ದೂರು ನೀಡಲು ಪೋರ್ಟಲ್, 1930 ಸಹಾಯವಾಣಿ
ಸೈಬರ್ ವಂಚನೆ ಯತ್ನ ಮತ್ತು ವಂಚನೆಗೆ ಒಳಗಾದ ಸಂದರ್ಭದಲ್ಲಿ ಅದರ ಬಗ್ಗೆ ದೂರು ನೀಡಲು ರಾಷ್ಟ್ರೀಯ ಮಟ್ಟದಲ್ಲಿ ‘ಸಿಟಿಜನ್ ಫೈನಾನ್ಶಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್’ ಅನ್ನು ರೂಪಿಸಲಾಗಿದೆ. 2021ರಲ್ಲಿ ಇದು ಅಸ್ತಿತ್ವಕ್ಕೆ ಬಂದಿದ್ದು, ಇದರ ಅಡಿಯಲ್ಲಿ ರಾಷ್ಟ್ರೀಯ ಸೈಬರ್ ಅಪರಾಧ ದೂರು ನೀಡುವ ಪೋರ್ಟಲ್ www.cybercrime.gov.in ಕಾರ್ಯನಿರ್ವಹಿಸುತ್ತದೆ. ಇದರ ಜೊತೆಗೆ ಸೈಬರ್ ಪ್ರಕರಣಗಳ ಬಗ್ಗೆ ದೂರು ನೀಡುವುದಕ್ಕೆ ‘1930’ ಸಹಾಯವಾಣಿಯನ್ನೂ ಆರಂಭಿಸಲಾಗಿದೆ. ಈ ವ್ಯವಸ್ಥೆ ಜಾರಿಗೆ ಬಂದ ನಂತರ 7.6 ಲಕ್ಷಕ್ಕೂ ಹೆಚ್ಚು ಸೈಬರ್ ವಂಚನೆ ದೂರು ದಾಖಲಾಗಿದ್ದು, ₹2,400 ಕೋಟಿಗೂ ಹೆಚ್ಚು ಹಣ ವಂಚಕರ ಕೈ ಸೇರದಂತೆ ತಡೆಯಲಾಗಿದೆ ಎಂದು ಗೃಹ ಸಚಿವಾಲಯವು ಈ ವರ್ಷದ ಆಗಸ್ಟ್‌ನಲ್ಲಿ ಸಂಸತ್ತಿಗೆ ತಿಳಿಸಿತ್ತು.