭವಿಸಿದರೂ ಅದಕ್ಕೆ ನಾನು ಸಿದ್ಧವಾಗಿದ್ದೆ. ಆದರೆ, ನಮ್ಮ ಪ್ರಯತ್ನ ಯಶಸ್ವಿಯಾಯಿತು. ನಾವಿಬ್ಬರೂ ನಿಕಟವಾಗಿ ದುಡಿದು ಅನನ್ಯ ಸೃಜನಶೀಲ ಹುರುಪಿನೊಂದಿಗೆ ‘ರೋಜಾ’ ಸಂಗೀತವನ್ನು ರೂಪಿಸಿದೆವು.

ಅಲ್ಲಿಂದ ನಾವೆಲ್ಲರೂ ಮಣಿ ಸರ್ ಎಂದು ಕರೆಯುವ ಮಣಿರತ್ನಂ ನನಗೆ ಒಬ್ಬ ಮಹಾನ್ ಗೆಳೆಯನಾದರು. ನನ್ನೊಳಗಿನ ಮುತ್ತುಗಳನ್ನು ಅವರು ಜಾಗರೂಕವಾಗಿ ಆಯ್ದು ಮಾಲೆ ಕಟ್ಟಿದರು. ಈಗ ಮೂರು ನಾಲ್ಕು ವರ್ಷಗಳ ಹಿಂದಿನವರೆಗೂ ನಾನು ಗುರುವಿನ ಒಪ್ಪಿಗೆ ಬಯಸುವ ವಿದ್ಯಾರ್ಥಿಯಂತೆ ನನ್ನ ಪ್ರತಿಯೊಂದು ಚಿತ್ರದ ಸಂಗೀತವನ್ನೂ ಅವರಿಗೆ ಕಳಿಸಿಕೊಡುತ್ತಿದ್ದೆ. ಅವರಿಗೆ ಫೋನ್ ಮಾಡಿ ಪ್ರತಿಯೊಂದು ಹಾಡೂ ಹೇಗೆನಿಸಿತು ಎಂದು ಕೇಳುತ್ತಿದ್ದೆ. ಕೆಲವೊಮ್ಮೆ ಅವರು ತಮಾಷೆ ಮಾಡುತ್ತ ಅದ್ಭುತವಾಗಿದೆ. ಅದನ್ನು ನನಗೇ ಕೊಟ್ಟುಬಿಡಬಾರದೇಕೆ? ಎಂದು ಕೇಳುವರು. ಮತ್ತೆ ಕೆಲವೊಮ್ಮೆ ಇಲ್ಲ, ಇದು ಇನ್ನೂ ಉತ್ತಮವಾಗಬಹುದಿತ್ತು. ನೀನು ಹೀಗೆ ಮಾಡಬೇಕಿತ್ತು, ಹಾಗೆ ಮಾಡಬಹುದಿತ್ತು ಎನ್ನುವರು.

