ಜೈವಿಕ ಸಂಶೋಧನೆಯಿಂದ ಅವಳೊಂದು ಗಿಡವನ್ನು ಅಭಿವೃದ್ಧಿಪಡಿಸಿದ್ದಾಳೆ. ಅದರ ಹೂವು ‘ಹಲೋ’ ಎಂದೊಡನೆ ಅರಳುತ್ತದೆ. ಗಿಡವೆಂದರೆ ಬರೀ ಸಸಿಯಲ್ಲ; ಅದಕ್ಕೆ ಸಂವೇದನೆಯೂ ಇದೆ. ಹೂವು ಅರಳಿದರೆ ಪರಿಮಳ. ಅದನ್ನು ಆಘ್ರಾಣಿಸಿದರೆ ಪರಮಾನಂದ. ಹೀಗೆ ಆನಂದ ಕೊಡುವಂಥ ಗಿಡ ಅವಳ ಶೋಧನೆ.

ಒಂದು ಗಿಡವಲ್ಲ. ಪ್ರಯೋಗಾಲಯದ ತುಂಬೆಲ್ಲ ಅವೇ ಗಿಡಗಳು. ಅಲ್ಲಿ ಸಹೋದ್ಯೋಗಿಗಳ ನಡುವೆ ಮಾತು, ಪ್ರೀತಿ, ಅನುಬಂಧ, ಸಿಟ್ಟು –ಸೆಡವು, ಅನುಮಾನ... ಹೀಗೆ ಎಲ್ಲ. ಇಂಥದೊಂದು ಸಂತಸ ಉಕ್ಕಿಸಬಲ್ಲ ಗಿಡ ರೂಪಿಸಿದವಳ ಗಂಡನೀಗ ಅವಳ ಜೊತೆ ಇಲ್ಲ. ಪ್ರೌಢವಯಸ್ಕ ಮಗನೇ ಎಲ್ಲ. ಆ ಮಗನಿಗೂ ಅವಳೊಂದು ಆನಂದದ ಗಿಡ ಕೊಡುತ್ತಾಳೆ. ‘ಈ ಗಿಡವನ್ನು ನೀನು ಪ್ರೀತಿಸು. ಮಾತಾಡಿಸು. ಅದು ನಿನ್ನನ್ನು ಸಂತೋಷವಾಗಿಡುತ್ತದೆ’ ಎನ್ನುತ್ತಾಳೆ. ಆ ಮಗನೋ ಗಿಡದ ಪ್ರೀತಿಯಲ್ಲಿ ಮುಳುಗೆದ್ದು, ಅಮ್ಮನಿಗೆ ಕೊಡಬೇಕಾದ ಕಕ್ಕುಲತೆಯನ್ನೇ ಮರೆಯುವಷ್ಟು ಕ್ರೂರಿಯಾಗುತ್ತಾನೆ. ‘ಆನಂದವೀಯುವ ಗಿಡ ಯಾಕೋ ಅಲರ್ಜಿಕ್’ ಎಂದು ಸಹೋದ್ಯೋಗಿಯೊಬ್ಬಳು ಹೇಳಿದಾಗ, ಅವಳನ್ನೇ ಉಳಿದೆಲ್ಲರೂ ಅನುಮಾನಿಸುತ್ತಾರೆ. ಸಂತೋಷಕ್ಕಾಗಿ ಬೆಳೆಸಿದ ಗಿಡ ನಿಜಕ್ಕೂ ಮಾನಸೋಲ್ಲಾಸದಲ್ಲಿ ಎಬ್ಬಿಸಿದ ಅಲೆಗಳು ಎಂಥವು?

