ಬದುಕು ಒಂದು ಪಯಣ. ಆಗಂತುಕರಾಗಿ ಬರುವ ಕೆಲವರು, ಬದುಕಿನಲ್ಲಿ ಅಚ್ಚಳಿಯದ ನೆನಪುಗಳನ್ನು ಉಳಿಸಿಬಿಡುವ ಹಂತಗಳು ಒಂದೊಂದು ನಿಲ್ದಾಣಗಳಿದ್ದಂತೆ. ಅಂತಹ ಬದುಕು ಹಾಗೂ ಆಗಂತುಕರನ್ನು ಕೊಲಾಜ್ ಮಾದರಿಯಲ್ಲಿ ತೋರಿಸುವ ಸಿನಿಮಾ ವಿನಯ್ ಭಾರದ್ವಾಜ್ ನಿರ್ದೇಶನದ ‘ಮುಂದಿನ ನಿಲ್ದಾಣ’.

ಇದು ಸಾಫ್ಟ್ವೇರ್ ಎಂಜಿನಿಯರ್ ಪಾರ್ಥ, ಆರ್ಟ್ ಕ್ಯುರೇಟರ್ ಮೀರಾ ಶರ್ಮ ಮತ್ತು ವೈದ್ಯಕೀಯ ವಿಜ್ಞಾನ ವಿದ್ಯಾರ್ಥಿನಿ ಅಹನಾ ಕಶ್ಯಪ್ ಅವರ ಬದುಕಿನ ಕಥೆ. ಈ ಮೂವರೂ ಮಿಲೆನಿಯಲ್ಗಳನ್ನು (ಹೊಸ ಕಾಲದ ಯುವಕ ಯುವತಿಯರು) ಪ್ರತಿನಿಧಿಸುತ್ತಾರೆ. ಈ ಪಾತ್ರಗಳು ಸಾಗಿಬಂದ ಹಾದಿಯನ್ನು ಪಾರ್ಥನ ಮೂಲಕ ಅವಲೋಕನದ ಧಾಟಿಯಲ್ಲಿ ತೋರಿಸುವುದು ನಿರ್ದೇಶಕರು ಕಥೆ ಹೇಳಲು ಆಯ್ಕೆ ಮಾಡಿಕೊಂಡ ತಂತ್ರ.

ಮಿಲೆನಿಯಲ್ಗಳ ಬದುಕನ್ನು ಬಿಂಬಿಸುವ ಸಿನಿಮಾವೊಂದು ‘ಅಯನ’ ಎಂಬ ಹೆಸರಿನಲ್ಲಿ ಹಿಂದೆ ಬಂದಿತ್ತು. ಅದೇ ರೀತಿ, ಇದು ಕೂಡ ಮಿಲೆನಿಯಲ್ಗಳನ್ನೇ ಕೇಂದ್ರವಾಗಿ ಇರಿಸಿಕೊಂಡ ಸಿನಿಮಾ. ಪಾರ್ಥ ತಾನು ತೆಗೆದ ಚಿತ್ರಗಳ ಬಗ್ಗೆ ವಿವರಣೆಯನ್ನು ಯುವತಿಯೊಬ್ಬಳಿಗೆ ನೀಡಲು ಆರಂಭಿಸುವ ಮೂಲಕ ಸಿನಿಮಾ ಕಥೆ ತೆರೆದುಕೊಳ್ಳುತ್ತದೆ.