ವರ್ಷಗಳು ಉರುಳಿದಂತೆ ನನ್ನ ಕಲ್ಪನಾ ಶಕ್ತಿಯನ್ನು ಉದ್ದೀಪಿಸಿದ ಪ್ರಮುಖ ವ್ಯಕ್ತಿಗಳಲ್ಲಿ ಅವರೊಬ್ಬರು ಎಂಬುದನ್ನು ಅರಿತೆ. ಜ್ಞಾನ ಸಂಪಾದನೆ ಮಾಡುವುದು ಕಠಿಣವಲ್ಲ. ಪುಸ್ತಕಗಳನ್ನು ಓದಿ ಜ್ಞಾನ ಪಡೆಯಬಹುದು. ಇಲ್ಲವೇ ಯಾರೊಂದಿಗಾದರೂ ಕೆಲಸ ಮಾಡುತ್ತ ಅವರನ್ನು ಗಮನಿಸುತ್ತ ಕಲಿಯಬಹುದು. ಆದರೆ, ನಿಮ್ಮನ್ನು ಮುಂದಕ್ಕೆ ತಳ್ಳಿ ಇದು ಸಾಲದು. ನೀನು ಇನ್ನೂ ಮುಂದಕ್ಕೆ ಹೋಗಬಹುದು ಎಂದು ಕರೆದೊಯ್ಯುವವರು ವಿರಳ. ಮಣಿ ಸರ್ ಅಂಥವರು. ಅವರ ಸಲಹೆ ಎಂದೂ ಕೈ ಕೆಳಗಿನವನಿಗೆ ಕೊಟ್ಟ ಆದೇಶದಂತಿರಲಿಲ್ಲ. ಗೆಳೆಯನೊಬ್ಬನ ಪ್ರೋತ್ಸಾಹದ ಮಾತುಗಳಂತೆ. ಇದು ಅವರ ಬಹಳ ದೊಡ್ಡ ಗುಣ. ಅವರೆಂದೂ ಬೋಧಕನಂತೆ ನಡೆದುಕೊಂಡವರಲ್ಲ. ಸಹ ಕಾರ್ಯಕರ್ತ, ಸಹ ಸೃಷ್ಟಿಕರ್ತನಾಗಿ ನಿಮ್ಮೊಂದಿಗೆ ಕೈ ಜೋಡಿಸಿ ಹೊಸತನ್ನು ಅನ್ವೇಷಿಸುವವರು.

ನೀವು ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಜನ ನಿಮಗೆ ಎಷ್ಟೊಂದು ಗೌರವ ಕೊಡುತ್ತಾರೆ. ನೀವು ಬಯಸಿದ್ದೆಲ್ಲವನ್ನೂ ಪಡೆಯಬಹುದು. ಹಾಗೆಯೇ ಕಳೆದುಕೊಳ್ಳಲೂಬಹುದು. ನಿಮ್ಮ ಕಾಲ ಕೆಳಗಿನ ನೆಲ ಇದ್ದಕ್ಕಿದ್ದಂತೆ ಕುಸಿಯಬಹುದು. ನೀವು ಬೀಳಬಹುದು. ಆಗ ಜನ ನಿಮ್ಮನ್ನು ತೊರೆದು ಹೋಗಬಹುದು. ಇಲ್ಲಿ ನಿಮ್ಮ ನೈಜ ವ್ಯಕ್ತಿತ್ವಕ್ಕೆ ಬೆಲೆ ಕೊಡುವವರು ಬಹಳ ಕಡಿಮೆ. ಬಹಳ ಜನ ನಿಮ್ಮ ಒಂದು ಮುಖಕ್ಕೆ ಮಾತ್ರ ಬೆಲೆ ಕೊಡುತ್ತಾರೆ. ಅದೂ ಹೆಚ್ಚುಕಮ್ಮಿ ಸುಳ್ಳು ಮುಖ. ಮಣಿ ಸರ್ ವಿಷಯದಲ್ಲಿ ಹಾಗಲ್ಲ. ನೀವು ಗಲ್ಲಾಪೆಟ್ಟಿಗೆಯಲ್ಲಿ ಸೋತು ಹೋದಾಗಲೂ ಅವರು ನಿಮ್ಮ ಜೀವಾಳವೇನೆಂದು ಮರೆಯುವುದಿಲ್ಲ. ನಿಮಗೆ ಎಂದಿನಂತೆಯೇ ಗೌರವ ಕೊಡುತ್ತಾರೆ. ತಮ್ಮೊಂದಿಗೆ ಕೆಲಸ ಮಾಡುವ ನಟ, ನಟಿಯರು, ಛಾಯಾಗ್ರಾಹಕರು ಮತ್ತೆಲ್ಲರ ಜೊತೆಗೂ ಅವರ ವರ್ತನೆ ಇದೇ. ಬಹಳ ದೊಡ್ಡ ಗುಣವಿದು.