ನಾಯಕಿ ಕೊನೆಗೂ ಸಂತೋಷದ ವಿಷಯದಲ್ಲಿ ರಾಜಿಯಾಗುತ್ತಾಳೆ. ಕೃಷಿ ಮೇಳದಲ್ಲಿ ಅವಳ ಗಿಡ ಬಹುಮಾನ ಪಡೆಯುತ್ತದೆ. ಸಂತೋಷದ ಗಿಡಕ್ಕಾಗಿ ಗ್ರಾಹಕರು ಮುಗಿಬೀಳುತ್ತಾರೆ. ಗಿಡ ಕೊಟ್ಟವಳೇ ಏಕಾಂಗಿಯಾಗಿ ನಿಲ್ಲುತ್ತಾಳೆ. ಆನಂದದ ಗಿಡವ ಮೋಹಿಸುವ ಮಗ ಅಪ್ಪನಲ್ಲಿಗೆ ಹೊರಡುತ್ತಾನೆ. ಅವನು ಬದಲಾಗುತ್ತಾನೆ. ಕಚೇರಿಯ ಎಲ್ಲರೂ ಆನಂದದ ಗಿಡದ ಮೋಹದಲ್ಲಿ ಕಳೆದುಹೋಗುತ್ತಾರೆ. ಕೊನೆಗೆ ಉಳಿದದ್ದು ನಿಜವಾದ ಸಂತೋಷವಾ? ಇಂಥದೊಂದು ‘ಆನಂದ ಗಿಡದ ದೊಡ್ಡ ರೂಪಕ’ದ ಸಿನಿಮಾ ‘ಲಿಟ್ಲ್ ಜೋ’ ಗೋವಾದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧೆಯಲ್ಲಿ ಇತ್ತು.

ಆಸ್ಟ್ರಿಯಾ, ಬ್ರಿಟನ್, ಜರ್ಮನಿಯ ಸಮ್ಮಿಶ್ರ ನಿರ್ಮಾಣದ ಈ ಸಿನಿಮಾದ ನಿರ್ದೇಶಕಿ ಜೆಸಿಕಾ ಹಾಸ್ನರ್. ಫಿಲ್ಮ್ ಅಕಾಡೆಮಿ ಆಫ್ ವಿಯೆನ್ನಾದಲ್ಲಿ ಕಲಿತ ಈ ನಿರ್ದೇಶಕಿ ಮೊದಲ ಬಾರಿಗೆ ನಿರ್ದೇಶಿಸಿದ ಇಂಗ್ಲಿಷ್ ಸಿನಿಮಾ ಇದೆನ್ನುವುದು ವಿಶೇಷ.

ಆನಂದದ ಗಿಡ ಬೆಳೆಸುವ ಮುಖ್ಯಪಾತ್ರವನ್ನು ಎಮಿಲಿ ಬೀಚಮ್ ಅನುಭವಿಸಿದ್ದಾರೆ. ಅವರ ಕಣ್ಣಕೊಳವೇ ಭಾವಸಮುದ್ರ. ಮಿತವರಿತ ಮಾತು, ನಗುವಿನಲ್ಲಿ ಅಡಗಿಸಿಟ್ಟ ನೋವು, ನಿಟ್ಟುಸಿರಲ್ಲೇ ಕಷ್ಟಗಳನ್ನೆಲ್ಲ ನಿವಾಳಿಸಿ ಹಾಕುವಂಥ ದಿಟ್ಟತನ ಎಲ್ಲವನ್ನೂ ಅವರು ಕಾಡುವಂತೆ ಅಭಿನಯಿಸಿದ್ದಾರೆ. ಕಾನ್ ಚಿತ್ರೋತ್ಸವದಲ್ಲಿ ಈ ಚಿತ್ರದ ಅಭಿನಯಕ್ಕಾಗಿ ‘ಶ್ರೇಷ್ಠ ನಟಿ’ ಗೌರವವೂ ಅವರದ್ದಾಗಿದೆ. ಸಹನಟ ಬೆನ್ ವಿನ್‌ಷಾ ಕೂಡ ಎಮಿಲಿ ಅವರೊಟ್ಟಿಗೆ ಅಭಿನಯದಲ್ಲಿ ಜುಗಲ್‌ಬಂದಿಗೆ ಇಳಿದಿದ್ದಾರೆ. ಕ್ಯಾಥರಿನಾ ವೂಪರ್‌ಮನ್ ಚರ್ಮವಾದ್ಯಗಳು ಹಾಗೂ ನಾಯಿ ಬೊಗಳುವ ದನಿಯನ್ನು ಬಳಸಿ ಹಿನ್ನೆಲೆ ಸಂಗೀತ ನೀಡಿರುವುದು ಅಲ್ಲಲ್ಲಿ ಕಿರಿಕಿರಿ ಉಂಟುಮಾಡಿದರೂ, ಆ ಸಂದರ್ಭದಲ್ಲಿ ಪಾತ್ರಗಳ ಮುಖಭಾವ ಗಮನಿಸಿದರೆ ಔಚಿತ್ಯಪೂರ್ಣ ಎಂದೂ ಎನಿಸುತ್ತದೆ.

