ಒಂದು ಕಥೆಯನ್ನು ಬೆನ್ನತ್ತಿ ಆ ಕಥೆಯಲ್ಲಿ ಬರುವ ಪಾತ್ರಗಳು, ಅವರ ಬದುಕು-ಬವಣೆ, ಸಂತಸ-ಸಲ್ಲಾಪ ಎಲ್ಲವನ್ನೂ ತೋರಿಸುವ ಮಾದರಿಯ ಸಿನಿಮಾಗಳ ಕಾಲ ಮುಗಿದು ‘ಕಥಾನಕ ಕೇಂದ್ರಿತ’ ಸಿನಿಮಾಗಳು ಬರಲು ಶುರುವಾಗಿ ಹಲವು ದಶಕಗಳು ಕಳೆದಿವೆ.

ಆದರೆ ಕನ್ನಡ ಸಿನಿಮಾ ಪ್ರಪಂಚದಲ್ಲಿ ಈ ಬಗೆಯ ‘ಕಥಾನಕ ಕೇಂದ್ರಿತ’ ಸಿನಿಮಾಗಳು ಇತ್ತೀಚೆಗೆ ಬಹಳ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿವೆ; ಅಷ್ಟೆ ಅಲ್ಲ, ಇಂಥ ಸಿನಿಮಾಗಳು ಸಿನಿಮಾಕಲೆಯ ತಂತ್ರಜ್ಞಾನವನ್ನು ಯಾವ ಕಂಜೂಸುತನವಿಲ್ಲದೆ ದುಡಿಸಿಕೊಂಡು ಕಲಾಶ್ರೀಮಂತಿಕೆಯಿಂದ ನಳನಳಿಸುತ್ತಿರುವುದು ಖುಷಿಯ ವಿಚಾರ.

ಈ ಬಗೆಯ ‘ಕಥಾನಕ ಕೇಂದ್ರಿತ’ ಸಿನಿಮಾಗಳ ಸಾಲಿನಲ್ಲಿ ಬರುವ ಸಿನಿಮಾ ಡಿ. ಸತ್ಯಪ್ರಕಾಶ್ ನಿರ್ದೇಶನದ ‘ರಾಮಾ ರಾಮಾ ರೇ...’ಕಥೆ ಮತ್ತು ಕಥಾನಕ – ನಾನು ಗುರುತಿಸುತ್ತಿರುವ ಇವೆರಡರ ನಡುವಿನ ವ್ಯತ್ಯಾಸ ಇಷ್ಟೆ: ಕಥೆ ಎಂಬುದು ಹಲವು ಕಥಾನಕಗಳನ್ನು ಒಳಗೊಂಡಿರುವ ಒಂದು ವೃಕ್ಷವಾದರೆ, ಕಥಾನಕ – ವೃಕ್ಷವೊಂದರ ಕೊಂಬೆ ಅಥವಾ ರೆಂಬೆ.

ಇಂತಹ ‘ಕಥಾನಕ ಕೇಂದ್ರಿತ’ ಸಿನಿಮಾಗಳಲ್ಲಿ ಹತ್ತು ಹಲವು ರೆಂಬೆಕೊಂಬೆಗಳು ಒಂದಕ್ಕೊಂದು, ಒಂದರೊಳಗೊಂದು ಸೇರಿಕೊಳ್ಳುತ್ತ, ಮುಖಾಮುಖಿಯಾಗುತ್ತ, ನಿಧಾನವಾಗಿ ನೋಡಿದರೆ ಒಂದೊಂದು ರೆಂಬೆಕೊಂಬೆಯ ಹಿಂದೆಯೂ ಪ್ರತ್ಯೇಕ ಮರವೇ ಇರುತ್ತದೆ!

