ನಾನು ವಾಯುವಿಹಾರ ನಡೆಸುವ ರಸ್ತೆ, ಬಡಾವಣೆಗಳಲ್ಲಿ ಆಗಸ್ಟ್ ತಿಂಗಳ ಮಧ್ಯಭಾಗದಲ್ಲಿಯೂ ಗಿಡಗಳನ್ನು ನೆಡಲು ಗುಂಡಿಗಳನ್ನು ತೆಗೆಯುವ ಕೆಲಸ ನೋಡಿ ಈ ಸಾರಿ ವಾಕಿಂಗ್ ಲಹರಿ ಬಿಟ್ಟು ವನಮಹೋತ್ಸವದ ಬಗ್ಗೆ ಬರೆಯಬೇಕೆನಿಸಿತು.

ಪ್ರತಿಸಲದಂತೆ ಈ ವರ್ಷವೂ ವನಮಹೋತ್ಸವ ನಡೆದುಹೋಗಿದೆ. ಗಿಡಗಳ ನೆಡುವ ಕಾರ್ಯ ಹಲವೆಡೆ ಇನ್ನೂ ನಡೆಯುತ್ತಿದೆ. ದೇಶಕ್ಕೆ ಸ್ವಾತಂತ್ರ್ಯಬಂದ ನಂತರ ಒಂದೊಂದೇ ಹೊಸ ಯೋಜನೆಗಳು ಬರತೊಡಗಿದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಹೊಣೆಗಾರಿಕೆಯನ್ನು ಜನಮಾನಸಕ್ಕೆ ತಲುಪಿಸುವ ಹಾಗೂ ಆ ಪ್ರಜ್ಞೆಯನ್ನು ಎಳೆಯರಾದಿಯಾಗಿ ಸಮಸ್ತರಲ್ಲಿ ಮೂಡಿಸುವ ಒಂದು ಕ್ರಮಬದ್ಧ ಯೋಜನೆ– ಆಚರಣೆಯನ್ನು ಸರ್ಕಾರ ಸಿದ್ಧಪಡಿಸಿ 1950ರಲ್ಲಿ ದೇಶದಾದ್ಯಂತ ‘ವನ ಮಹೋತ್ಸವ’ದ ಆಚರಣೆಯನ್ನು ಜಾರಿಗೆ ತಂದಿತು.

ನಮ್ಮದು ಪ್ರಾಕೃತಿಕವಾಗಿ ಸಂಪದ್ಭರಿತವಾದ ದೇಶ. ಬ್ರಿಟೀಷರ ಕಾಲದಿಂದಲೂ ನಮ್ಮ ಪ್ರಾಕೃತಿಕ ಸಂಪತ್ತನ್ನು ಧಾರಾಳವಾಗಿ ಉಪಯೋಗಿಸಲಾಗುತ್ತಿತ್ತು. ಹೇರಳವಾದ ಈ ಸಂಪತ್ತು ಒಂದು ಕಾಲಕ್ಕೆ ಮುಗಿಯದ ಅಕ್ಷಯ ಪಾತ್ರೆಯಂತೆ ಇತ್ತು. ಇಂತಹ ಅಕ್ಷಯ ಭಂಡಾರ ‘ಕ್ಷಯವಾಗದಂತೆ ಮುಂದಿನ ಪೀಳಿಗೆಗೆ ಇದನ್ನು ಉಳಿಸುವ ಹಾಗೂ ಅರಣ್ಯ ಬೆಳೆಸಬಹುದಾದ ಪ್ರದೇಶಗಳಲ್ಲಿ ಹೊಸದಾಗಿ ಬೆಳೆಸುವ, ಹಳ್ಳಿ, ಗ್ರಾಮ, ಪಟ್ಟಣ, ನಗರ ಪ್ರದೇಶಗಳಲ್ಲಿ ಗಿಡನೆಡುವ ತನ್ಮೂಲಕ ಶುದ್ಧಗಾಳಿ, ಪರಿಸರ ಸೌಂದರ್ಯ, ಪಶು–ಪಕ್ಷಿಗಳಿಗೆ ಆಹಾರ, ಆಶ್ರಯ ಹೀಗೆ... ವಿಭಿನ್ನ ಆಶಯಗಳೊಂದಿಗೆ ಹಾಗೂ ಮುಖ್ಯವಾಗಿ ಹೊಸ– ಯುವ ಪೀಳಿಗೆಗೆ ಗಿಡ– ಮರ– ಪರಿಸರ ತನ್ನದೆನ್ನುವ ಆತ್ಮೀಯ ಭಾವ– ಸ್ಪರ್ಶವನ್ನು ಬಿತ್ತುವ ಮಹೋದ್ದೇಶದಿಂದ ವನ ಮಹೋತ್ಸವದ ಆಚರಣೆ ಪ್ರಾರಂಭವಾಯಿತು. ನಮ್ಮ ಪೂರ್ವಿಕರು, ಅಂದರೆ ಮಾನವನ ಬದುಕು ರೂಪುಗೊಳ್ಳುವ ಪ್ರಾರಂಭಿಕ ಹಂತದಲ್ಲಿ ಅವರು ಪ್ರಕೃತಿ ಆರಾಧಕರಾಗಿದ್ದರು. ಅವರಿಗೆ ಅರಿವಿಲ್ಲದಂತೆಯೇ ಗಾಳಿ, ನೀರು, ಮರ, ಬೆಳಕು, ಮಣ್ಣಿನ ಆರಾಧಕರಾಗಿ ಹೋಗಿದ್ದರು. ಇವೆಲ್ಲದರ ಮಹತ್ವ ಇಂದಿಗೂ ಮುಂದೆಯೂ ಎಂದೆಂದಿಗೂ ಇದ್ದೇ ಇರುತ್ತದೆ. ಏಕೆಂದರೆ ಇವು ಜೀವ ಪೋಷಕ–ಜೀವರಕ್ಷಕ ದ್ರವ್ಯಗಳು. ಆದರೆ ಮಾನವನ ವಿಕಾಸ ಆಗುತ್ತಾ ಹೋದ ಹಾಗೆ, ಜನಸಂಖ್ಯೆ ಕ್ರಮೇಣ ಜಾಸ್ತಿ ಆಗುತ್ತಾ ಹೋದ ಹಾಗೆ, ಪ್ರಕೃತಿಗೆ ಕುತ್ತು ಬರಲಾರಂಭಿಸಿದ್ದು ಎಲ್ಲರಿಗೂ ವೇದ್ಯವಾಗಿರುವ ಸಂಗತಿ.

ವಾಡಿಕೆಯಂತೆ ಪ್ರತೀ ವರ್ಷ ಜುಲೈ ತಿಂಗಳಿನಲ್ಲಿ ವನಮಹೋತ್ಸವ ಆಚರಿಸಲಾಗುತ್ತದೆ. ಅಂದ ಮೇಲೆ ಎಲ್ಲಾ ಕಳೆದುಹೋದ ಮೇಲೆ ಈ ನಡುಗಾಲದಲ್ಲಿ ಯಾಕೆ ಈ ಪ್ರಲಾಪ ಎಂದು ಓದುಗ ಕೆಲವರಿಗಾದರೂ ಅನ್ನಿಸಬಹುದು. ಗಿಡ ನೆಡುವ ಕಾರ್ಯಕ್ರಮವನ್ನು ನಂತರದ ತಿಂಗಳೂ ನಡೆಸಬಹುದು. ಭೂಮಿಯಲ್ಲಿ ತೇವಾಂಶವಿದ್ದು ಸರಿಯಾದ ರಕ್ಷಣೆ– ಪೋಷಣೆ ನೀಡಿದರೆ ಸಸಿಗಳು ಉಳಿದು ಬೆಳೆಯುತ್ತವೆ. ಇದಕ್ಕೆ ಪ್ರಾಮಾಣಿಕ ಬದ್ಧತೆ ಬೇಕು. ಆದರೆ ಗಿಡಗಳನ್ನು ನೆಡುವಾಗ ಇರುವ ಉತ್ಸಾಹ ನೆಟ್ಟನಂತರ ಉಳಿಯುವುದು ಬಹಳ ಕಡಿಮೆ. ಹಾಗಾಗಿಯೇ ಕಳೆದ ವರ್ಷ ಗಿಡಗಳನ್ನು ನೆಟ್ಟಗುಂಡಿಗಳನ್ನು ಸ್ವಚ್ಚಗೊಳಿಸಿ ಮತ್ತೆ ಈ ಬಾರಿಯೂ– ಪ್ರತೀ ಬಾರಿಯೂ ನೆಡುವ ಪ್ರಸಂಗಗಳು ಹೆಚ್ಚಿನ ಕಡೆಗಳಲ್ಲಿ ಕಾಣಸಿಗುತ್ತವೆ. ಯಾಕೇ ಹೀಗೆ ಆಗುತ್ತದೆ? ಕೇವಲ ಪ್ರಚಾರದ ಆಸೆಯೇ? ಪತ್ರಿಕೆಗಳಲ್ಲಿ ಫೋಟೊ ಬಂದರೆ ಸಾಕೇ? ವರದಿ ತಯಾರು ಮಾಡಿ ಸಂಬಂಧಿಸಿದ ಇಲಾಖೆ, ಸಂಸ್ಥೆ ಇತ್ಯಾದಿಗಳಿಗೆ ಸಲ್ಲಿಸಿದರೆ ಸಾಕೇ? ಈ ಬಾಬ್ತಿನಲ್ಲಿ ವಿನಿಯೋಗಿಸಲು ನಿಗದಿಯಾಗಿದ್ದ ಹಣ ಬಿಡುಗಡೆಯಾಗಿ ಲೆಕ್ಕಾ ಚುಕ್ತಾ ಮಾಡಿ ಕೇವಲ ‘ಪೇಪರ್ ಪ್ರಾಜೆಕ್ಟ್’ ಆದರೆ, ದುಡ್ಡು ಯಾರ್ಯಾರದ್ದೋ ಕಿಸೆ ಸೇರಿದರೆ ತೃಪ್ತಿಯಾಯಿತೇ? ಎಂಬಿತ್ಯಾದಿ ಹಲವು ಪ್ರಶ್ನೆಗಳು ನನ್ನಂತೆ ನಿಮ್ಮನ್ನು ಕಾಡಬಹುದು– ಕಾಡಬೇಕು. ‘ಮರ’ ಎಂಬುದು ಪ್ರಕೃತಿಯ ಅನನ್ಯ ಕೊಡುಗೆ. ಪ್ರತಿಯೊಂದು ಗಿಡ– ಮರದ ಎಲ್ಲಾ ಭಾಗಗಳೂ ಮನುಷ್ಯನ ಬದುಕಿಗೆ ಪೂರಕವಾಗಿವೆ.

ಹಾಗಾಗಿ ಮರಕ್ಕೆ ಕೊಡುವುದಕ್ಕೆ ಮಾತ್ರ ಗೊತ್ತು. ‘ಮರ ದೇನಾ ಬ್ಯಾಂಕ್– ಮನುಷ್ಯ ಲೇನಾ ಬ್ಯಾಂಕ್’ ಎಂದು ತಮಾಷೆಗೆ ಹೇಳಿದರೂ ಗಂಭೀರ ಸತ್ಯ ಅಡಗಿದೆ ಇದರಲ್ಲಿ. ‘ನೀನ್ಯಾರಿಗಾದೆಯೋ ಎಲೆ ಮಾನವ?’ ಎಂದು ಗೋವು ಕೇಳುವ ಹಾಗೆ ಮನುಷ್ಯ ಪ್ರಕೃತಿ– ಪರಿಸರಕ್ಕೆ ಯಾವತ್ತೂ ಪ್ರಯೋಜನಕಾರಿಯಲ್ಲ. ಏಕೆಂದರೆ ಸ್ವಾರ್ಥದ ಮತ್ತೊಂದು ಪದವೇ ಮನುಷ್ಯ ಎಂಬುದು ಸೂರ್ಯನಷ್ಟೇ ಸತ್ಯ, ಇರಲಿ. ಇಷ್ಟಾದರೂ ಪ್ರಕೃತಿಯ ನಾಶಕ್ಕೆ ಮನುಷ್ಯನ ಕೃತ್ಯಗಳು ಹೇಗೆ ಕಾರಣವಾಗುತ್ತವೆಯೋ, ಹಾಗೇನೇ ಪ್ರಕೃತಿ– ಪರಿಸರದ ರಕ್ಷಣೆಗೆ ಮಾನವನೇ ಮುಂದಾಗಬೇಕು.