ಏಕಾಂಗಿ ಪಯಣದ ‘ಲಿಲಿಯನ್’

ಸ್ಪರ್ಧೆಯಲ್ಲಿದ್ದ ಆಸ್ಟ್ರಿಯಾದ್ದೇ ಇನ್ನೊಂದು ಸಿನಿಮಾ ‘ಲಿಲಿಯನ್’. ನ್ಯೂಯಾರ್ಕ್‌ನಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ರಷ್ಯನ್ ಯುವತಿಗೆ ತನ್ನ ವೀಸಾ ಅವಧಿ ಮುಗಿದಿರುವುದು ಗೊತ್ತಾಗುತ್ತದೆ. ಬೆನ್ನಿನ ಮೇಲೊಂದು ಸಣ್ಣ ಚೀಲ ಬಿಟ್ಟರೆ ಬೇರೇನನ್ನೂ ಸಂಪಾದಿಸದ ಆ ಯುವತಿ ರಷ್ಯಾಗೆ ನಡೆದೇ ಸಾಗತೊಡಗುತ್ತಾಳೆ. ಹಾದಿಗುಂಟ ಹವಾಮಾನ ಬದಲಾವಣೆ. ತರಹೇವಾರಿ ನೆಲ. ಆಗೀಗ ಜೋರು ಮಳೆ. ಅಲಾಸ್ಕಾದಲ್ಲಿ ಹಿಮವತ್ ಚಳಿ. ಹಿನ್ನೆಲೆಯಲ್ಲಿ ಪದೇ ಪದೇ ಕೇಳುವ ಹವಾಮಾನ ವಿವರ.

ನಾಯಕಿ ಲಿಲಿಯನ್ ದೊಡ್ಡ ಹೆದ್ದಾರಿಯ ಬದಿಯಲ್ಲಿ ನಿರ್ಭೀತಿಯಿಂದ ನಡೆದು ಸಾಗುತ್ತಾಳೆ. ಅವಳನ್ನು ನಡುವೆ ಒಬ್ಬ ಛೇಡಿಸುತ್ತಾನಾದರೂ, ಅವನಿಂದ ತಪ್ಪಿಸಿಕೊಂಡು ಬಚಾವಾಗುತ್ತಾಳೆ. ಮಳೆ ಬಂದರೆ ಮೊಬೈಲ್ ಟಾಯ್ಲೆಟ್ ಅವಳಿಗೆ ಆಸರೆ. ಹವಾಮಾನಕ್ಕೆ ತಕ್ಕಂಥ ಬಟ್ಟೆ ಬೇಕೆಂದರೆ ಸೀದಾ ಯಾವುದೋ ಮಾಲ್‌ಗೆ ಹೋಗಿ ವಸ್ತ್ರ ತೊಟ್ಟು ಮರುಮಾತೇ ಇಲ್ಲದೆ ನಡೆದು ಹೊರಬರುತ್ತಾಳೆ. ಅವಳ ಬಳಿ ಚಿಕ್ಕಾಸೂ ಇಲ್ಲ. ಬ್ರಶ್ಶು ಟೂತ್‌ಪೇಸ್ಟೂ ಇಲ್ಲದ ಭಿಡೆಯ ಬದುಕು. ಕಡಲತಟದಲ್ಲಿ ಋತುಸ್ರಾವವಾದಾಗ ಅವಳು ಒಳಉಡುಪನ್ನು ನೀರಿನಲ್ಲಿ ತೊಳೆದು, ಅಲ್ಲೇ ಒಣಗಿಹಾಕಿ, ಪಕ್ಕದಲ್ಲಿ ನಿಸೂರಾಗಿ ಕೂರಬಲ್ಲಳು. ಹೆದ್ದಾರಿಯಲ್ಲಿ ಹಾಗೆ ಸಾಗುವುದು ಆಪಾಯ ಎಂದು ಸಂಚಾರ ಪೊಲೀಸ್ ಹಿಡಿದು, ಗಡಿದಾಟಿಸಿ ಬುದ್ಧಿ ಹೇಳಿದಾಗಲೂ ಅವಳು ಮೌನಿ.