ಆ ದಿನಗಳಲ್ಲಿ ಪಶ್ಚಿಮದವರ ಒಲವು, ನಿಲುವುಗಳಿಗೂ, ನಮಗೂ ಬಹಳ ವ್ಯತ್ಯಾಸವಿತ್ತು. ಪರಿಸ್ಥಿತಿ ಈಗೀಗ ಬದಲಾಗುತ್ತಿದೆ. ಅಂತೂ ಆಗ ಯಾವುದಾದರೂ ಕ್ಷೇತ್ರದಲ್ಲಿ ಉತ್ತುಂಗ ತಲುಪಲೇಬೇಕೆಂದು ಬಹಳ ಮಂದಿ ಶ್ರಮಿಸುತ್ತಿರಲಿಲ್ಲ. ಹೇಗೋ ತಕ್ಕಮಟ್ಟಿಗಿದ್ದರೆ ಸಾಕು ಎಂಬ ಅಲ್ಪತೃಪ್ತಿ. ಆದ್ದರಿಂದಲೇ, ನನಗೆ ಮಣಿ ಸರ್ ಅಂದರೆ ಅಷ್ಟು ಗೌರವ- ಸೀಮಿತವಾದ ಇಲ್ಲಿನ ಸಂಪನ್ಮೂಲ ಮತ್ತು ತಾಂತ್ರಿಕ ಪ್ರತಿಭೆಗಳನ್ನಿಟ್ಟುಕೊಂಡೇ ಅವರು ಆ ಎತ್ತರಕ್ಕೇರಿದರು. ನಾನೊಬ್ಬ ದೈವಭಕ್ತ. ಆದರೆ, ಮಣಿ ಸರ್ ಬುದ್ಧಿಪೂರ್ವಕವಾಗಿ ನಾಸ್ತಿಕ. ನಾವು ಹೀಗೆ ಪರಸ್ಪರ ವಿರುದ್ಧ ನಂಬಿಕೆಗಳೊಂದಿಗೇ ಬದುಕಿದ್ದೇವೆ. ನನಗೇನಾದರೂ ಸಮಸ್ಯೆ ಬಂದಾಗ, ನಾನು ನಾಳೆ ಸರಿಹೋಗಬಹುದು ಎಂದು ಸಮಾಧಾನ ಮಾಡಿಕೊಳ್ಳುತ್ತೇನೆ. ಅದಕ್ಕೆ ನನ್ನ ಆಧ್ಯಾತ್ಮಿಕ ನಂಬಿಕೆಗಳು ಕಾರಣ. ಆದರೆ, ಅವರೇನು ಮಾಡಬಹುದು? ಅದೇ ನನಗೆ ಸೋಜಿಗ. ಆದರೆ, ನಮ್ಮಿಬ್ಬರನ್ನೂ ಬೆಸೆಯುವುದು ಅವರಲ್ಲಿರುವ ಹಾಗೂ ಅವರ ಚಿತ್ರಗಳಲ್ಲಿರುವ ಮಾನವೀಯತೆ. ಕೆಲವು ವೈಯಕ್ತಿಕ ದುರಂತ ಪ್ರಸಂಗಗಳು ಅವರ ವೇಗವನ್ನು ತಗ್ಗಿಸಿದ್ದವು. ಆದರೆ, ಅವರು ಅದನ್ನೆಲ್ಲ ಎದುರಿಸಿ ಗೆದ್ದು ಬಂದಿದ್ದಾರೆ. ಹಾಗಿರುವಾಗ ಅವರನ್ನು ನಾನು ವ್ಯಕ್ತಿಯಾಗಿ ಹೆಚ್ಚು ಮೆಚ್ಚುತ್ತೇನೋ, ನಿರ್ದೇಶಕರಾಗಿಯೋ ಎಂದು ಹೇಳುವುದು ಕಷ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.