ಆದರೆ ಆ ಮರವನ್ನು ಕಾಣಿಸುವುದು ಇವುಗಳ ಉದ್ದೇಶವಲ್ಲ; ಬದಲಿಗೆ ರೆಂಬೆಕೊಂಬೆಗಳ ಮೂಲಕ ಅವುಗಳ ಮೂಲ ಮರವನ್ನು ಪ್ರೇಕ್ಷಕನೇ ಊಹಿಸಿಕೊಳ್ಳುವತ್ತ ಇವು ಪ್ರೇರೇಪಿಸುತ್ತವೆ; ಅಥವಾ ಅವನ ಕಲ್ಪನೆಗೆ ಬಿಟ್ಟುಬಿಡುತ್ತವೆ.

ಒಂದು ಕಡೆ ಮರಣದಂಡನೆಗೆ ಈಡಾಗಿರುವ ಕೈದಿಯೊಬ್ಬ ಜೈಲಿನಿಂದ ತಪ್ಪಿಸಿಕೊಂಡು ಓಡಿಬಂದು ಅಲೆಯುತ್ತಿದ್ದಾನೆ, ಇನ್ನೊಂದು ಕಡೆ ಪ್ರೇಮಿಗಳು ತಮ್ಮ ಮನೆ, ಊರು, ಜಾತಿಗಳಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದಾರೆ; ಎರಡೂ ಮನೆಯವರು ಅವರ ಬೆನ್ನಟ್ಟಿದ್ದಾರೆ.

ಮತ್ತೊಂದು ಕಡೆ ಎಷ್ಟೋ ದಿನಗಳ ನಂತರ ತನ್ನ ಜೀಪನ್ನು ಹೊರತೆರೆದು ಯಾವುದೋ ಕೆಲಸಕ್ಕೆ ಹೊರಟಿರುವ ಮೂರನೆಯ ಪಾತ್ರವಾದ ರಾಮಣ್ಣನ ಜೀಪಿನಲ್ಲಿ ಮೇಲಿನ ಎರಡೂ ಪಾತ್ರಗಳು ಬಂದು ಸೇರುತ್ತವೆ. ಇಲ್ಲಿಂದ ಈ ಮೂರೂ ಕಥಾನಕಗಳ ಪಾತ್ರಗಳ ಮೂಲಕ ಅವುಗಳ ಮೂಲಕಥೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ.

ಈ ನಡುವೆ ನಾಲ್ಕನೆಯ ಕಥಾನಕದ ಪಾತ್ರಗಳಾದ ಬಸುರಿ ಹೆಂಗಸು ಹಾಗೂ ಮುದುಕಿಯ ಪಾತ್ರಗಳು ಬಂದು ಸೇರುತ್ತವೆ. ಈ ದೃಷ್ಟಿಯಿಂದ ಚಿತ್ರಕಥೆಯನ್ನು ಬಹಳ ಸೊಗಸಾಗಿ ಹೆಣೆಯಲಾಗಿದೆ. (2006ರಲ್ಲಿ ಬಿಡುಗಡೆಯಾದ ಮೆಕ್ಸಿಕನ್ ನಿರ್ದೇಶಕ ಅಲೆಕ್ಸಾಂಡ್ರೋ ಗೊಂಜಾಲೋನ ‘ಬೆಬಲ್’ ಸಿನಿಮಾದ ದಟ್ಟ ಪ್ರಭಾವ ಇದರ ಮೇಲೆ ಇಲ್ಲದೆ ಇಲ್ಲ.)

ವೈನೋದಿಕ–ವಿಡಂಬನಾತ್ಮಕವಾಗಿ ಶುರುವಾಗುವ ದೃಶ್ಯಗಳು ಬರುಬರುತ್ತ ಸಂಘರ್ಷಕ್ಕೆ ಈಡು ಮಾಡುತ್ತ ಸಾಗುತ್ತವೆ. ಈ ಹಂತದಲ್ಲಿ ಸಂಭಾಷಣೆಗಳು ಹಾಗೂ ಸಂಗೀತ ಬಹಳ ಪೂರಕವಾಗಿ ಕೆಲಸ ಮಾಡಿವೆ.

ಹುಲಿ–ಜಿಂಕೆ, ಆರಂಭ–ಮುಗಿತಾಯ, ಹುಟ್ಟು–ಸಾವು, ಮುಗ್ಧತೆ–ಕ್ರೌರ್ಯ, ಸರಿ–ತಪ್ಪು, ಒಳಿತು–ಕೆಡುಕು, ಹೀಗೆ ಹಲವು ವೈರುಧ್ಯಗಳನ್ನು ಸಿನಿಮಾ ಮುಖಾಮುಖಿಯಾಗಿಸುವ ಪ್ರಯತ್ನವನ್ನು ಮಾಡುತ್ತದೆ. ಎಂದೂ ಮುಗಿಯದ ರಸ್ತೆಗಳು, ನಿರ್ಜೀವ ಜೀಪು, ಕುಣಿಕೆಯ ಹಗ್ಗ ತೊಟ್ಟಿಲಾಗುವ ರೂಪಕ – ಹೀಗೆ ಎಲ್ಲ ರೂಪಕಗಳೂ ತಕ್ಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿವೆ.

ಆದರೆ ಇವೆಲ್ಲವೂ ಸಿನಿಮಾ ನೋಡುವಾಗ ಪ್ರೇಕ್ಷಕನೊಬ್ಬನ ಒಳಗೆ ಘಟಿಸುವ ಆಸ್ವಾದನೆಯ ರೂಪದಲ್ಲಿ ಸಾವಯವಗೊಂಡಿದೆಯೇ? ಎಂದು ಪ್ರಾಮಾಣಿಕವಾಗಿ ನೋಡಿಕೊಳ್ಳುವುದು ಒಳ್ಳೆಯದು.

ರೋಗಿಯೊಬ್ಬ ವೈದ್ಯನ ಬಳಿ ಬಂದಿದ್ದಾನೆ. ರೋಗಿಗೂ ಗೊತ್ತು – ಈಗ ವೈದ್ಯ ಸೂಜಿ ಚುಚ್ಚಲಿದ್ದಾನೆ ಎಂದು; ಹಾಗೆಯೇ ವೈದ್ಯನಿಗೂ ಗೊತ್ತು – ಈಗ ತಾನು ಸಿದ್ಧಗೊಳಿಸುತ್ತಿರುವ ಸೂಜಿಯನ್ನು ರೋಗಿಗೆ ಚುಚ್ಚಲೇಬೇಕು ಎಂದು.

ಆದರೆ ಒಬ್ಬ ಒಳ್ಳೆಯ, ನುರಿತ ವೈದ್ಯ ಹೇಗಿರುತ್ತಾನಪ್ಪಾ ಅಂದರೆ ರೋಗಿಯ ಜೊತೆ ಹರಟುತ್ತ ಹರಟುತ್ತಾ ಅವನಿಗೆ ಗೊತ್ತೇ ಆಗದಂತೆ, ನೋವು ತಿಳಿಯದಂತೆ ನಾಜೂಕಾಗಿ ತನ್ನ ಕೆಲಸ ಮುಗಿಸಿಬಿಟ್ಟಿರುತ್ತಾನೆ!

ಇದು ನಾಟಕ–ಸಿನಿಮಾ ಕಲಾಪ್ರಕಾರಗಳಿಗೂ ಅನ್ವಯವಾಗುತ್ತದೆ. ಸಿನಿಮಾದಲ್ಲಿ ಕೊಡುವ ಸಮಾಜಮುಖೀ ಸಂದೇಶಗಳು ಪ್ರೇಕ್ಷಕನಿಗೆ ಉಪದೇಶವಾಗದ ಹಾಗೆ, ಅಥವಾ ಚರ್ವಿತಚರ್ವಣವಾಗದ ಹಾಗೆ ಅವನ ಮೈಮರೆಸಿ ಅವನಿಗೇ ತಿಳಿಯದಂತೆ ತನ್ನ ಸೂಜಿಯಲ್ಲಿನ ‘ರಸೌಷಧ’ವನ್ನು ದಾಟಿಸಬೇಕಾದ ಸವಾಲು ಎಲ್ಲ ನಿರ್ದೇಶಕನಿಗೂ ಇದ್ದದ್ದೇ.

ಈ ಹಿನ್ನೆಲೆಯಲ್ಲಿ ದ್ವಿತೀಯಾರ್ಧದ ಚಿತ್ರಕತೆ ಇನ್ನೂ ಬಿಗುವಾಗಬಹುದಿತ್ತು. ಸಿನಿಮಾದ ಕಡೆಯ ಭಾಗವನ್ನಂತೂ ಹೆಚ್ಚು ಮೆಲ್ಲೋ–ಡ್ರಾಮಾ ಮಾಡಲಾಗಿದೆ. ಸಿನಿಮಾ ಇನ್ನೇನು ಈಗ ಮುಗಿಯಿತು ಆಗ ಮುಗಿಯಿತು ಎಂದು ನೋಡುತ್ತಿದ್ದರೂ ಹೊಸಹೊಸ ಮುಗಿತಾಯಗಳು ಒಂದರ ಹಿಂದೊಂದರಂತೆ ಬರುತ್ತವೆ.

ಇವೆಲ್ಲವೂ ಕಥಾಚೌಕಟ್ಟಿನಲ್ಲಿ ತಾನೇತಾನಾಗಿ ಸಾವಯವಗೊಂಡು ಹೊಮ್ಮಿದ್ದರೆ ಸಿನಿಮಾಗೆ ಇನ್ನೂ ಹೆಚ್ಚು ತೂಕ ಬರುತ್ತಿತ್ತು; ಆದರೆ ಇವೆಲ್ಲವನ್ನೂ ಹೊರಗಿನಿಂದ ಸೇರಿಸಿದಂತಿದೆ.

ಉದಾಹರಣೆಗೆ, ಆ ಮುದುಕಿಯು ಆಡುವ ಮಾತುಗಳು, ಕುಣಿಕೆಯ ಹಗ್ಗದಲ್ಲಿ ಮಗುವಿನ ಜೋಳಿಗೆ ಕಟ್ಟುವಂತೆ ಮಾತಿನಲ್ಲಿ ಹೇಳಿಸುವುದು, ವೇಷಧಾರಿಗಳು ಸಿನಿಮಾ ಮುಗಿತಾಯದ ಹಂತದಲ್ಲಿ ಬಂದು ಬೇಕೆಂದೇ ಅರ್ಜುನನ ಕರ್ತವ್ಯಪ್ರಜ್ಞೆಯನ್ನು ಎಚ್ಚರಿಸುವ ಕೃಷ್ಣನ ಗೀತೋಪದೇಶದ ಹಾಡು ಹಾಡುವುದು – ಹೀಗೆ, ಇಂಥ ಮುಂತಾದವುಗಳು ಸಿನಿಮಾ ಲ್ಯಾಗ್ ಎನಿಸುವಂತೆ ಮಾಡುತ್ತವೆ.

ಯುವಪ್ರೇಮಿಗಳಾಗಿ ನಟಿಸಿರುವ ಧರ್ಮಣ್ಣ ಕಡೂರು ಮತ್ತು ಬಿಂಬಶ್ರೀ ನೀನಾಸಮ್, ಮಿಲಿಟರಿ ಅಧಿಕಾರಿಯಾಗಿ ನಟಿಸಿರುವ ಶ್ರೀಧರ್ ಹಾಗೂ ಕೆಲವು ಹಳ್ಳಿಗರ ಅಭಿನಯದಲ್ಲಿನ ಸಹಜತೆ ಮಿಕ್ಕ ಪಾತ್ರಗಳಲ್ಲಿ ಕಾಣಲಿಲ್ಲ. ಹಿನ್ನೆಲೆ ಸಂಗೀತ ಇನ್ನೂ ಹೆಚ್ಚು ಸೂಕ್ಷ್ಮತೆ ಹಾಗೂ ಘನತೆಯನ್ನು ಕಾಯ್ದುಕೊಳ್ಳಬಹುದಿತ್ತು.

ಕಥಾನಕದ ಕಂಟೆಂಟಿನ ಆಯ್ಕೆಯಲ್ಲಿ ತೋರಿದ ಧೈರ್ಯವನ್ನು ನಿರ್ದೇಶಕರು ಆಯಾ ನೆಲದ ಭಾಷೆಯಲ್ಲೂ ತೋರಿದ್ದರೆ ಬಹುಶಃ ಸಿನಿಮಾ ಇನ್ನೂ ಒಳ್ಳೆಯ ಕೃತಿಯಾಗುತ್ತಿತ್ತು.

ವಿಜಯಪುರದ ಬರಡು ಹಳ್ಳಿಯ ಮನೆ, ರಸ್ತೆಗಳಲ್ಲಿನ ಪಾತ್ರಗಳು ಮಾಮೂಲಿ ಸಪಾಟು ಕನ್ನಡ ಮಾತನಾಡುವುದು (ಅಥವಾ ಎಫ್‍ಎಮ್ ಕನ್ನಡ) ದುರಂತ. ಕನ್ನಡ ಸಿನಿಮಾರಂಗದ ಮಾತೃಭಾಷೆ ಮಂಡ್ಯ ಭಾಷೆಯಾದರೆ; ಆಡಳಿತ ಭಾಷೆ ಎಫ್‍ಎಮ್ ಕನ್ನಡ! ಇಂಥವನ್ನು ಇಂಥಾ ಸಿನಿಮಾಗಳಲ್ಲೇ ಮೀರಲು ಸಾಧ್ಯವಾಗದೇ ಹೋದರೆ ದರ್ಶನ್–ಸುದೀಪ್ ಸಿನಿಮಾಗಳಲ್ಲಿ ಎಂದಾದರೂ ಮೀರಲು ಸಾಧ್ಯವೇ?

‘ರಾಮಾ ರಾಮಾ ರೇ...’ ಎಂಬ ಕನ್ನಡದ್ದೋ ಅಲ್ಲವೋ ತಿಳಿಯದಂತಿರುವ ವಿಚಿತ್ರ ಶೀರ್ಷಿಕೆಗೂ ಸಿನಿಮಾದ ಕಂಟೆಂಟಿಗೂ ಯಾವ ಸಂಬಂಧವೂ ಇಲ್ಲ. ಇದಕ್ಕಿಂತ ಒಳ್ಳೆಯ ಸೂಕ್ತ ಶೀರ್ಷಿಕೆಯನ್ನು ಹುಡುಕಬಹುದಿತ್ತು.

‘ಫೇಸ್‌ಬುಕ್’ನಲ್ಲಿ ಹರಿದಾಡುತ್ತಿದ್ದ ಟ್ರೇಲರ್‌ಗಳನ್ನು ನೋಡಿ ಇನ್ನೂ ದೊಡ್ಡದನ್ನು ನಿರೀಕ್ಷಿಸಿದ್ದ ನನಗೆ ಈ ಎಲ್ಲಾ ಅಂಶಗಳು ದೊಡ್ಡ ಸಿನಿಮಾ ಆಗಬಹುದಾದ ಸಾಧ್ಯತೆಯಿದ್ದ ‘ರಾಮಾರೇ’ಯನ್ನು ಸಣ್ಣದು ಮಾಡಿದೆ ಎನಿಸಿತು.

ಆದರೆ ಇವು ಯಾವುವೂ ಚಿತ್ರಮಂದಿರಕ್ಕೆ ತೆರಳಿ ಸಿನಿಮಾವನ್ನು ನೋಡದೆ ಇರಲಿಕ್ಕೆ ಕಾರಣವಲ್ಲ. ನಿರ್ದೇಶಕ ಸತ್ಯಪ್ರಕಾಶ್‌ಗೆ ನಿಜವಾಗಿಯೂ ಇವೆಲ್ಲವನ್ನೂ ಮೀರಿ ಇದಕ್ಕಿಂತ ಉತ್ತಮವಾದ ಸಿನಿಮಾ ಮಾಡುವ ಶಕ್ತಿ ಖಂಡಿತಾ ಇದೆ.