ಇಂಥದೊಂದು ಅನಿಶ್ಚಿತ ಪಯಣದ ಕಥೆಯನ್ನು ಹೇಳುವ ನಿರ್ದೇಶಕ ಆ್ಯಂಡ್ರಿಯಾಸ್ ಹೌರಾ ಅಂತರಾಳದಲ್ಲಿ ಒಬ್ಬ ಫೋಟೊಗ್ರಾಫರ್. ಹೀಗಾಗಿಯೇ ಅವರು ಚಿತ್ರವತ್ತಾದ ದೃಶ್ಯಗಳನ್ನು ಸಿನಿಮಾದ ಉದ್ದಕ್ಕೂ ಕಟ್ಟಿಕೊಟ್ಟಿದ್ದಾರೆ. ಮಾತೇ ಆಡದ ನಾಯಕಿ ಪಾತ್ರವಾಗಿ ಎದೆಗೆ ಗಾಳ ಹಾಕುತ್ತಾಳೆ. ಪ್ಯಾಟ್ರಿಕ್ಜಾ ಪ್ಲ್ಯಾನಿಕ್ ಅಂಥದೊಂದು ಸವಾಲಿನ ಪಾತ್ರದ ಪರಕಾಯ ಪ್ರವೇಶ ಮಾಡಿರುವ ರೀತಿ ಬೆರಗು ಮೂಡಿಸುತ್ತದೆ. 1920ರಲ್ಲಿ ನಡೆದ ನಿಜ ಕಥೆಯಿಂದ ಸ್ಫೂರ್ತಿ ಪಡೆದು, ಅದನ್ನು ಈ ಕಾಲಕ್ಕೆ ಅನ್ವಯಿಸಿ ದೃಶ್ಯವತ್ತಾಗಿ ಹೇಳಿರುವ ಆ್ಯಂಡ್ರಿಯಾಸ್ ಕೌಶಲಕ್ಕೆ ಚಿತ್ರದಲ್ಲಿ ದಟ್ಟ ಉದಾಹರಣೆಗಳು ಸಿಗುತ್ತವೆ. ಭೂಪಟವನ್ನು ತಲೆ ಮೇಲೆ ಹಿಡಿದು ನಡುರಸ್ತೆಯಲ್ಲಿ ನಿರುಮ್ಮಳವಾಗಿ ನಿಲ್ಲುವ ನಾಯಕಿಯ ಈ ಪಯಣ ಕಂಡು ‘ಅಬ್ಬಬ್ಬಾ’ ಎಂಬ ಉದ್ಗಾರ ಹೊರಡದಿದ್ದರೆ ಹೇಳಿ.

ತಾಯಿ... ಮಹಾತಾಯಿ

‘ಮಾಸ್ಟರ್ ಫ್ರೇಮ್ಸ್’ ವಿಭಾಗದಲ್ಲಿ ಪ್ರದರ್ಶಿತವಾದ, ಟರ್ಕಿ ಸಿನಿಮಾ ‘ಕಮಿಟ್‌ಮೆಂಟ್’ ಸೂಕ್ಷ್ಮ ಕೌಶಲಗಳಿಂದ ಕಾಡಿದ ಇನ್ನೊಂದು ಸಿನಿಮಾ.