ಕಾವ್ಯಮಯ ಸುಂದರ ಬಿಡಿ ದೃಶ್ಯಗಳ ನೇಯ್ಗೆಯಂತೆ ಭಾಸವಾಗುವ ಈ ಚಿತ್ರದ ಕೇಂದ್ರದಲ್ಲಿ ಇರುವುದು, ‘ಹಿಂದಿನ ಕಹಿ, ಕಸಿವಿಸಿಗಳ ಮೂಟೆಯನ್ನು ಅಲ್ಲೇ ಬಿಟ್ಟು ಮುಂದೆ ನಡಿ, ಕಹಿಗಳನ್ನೆಲ್ಲ ಅವು ಇರುವಂತೆಯೇ ಸ್ವೀಕರಿಸಿ ಮುಂದೆ ಸಾಗು’ ಎಂಬ ಸ್ಥಾಯಿ ಸಂದೇಶ. ಕೆಲವು ಸನ್ನಿವೇಶಗಳನ್ನು ನೋಡುವಾಗ, ಸಿನಿಮಾ ಬಂಡಿ ಸಾಗುತ್ತಿದ್ದರೂ ಕಥೆ ನಿಂತಲ್ಲೇ ನಿಂತಿದೆ ಎಂದು ಅನಿಸಬಹುದು. ಬೋಧನೆಯ ಮಟ್ಟಕ್ಕೆ ಇಳಿಯದೆ, ಒಳ್ಳೆಯ ಸಂದೇಶವನ್ನು ವೀಕ್ಷಕರಿಗೆ ರವಾನಿಸುವ ಈ ಸಿನಿಮಾದಲ್ಲಿ ಕೊರತೆಯಾಗಿ ಕಾಣಿಸುವುದು ವೇಗ. ಆದರೆ, ನಿಧಾನವನ್ನು ಖುಷಿಯಾಗಿ ಸ್ವೀಕರಿಸಬಲ್ಲವರಿಗೆ ಇದು ಸಮಸ್ಯೆಯಲ್ಲ.

ಸಿನಿಮಾದ ಪ್ರಧಾನ ಪಾತ್ರಗಳಲ್ಲಿ ಕಾಣಿಸುವ ಗುಣವೊಂದನ್ನು ಉಲ್ಲೇಖಿಸಬಹುದು. ಪಾರ್ಥ, ಮೀರಾ ಮತ್ತು ಅಹನಾ ಕೈಗೊಳ್ಳುವ ತೀರ್ಮಾನಗಳು ಸರಿಯೇ, ತಪ್ಪೇ ಎಂಬುದನ್ನು ಹೇಳಲು ಆಗುವುದಿಲ್ಲ. ಆಯಾ ಸಂದರ್ಭಕ್ಕೆ ತಮಗೆ ಸರಿ ಅನಿಸಿದ ತೀರ್ಮಾನಗಳನ್ನು ಆ ಪಾತ್ರಗಳು ಕೈಗೊಳ್ಳುತ್ತವೆ. ‘ಈ ಪಾತ್ರದ ಗುಣ ಇಷ್ಟೇ’ ಎಂದು ವೀಕ್ಷಕ ತೀರ್ಮಾನಕ್ಕೆ ಬಾರದಿರಲಿ ಎಂಬಂತೆ ಸಿನಿಮಾ ಹೆಣೆಯಲಾಗಿದೆ. ಇದು ಸಿನಿಮಾದ ಶಕ್ತಿಯೂ ಹೌದು.

ಪಾರ್ಥನ (ಪ್ರವೀಣ್ ತೇಜ್) ಮುಖದಲ್ಲಿ ಭಾವನೆಗಳು ಇನ್ನಷ್ಟು ಎದ್ದು ಕಾಣುವಂತೆ ಮಾಡುವಲ್ಲಿ ನಿರ್ದೇಶಕರು ಸೋತಿದ್ದಾರೆ ಅನಿಸುತ್ತದೆ. ಆದರೆ, ಅನನ್ಯಾ (ಅಹನಾ ಪಾತ್ರ) ಅವರ ಸಹಜ ಅಭಿನಯ ಗಮನ ಸೆಳೆಯುತ್ತದೆ. ಹಾಗೆಯೇ, ರಾಧಿಕಾ (ಮೀರಾ ಪಾತ್ರ) ಅವರ ನಟನೆ ಕೂಡ! ಚಿತ್ರದಲ್ಲಿ ಎದ್ದು ಕಾಣುವ ಇನ್ನೊಂದು ಅಂಶ ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣ. ಚಿತ್ರದ ಒಂದೆರಡು ಹಾಡುಗಳನ್ನು ಕೈಬಿಡಬಹುದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.