ಕಂಪನಿ ನಾಟಕಗಳತ್ತ ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಲು ಸಿನಿಮಾ ತಾರೆಯರನ್ನು ಕರೆಸುವುದು ಸಾಮಾನ್ಯ. ಚಿತ್ರೀಕರಣ ಇಲ್ಲದ ಸಮಯವನ್ನು ನಟ-ನಟಿಯರು ಈ ರೀತಿ ಸದುಪಯೋಗ ಪಡಿಸಿಕೊಂಡರೆ, ಇವರ ಜನಪ್ರಿಯತೆಯನ್ನು ಕಂಪನಿ ಮಾಲೀಕರು ಬಳಸಿಕೊಳ್ಳುತ್ತಿದ್ದರು.

ಪ್ರಣಯರಾಜ ಶ್ರೀನಾಥ್, ಸುಂದರಕೃಷ್ಣ ಅರಸ್, ಧೀರೇಂದ್ರಗೋಪಾಲ್, ಸುಧೀರ್, ಎಂ.ಎಸ್. ಉಮೇಶ್, ಉಮಾಶ್ರೀ, ಸುಂದರರಾಜ್-ಪ್ರಮೀಳಾ ಜೋಷಾಯ್, ಡಿಂಗ್ರಿ ನಾಗರಾಜ್, ಅಭಿನಯ ಸೇರಿದಂತೆ ಅನೇಕರು ಹೀಗೆ ಕಂಪನಿ ನಾಟಕಗಳಿಗೆ ‘ಗೆಸ್ಟ್’ ಆಗಿ ಬರುತ್ತಿದ್ದರು.

ಅದು ಯಾವ ಕ್ಯಾಂಪ್, ಯಾವ ನಾಟಕ ಎನ್ನುವುದು ನನಗೆ ಸರಿಯಾಗಿ ನೆನಪಿಲ್ಲ. ಪ್ರಣಯರಾಜ ಶ್ರೀನಾಥ್ ಬಂದಿದ್ದರು. ಅವರದು ನಾಯಕನ ಪಾತ್ರ. ಹೆಚ್ಚು ಗಾಂಭೀರ್ಯವನ್ನೇ ಬಯಸುವ ಪಾರ್ಟು ಅದು.

ಸೀರಿಯಸ್ ದೃಶ್ಯ ಒಂದರಲ್ಲಿ ಅಭಿನಯಿಸುತ್ತಿದ್ದ ಶ್ರೀನಾಥ್, ಪದೇ ಪದೇ ಪ್ಯಾಂಟು ಮೇಲೇರಿಸಿಕೊಳ್ಳುತ್ತಿದ್ದರು. ಆ ದೃಶ್ಯಕ್ಕೂ- ಅವರ ಒದ್ದಾಟಕ್ಕೂ ತಾಳೆಯೇ ಆಗ್ತಿರಲಿಲ್ಲ. ಸ್ವಲ್ಪ ದೊಗಳೆ ಎನ್ನಬಹುದಾದ ಪ್ಯಾಂಟನ್ನು ಅವರು ಧರಿಸಿದ್ದರು. ಆದರೆ, ಅದಕ್ಕೆ ಬೆಲ್ಟ್ ಹಾಕಿಕೊಳ್ಳೋದನ್ನು ಮರೆತಿದ್ದರು !

