ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ಆಳ–ಅಗಲ: ಜನರ ಮೇಲೆ ಹೆಚ್ಚುತ್ತಿದೆ ಹೆದ್ದಾರಿ ಟೋಲ್‌ ಹೊರೆ
ಆಳ–ಅಗಲ: ಜನರ ಮೇಲೆ ಹೆಚ್ಚುತ್ತಿದೆ ಹೆದ್ದಾರಿ ಟೋಲ್‌ ಹೊರೆ
ಫಾಲೋ ಮಾಡಿ
Published 4 ಜೂನ್ 2024, 0:18 IST
Last Updated 4 ಜೂನ್ 2024, 0:18 IST
Comments
ಸಂಗ್ರಹಿಸಿದ್ದು ಎರಡೂವರೆ ಲಕ್ಷ ಕೋಟಿ ವೆಚ್ಚ ಮಾಡಿದ್ದು ಒಂದು ಲಕ್ಷ ಕೋಟಿ ₹1.45 ಲಕ್ಷ ಕೋಟಿ 2023–24ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಕಚ್ಚಾತೈಲದ ಮೇಲೆ ಸಂಗ್ರಹಿಸಿದ ‘ವಿಶೇಷ ಹೆಚ್ಚುವರಿ ಎಕ್ಸೈಸ್‌ ಸುಂಕ’ ₹44,300 ಕೋಟಿ 2023–24ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಸಂಗ್ರಹಿಸಿದ ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ ₹64,810 ಕೋಟಿ 2023–24ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಸಂಗ್ರಹಿಸಿದ ಹೆದ್ದಾರಿ ಟೋಲ್‌ ಮೊತ್ತ ₹2.54 ಲಕ್ಷ ಕೋಟಿ 2023–24ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ರಸ್ತೆ ಮತ್ತು ಹೆದ್ದಾರಿ ಅಭಿವೃದ್ಧಿ ಮತ್ತು ನಿರ್ವಹಣೆಗೆಂದು ಸಂಗ್ರಹಿಸಿದ ವಿವಿಧ ಸೆಸ್‌, ತೆರಿಗೆ ಮತ್ತು ಶುಲ್ಕಗಳ ಒಟ್ಟು ಮೊತ್ತ ₹1.08 ಲಕ್ಷ ಕೋಟಿ 2023–24ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ರಸ್ತೆ ಮತ್ತು ಹೆದ್ದಾರಿ ಅಭಿವೃದ್ಧಿಗೆಂದು ಮಾಡಿದ ಒಟ್ಟು ವೆಚ್ಚ
ಮೂಲಸೌಕರ್ಯಗಳೇ ಇಲ್ಲದ ಹೆದ್ದಾರಿಗಳು
ಸರ್ಕಾರವೇ ನಿರ್ಮಿಸಿದ ಹೆದ್ದಾರಿಗಳಿರಲಿ, ಸರ್ಕಾರ–ಖಾಸಗಿ ಸಹಭಾಗಿತ್ವದ ಹೆದ್ದಾರಿಗಳಿರಲಿ ಅಥವಾ ಖಾಸಗಿ ಕಂಪನಿಯು ನಿರ್ಮಿಸಿದ ಹೆದ್ದಾರಿಗಳಿರಲಿ ಜನರು ಟೋಲ್‌ ನೀಡಲೇಬೇಕು. ಟೋಲ್‌ ಪಾವತಿ ಜೊತೆಯಲ್ಲಿ ಸೆಸ್‌ ಅನ್ನು ಕೂಡ ಜನರು ನೀಡಬೇಕಿದೆ. ಇಷ್ಟೆಲ್ಲಾ ಹಣ ಪಾವತಿಸಿದರೂ ಹೆದ್ದಾರಿಗಳಲ್ಲಿ ಮೂಲಸೌಕರ್ಯ ಮಾತ್ರ ಮರೀಚಿಕೆಯಾಗಿದೆ. ಇದನ್ನು ಸಿಎಜಿ ವರದಿಯಲ್ಲಿಯೇ ಉಲ್ಲೇಖಿಸಲಾಗಿದೆ. ‘ದಕ್ಷಿಣ ಭಾರತದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಘಟಕಗಳ ನಿರ್ವಹಣೆ’ ಎಂಬ ವರದಿಯನ್ನು 2023ರಲ್ಲಿ ಸಿದ್ಧಪಡಿಸಲಾಗಿತ್ತು. ದಕ್ಷಿಣ ಭಾರತದ 37 ರಾಷ್ಟ್ರೀಯ ಹೆದ್ದಾರಿಗಳ, ಒಟ್ಟು 41 ಟೋಲ್‌ ಘಟಕಗಳನ್ನು ಪರಿಶೀಲಿಸಿ ವರದಿ ನೀಡಲಾಗಿದೆ. ಶೌಚಾಲಯ, ಆಂಬುಲೆನ್ಸ್‌ ಸೇವೆ, ವಿಶ್ರಾಂತಿ ಕೊಠಡಿ... ಹೀಗೆ ಮೂಕಸೌರ್ಕಗಳನ್ನು ಒದಗಿಸುವುದು ಕಡ್ಡಾಯವಾದರೂ, ಹೆದ್ದಾರಿಗಳಲ್ಲಿ ಇವುಗಳು ಯಾವವೂ ಇಲ್ಲದಾಗಿವೆ ಎಂದು ವರದಿಯಲ್ಲಿ ವಿವರಿಸಲಾಗಿತ್ತು.
ದಂಡ ಶುಲ್ಕದಿಂದಲೂ ಟೋಲ್‌ ಸಂಗ್ರಹ ಭಾರಿ ಏರಿಕೆ
ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಂದ ಸಂಗ್ರಹಿಸಲಾಗುತ್ತಿರುವ ಶುಲ್ಕವು ವರ್ಷದಿಂದ ವರ್ಷಕ್ಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2018–19ನೇ ಆರ್ಥಿಕ ವರ್ಷದಿಂದ 2020–21ನೇ ಆರ್ಥಿಕ ವರ್ಷದವರೆಗಿನ ಅವಧಿಯಲ್ಲಿ ಹೀಗೆ ಸಂಗ್ರಹಿಸಲಾದ ಟೋಲ್‌ ಮೊತ್ತದಲ್ಲಿನ ಏರಿಕೆಯು ಸಾವಿರ ಕೋಟಿಯ ಆಸುಪಾಸಿನಲ್ಲಿ ಇತ್ತು. 2021–22ನೇ ಸಾಲಿನಲ್ಲಿ ಟೋಲ್‌ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ ಕಾರಣ ಆ ವರ್ಷ ಸಂಗ್ರಹವಾದ ಟೋಲ್‌ ಮೊತ್ತದಲ್ಲಿ ಸುಮಾರು ಐದು ಸಾವಿರ ಕೋಟಿಯಷ್ಟು ಏರಿಕೆಯಾಗಿತ್ತು. ಆದರೆ ನಂತರದ ವರ್ಷಗಳಲ್ಲಿ ಪ್ರತಿ ವರ್ಷ ಸಂಗ್ರಹವಾದ ಟೋಲ್‌ ಮೊತ್ತದಲ್ಲಿ ಸರಾಸರಿ ₹15,000 ಕೋಟಿಯಷ್ಟು ಏರಿಕೆಯಾಗಿದೆ. 2021–22ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, 2022–23ರಲ್ಲಿ ಸಂಗ್ರಹವಾದ ಟೋಲ್‌ ಮೊತ್ತದಲ್ಲಿ ₹14,121 ಕೋಟಿಯಷ್ಟು ಏರಿಕೆಯಾಗಿತ್ತು. 2023–24ರಲ್ಲಿ ₹16,782ಕೋಟಿಯಷ್ಟು ಏರಿಕೆಯಾಗಿದೆ. ಫಾಸ್ಟ್‌ಟ್ಯಾಗ್‌ ಬಳಕೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿರುವುದು ಟೋಲ್‌ ಸಂಗ್ರಹ ಹೆಚ್ಚಾಗಲು ಕಾರಣ ಎನ್ನಲಾಗಿದೆ. ಫ್ಯಾಸ್ಟ್‌ಟ್ಯಾಗ್‌ ಮೂಲಕ ಹೆಚ್ಚು ಟೋಲ್‌ ಸಂಗ್ರಹವಾಗುತ್ತಿದ್ದರೂ, ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳಿಗೆ ಒಂದು ಪಟ್ಟು ಹೆಚ್ಚು ದಂಡ ವಿಧಿಸಲಾಗುತ್ತಿದೆ. ಉದಾಹರಣೆಗೆ ಒಂದು ಹೆದ್ದಾರಿಯಲ್ಲಿನ ಎರಡು ಟೋಲ್‌ಗಳ ನಡುವಣ ಶುಲ್ಕ ₹50 ಇದ್ದು, ಫಾಸ್ಟ್‌ಟ್ಯಾಗ್‌ ಇದ್ದರೆ ₹50ರಷ್ಟು ಶುಲ್ಕವನ್ನೇ ವಿಧಿಸಲಾಗುತ್ತದೆ. ಆದರೆ ಫಾಸ್ಟ್‌ಟ್ಯಾಗ್‌ ಇಲ್ಲದೇ ಇದ್ದರೆ ದಂಡ ಸೇರಿ ₹100 ಶುಲ್ಕ ವಿಧಿಸಲಾಗುತ್ತದೆ. ಹೀಗೆ ದಂಡ ಸೇರಿ ದುಪ್ಪಟ್ಟು ಶುಲ್ಕ ವಿಧಿಸುತ್ತಿರುವ ಕಾರಣದಿಂದಲೂ ಟೋಲ್‌ ಸಂಗ್ರಹ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಆದರೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು, ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ, ಹೊಸ ಹೆದ್ದಾರಿಗಳ ನಿರ್ಮಾಣದಿಂದಾಗಿ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಈ ಕಾರಣದಿಂದಲೇ ಟೋಲ್‌ ಮೊತ್ತ ಏರಿಕೆಯಾಗಿದೆ ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT