ಅಂದು ಬಳ್ಳಾರಿಯ ಐತಿಹಾಸಿಕ ಕೋಟೆಗೆ ಹೋಗಿದ್ದ ಉರಗ ತಜ್ಞರಾದ ಆದಿತ್ಯವಟ್ಟಂ ಮತ್ತು ಕಾಶಿನಾಥ ನೆಗಳೂರಮಠ ಅವರಿಗೆ ಅಪರೂಪದ ಹಾವೊಂದು ಪತ್ತೆಯಾಗಿತ್ತು.

ಚಾಕೊಲೆಟ್ ಕಂದುಬಣ್ಣದ, ನೀಳ ದೇಹದ ಹಾವನ್ನು ಈ ಉರಗ ತಜ್ಞರು ಪತ್ತೆ ಮಾಡಿ, ಅವುಗಳ ಫೋಟೊ ತೆಗೆದು, ಕೋಲ್ಕತ್ತಾದಲ್ಲಿರುವ ಇಂಡಿಯನ್ ಸ್ನೇಕ್ ಆರ್ಗನೈಜೇಷನ್ನ ಉರಗ ತಜ್ಞ ವಿವೇಕ್ ಶರ್ಮಾ ಅವರಿಗೆ ಕಳುಹಿಸಿದರು.

ಫೋಟೊಗಳನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ ಶರ್ಮಾ ಅವರು, ಕೋಲ್ಕತ್ತಾದಿಂದ ನೇರವಾಗಿ ಬಳ್ಳಾರಿಯ ಬೆಟ್ಟಕ್ಕೆ ಬಂದರು. ಈ ಹಾವನ್ನು ನೋಡಿ, ಇದು ‘ನಾಗಾರ್ಜುನ್ ಸಾಗರ್ ರೇಸರ್’ ಎಂದರು. ಈಗ ಚಿತ್ರದಲ್ಲಿರುವುದು ಅದೇ ಹಾವು.

ಈ ಹಾವಿನ ವಿಷಯಕ್ಕೆ ಸಣ್ಣದೊಂದು ಹಿನ್ನೆಲೆ ಇದೆ; ಏನೆಂದರೆ, 1976ರಲ್ಲಿ ಮೊದಲ ಬಾರಿಗೆ ಆಂಧ್ರಪ್ರದೇಶದ ನಾಗಾರ್ಜುನ ಸಾಗರ ಅಣೆಕಟ್ಟು ಪ್ರದೇಶದಲ್ಲಿ ಇದೇ ಹಾವನ್ನು ಖ್ಯಾತ ಉರಗ ತಜ್ಞ ಆರ್. ಸಿ. ಶರ್ಮಾ ಅವರು ಪತ್ತೆ ಮಾಡಿದ್ದರು. ಅಲ್ಲಿಂದ ಸರಿಯಾಗಿ 36 ವರ್ಷಗಳ ನಂತರ ಅಂದರೆ ಮಾರ್ಚ್ 2012ರಲ್ಲಿ ಇದೇ ವಿವೇಕ್ ಶರ್ಮಾ ತಿರುಪತಿ ಸಮೀಪದ ಶೇಷಾಚಲಂ ಬೆಟ್ಟದಲ್ಲಿ ಇದೇ ಹಾವನ್ನು ಪತ್ತೆ ಮಾಡಿದರು. ನಂತರ ಕೋಲ್ಕತ್ತಾ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಸಂಸ್ಥೆಗೆ ನೀಡಿ, ಇದನ್ನು ‘ನಾಗಾರ್ಜುನ್ ಸಾಗರ್ ರೇಸರ್’ ಎಂದು ಅಧಿಕೃತಗೊಳಿಸಿದರು. ಇದಾದ ನಂತರವೇ ಬಳ್ಳಾರಿಯಲ್ಲಿ ಕಾಶಿನಾಥ ನೆಗಳೂರಮಠ ಮತ್ತು ಆದಿತ್ಯ ವಟ್ಟಂ ಅವರಿಗೆ ಇದೇ ಪ್ರಭೇದದ ಹಾವು ಸಿಕ್ಕಿದ್ದು!

ಸುಂದರವಾದ ಈ ಹಾವು 110 ಸೆಂ.ಮೀ ಉದ್ದ ಬೆಳೆಯುತ್ತದೆ. ಇದು ದಿವಾಚರಿಯಾಗಿದ್ದು (ಹಗಲಿನಲ್ಲಿ ಓಡಾಡುವಂಥದ್ದು) ಹೆಚ್ಚು ಉಷ್ಣ ಪ್ರದೇಶದ ಕಲ್ಲು ಬೆಟ್ಟಗಳಲ್ಲಿ, ಶುಷ್ಕಕಾಡು, ಕಡಿಮೆ ಮಳೆ ಬೀಳುವ ಒಣ ಹವೆ ಹಾಗೂ ಬಿಸಿತಾಪವಿರುವ ಕಲ್ಲುಗಳ ಸಂದು ಹಾಗೂ ತರಗೆಲೆಗಳ ಒಳಗೆ ವಾಸಿಸುತ್ತದೆ. ಚಾಕೊಲೆಟ್ ಕಂದು ವರ್ಣದ ನೀಳವಾದ ದೇಹ, ಮೇಲ್ಭಾಗದಲ್ಲಿ ತೆಳುಗಂದು ವರ್ಣವಿದ್ದು, ವೃತ್ತಾಕಾರದ ಬಿಲ್ಲೆಗಳಂತೆ ಗೋಚರಿಸುತ್ತವೆ. ತಲೆಯ ಮೇಲಿನ ಮಚ್ಚೆ ತಿಳಿಗಂದು ಹಾಗೂ ಗಾಢ ಕಂದು ಬಣ್ಣದ್ದಾಗಿವೆ. ಹಿಂಭಾಗದ ದೇಹ ಸುದೀರ್ಘವಾದ ಬಾಲವು ಮಚ್ಚೆಗಳಿಲ್ಲದ ತೆಳು ಗೋಧಿ ಕಂದು ಬಣ್ಣದ್ದಾಗಿದೆ.

ಇವು ಅಲ್ಪವಿಷಕಾರಿಗಳು. ಇದರ ಮುಖ್ಯ ಆಹಾರ ಹಲ್ಲಿ, ಕೆಲ ಸಲ ದಂಶಕಗಳಾದ ಇಲಿ, ಹೆಗ್ಗಣ, ಅಳಿಲುಗಳನ್ನು ಬೇಟೆಯಾಡಿ ಭಕ್ಷಿಸುತ್ತದೆ. ಬೇಟೆಯನ್ನು ಹಿಂದಿನಿಂದ ಕಚ್ಚಿ ನಿಶ್ಚಲಗೊಳಿಸಿ ನಂತರ ಅದನ್ನು ಮುಂಬದಿಯಿಂದ ಪ್ರಾರಂಭಿಸಿ ಇಡಿಯಾಗಿ ನುಂಗಿ ಬಿಡುತ್ತದೆ. ಇದನ್ನು ಕರ್ನಾಟಕದಲ್ಲಿ ‘ನಾಗಾರ್ಜುನ್ ಸಾಗರ್ ಜೋರುಪೋತ’ ಎಂದು ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ ‘ನಾಗಾರ್ಜುನ್ ಸಾಗರ್ ರೇಸರ್ ಅಥವಾ ಶರ್ಮಾಸ್ ರೇಸರ್’ ಎನ್ನುತ್ತಾರೆ. ವೈಜ್ಞಾನಿಕವಾಗಿ ಪ್ಲ್ಯಾಟಿಸೆಪ್ಸ್ ಬೋಲಾನಾಥೀ ಎಂದು ಹೆಸರು. ಇದು ಸರೀಸೃಪಗಳ ವರ್ಗದ ಸ್ವ್ಯಾಮಾಟ ಗಣದ ಕೊಲುಬ್ರಿಡೇ ಕುಟುಂಬಕ್ಕೆ ಸೇರಿಸಲಾಗಿದೆ. ಬಳ್ಳಾರಿ ಸೀಮೆಯ ಸಿಮಿತ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವ ಈ ವೈಭವದ ಹಾವನ್ನು ರಕ್ಷಿಸಬೇಕು. ಹಾಗೆ ರಕ್ಷಿಸಬೇಕಾದರೆ, ಕಲ್ಲು ಬೆಟ್ಟಗಳನ್ನು ಉಳಿಸಿಕೊಳ್ಳಬೇಕು.

ಕಾಶಿನಾಥ ನೆಗಳೂರಮಠ ಅವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಅಪರೂಪದ ಹಾವುಗಳನ್ನು ಪತ್ತೆ ಮಾಡಿ, ಕಾಡಿಗೆ ಬಿಟ್ಟಿದ್ದಾರೆ. ಕರ್ನಾಟಕದಲ್ಲಿ ‘ನಾಗಾರ್ಜುನ ಸಾಗರ ರೇಸರ್’ ಎಂಬ ಅಪರೂಪದ ಹಾವು ಪತ್ತೆ ಮಾಡಿದ ಕೀರ್ತಿಯೂ ಇವರಿಗೆ ಸೇರುತ್ತದೆ. ಇಂಥ ಅಪರೂಪದ ಉರಗ ತಜ್ಞ ಇತ್ತೀಚೆಗೆ ನಮ್ಮನ್ನು ಅಗಲಿದ್ದಾರೆ. ಅವರ ನೆನಪಲ್ಲಿ ನಾಗಾರ್ಜುನ ಸಾಗರ ರೇಸರ್ ಹಾವಿನ ಕುರಿತು ಇಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.