ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಟಿ ತೇಜು ಬೆಳವಾಡಿ ಸಂದರ್ಶನ | ಸಿನಿಮಾದಲ್ಲೇ ಮುಂದುವರಿಯುವ ಇಚ್ಛೆ

Published : 8 ನವೆಂಬರ್ 2024, 0:40 IST
Last Updated : 8 ನವೆಂಬರ್ 2024, 0:40 IST
ಫಾಲೋ ಮಾಡಿ
Comments
ಪ್ರ

ರಂಗಭೂಮಿಯಿಂದ ಸಿನಿಮಾದತ್ತ ಹೆಜ್ಜೆ ಇಟ್ಟವರು ನೀವು. ಈ ಪಯಣ ಹೇಗಿದೆ?

ಕಾಲೇಜಿನಲ್ಲಿದ್ದಾಗಲೇ ನಾನು ರಂಗಭೂಮಿಯಿಂದ ಸಿನಿಮಾಗೆ ಹೆಜ್ಜೆ ಇಟ್ಟಿದ್ದೆ. 2016ರಲ್ಲಿ ಪ್ರಕಾಶ್‌ ರಾಜ್‌ ಅವರ ‘ಇದೊಳ್ಳೆ ರಾಮಾಯಣ’ ಸಿನಿಮಾ ಮೂಲಕ ಬೆಳ್ಳಿತೆರೆ ಪ್ರವೇಶಿಸಿದೆ. ಅಲ್ಲಿ ನನ್ನ ಅಜ್ಜಿಯ ಪಾತ್ರವನ್ನು ನನ್ನಜ್ಜಿ ಭಾರ್ಗವಿ, ಅಮ್ಮನ ಪಾತ್ರವನ್ನು ಅತ್ತೆ ಸುಧಾ ಬೆಳವಾಡಿ ಮಾಡಿದ್ದರು. ಹೀಗಾಗಿ ನಾನು ಸಿನಿಮಾ ಮಾಡುತ್ತಿದ್ದೇನೆ ಎಂದು ಅನಿಸಿಯೇ ಇರಲಿಲ್ಲ. ಅದಾದ ಬಳಿಕ ‘ಗಂಟುಮೂಟೆ’ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದೆ. ಇವೆಲ್ಲದರ ನಡುವೆ ನಾನು ನಾಟಕಗಳನ್ನು ಮಾಡುತ್ತಲೇ ಇದ್ದೆ. 2018–2020ರವರೆಗೆ ರಂಗಶಂಕರದಲ್ಲಿ ತಿಂಗಳಿಗೆ ಎರಡು ನಾಟಕ ಪ್ರದರ್ಶನವನ್ನಂತೂ ಮಾಡಿದ್ದೇನೆ. ನಾಟಕದ ನಂಟು ಇನ್ನೂ ಬಿಟ್ಟಿಲ್ಲ. ‘ಲಾಫಿಂಗ್‌ ಬುದ್ಧ’ದಲ್ಲಿ ಪ್ರಮೋದ್‌ ಶೆಟ್ಟಿ ಅವರೂ ರಂಗಭೂಮಿ ಹಿನ್ನೆಲೆಯವರು, ‘ಮರ್ಯಾದೆ ಪ್ರಶ್ನೆ’ ಸಿನಿಮಾದ ನಿರ್ದೇಶಕರೂ ರಂಗಭೂಮಿಯಿಂದಲೇ ಬಂದವರು. ರಿಹರ್ಸಲ್‌ ಮೂಲಕವೇ ಈ ಸಿನಿಮಾಗಳನ್ನು ಮಾಡಿದ್ದೇವೆ. ನಾಟಕ–ಸಿನಿಮಾ ಎನ್ನುವ ಹಾದಿಯಲ್ಲಿ ಒಟ್ಟಿಗೇ ಹೆಜ್ಜೆ ಇಡುತ್ತಿದ್ದೇನೆ. 

ಪ್ರ

ನೀವು ನಟನೆಯತ್ತ ಹೆಜ್ಜೆ ಇಡುವುದು ಪ್ರಕಾಶ್‌ ಬೆಳವಾಡಿಯವರಿಗೆ ಇಷ್ಟವಿರಲಿಲ್ಲವಂತೆ?

ಹೌದು. ನಾನು ಸಿನಿಮಾದಲ್ಲಿ ನಟನೆ ಮಾಡುವುದು ಅಪ್ಪನಿಗೆ ಇಷ್ಟವೇ ಇರಲಿಲ್ಲ. ನಾನು ನಿರ್ದೇಶಕಿಯಾಗ
ಬೇಕು ಅಥವಾ ಸಿನಿಮಾ ಸಂಕಲನ, ಛಾಯಾಚಿತ್ರಗ್ರಹಣ ಕಲಿಯಬೇಕು ಎಂಬ ಆಗ್ರಹ ಅವರದ್ದಾಗಿತ್ತು. ಆದರೆ ನನಗೆ ಈ ತಾಂತ್ರಿಕ ಕ್ಷೇತ್ರದಲ್ಲಿ ಯಾವ ಆಸಕ್ತಿಯೂ ಇರಲಿಲ್ಲ. ನಾಟಕಗಳನ್ನು  ನಿರ್ದೇಶಿಸಿದ್ದೇನೆ. ನಾಟಕಗಳಲ್ಲಿ ನಟಿಸುವುದಕ್ಕೆ ಅಪ್ಪನ ಪ್ರೋತ್ಸಾಹ ಈಗಲೂ ಇದೆ. ಅಪ್ಪ ಬಹಳ ಸಂಕೋಚ ವ್ಯಕ್ತಿತ್ವವುಳ್ಳವರು. ‘ಲಾಫಿಂಗ್‌ ಬುದ್ಧ’ದಲ್ಲಿ ನಾನು ಚೆನ್ನಾಗಿ ನಟಿಸಿದ್ದೇನೆ ಎಂದು ಒಂದು ಕಿರುನಗೆಯಲ್ಲಷ್ಟೇ ವ್ಯಕ್ತಪಡಿಸಿದ್ದಾರೆ. ನನ್ನ ನಟನೆ ಅವರಿಗೆ ಸಂತೃಪ್ತಿ ತಂದಿದೆ.

ಪ್ರ

ಲಾಫಿಂಗ್‌ ಬುದ್ಧ’ ನಿಮ್ಮ ಸಿನಿಪಯಣಕ್ಕೆ ತಂದ ಬದಲಾವಣೆ...

ಮೊದಲ ಬಾರಿಗೆ ರಿಷಬ್‌ ಶೆಟ್ಟಿ ಪ್ರೊಡಕ್ಷನ್‌ ಹೌಸ್‌ನಂಥ ಒಂದು ಹೆಸರಾಂತ ನಿರ್ಮಾಣ ಸಂಸ್ಥೆಯ ಜೊತೆ ಕಾರ್ಯನಿರ್ವಹಿಸಿದ್ದು ಭಿನ್ನ ಅನುಭವ. ಕೇವಲ ರಂಗಭೂಮಿಯ ಒಡನಾಟ ಹೊಂದಿದ್ದ ನನಗೆ ಮೊದಲ ಬಾರಿಗೆ ಕ್ಯಾರವಾನ್‌ನಲ್ಲಿ ಕೂತ ಅನುಭವ, ಹಿರಿಯ ಕಲಾವಿದರೊಂದಿಗೆ ಒಡನಾಡಿದ ಅನುಭವ ಮರೆಯುವಂತಿಲ್ಲ. ದೊಡ್ಡ ಸೆಟ್‌ನಲ್ಲಿ ಕೆಲಸ ಹೇಗಾಗುತ್ತದೆ ಎನ್ನುವುದನ್ನು ಕಲಿತುಕೊಂಡೆ. ನಟನೆಯ ವಿಚಾರಕ್ಕೆ ಬಂದರೆ, ನಿರ್ದೇಶಕ ಭರತ್‌ ರಾಜ್‌ ಕಣ್ಣಿನಲ್ಲೇ ನಟಿಸುವ ಪಾತ್ರವನ್ನು ಕೆತ್ತಿದ್ದರು. ನಾಟಕಗಳಲ್ಲಿದ್ದ ತೇಜು ಬೆಳವಾಡಿಗಿಂತ ಭಿನ್ನವಾದ ಒಂದು ನಟನೆಯ ತೆಗೆಸಿದರು. 

ಪ್ರ

ಸಿನಿಮಾರಂಗದಲ್ಲಿದ್ದುಕೊಂಡು ತಾಯಿಯಾಗಿರುವ ಜವಾಬ್ದಾರಿ ಹಾಗೂ ಸವಾಲುಗಳೇನು?

‘ಲಾಫಿಂಗ್‌ ಬುದ್ಧ’ ಮಾಡಿದ ಸಂದರ್ಭದಲ್ಲಿ ಭದ್ರಾವತಿಯಲ್ಲೇ ಹೆಚ್ಚಿನ ಚಿತ್ರೀಕರಣ ನಡೆದಿತ್ತು. ಅಲ್ಲಿಗೆ ನನ್ನ ತಾಯಿಯನ್ನೇ ಕರೆದುಕೊಂಡು ಹೋಗಿದ್ದೆ. ಮಗಳನ್ನು ಅವರೇ ನೋಡಿಕೊಂಡರು. ‘ಗಂಟುಮೂಟೆ’ 60 ದಿನ ಶೂಟಿಂಗ್‌ ನಡೆದಿತ್ತು. ಆಗ ಇಂತಹ ಯಾವ ಜವಾಬ್ದಾರಿಯೂ ಇರಲಿಲ್ಲ. ಇದೀಗ ಕುಟುಂಬದ ಜವಾಬ್ದಾರಿ ಇದೆ. ಹೊರಗಡೆ ಚಿತ್ರೀಕರಣ ಇದ್ದಾಗ ಕೆಲವು ಹೊಂದಾಣಿಕೆ ಮಾಡಿಕೊಂಡು ಹೋಗುವ ಸವಾಲು ಎದುರಿಗಿದೆ. 

ಪ್ರ

‘ಮರ್ಯಾದೆ ಪ್ರಶ್ನೆ’ ಸಿನಿಮಾದಲ್ಲಿನ ನಿಮ್ಮ ಪಾತ್ರದ ಬಗ್ಗೆ..

ಇದು ನನ್ನ ಐದನೇ ಸಿನಿಮಾ. ನಾನು ‘ಲಕ್ಷ್ಮೀ’ ಎಂಬ ಪಾತ್ರವನ್ನು ನಿರ್ವಹಿಸಿದ್ದೇನೆ. ಲುಲು ಮಾಲ್‌ನಲ್ಲಿ ಈ ಸಿನಿಮಾ ಶೂಟಿಂಗ್‌ ಮಾಡಿದ್ದೆವು. ನಾನು ಇದರಲ್ಲಿ ಓರ್ವ ಸೇಲ್ಸ್‌ ಗರ್ಲ್. ಮಧ್ಯಮ ವರ್ಗದಿಂದ ಬಂದ ಹೆಣ್ಣುಮಕ್ಕಳಿಗೆ ಈ ಪ್ರಸ್ತುತ ಸಂದರ್ಭದಲ್ಲಿ ಹೆಚ್ಚಿನ ಬಯಕೆಗಳು ಇಲ್ಲ. ನಾವೂ ದುಡಿಯುತ್ತಿದ್ದೇವೆ, ಮನೆಗೆ ಸಹಾಯ ಮಾಡುತ್ತೇವೆ, ಪ್ರೀತಿಸುವ ಹುಡುಗನಿಗೆ ಅಥವಾ ಅಣ್ಣನಿಗೆ ಸಹಾಯ ಮಾಡುವ ಮನಃಸ್ಥಿತಿ ಹೊಂದಿದ್ದಾರೆ. ಗಟ್ಟಿ ಸ್ವಭಾವದ ಹೆಣ್ಣು ಈ ಲಕ್ಷ್ಮೀ.

ಪ್ರ

ಹೊಸ ಪ್ರಾಜೆಕ್ಟ್‌ಗಳು...

ಸದ್ಯಕ್ಕೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಸ್ಕ್ರಿಪ್ಟ್‌ ಕೇಳುತ್ತಿದ್ದೇನೆ. ಸಿನಿಮಾದಲ್ಲೇ ಮುಂದುವರಿಯುವ ಇಚ್ಛೆ ಹೊಂದಿದ್ದೇನೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT