ಸತ್ಯಜಿತ್ ರೇ ‘ಪಥೇರ್ ಪಾಂಚಾಲಿ’ ಮೂಲಕ ಜಾಗತಿಕ ಚಿತ್ರರಂಗದ ಗಮನ ಸೆಳೆದವರು. ಅಂದಹಾಗೆ, ಅವರ ಜನ್ಮ ಶತಮಾನೋತ್ಸವದ ವರ್ಷವೂ ಇದಾಗಿದೆ.

ಸತ್ಯಜಿತ್ ರೇ ಭಾರತೀಯ ಸಿನಿಮಾದ ಸಾರ್ವಕಾಲಿಕ ಐಕಾನ್. ರೇ ತಮ್ಮ ಮೊದಲ ಸಿನಿಮಾ ‘ಪಥೇರ್ ಪಾಂಚಾಲಿ’ಯಿಂದ (1955) ವಿಶ್ವ ಸಿನಿಮಾದ ಗಮನಸೆಳೆದ ಸಂವೇದನಾಶೀಲ ನಿರ್ದೇಶಕ. 2020 ಅವರ ಜನ್ಮ (ಜನನ: 2 ಮೇ, 1921) ಶತಮಾನೋತ್ಸವದ ವರ್ಷ. ಕೋವಿಡ್ ಹಾವಳಿ ಇಲ್ಲದಿದ್ದರೆ ದೇಶದ ಉದ್ದಗಲದಲ್ಲಿ, ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಅವರ ಸಿನಿಮಾಗಳ ಪ್ರದರ್ಶನ, ಚರ್ಚೆ, ಸಂವಾದಗಳು ನಡೆಯುತ್ತಿದ್ದವು.

‘ಪಥೇರ್ ಪಾಂಚಾಲಿ’ ತೆರೆಕಂಡಿದ್ದು 1955ರ ಆಗಸ್ಟ್ 26ರಂದು; ಅರವತ್ತೈದು ವರ್ಷಗಳ ಹಿಂದೆ. ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಬೆಸ್ಟ್ ಹ್ಯೂಮನ್ ಡಾಕ್ಯುಮೆಂಟ್’ (ವಿಶೇಷ ಜ್ಯೂರಿ) ಪ್ರಶಸ್ತಿಯನ್ನೂ ಅದು ಪಡೆಯಿತು. ಅದಕ್ಕೂ ಮೊದಲೇ ಚೇತನ್ ಆನಂದ್ (ಚಿತ್ರ: ನಿಚಾನಗರ್, 1946), ಬಿಮಲ್ ರಾಯ್ (ಚಿತ್ರ: ದೊ ಬಿಗಾ ಜಮೀನ್, 1953) ಕಾನ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದು ಸಿನಿಮಾ ಜಗತ್ತು, ಭಾರತೀಯ ಚಿತ್ರರಂಗದತ್ತ ನೋಡುವಂತೆ ಮಾಡಿದ್ದರು.

‘ಪಥೇರ್ ಪಾಂಚಾಲಿ’ಯಿಂದ ಆರಂಭವಾದ ರೇ ಸಿನಿಮಾ ಯಾನ ಮೂರೂವರೆ ದಶಕಗಳ ಕಾಲ ಮುಂದುವರಿಯಿತು. 36 ಸಿನಿಮಾಗಳನ್ನು ಅವರು ನಿರ್ದೇಶಿಸಿದರು. 32 ಅಂತರರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳು ಅವರ ಮುಡಿಗೇರಿದವು. ಆಸ್ಕರ್ ವಿಶೇಷ ಗೌರವ, ‘ಭಾರತ ರತ್ನ’ ಪ್ರಶಸ್ತಿಗಳೂ ಸಂದವು. ಇಪ್ಪತ್ತನೇ ಶತಮಾನದ ಭಾರತದ ಸರ್ವಶ್ರೇಷ್ಠ ಸಿನಿಮಾ ನಿರ್ದೇಶಕ ಎಂಬ ಹೆಗ್ಗಳಿಕೆ ಅವರದು.

‘ಪಥೇರ್ ಪಾಂಚಾಲಿ’ ಬೆಂಗಾಲಿಯ ವಿಭೂತಿಭೂಷಣ ಬಂದೋಪಾಧ್ಯಾಯರ ಕಾದಂಬರಿ ಆಧರಿಸಿದ ಸಿನಿಮಾ. ಸ್ವಾತಂತ್ರ್ಯಪೂರ್ವದ ಪಶ್ಚಿಮ ಬಂಗಾಳದ ಗ್ರಾಮೀಣ ಬದುಕನ್ನು ಕಟ್ಟಿಕೊಡುವ ಕಥನ ಇದಾಗಿದೆ. ಬಡ ಪುರೋಹಿತನೊಬ್ಬ ತನ್ನ ಕುಟುಂಬವನ್ನು ಪೋಷಿಸಲು ನಡೆಸುವ ಹೋರಾಟವನ್ನು ಕಟ್ಟಿಕೊಡುತ್ತಲೇ ಸ್ವಾತಂತ್ರ್ಯ ಪೂರ್ವದ ಪಶ್ಚಿಮ ಬಂಗಾಳದ ಸಾಮಾಜಿಕ ಪರಿಸ್ಥಿತಿಯ ಮೇಲೂ ಕಥೆ ಬೆಳಕು ಚೆಲ್ಲುತ್ತದೆ.

ಇಟಾಲಿಯನ್ ಸಿನಿಮಾಗಳ ನವ ವಾಸ್ತವತೆ ಮತ್ತು ವಿಟ್ಟೊರಿಯಾ ಡಿ ಸಿಕಾ ನಿರ್ದೇಶನದ ‘ಬೈಸಿಕಲ್ ಥೀವ್ಸ್’ ಸಿನಿಮಾ ರೇ ಅವರ ಮೇಲೆ ಗಾಢ ಪರಿಣಾಮ ಬೀರಿದ್ದವು. ಒಂದು ನಿರ್ದಿಷ್ಟ ಅಂತರದಲ್ಲಿ ನಿಂತು ವಾಸ್ತವ ಸಂಗತಿಗಳನ್ನು ಕಲಾತ್ಮಕವಾಗಿ ಹೇಳುವ ರೇ ಅವರ ಕ್ರಮ ‘ಪಥೇರ್ ಪಾಂಚಾಲಿ’ಯಲ್ಲಿ ಎದ್ದು ಕಾಣುತ್ತದೆ.

ಅರವತ್ತೈದು ವರ್ಷಗಳ ಹಿಂದೆ ಬಿಡುಗಡೆಯಾದ ಈ ಸಿನಿಮಾವನ್ನು ವರ್ತಮಾನದ ಸಿನಿಮಾಗಳ ಜತೆ ಹೋಲಿಕೆ ಮಾಡಲಾಗದು. ಈಗ ಆ ಸಿನಿಮಾ ನೋಡುವವರಿಗೆ ಅಪಾರ ತಾಳ್ಮೆ, ಸಹನೆ ಬೇಕಾಗುತ್ತದೆ. ‘ರೇ ಅವರ ಸಿನಿಮಾಗಳು ವೀಕ್ಷಕರಲ್ಲಿಮಂದಗತಿಯಲ್ಲಿ ಹರಿಯುವ ಮಹಾನದಿಯ ಅನುಭವವನ್ನು ಹುಟ್ಟಿಸುತ್ತವೆ’ ಎಂಬ ಅಕಿರಾ ಕುರಸೋವ ಅವರ ಮಾತು, ಅವರ ಉಳಿದೆಲ್ಲ ಸಿನಿಮಾಗಳಿಗಿಂತ ‘ಪಥೇರ್ ಪಾಂಚಾಲಿ’ಗೆ ಹೆಚ್ಚು ಅನ್ವಯಿಸುತ್ತದೆ.

ಈ ಸಿನಿಮಾದ್ದು ಸರಳ ಕಥೆ. ಪುರೋಹಿತ ಹರಿಹರ ರಾಯ್ (ಕನು ಬ್ಯಾನರ್ಜಿ) ಕುಟುಂಬದ ಯಜಮಾನ. ಅವನ ಪತ್ನಿ ಸರ್ಬೋಜಯ (ಕರುಣಾ ಬ್ಯಾನರ್ಜಿ). ಈ ದಂಪತಿಯ ಮಗಳು ದುರ್ಗಾ (ಉಮಾದಾಸ್ ಗುಪ್ತ), ಮಗ ಅಪೂ (ಸುಧೀರ್ ಬ್ಯಾನರ್ಜಿ). ಸರ್ಬೋಜಯಳ ಸಂಬಂಧಿ ಅಜ್ಜಿ (ಚುನಿಬಾಲ ದೇವಿ). ಈ ಐದು ಪಾತ್ರಗಳಲ್ಲದೆ ಜೀರ್ಣಾವಸ್ಥೆಯಲ್ಲಿರುವ ಅವರ ಮನೆ. ವ್ಯಂಗ್ಯದ ಮಾತುಗಳಿಂದ ತಿವಿಯುವ ನೆರೆಹೊರೆಯ ಜನರ ಸುತ್ತ ಕಥೆ ಬೆಳೆಯುತ್ತದೆ. ‘ಪಥೇರ್ ಪಾಂಚಾಲಿ’ಯು ಹರಿಹರ ರಾಯ್ ಕುಟುಂಬದ ಬಡತನದ ಬಗ್ಗೆ ಅನುಕಂಪ ಹುಟ್ಟಿಸುತ್ತಲೇ ಗಾಢ ವಿಷಾದದಲ್ಲಿ ಪರ್ಯವಸಾನಗೊಳ್ಳುತ್ತದೆ. ‘ಪಥೇರ್ ಪಾಂಚಾಲಿ’ಯಿಂದ ರೇ ಅವರಿಗೆ ವಿಶ್ವಮಾನ್ಯತೆ ಸಿಕ್ಕಿತು. ಪ್ರಶಂಸೆಯ ಜತೆಗೆ ಅವರು ಸಾಕಷ್ಟು ಟೀಕೆಗಳನ್ನೂ ಎದುರಿಸಿದರು. ದೇಶದ ಬಡತನವನ್ನು ವಿದೇಶಗಳಿಗೆ ರಫ್ತು ಮಾಡಿದ ನಿರ್ದೇಶಕ ಎಂದು ಪತ್ರಿಕೆಗಳು ಟೀಕಿಸಿದವು. ಈ ಸಿನಿಮಾದಿಂದ ವಿದೇಶಗಳಲ್ಲಿ ಭಾರತ ವರ್ಚಸ್ಸಿಗೆ ಧಕ್ಕೆಯಾಯಿತು ಎಂದು ಪಟ್ಟಭದ್ರರು ಬೊಬ್ಬೆ ಹೊಡೆದರು. ಸಿನಿಮಾಗಳು ವಾಸ್ತವ ಸ್ಥಿತಿಯನ್ನು ಬದಿಗಿಟ್ಟು ಸಿನಿಮಾಗಳೂ ದೇಶದ ಪ್ರಾಚೀನತೆ, ಸಾಂಸ್ಕೃತಿಕ ಪರಂಪರೆಗಳ ಜಾಗಟೆ ಬಾರಿಸಬೇಕು ಎಂದು ಬಯಸುವ ಮನೋಧರ್ಮ ಆಗಲೂ ಇತ್ತು.

ಸಿನಿಮಾ ನಿರ್ಮಾಣಕ್ಕೆ ಬಂಡವಾಳ ಹೂಡುವವರು ಸಿಗದೆ ಹತಾಶರಾದ ರೇ ತಾವೇ ನಿರ್ಮಾಣ ಮಾಡುವ ಸಾಹಸಕ್ಕೆ ಕೈಹಾಕಿದರು. ಹಣ ಹೊಂದಿಸಲು ಪತ್ನಿಯ ಒಡವೆಗಳನ್ನು ಮಾರಿದರು. ತಮ್ಮ ವಿಮಾ ಪಾಲಿಸಿಗಳನ್ನು ಒತ್ತೆ ಇಟ್ಟರು. ಅಷ್ಟಾದರೂ ಹಣ ಸಾಕಾಗಲಿಲ್ಲ. ಪಶ್ಚಿಮ ಬಂಗಾಳದ ಅಂದಿನ ಮುಖ್ಯಮಂತ್ರಿ ಡಾ.ಬಿ.ಸಿ.ರಾಯ್ ಅವರ ಆಸಕ್ತಿಯಿಂದಾಗಿ ರೇ ಅವರಿಗೆ ಸರ್ಕಾರದ ನೆರವು ಸಿಕ್ಕಿ ಅವರ ಕನಸು ಸಾಕಾರವಾಯಿತು.

ಕೋಲ್ಕತ್ತ ಹೊರವಲಯದ ಗ್ರಾಮೀಣ ಪರಿಸರದಲ್ಲಿ ಸೆಟ್ ಹಾಕಿ ರೇ ಚಿತ್ರೀಕರಣ ಮಾಡಿದರು. 2.05 ತಾಸಿನ ‘ಪಥೇರ್ ಪಾಂಚಾಲಿ’ ಬಿಡುಗಡೆಯಾದ ಮೊದಲ ಎರಡು ವಾರ ಜನರ ಪ್ರತಿಕ್ರಿಯೆ ಅಷ್ಟೇನೂ ಉತ್ತಮ ಆಗಿರಲಿಲ್ಲ. ಮೂರನೆ ವಾರ ಸಿನಿಮಾ ನೋಡಿದವರ ಪ್ರಶಂಸೆಯ ಮಾತುಗಳಿಗೆ ಪ್ರಚಾರ ಸಿಕ್ಕಿ, ಜನ ಚಿತ್ರಮಂದಿರಗಳತ್ತ ನುಗ್ಗಿ ಬಂದರು. ಆರು ವಾರಗಳು ಸತತವಾಗಿ ಒಂದು ಚಿತ್ರಮಂದಿರದಲ್ಲಿ, ಆನಂತರ ಏಳು ವಾರಗಳು ಇನ್ನೊಂದು ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿತು. ಚಿತ್ರಕ್ಕೆ ₹ 1.5 ಲಕ್ಷ ವೆಚ್ಚವಾಗಿತ್ತು.

ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಚಿತ್ರ ನೆಹರೂ ಅವರಿಗೂ ಇಷ್ಟವಾಯಿತು. ಅವರ ಆಸಕ್ತಿಯಿಂದಾಗಿ ಕಾನ್ ಚಿತ್ರೋತ್ಸವಕ್ಕೆ ಪ್ರವೇಶ ಪಡೆಯಿತು.

ಚಿತ್ರೋತ್ಸವದಲ್ಲಿ ‘ಪಥೇರ್ ಪಾಂಚಾಲಿ’ ಪ್ರದರ್ಶನಕ್ಕೆ ಸಿಕ್ಕ ವೇಳೆ ನಡುರಾತ್ರಿ. ಸಿನಿಮಾ ಪ್ರತಿನಿಧಿಗಳಿಗೆ ಇಷ್ಟವಾಯಿತು. ಆದರೆ, ಐವರು ಜ್ಯೂರಿಗಳ ಪೈಕಿ ಇಬ್ಬರು ಮಾತ್ರ ಚಿತ್ರ ವೀಕ್ಷಣೆಗೆ ಬಂದಿದ್ದರು. ಎರಡನೇ ಪ್ರದರ್ಶನದಲ್ಲಿ ಎಲ್ಲ ಐವರು ಜ್ಯೂರಿಗಳು ನೋಡಿದರು. ಚಿತ್ರಕ್ಕೆ ವಿಶೇಷ ಜ್ಯೂರಿ ಪ್ರಶಸ್ತಿ ನೀಡುವ ನಿರ್ಧಾರ ಪ್ರಕಟಿಸಿದರು.

‘ಪಥೇರ್ ಪಾಂಚಾಲಿ’ಯ ಮುಂದಿನ ಭಾಗ ವಿಭೂತಿಭೂಷಣರ ಕಾದಂಬರಿ ‘ಅಪರಾಜಿತೋ’ (1956), ಅದರ ಮುಂದಿನ ಭಾಗ ‘ಅಪೂ ಸಂಸಾರ್’ (1959, ಕಥೆ ರೇ ಅವರದು) ಹೆಸರಿನಲ್ಲಿ ನಿರ್ಮಿಸಿದರು. ಈ ಮೂರು ಚಿತ್ರಗಳು ಅಪೂ ತ್ರಿವಳಿಗಳೆಂದೇ ಹೆಸರು ಪಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.