‘ಸಂಬಂಜ ಅನ್ನೋದು ದೊಡ್ಡದು ಕನಾ’– ದೇವನೂರ ಮಹಾದೇವರ ’ಕುಸುಮಬಾಲೆ’ಯಲ್ಲಿ ಕೊಲೆಯಾದ ಚೆನ್ನನ ತಂದೆಯು ತನ್ನ ಪತ್ನಿಗೆ ಹೇಳುವ ಮಾತು. ಮಗನನ್ನು ಕಳೆದುಕೊಂಡ ಹತಾಶೆಯ ಸನ್ನಿವೇಶದಲ್ಲಿ ಬರುವ ಈ ಮಾತು, ಕನ್ನಡ ಸಾಹಿತ್ಯವನ್ನು ಓದಿ ಬಲ್ಲವರು, ನಾಡಿನ ಆಗುಹೋಗುಗಳಿಗೆ ಮನಮಿಡಿದು ಪ್ರತಿಕ್ರಿಯಿಸುವವರು ಸಾಂತ್ವನಕ್ಕಾಗಿ ಹೇಳಿಕೊಳ್ಳುವ, ಇತರರಿಗೆ ಹೇಳುವ ಮಾತೂ ಹೌದು. ಕಾದಂಬರಿಯಲ್ಲಿ ವ್ಯಕ್ತವಾಗುವ ದಟ್ಟ ವಿಷಾದದಾಚೆಗೆ, ಮನುಷ್ಯ ಸಂಬಂಧಗಳ ಕುರಿತ ದೊಡ್ಡ ಭರವಸೆಗೆ ಅನ್ವರ್ಥಕವಾಗಿಯೂ ಈ ಮಾತು ಮತ್ತೆ ಮತ್ತೆ ಎಲ್ಲೆಲ್ಲೂ ಬಳಕೆಯಾಗುತ್ತಿದೆ.

ಈ ಮಾತನ್ನೇ ತಲೆಬರಹವಾಗಿಸಿ, ಮಹಾದೇವರ ಐದು ಕತೆಗಳನ್ನು ಆಧರಿಸಿ ರಂಗರೂಪಕ್ಕೆ ತಂದರೆ ಹೇಗಿರುತ್ತದೆ ಎಂಬ ಪ್ರಶ್ನೆಗೆ ಪ್ರಾಥಮಿಕ ಉತ್ತರವೆಂಬಂತೆ ಮೈಸೂರು ಕಳೆದ ವಾರ (ಆ.27, 28) ‘ಸಂಬಂಜ ಅನ್ನೋದು ದೊಡ್ಡದು ಕನಾ’ ನಾಟಕ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ನಾಟಕದಲ್ಲಿ ‘ಮಾರಿಕೊಂಡವರು‘, ‘ಮೂಡಲಸೀಮೇಲಿ ಕೊಲೆ ಗಿಲೆ ಮುಂತಾಗಿ’, ‘ಡಾಂಬರು ಬಂದುದು’, ‘ಅಮಾಸ’ ಹಾಗೂ ‘ಒಡಲಾಳ’ ಕತೆಗಳು ಒಂದು ಗಂಟೆ ನಲವತ್ತು ನಿಮಿಷದ ಅವಧಿಯಲ್ಲಿ, ಒಂದರ ಹಿಂದೊಂದು ಅನಾವರಣಗೊಳ್ಳುತ್ತವೆ. ಐದೂಕತೆಗಳ ‘ಒಡಲಾಳ’ ಅಮಾಯಕ ಹಳ್ಳಿಜನರ ಶೋಷಣೆಯೇ. ಶೋಷಿತರು ಮತ್ತು ಶೋಷಕರ ರೂಪಗಳು ಬದಲಾಗುತ್ತವೆ.ಬದುಕುಬದಲಾಗುವುದಿಲ್ಲ. ಈ ಆಶಯ ದೇವನೂರರ ಕೃತಿಗಳಲ್ಲಿ ತಣ್ಣಗೆ ಹರಿಯುವ ನದಿಯಂತೆ ಹರಡಿಕೊಂಡಿದೆ.

ನಾಟಕದೊಂದಿಗೆ, ಕತೆಗಳ ಓದಿನ ಅನುಭವದ ಹೋಲಿಕೆಯು ಸಹಜವಾಗಿಯೇ ಬರುತ್ತದೆ. ಈ ಕತೆಗಳನ್ನು ಪ್ರತಿಬಾರಿಯೂ ಏಕಾಂತದಲ್ಲಿ ಓದುವಾಗ ವಿಷಣ್ಣ ಭಾವ ಮೂಡುತ್ತದೆ. ಓದಿದ ಎಷ್ಟೋ ಕಾಲದ ಬಳಿಕವೂ ಅದು ಕರಗದೇ ಉಳಿದಿರುವುದು ಕತೆಗಳ ವಿಶೇಷ.