ಹೆರಿಗೆ ರಜಾ ಮುಗಿಸಿ ಬ್ಯಾಂಕ್ ಕೆಲಸಕ್ಕೆ ಮರಳಲೇಬೇಕೆಂದು ಸಂಕಲ್ಪ ಮಾಡಿದ ಅನುಕೂಲಸ್ಥ ಹೆಣ್ಣುಮಗಳು ಸಿನಿಮಾದ ಕೇಂದ್ರ ಪಾತ್ರ. ಇಳಿವಯಸ್ಸಿನ ಕೆಲಸದವಳ ಜತೆ ತನ್ನ ಮಗು ಅನ್ಯೋನ್ಯವಾಗಿರುವುದನ್ನು ಕಂಡು ಅವಳಿಗೆ ಹೊಟ್ಟೆಕಿಚ್ಚು. ಅದಕ್ಕೇ ಒಬ್ಬ ಯುವತಿಯನ್ನು ಮಗುವಿನ ಆರೈಕೆಗೆ ಹುಡುಕುತ್ತಾಳೆ. ಮನೆಯ ಆಯಕಟ್ಟಿನ ಸ್ಥಳಗಳಲ್ಲೆಲ್ಲ ಸಿಸಿಟಿವಿ ಕ್ಯಾಮೆರಾ ಇಟ್ಟು, ಅವಳ ಚಲನವಲನಗಳನ್ನು ಬ್ಯಾಂಕ್‌ನಿಂದಲೇ ನಿಗಾ ಮಾಡುತ್ತಾಳೆ. ಆಗ ಅವಳಿಗೆ ಕಾಣುವುದು ಮಗುವಿನ ಪಾಲನೆ ಮಾಡುವ ನಿಜವಾದ ಮಹಾತಾಯಿ. ಒಂದು ಹಂತದಲ್ಲಿ ಮಗು ಅಳು ನಿಲ್ಲಿಸದೇ ಇದ್ದಾಗ ತನ್ನ ಮೊಲೆಯನ್ನೇ ಅದರ ಬಾಯಿಗಿಡುವ ಮಹಾತಾಯಿ! ಮನೆಯಲ್ಲೂ ಅವಳದ್ದೂ ಒಂದು ಪುಟ್ಟ ಮಗುವಿದೆ. ಅದನ್ನು ತನ್ನ ಅತ್ತೆಯ ಬಳಿ ಬಿಟ್ಟು ಬಂದಿದ್ದಾಳೆ ಆ ಮಹಾತಾಯಿ.

ಹೀಗೆ ಹೊಸಕಾಲದ ಮಹಿಳೆಯ ತಾಯ್ತನದ ತಲ್ಲಣಗಳನ್ನು ಅನಾವರಣಗೊಳಿಸುವ ಸಿನಿಮಾ, ಆಕೆಯ ಅಪ್ಪನೊಟ್ಟಿಗಿನ ಬಾಂಧವ್ಯ, ದೂರವಾಗಿದ್ದ ಅಕ್ಕನ ಮರುನಂಟು... ಮೊದಲಾದ ಬೇರೆ ಸೂಕ್ಷ್ಮಗಳನ್ನೂ ಮುಟ್ಟುತ್ತದೆ. ಪತಿಯ ‘ತನ್ನದೇ ಲೋಕ’ದ ಅನಾವರಣವೂ ಉಂಟು.