ಏಕೆಂದರೆ ಪ್ರಕೃತಿಯ ಉಳಿವು– ಮಾನವನ ಉಳಿವು. ಈ ಉದ್ದೇಶದಿಂದಲೇ ವನಮಹೋತ್ಸವ ಪ್ರಾರಂಭವಾದಾಗ ಮಹಾನ್ ಪರಿಸರವಾದಿ ಕನ್ಹಯ್ಯಲಾಲ್ ಮುಂನ್ಷಿಯವರು ಒಂದು ಘೋಷವಾಕ್ಯವನ್ನು ನೀಡಿದರು– ‘Tree is water, water is bread, bread is life' (ಮರವೇ ನೀರು, ನೀರೇ ಅನ್ನ, ಅನ್ನವೇ ಜೀವನ) ಇದನ್ನು ಅರ್ಥ ಮಾಡಿಕೊಂಡು ಇದರಿಂದ ಪ್ರೇರಿತರಾದ ಹಲವು ಸಮಾಜ ಸೇವಕರು, ಪರಿಸರ ಪ್ರೇಮಿಗಳು ಸ್ವಯಂ ಪ್ರೇರಿತರಾಗಿ, ಸಂಘಟನಾತ್ಮಕವಾಗಿ ಪರಿಸರದ ರಕ್ಷಣೆಗೆ ಮುಂದಾದ ಹಲವು ಉದಾಹರಣೆಗಳು ದೇಶದುದ್ದಗಲಕ್ಕೂ ಸಿಗುತ್ತವೆ. ಅಪ್ಪಿಕೊ ಚಳುವಳಿ, ಚಿಪ್ಕೊ ಚಳುವಳಿ ಮುಂತಾದವು ಉದಾಹರಣೆಯಾಗಿ ಈಗಲೂ ಸಕ್ರಿಯವಾಗಿವೆ.

ಒಂದು ಗಿಡವನ್ನು ನೆಟ್ಟು ಬೆಳೆಸಿದರೆ ಒಂದು ಜೀವ ಉಳಿಸಿದಂತೆ. ಒಂದು ಮರ ಕಡಿದರೆ ಹಲವು ಜೀವನಾಶ ಮಾಡಿದಂತೆ ಎಂಬುದು ಸತ್ಯದ ಮಾತು. ‘ಊರಿಗೊಂದು ವನ– ಮನೆಗೊಂದು ಗಿಡ’ ಇದ್ದರೆ ಉಲ್ಲಾಸಕರ ವಾತಾವರಣವಿರುತ್ತದೆ. ಆದರೆ, ಸ್ವಾರ್ಥಿಗಳಾದವರು, ಧನದಾಹಿಗಳು ಅರಣ್ಯವನ್ನು ಎಗ್ಗಿಲ್ಲದೇ ನಾಶ ಮಾಡುತ್ತಿರುವ ಕೆಲಸ ಈಗಲೂ ನಿರಾತಂಕವಾಗಿ ಸಾಗಿದೆ. ನಮ್ಮ ಹಸಿರು ಕಾಡುಗಳು ಹೊರಗಿನಿಂದ ನೋಡಲು ಡಟ್ಟವಾಗಿ ಕಾಣಿಸುತ್ತವೆ. ಆದರೆ ಕಾಡಿನ ಮಧ್ಯದಿಂದಲೇ ಮರಗಳು ಖಾಲಿಯಾಗುತ್ತಿವೆ. ಒಂದು ಮರ ಬೆಳೆಯಲು ದಶಕಗಳ ಸಮಯ ಬೇಕಾಗುತ್ತದೆ. ಆದರೆ ಮರವನ್ನು ಉರುಳಿಸಲು ಕೆಲವೇ ಕ್ಷಣಗಳು ಸಾಕು.

ಇದಕ್ಕೆಲ್ಲಾ ಅಧಿಕಾರಿಶಾಹಿ, ಆಡಳಿತ ವರ್ಗದ ಪ್ರೋತ್ಸಾಹ, ಕುಮ್ಮಕ್ಕು, ಸ್ವಾರ್ಥ ಇದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದ್ದರೂ, ‘ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?’.

ಮರ–ಗಿಡ, ಕಾಡು, ಗಿಡಮೂಲಿಕೆ ಉಳಿದರೆ ಪ್ರಕೃತಿ ಸಮತೋಲನವಾಗಿ ಜೀವಜಗತ್ತೂ ಕೂಡ ನೆಮ್ಮದಿಯ ಬದುಕು ಕಾಣಲು ಸಾಧ್ಯ. ‘ಈ ಭೂಮಿ, ಪರಿಸರ ನಮಗಾಗಿ ಅಲ್ಲ, ಮುಂದಿನ ಪೀಳಿಗೆಗಾಗಿ’ ಎಂದು ಎಲ್ಲರೂ
ತಿಳಿಯೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.