ಆದರೆ, ಲೋಕಾಂತದ ರಂಗರೂಪದಲ್ಲಿ ಅದೇ ಭಾವವನ್ನು ಮೂಡಿಸುವಲ್ಲಿ ಪಾತ್ರಧಾರಿಗಳಿಗೆ, ನಿರ್ದೇಶಕ ಜನಾರ್ದನ (ಜನ್ನಿ) ಅವರಿಗೆ ಸಿಗುವುದು ಅಲ್ಪಗೆಲುವು. ರಂಗರೂಪಕ್ಕೆ ತಂದ ಪ್ರೊ.ರಾಜಪ್ಪ ದಳವಾಯಿ ಕತೆಗಳನ್ನು, ಆಶಯವನ್ನು ಅತ್ತಿತ್ತ ಅಲುಗಾಡಲು ಬಿಟ್ಟಿಲ್ಲ. ಮೈಮನವನ್ನು ಕಂಪಿಸುವಂತೆ ಮಾಡುವ ಸಂಗೀತದ ಸಮ್ಮೋಹಕತೆಯನ್ನು ಮೈಗೂಡಿಸಿಕೊಂಡಿರುವ ಕತೆಗಳ ಶಕ್ತಿಯು ನಾಟಕದ ಸಂಗೀತಕ್ಕೂ (ಚಿಂತನ್ ವಿಕಾಸ್) ಬಹುಪಾಲು ದಕ್ಕಿರುವುದು ಸಮಾಧಾನಕರ.ಜನಮನ ಸಾಂಸ್ಕೃತಿಕ ಸಂಘಟನೆಯ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿ, ಕೇವಲ ಎರಡು ತಿಂಗಳ ಅವಧಿಯಲ್ಲಿ ಬಹುತೇಕ ಹೊಸ ಕಲಾವಿದರನ್ನೇ ತರಬೇತುಗೊಳಿಸಿ ರೂಪಿಸಿದ ನಾಟಕ. ಅವಸರವಾಯಿತು ಎನ್ನಿಸದೇ ಇರದು. ಕತೆಗಳ ಹಂಗು ತೊರೆದು ನೋಡಿದರೂ ತಂಡದ ಮಹತ್ವಾಕಾಂಕ್ಷೆಯು ಅಬ್ಬರ, ಗಲಾಟೆ, ಅತಿಯಾದ ಸಂಭಾಷಣೆ, ಮಾಗದ ಅಭಿನಯದಲ್ಲಿ ನಲುಗುವುದು ಕಾಣುತ್ತದೆ.

ದೇಶದ ಮಹತ್ವದ ಲೇಖಕರಾದದೇವನೂರರ ಕತೆಗಳನ್ನು ಇನ್ನೊಂದು ಪ್ರಕಾರಕ್ಕೆ ಅಳವಡಿಸುವಾಗ, ಮೂಲದ ನೆರಳು, ಪ್ರಭಾವ ಕಾಡದೇ ಬಿಡದು. ನಟ, ನಿರ್ದೇಶಕ, ಸಂಗೀತಗಾರ ಏಕಕಾಲಕ್ಕೆ ಆ ಪ್ರಭಾವ ವಲಯದೊಳಗಿದ್ದುಕೊಂಡೇ, ಅದರಾಚೆ ನೆಗೆದು ಮೂಲದ್ರವ್ಯ ಕೆಡದಂತೆ, ಪ್ರಭಾವ ಮಸುಕಾಗದಂತೆ ಹೊಸರೂಪದಲ್ಲಿ ಅದನ್ನು ಮಂಡಿಸಬೇಕಾಗುತ್ತದೆ.ದನಿಗಳು, ಧಾರೆಗಳು ಬೇರೆಯಾದರೂ ಐದೂ ಕತೆಗಳು ಗ್ರಾಮೀಣ ಭಾರತದ ಬಡವರ ಕಥಾನಕವೇ.

ಆದರೆ, ನಾಟಕದಲ್ಲಿ ಐದೂ ಕತೆಗಳು ಪ್ರತ್ಯೇಕ ಘಟಕಗಳಾಗಿಯೇ ನಿರೂಪಿಸಲ್ಪಡುತ್ತವೆಯೇ ಹೊರತು, ಅವುಗಳನ್ನು ಕೂಡಿ ಹಿಡಿಯುವ ‘ಸಂಬಂಜ’ದ ಕೇಂದ್ರವನ್ನು ಪ್ರೇಕ್ಷಕರೇ ಹುಡುಕಬೇಕು. ಅದು ಅವರಿಗೆಷ್ಟೇ ಎದುರಾಗುವ ಸವಾಲಲ್ಲ. ನಟ, ನಿರ್ದೇಶಕರಿಗೂ ಎದುರಾಗಿರುವ ಸವಾಲು. ಏಕೆಂದರೆ, ‘ಸಂಬಂಜ ಅನ್ನೋದು ದೊಡ್ಡದು ಕನಾ’