ಹೀಗೆ ತಾಕಲಾಟಗಳನ್ನು ಕ್ಲೋಸಪ್ ದೃಶ್ಯಗಳೆಲ್ಲೇ ಹೆಚ್ಚಾಗಿ ತುಳುಕಿಸುತ್ತಾ ಸಾಗುವ ಸಿನಿಮಾ ಕೊನೆಯಲ್ಲಿ ಅನಿರೀಕ್ಷಿತ ಬಿಂದುವಿಗೆ ತಂದು ನಿಲ್ಲಿಸುತ್ತದೆ. ಕೆಲಸದಾಕೆಯ ಗಂಡ ಸೇನೆಯವನು. ಯುದ್ಧದಲ್ಲಿ ಸತ್ತಿದ್ದಾನೆ. ಆ ಸುದ್ದಿ ಕೇಳಿ, ಈ ಮನೆಯಲ್ಲಿ ತಾನು ನೋಡಿಕೊಳ್ಳುತ್ತಿರುವ ಮಗುವನ್ನೂ ತನ್ನ ಮನೆಗೆ ತೆಗೆದುಕೊಂಡು ಹೋಗಿದ್ದಾಳೆ. ಅಲ್ಲಿಂದ ಗಂಡನ ಶವ ತರಲು ದೂರದೂರಿಗೆ ಪಯಣ. ಅವಳನ್ನು ಕೆಲಸಕ್ಕೆ ಇಟ್ಟುಕೊಂಡ ಮಹಿಳೆ ಮನೆಗೆ ಮರಳಿದ ಮೇಲೆ ಮಗುವನ್ನು ಹುಡುಕುತ್ತಾ ಕೆಲಸದವಳ ಮನೆಗೇ ಸಾಗುತ್ತಾಳೆ. ಅಲ್ಲಿ ಕೋಣೆಯಲ್ಲಿ ಎರಡೂ ಮಕ್ಕಳು ಅಕ್ಕ–ಪಕ್ಕ ಒಂದೇ ರೀತಿಯ ಬಟ್ಟೆ ತೊಟ್ಟು ಮಲಗಿರುತ್ತವೆ. ನಾಯಕಿಯ ಕಣ್ಣುಗಳಲ್ಲಿ ತೇವ. ಅದರೊಳಗೆ ಭಾವದ ಬಣ್ಣಗಳು.

ಸಿಮೀ ಕಲ್ಪನೊಗ್ಲು ಇಂಥದೊಂದು ಸೂಕ್ಷ್ಮ ವಿವರಗಳ ಸಿನಿಮಾ ನಿರ್ದೇಶಿಸಿದ್ದಾರೆ. ಜೀನೆಪ್ ಎಂಬ ಮಗುವಿನ ಪಾತ್ರಧಾರಿ ಸಿನಿಮಾದ ಹೈಲೈಟು. ಮುಖಭಾವದಲ್ಲೇ ಅದು ಹಿಡಿಯುವ ಕನ್ನಡಿ ಅದ್ಭುತ. ಕುಬ್ರಾ ಕಿಪ್ ಆಧುನಿಕ ತಾಯಿಯಾಗಿ ಕಾಡಿದರೆ, ಎಮುತ್ ಕುರ್ಟ್ ಮಹಾತಾಯಿಯಾಗಿ ಮನಸೂರೆಗೊಂಡಿದ್ದಾರೆ.

ಹೆಣ್ಣಿನ ಭಾವಲೋಕದ ಬಗೆಬಗೆಯ ತೋಟಿಗಳನ್ನು ಹೀಗೆ ಬೇರೆಯದೇ ದಾರಿಗಳಲ್ಲಿ ತೆರೆದಿಟ್ಟ ಈ ಮೂರು ಸಿನಿಮಾಗಳನ್ನು ನೋಡಿದ ಮೇಲೆ ಉಳಿಯುವ ಪ್ರಶ್ನೆ: ನಮ್ಮಲ್ಲಿ ಯಾಕೆ ಈ ರೀತಿಯ ಸಹಜ ಕಥಾವಸ್ತುಗಳನ್ನು ಇಟ್ಟುಕೊಂಡು ಹೆಣ್ಣಿನ ಪಾತ್ರಗಳನ್ನು ಸೃಷ್ಟಿಸುವುದಿಲ್ಲ ಎನ್ನುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.