ಅದು ಸೆಕೆಂಡ್ ಷೋ ಆಗಿದ್ದರಿಂದ ‘ಅಮಲೇರಿಸಿಕೊಂಡು’ ನಾಟಕ ನೋಡಲು ಬಂದಿದ್ದ ಪ್ರೇಕ್ಷಕರ ಸಂಖ್ಯೆಯೇ ಹೆಚ್ಚಿತ್ತು. ಅಂಥವರಲ್ಲೊಬ್ಬ ಎದ್ದು, 'ಶ್ರೀನಾಥಣ್ಣೋ, ನೀನು ಪದೇ ಪದೇ ಪ್ಯಾಂಟು ಮೇಲೇರಿಸಿಕೊಳ್ಳೋದು ಬಿಟ್ಟು, ಆ್ಯಕ್ಟ್ ಮಾಡಣ್ಣೋ...' ಎಂದು ಕೂಗಿದ. ‘ಪುಣ್ಯಾತ್ಮ, ನನ್ ಕಷ್ಟ ನನಗೆ ಗೊತ್ತು. ನಾನು ಮೇಲೇರಿಸಿಕೊಳ್ಳದೆ ಹಂಗೆ ಬಿಟ್ರೆ ನೀನು ಮೇಲೇರಿಸಿಕೊಂಡಿರೋದು ಇಳಿದು ಬಿಡುತ್ತೆ ನೋಡು, ಏನ್ಮಾಡ್ಲಿ ಬೇಗ ಹೇಳು’ ಅಂತಾ ಫಟ್ ಅಂತಾ ರಿಯಾಕ್ಟ್ ಮಾಡಿದ್ರು ಶ್ರೀನಾಥ್. ಗಂಭೀರ ದೃಶ್ಯ ಕಾಮಿಡಿ ಸೀನ್ ಆಗಿ ಬದಲಾಗಿತ್ತು.

‘ಕ್ಯಾಮೆರಾಗಳ ಮುಂದೆ ನಟಿಸುವಾಗ ಸಿಗುವ ಖುಷಿಗಿಂತ ನೂರು ಪಟ್ಟು ಹೆಚ್ಚು ಸಂತೋಷ ಜನರ ಮುಂದೆ ನಟಿಸುವಾಗ ಸಿಗುತ್ತೆ’ ಅಂತಾ ಒಳಗೆ ಬಂದು ಹೇಳ್ತಿದ್ರು ಶ್ರೀನಾಥ್ ಅಂಕಲ್.

ಹೀಗೆ, ಸಿನಿಮಾದಿಂದ ನಾಟಕದ ಕಂಪನಿಗೆ ಒಬ್ಬೊಬ್ಬರು ಒಂದೊಂದು ವಿಶೇಷ ಪಾತ್ರ, ‘ಮ್ಯಾನರಿಸಂ’ ಜೊತೆ ಬರುತ್ತಿದ್ದರು. ಹಾಸ್ಯನಟ ಉಮೇಶಣ್ಣ (ಎಂ.ಎಸ್. ಉಮೇಶ್) ನಾಟಕವೊಂದರಲ್ಲಿ ಹೋಟೆಲ್ ಮಾಣಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರು ಅತ್ಯುತ್ತಮ ಹಾರ್ಮೋನಿಯಂ ವಾದಕರೂ ಹೌದು. ವಿಶೇಷ ಏನೆಂದರೆ, ಕೊರಳಿಗೆ ಹಾರ್ಮೋನಿಯಂ ಹಾಕಿಕೊಂಡೇ ಸ್ಟೇಜ್ ಗೆ ಬರುತ್ತಿದ್ದರು. ತಮ್ಮ ಪಾತ್ರದ ಹಾಡನ್ನು ತಾವೇ ಹಾಡುತ್ತಾ, ತಾವೇ ಹಾರ್ಮೋನಿಯಂ ನುಡಿಸುತ್ತಾ ಜನರನ್ನ ರಂಜಿಸುತ್ತಿದ್ದರು.

ಗುರು ಶಿಷ್ಯರು ಸೇರಿದಂತೆ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಉಮೇಶ್, ರಂಗಭೂಮಿಯಲ್ಲಿ ಅಭಿನಯಿಸುವಾಗಲೂ ಎಂದೂ ಹಮ್ಮು-ಬಿಮ್ಮು ತೋರಿಸಿದವರಲ್ಲ. ‘ಚಿನ್ನದ ಗೊಂಬೆ’ ನಾಟಕಕ್ಕೆ ಬರುತ್ತಿದ್ದ ಸುಂದರರಾಜ್-ಪ್ರಮೀಳಾ ಜೋಷಾಯ್ ದಂಪತಿ ಕೂಡ ಉಳಿದ ಎಲ್ಲ ಕಲಾವಿದರೊಂದಿಗೆ ಒಂದು ಕುಟುಂಬದವರಂತೆ ಹೊಂದಿಕೊಳ್ಳುತ್ತಿದ್ದರು.