ಜನ್ನಿ ಎಂಭತ್ತರ ದಶಕದಲ್ಲೇ ‘ಒಡಲಾಳ’, ‘ಕುಸುಮಬಾಲೆ’ಯನ್ನು ರಂಗಕ್ಕೆ ತಂದಿದ್ದವರು. ಮತ್ತೀಗ ಐದು ಕತೆಗಳನ್ನು ಒಟ್ಟಿಗೇ ರಂಗಕ್ಕೆ ತಂದಿರುವ ಅವರು, ಆಹ್ವಾನಿತರಿಗಷ್ಟೇ ಏರ್ಪಡಿಸಿದ್ದ ಪ್ರದರ್ಶನದ ಉದ್ಘಾಟನೆ ವೇಳೆ, ‘ಹೊಸ ಹುಡುಗರನ್ನು ಕಟ್ಟಿಕೊಂಡು, ಮಹಾದೇವರ ಕತೆಗಳನ್ನು ನಾಟಕ ಮಾಡುವ ಭಂಡ ಧೈರ್ಯ ಮಾಡಿದ್ದೀವಿ’ ಎಂದಿದ್ದರು. ಆದರೆ, ಅವರದ್ದು ಗಟ್ಟಿ ಧೈರ್ಯವೇ. ಅವರ ಬೆನ್ನಿಗೆ ನಿಂತಿರುವ, ರಂಗಭೂಮಿ ಹಿನ್ನೆಲೆಯ ನಟ ಪ್ರಕಾಶ್ ರಾಜ್ ಅವರ ಬೆಂಬಲವು, ನಟನೆಯ ವಿಷಯದಲ್ಲೂ ಹುಡುಗರಿಗೆ ಸಿಕ್ಕಿದ್ದರೆ ನಾಟಕ ಇನ್ನಷ್ಟು ಪರಿಣಾಮ ಬೀರುವ ಸಾಧ್ಯತೆ ಇತ್ತು.

‘ಮಹಾದೇವ ಕತೆಗಾರರೇ, ನಾಟಕಕಾರರೇ ಎಂಬುದು ನನ್ನ ಅನುಮಾನ. ಅದನ್ನು ಪ್ರೇಕ್ಷಕರೇ ನಿಜ ಮಾಡಬೇಕು’ ಎಂದು ಅದೇ ಕಾರ್ಯಕ್ರಮದಲ್ಲಿ ರಾಜಪ್ಪ ದಳವಾಯಿ ಹೇಳಿದ್ದರು. ಈ ನಾಟಕವನ್ನು ನೋಡಿದ ಬಳಿಕ, ‘ದೇವನೂರರು ಕತೆಯ ಒಡಲಲ್ಲೇ ನಾಟಕದ ರಚನೆಯ ದಾರಿಯನ್ನೂ ಹೇಳಿಕೊಟ್ಟಿರುವ ಅಪರೂಪದ ಲೇಖಕ’ ಎನ್ನಲೇಬೇಕು. ಅವರು ಏಕಕಾಲಕ್ಕೆ ನಂಜನಗೂಡು ಭಾಷೆಯ ಸೊಗಡಿನಲ್ಲಿ ‘ಓದುವ ಕತೆ’ ಹಾಗೂ ‘ನೋಡುವ ಕತೆ’ಯನ್ನು ಬರೆದು ನಕ್ಕವರು. ಅವರ ಹೆಸರಿನ ಬಲದ ಮೇಲೆಯೇ ಈ ನಾಟಕದ ಯಶಸ್ಸು ಕೂಡ ನಿಂತಿದೆ.

‘ಕುಸುಮಬಾಲೆ’, ‘ಆಳ–ಅಗಲ’, ದೇವನೂರರ ಸಮಗ್ರ ಕೃತಿಗಳನ್ನು ಆಧರಿಸಿದ ಎರಡನೇ ರಂಗ ಪ್ರದರ್ಶನವನ್ನು ರೂಪಿಸುವ ಚಿಂತನೆ’ಯೂ ಈ ತಂಡಕ್ಕೆ ಇದೆ. ಈ ಪ್ರಯತ್ನಕ್ಕಿಂತ ಮುಂಚೆ, ಐದು ಕತೆಗಳ ರಂಗರೂಪದ ಸಾಧ್ಯತೆ ಮತ್ತು ಮಿತಿಗಳ ಬಗ್ಗೆ ಇನ್ನಷ್ಟು ಗಂಭೀರವಾಗಿ ಚಿಂತಿಸುವ ಅಗತ್ಯವೂ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.