ದೊಡ್ಡ ದೊಡ್ಡ ಸ್ಟಾರುಗಳು, ನಿರ್ದೇಶಕರು, ಬಹುಭಾಷಾ ನಟರು ಎಲ್ಲರೂ ಅಕ್ಕಪಕ್ಕದ ಭಾಷೆಯಿಂದ ಲಕ್ಷಾಂತರ ಹಣಸುರಿದು ತಂದು ರೀಮೇಕು ಮಾಡಿ ಗಲ್ಲಾಪೆಟ್ಟಿಗೆ ತುಂಬಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ– ಹೊಸ ನಿರ್ದೇಶಕರು, ಹೊಸ ನಿರ್ಮಾಪಕರು, ಹೊಸ ತಂಡಗಳು, ತಮ್ಮದೇ ಸ್ವಂತ ಕಥೆಗೆ ಜೀವ ತುಂಬಲು ಯತ್ನಿಸುತ್ತಿರುವ ಈ ಕ್ರಿಯೆ ಬಹಳ ದೊಡ್ಡದು ಮತ್ತು ಮುಖ್ಯವಾದದ್ದು ಎಂದು ಭಾವಿಸಿದ್ದೇನೆ.

ಹಾಗಂತ ಕುರುಡು ಕನ್ನಡ ಅಭಿಮಾನದಿಂದ, ಇದು ಸ್ವಮೇಕ್ ಎಂಬ ಏಕೈಕ ಕಾರಣದಿಂದ, ಮಾಡಿದ್ದೆಲ್ಲ ಶ್ರೇಷ್ಠವಾದದ್ದು ಎಂದು ಕೊಂಡಾಡಬೇಕಿಲ್ಲ.

ನಿಜವಾಗಿಯೂ ನೂರು ರೀಮೇಕ್ ಚಿತ್ರಗಳನ್ನು ಮಾಡಿ ಕೋಟಿ ಕೋಟಿ ವ್ಯವಹಾರಗಳನ್ನು ಮಾಡಿ ಗಲ್ಲಾಪೆಟ್ಟಿಗೆ ತುಂಬಿಸಿಬಿಟ್ಟ ಮಾತ್ರಕ್ಕೆ ಕನ್ನಡ ಚಿತ್ರರಂಗ ಪ್ರಕಾಶಿಸುವುದಿಲ್ಲ; ಈ ನೂರರ ಬದಲು ಗಟ್ಟಿಯಾದ, ಇಡೀ ಭಾರತವೇ ಒಮ್ಮೆ ತಿರುಗಿ ನೋಡಬಲ್ಲಂಥ ಎರಡೇ ಎರಡು ಸ್ವಮೇಕ್ ಚಿತ್ರಗಳು ಕನ್ನಡ ಚಿತ್ರರಂಗವನ್ನು ಸತ್ತ್ವಯುತವಾಗಿ ಒಳಗಿನಿಂದ ಗಟ್ಟಿಯಾಗುವಂತೆ ಮಾಡಬಲ್ಲವು.

ಒಂದು ಸ್ವಮೇಕ್ ಚಿತ್ರದ ಗೆಲುವು ಕನ್ನಡ ಚಿತ್ರರಂಗದ ಸಾತ್ತ್ವಿಕ, ಹಾಗೂ ಸೃಜನಶೀಲ ಆಯುಸ್ಸನ್ನು ಹೆಚ್ಚುಮಾಡುತ್ತದೆ. ಈ ಕಾರಣಕ್ಕಾಗಿಯಾದರೂ ಇಂಥ ವಿಭಿನ್ನ ಪ್ರಯತ್ನಗಳನ್ನು ಪ್ರೇಕ್ಷಕರು ನೋಡಲೇಬೇಕಾದ ಜರೂರು ಇದೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.