ನಾಟಕ ಕಂಪನಿಗಳಲ್ಲಿ 'ಬೋರ್ಡಿಂಗ್' ಇದ್ದೇ ಇರುತ್ತದೆ. ಎಷ್ಟೋ ವರ್ಷಗಳವರೆಗೆ ಈ ‘ಬೋರ್ಡಿಂಗ್’ ಎನ್ನುವುದು ಇಂಗ್ಲಿಷ್ ಪದ ಎಂಬುದೇ ನನಗೆ ತಿಳಿದಿರಲಿಲ್ಲ. ಅಂದರೆ, ಅಷ್ಟು ಸಹಜವಾಗಿ ಮತ್ತು ಅಷ್ಟು ವ್ಯಾಪಕವಾಗಿ ಕಂಪನಿಗಳಲ್ಲಿ ಈ ಪದ ಬಳಸುತ್ತಿದ್ದರು. ಎಲ್ಲ ಕಲಾವಿದರು, ಕೆಲಸಗಾರರಿಗೂ ಮಧ್ಯಾಹ್ನ ಮತ್ತು ರಾತ್ರಿಯ ಊಟ ನೀಡುತ್ತಿದ್ದ ಜಾಗವದು. ನಿತ್ಯ ಊಟ ಮಾಡುತ್ತಿದ್ದ ನಮಗೆ ಅಲ್ಲಿನ ಆಹಾರ ಅಷ್ಟಾಗಿ ರುಚಿಸುತ್ತಲೇ ಇರಲಿಲ್ಲ.

ಸಾಮಾನ್ಯವಾಗಿ ನಾಟಕ ಪ್ರಾರಂಭಕ್ಕೂ ಒಂದು ತಾಸು ಮೊದಲು ಟೇಪ್ ರೆಕಾರ್ಡರ್‌ಗಳಲ್ಲಿ ಭಕ್ತಿಗೀತೆಗಳನ್ನು ಹಾಕುತ್ತಿದ್ದರು, ಈಗಲೂ ಹಾಕುತ್ತಾರೆ. ವಿಘ್ನನಿವಾರಕ ಗಣೇಶನ ಭಕ್ತಿಗೀತೆಗಳೇ ಹೆಚ್ಚು. ಅವುಗಳಲ್ಲಿ ಮುಖ್ಯವಾಗಿ, ‘‘ಶರಣು ಶರಣಯ್ಯ ಶರಣು ಬೆನಕ, ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ’’ ಹಾಡು ಕಡ್ಡಾಯವಾಗಿ ಹಾಕಲಾಗುತ್ತಿತ್ತು. ನಿತ್ಯ ಕೇಳುತ್ತಿದ್ದುದರಿಂದ ಹಾಡುಗಳೆಲ್ಲ ನಮಗೆ (ನನ್ನಂಥ ಹುಡುಗರಿಗೆ) ಬಾಯಿಪಾಠವೇ ಆಗಿದ್ದವು. ಈ ಹಾಡಿಗೆ ಬೋರ್ಡಿಂಗ್ ಊಟದ ಸಾಲು ಸೇರಿಸಿಕೊಂಡು ಅಣಗಿಸುತ್ತಾ ಹಾಡುತ್ತಿದ್ದೆವು. ‘‘ಶರಣು ಶರಣಯ್ಯ ಶರಣು ಬೆನಕ, ತಿನಕಿ ತಿನಕಿ ತಿನ್ನಯ್ಯ ಬೋರ್ಡಿಂಗ ಜುಣಕ’’ ಎಂದು ಹಾಡುತ್ತಿದ್ದೆವು.

