ಬೆಂಗಳೂರಿನ ‘ರಂಗ ಶಂಕರ’ ಹವ್ಯಾಸಿ ರಂಗಭೂಮಿಗೆ ನೆಲೆಯನ್ನು ಒದಗಿಸಿದೆ. ತನ್ನ ರಚನಾತ್ಮಕ ಮತ್ತು ಸೃಜನಶೀಲ ಕೆಲಸಗಳ ಮೂಲಕ ಈಗಾಗಲೇ ಇಪ್ಪತ್ತು ವರ್ಷಗಳನ್ನು ಪೂರೈಸಿದೆ. ಹೀಗೆ ಭಾರತೀಯ ರಂಗಭೂಮಿಯಲ್ಲಿ ವಿಶಿಷ್ಟ ಸ್ಥಾನವನ್ನೂ ಪಡೆದುಕೊಂಡಿದೆ.

ಭಾರತೀಯ ರಂಗಭೂಮಿಗೆ ಬೆಂಗಳೂರಿನ ಮಹತ್ವದ ಕೊಡುಗೆ ‘ರಂಗ ಶಂಕರ’. ತನ್ನ ಕಟ್ಟುವಿಕೆ ಮತ್ತು ರಚನಾತ್ಮಕ ಕೆಲಸಗಳ ಮೂಲಕ ಇದು ರಂಗಾಸಕ್ತರ ಗಮನ ಸೆಳೆದಿದೆ.

ಕನ್ನಡ ಸಿನಿಮಾ ಮಾತ್ರವಲ್ಲದೆ, ಕರ್ನಾಟಕದ ಹಲವೆಡೆ ವಿನೂತನ ಯೋಜನೆಗಳನ್ನು ಜಾರಿಗೆ ತರುವ ಕನಸು ಕಂಡವರು ನಟ ಶಂಕರನಾಗ್. ‘ರಂಗ ಶಂಕರ’ ಶಂಕರನಾಗ್ ಅವರ ಹತ್ತು ಹಲವು ಕನಸುಗಳಲ್ಲಿ ಒಂದು. ಕನಸು ಕಾಣುವುದು ಸಹಜ. ಆದರೆ ಕಂಡ ಕನಸನ್ನು ನನಸು ಮಾಡುವುದು ಸುಲಭವಲ್ಲ. ಹವ್ಯಾಸಿ ರಂಗಭೂಮಿಗೆ ಕಾಯಕಲ್ಪ ಉದ್ದೇಶದಿಂದ ಶಂಕರನಾಗ್ ಕಂಡ ಕನಸು ಅದು. ಆಪ್ತ ಗೆಳೆಯ, ಸಂಗಾತಿ ಶಂಕರ್ ಜೊತೆ ಕಂಡ ಕನಸನ್ನು ನನಸಾಗಿಸಿದವರು ಅರುಂಧತಿ ನಾಗ್.

ಕಾರ್ನಾಡರ ‘ಅಂಜುಮಲ್ಲಿಗೆ’ ಮೂಲಕ ಕನ್ನಡ ರಂಗಭೂಮಿಗೆ ಬಂದ ಅರುಂಧತಿ, ಅದಕ್ಕೂ ಮುನ್ನ ಗುಜರಾತಿ ಮತ್ತು ಮರಾಠಿ ರಂಗದ ಮೇಲೆ ಕಾಣಿಸಿಕೊಂಡು ಅಭಿನಯಿಸಿದ್ದರು. ದೆಹಲಿಯಲ್ಲಿ ಹುಟ್ಟಿ ಮುಂಬೈನಲ್ಲಿ ಬೆಳೆದ ಅರುಂಧತಿ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ರಂಗಭೂಮಿ ಪ್ರವೇಶಿಸಿದ್ದರು. ತಿಂಗಳಿಗೆ ನಲವತ್ತಕ್ಕೂ ಹೆಚ್ಚು ರಂಗಪ್ರದರ್ಶನಗಳಲ್ಲಿ ನಟಿಸುವಷ್ಟು ಬಿಜಿಯಾಗಿದ್ದರು. ಅರುಂಧತಿ ಇಪ್ಟಾ (ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್)ದಲ್ಲಿ ಸಕ್ರಿಯವಾಗಿದ್ದ ದಿನಗಳಲ್ಲಿಯೇ ಶಂಕರ್ನಾಗ್ ಪರಿಚಯವಾಯಿತು. ರಂಗ ಚಟುವಟಿಕೆ ನಡೆಸಲು ಶಂಕರ್ನಾಗ್ ಆರಂಭಿಸಿದ ‘ಸಂಕೇತ್’ದ ನಾಟಕಗಳಲ್ಲಿ ನಟಿಸುವ ಕಾರಣಕ್ಕಾಗಿ ಅರುಂಧತಿ ಬೆಂಗಳೂರಿಗೆ ಬಂದರು. ನಂತರ ಶಂಕರ್ನಾಗ್ ಜೊತೆಯಲ್ಲಿಯೇ ನೆಲೆ ನಿಂತರು. ಅರುಂಧತಿ ಕೇವಲ ನಟಿ ಮತ್ತು ಕಲಾವಿದೆ ಮಾತ್ರ ಅಲ್ಲ, ಅವರೊಬ್ಬ ರಂಗತಜ್ಞೆ.

‘ರಂಗ ಶಂಕರ’ದ ಬಗ್ಗೆ ಬರೆಯಲು ಹೊರಟಾಗ ‘ಸಂಕೇತ್’ ಬಗ್ಗೆ ಬರೆಯದೇ ಇರಲು ಸಾಧ್ಯವೇ ಇಲ್ಲ. ಮುಂಬೈನಲ್ಲಿ ರಂಗಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಶಂಕರನಾಗ್, ಸಿನಿಮಾಕ್ಕಾಗಿ ಬೆಂಗಳೂರಿಗೆ ಬಂದರು. ಬೆಂಗಳೂರಿನಲ್ಲಿಯೂ ರಂಗಚಟುವಟಿಕೆ ನಡೆಸುವ ಉದ್ದೇಶದಿಂದ ‘ಸಂಕೇತ್’ ಆರಂಭಿಸಿದರು. ಗಿರೀಶ ಕಾರ್ನಾಡರ ‘ಅಂಜುಮಲ್ಲಿಗೆ’ ಸಂಕೇತ್ ಆಡಿದ ಮೊದಲ ನಾಟಕವಾದರೆ, ಶಂಕರನಾಗ್ ನಿರ್ದೇಶನದ ‘ನಾಗಮಂಡಲ’ ಕೊನೆಯ ನಾಟಕವಾಯಿತು. ಇವೆರಡರ ನಡುವೆ ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ಸಂಧ್ಯಾಛಾಯಾ’ ಸೇರಿದಂತೆ ಹಲವು ಪ್ರಯೋಗಗಳನ್ನು‘ಸಂಕೇತ್’ ನೀಡಿತು. ಶಂಕರ್ನಾಗ್ ನಿಧನದ ನಂತರ ಅರುಂಧತಿ ಮತ್ತು ಸುರೇಂದ್ರನಾಥ್ ಅವರು ಹಳೆಯ ನಾಟಕಗಳ ಗೊಡವೆಗೆ ಹೋಗದೆ ಹೊಸ ನಾಟಕಗಳನ್ನು ಆಡುವ ಪರಿಪಾಠ ಆರಂಭಿಸಿದರು. ‘ಶಂಕರ್ ಬದುಕಿದ್ದ ಸಂದರ್ಭದಲ್ಲಿಯೇ ಚರ್ಚಿಸಿದ್ದ ಇಬ್ಸೆನ್ನ ‘ಎನಿಮಿ ಆಫ್ ದ ಪೀಪಲ್’ ಮತ್ತು ‘ಹುಲಗೂರಿನ ಹುಲಿಯವ್ವ’ ಮಾತ್ರ ರಂಗದ ಮೇಲೆ ತರಲಾಯಿತು’ ಎನ್ನುತ್ತಾರೆ ಅರುಂಧತಿ.

‘ನಾಗಮಂಡಲ’ದ ಪ್ರದರ್ಶನ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಾಡಾಗಿತ್ತು. ಅಲ್ಲಿಯೇ ಹವ್ಯಾಸಿ ರಂಗತಂಡಗಳಿಗೆ ಅನುಕೂಲ ಆಗುವ ರೀತಿಯಲ್ಲಿ ಶಾಶ್ವತ ಲೈಟಿಂಗ್ ವ್ಯವಸ್ಥೆಗೆ ಶಂಕರ್ನಾಗ್ ಕೋರಿದ್ದರು. ಅದಕ್ಕೆ ಅನುಮತಿ ದೊರೆಯದ್ದರಿಂದ ಶಂಕರ್ನಾಗ್ ಸುಚಿತ್ರ ಫಿಲಂ ಸೊಸೈಟಿಯಲ್ಲಿಯ ಪೀರ್ ರಂಗಮಂದಿರ ಇರುವ ಕಡೆಯಲ್ಲಿ ರಂಗಚಟುವಟಿಕೆಗೆ ಮಾಡಿದ ಮನವಿಗೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರಲಿಲ್ಲ. ಈ ದಿನಗಳಲ್ಲಿಯೇ ಶಂಕರ್ನಾಗ್ ಹವ್ಯಾಸಿ ತಂಡಗಳಿಗಾಗಿಯೇ ರಂಗಭೂಮಿಯನ್ನು ರೂಪಿಸುವ ಕನಸನ್ನು ಕಂಡಿದ್ದರು. ಅದನ್ನವರು ತನ್ನ ಸಂಗಾತಿಯ ಜೊತೆಗೆ ಹಂಚಿಕೊಂಡಿದ್ದರು. ‘ಜೋಕುಮಾರಸ್ವಾಮಿ’ ಚಿತ್ರದ ಮುಹೂರ್ತಕ್ಕಾಗಿ ತೆರಳುವ ಸಂದರ್ಭದಲ್ಲಿ ನಡೆದ ರಸ್ತೆ ಅಪಘಾತದ ದುರಂತದಲ್ಲಿ ಶಂಕರ್ ಹಠಾತ್ ನಿರ್ಗಮಿಸಿದರು.

ಮುಂಬೈನಲ್ಲಿ ಇರುವ ‘ಪೃಥ್ವಿ ಥಿಯೇಟರ್’ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ನಾಟಕಕ್ಕೇ ಮೀಸಲಾದ ರಂಗಮಂದಿರ ಇರಬೇಕು ಎಂಬುದು ಶಂಕರ್ನಾಗ್ ಕಂಡ ಕನಸು. ಆ ಕನಸು ಅರುಂಧತಿ ಅವರದ್ದೂ ಆಗಿತ್ತು. ಈ ಕನಸಿನ ಹಾದಿಗುಂಟ ನಡೆದ ಅರುಂಧತಿ ಅದಕ್ಕಾಗಿ ಹತ್ತಾರು ವರ್ಷ ಕಷ್ಟ ಪಡಬೇಕಾಯಿತು. ಅರುಂಧತಿ ಅವರು ‘ರಂಗ ಶಂಕರ’ದ ಯೋಜನೆಯನ್ನು ಹಂಚಿಕೊಂಡಾಗ ಬಹುತೇಕರು ‘ಇದಾಗುವ ಮಾತಲ್ಲ’ ಎಂದೇ ಪ್ರತಿಕ್ರಿಯಿಸಿದ್ದರು. ಆದರೆ, ಅರುಂಧತಿ ಅವರು ಛಲ ಬಿಡದ ಸತತ ಪ್ರಯತ್ನದಿಂದ ಕನಸನ್ನ ನನಸಾಗಿಸಿದರು. ಈಗ ಅದೊಂದು ‘ಪವಾಡ’ದಂತೆ ಕಾಣಿಸುತ್ತದೆ.

ನಲವತ್ತೈದು ದಿನಗಳ ನಾಟಕೋತ್ಸವ ಮೂಲಕ ಆರಂಭವಾದ ರಂಗಪ್ರದರ್ಶನವು ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಅವಿರತವಾಗಿ ನಡೆದು ಬರುತ್ತಿದೆ. ಎಂಟು ಸಾವಿರ ನಾಟಕ ಪ್ರದರ್ಶನ ನಡೆದಿರುವುದು ಅಚ್ಚರಿಯ ಸಂಗತಿ ಮಾತ್ರವಲ್ಲ, ಅದೊಂದು ದಾಖಲೆ ಕೂಡ. ಹೌದು ‘ರಂಗ ಶಂಕರ’ ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಈ ಸಾಧನೆ ಮಾಡಿದೆ. ದಿನಕ್ಕೆ ಕನಿಷ್ಠ ಒಂದರಂತೆ ವರ್ಷಕ್ಕೆ 400 ಪ್ರದರ್ಶನ ನಡೆಸಿರುವುದು ವಿಶೇಷವೇ ಸರಿ. ನಿಯಮಿತವಾಗಿ ಪ್ರತಿದಿನ ಸಂಜೆ 7.30ಕ್ಕೆ ಒಂದು ಪ್ರದರ್ಶನ ನೀಡಲಾಗುತ್ತದೆ. ಶನಿವಾರ ಮತ್ತು ಭಾನುವಾರಗಳಂದು ಹೆಚ್ಚುವರಿ ಮ್ಯಾಟನಿ ಶೋ 3.30ಕ್ಕೆ. ಈ ಪೈಕಿ ಕನ್ನಡ ನಾಟಕಗಳ ಪ್ರಯೋಗಗಳೇ ಹೆಚ್ಚು.

ಆಧುನಿಕ ತಂತ್ರಜ್ಞಾನ ಬಳಸಿ ರೂಪಿಸಲಾಗಿರುವ ಧ್ವನಿ ವ್ಯವಸ್ಥೆ ‘ರಂಗ ಶಂಕರ’ದ ವಿಶೇಷಗಳಲ್ಲಿ ಒಂದು. ಹಾಗೆಯೇ ಸಮಯ ಪ್ರಜ್ಞೆ ‘ರಂಗ ಶಂಕರ’ದ ಮತ್ತೊಂದು ವಿಶೇಷ. ನಿಗದಿತ ಸಮಯಕ್ಕೆ ಸರಿಯಾಗಿ ಪ್ರದರ್ಶನ ಆರಂಭಿಸುವುದು. ಶೋ ಆರಂಭವಾದ ನಂತರ ಬಂದವರು ಯಾರೇ ಆಗಿದ್ದರೂ ಒಳಹೋಗಲು ಬಿಡುವುದಿಲ್ಲ.

ಕೋಟಿಗಟ್ಟಲೆ ಖರ್ಚು ಮಾಡಿ ನಿರ್ಮಾಣವಾಗುವ ರಂಗಮಂದಿರದ ಬಾಡಿಗೆ ಕೂಡ ಸಾವಿರಾರು ರೂಪಾಯಿಗಳಲ್ಲಿರುತ್ತದೆ ಎಂದು ಭಾವಿಸಲಾಗಿತ್ತು. ಉನ್ನತ ಮಟ್ಟದವರೂ ಮಾತ್ರ ಇಂತಹ ಕಡೆಗಳಲ್ಲಿ ಪ್ರದರ್ಶನ ನೀಡಲು ಅನುಕೂಲ ಆಗುತ್ತದೆ ಎಂದು ಭಾವಿಸಲಾಗಿತ್ತು. ಅತ್ಯಂತ ಕಡಿಮೆ ಹಣ ಪಡೆಯುವ ಮೂಲಕ ‘ರಂಗ ಶಂಕರ’ ಅದನ್ನು ಹುಸಿಯಾಗಿಸಿದೆ. ಪ್ರತಿ ಪ್ರಯೋಗಕ್ಕೆ 2500 ರೂಪಾಯಿ ಶುಲ್ಕ ವಿಧಿಸುವುದರ ಜೊತೆಗೆ ಟಿಕೆಟ್ನ ಹಣದಲ್ಲಿ ಶೇಕಡ 10ರಷ್ಟು ಮಾತ್ರ ತಂಡಗಳಿಂದ ಪಡೆಯುತ್ತದೆ.

ನಾಸಿರುದ್ದೀನ್ ಷಾ ಮತ್ತು ಶಬಾನಾ ಅಜ್ಮಿಯಂತಹ ಹೆಸರಾಂತ ಕಲಾವಿದರು ಸೇರಿದಂತೆ ಭಾರತದ ಪ್ರಮುಖ ರಂಗತಂಡಗಳು ‘ರಂಗ ಶಂಕರ’ದಲ್ಲಿ ತಮ್ಮ ಪ್ರದರ್ಶನ ನೀಡಿವೆ. ಅದು ಕೇವಲ ಭಾರತೀಯ ರಂಗಭೂಮಿಗೆ ಮಾತ್ರ ಸೀಮಿತವಾಗದೆ ಜಗತ್ತಿನ ವಿವಿಧ ದೇಶಗಳ ತಂಡಗಳು ಕೂಡ ಭಾರತಕ್ಕೆ ಬಂದಾಗ ‘ರಂಗ ಶಂಕರ’ಕ್ಕೆ ಬಂದು ಪ್ರದರ್ಶನ ನೀಡದೇ ಇರಲಾರವು. ಇಂತಹ ಮಹತ್ವದ ಸಾಧನೆ ಮಾಡಿದ ‘ರಂಗ ಶಂಕರ’ದ ಯಶಸ್ಸು ಅಪರೂಪದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.