ಆದರೆ, 'ಸೆಲೆಬ್ರಿಟಿ'ಗಳ ರೂಪದಲ್ಲಿ ಕಂಪನಿಗೆ ಬರುತ್ತಿದ್ದ ಉಮೇಶಣ್ಣ, ಉಮಾಶ್ರೀ ಯಾರೇ ಆಗಲಿ ಇದೇ ಬೋರ್ಡಿಂಗ್‌ನ ಅಡುಗೆಯನ್ನೇ ಊಟ ಮಾಡುತ್ತಿದ್ದರು. ಖಾರ ಇರಲಿ, ಸಪ್ಪೆ ಆಗಿರಲಿ ತಕರಾರು ತೆಗೆಯುತ್ತಿರಲಿಲ್ಲ.
ಎಣ್ಣೆ ಪದಾರ್ಥಗಳನ್ನು ಹೆಚ್ಚು ಸೇವಿಸದ ಉಮಾಶ್ರೀ, ಬೋರ್ಡಿಂಗ್ ತಿಳಿಸಾರಿಗೆ, ಅಲ್ಲಿಯೇ ಬೆಳ್ಳುಳ್ಳಿ ಒಗ್ಗರಣೆ ಹಾಕಿ, ಸೇವಿಸುತ್ತಿದ್ದರು. ಸೊಪ್ಪು, ಸೌತೆಕಾಯಿ, ಹಸಿ ತರಕಾರಿಯೇ ಅವರ ‘ಸ್ಮ್ಯಾಕ್ಸ್’.

‘ಗೌಡ್ರ ಗದ್ಲ’ ನಾಟಕದಲ್ಲಿ ಗೌಡ, ‘ಸಿಂಧೂರ ಲಕ್ಷ್ಮಣ’ ನಾಟಕದಲ್ಲಿ ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸುಧೀರ್ ಕೂಡ ಆರೋಗ್ಯದ ಬಗ್ಗೆ ಅಷ್ಟೇ ಕಾಳಜಿ ವಹಿಸುತ್ತಿದ್ದರು. ‘ಫಿಟ್‌ನೆಸ್’ ಕಾಯ್ದುಕೊಳ್ಳುವುದು ಅವರಿಗೂ ಅಷ್ಟೇ ಮಹತ್ವದ್ದಾಗಿತ್ತು, ಆಹಾರವೇ ಅವರ ಔಷಧವಾಗಿತ್ತೇ ವಿನಾ, ಈಗಿನ ‘ಕೆಲವು ನಾಯಕ’ರಂತೆ ಕೆಲವು ‘ಔಷಧಗಳನ್ನೇ’ ಆಹಾರದಂತೆ ತೆಗೆದುಕೊಂಡು ದೇಹವನ್ನು ‘ಹಿಗ್ಗಿಸಿ’ಕೊಳ್ಳುತ್ತಿರಲಿಲ್ಲ.

ರಾತ್ರಿ ನಾಟಕ ಮುಗಿಯುವುದು 12.30 ಅಥವಾ ಒಂದು ಗಂಟೆ ಆಗುತ್ತಿತ್ತು. ಎತ್ತರಿಸಿದ ಧ್ವನಿಯಲ್ಲಿ ಉದ್ದುದ್ದ ಸಂಭಾಷಣೆ ಹೇಳಿ ದಣಿದಿರುತ್ತಿದ್ದ ಸುಧೀರ್, ಅಷ್ಟೊತ್ತಿನಲ್ಲಿ ನಾಲ್ಕರಿಂದ ಐದು ಎಳೆನೀರು ಕುಡಿಯುತ್ತಿದ್ದರು.

‘ಏನೇನೋ’ ಕುಡಿಯುವ, ‘ಮತ್ತಿನ್ನೇನನ್ನೋ’ ಸೇವಿಸುವ ಮೂಲಕ ಚರ್ಚೆಯಲ್ಲಿರುವ ಈಗಿನ ಕೆಲವು ನಟ-ನಟಿಯರನ್ನು ನೋಡುತ್ತಿದ್ದಾಗ, ಈ ಹಿರಿಯ ಕಲಾವಿದರೆಲ್ಲ ನೆನಪಾದರು. ಅವರ ಸರಳತೆ, ಕಲೆಯ ಮೇಲೆ ಅವರಿಗಿದ್ದ ಶ್ರದ್ಧೆ, ದೇಹ ಸೌಂದರ್ಯ ಮತ್ತು ಸದೃಢತೆಯನ್ನು ಕಾಪಾಡಿಕೊಳ್ಳುತ್ತಿದ್ದ ರೀತಿ ಎಲ್ಲ ಕಣ್ಮುಂದೆ ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.