ಮೋದಿಗಾಗಿಯೂ ಪರದೆ
ಬ್ರಿಟನ್ ಪ್ರಧಾನಿಯಾಗಿದ್ದ ಬೋರಿಸ್ ಜಾನ್ಸನ್ ಅವರು 2022ರ ಏಪ್ರಿಲ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಆಗ ಸಬರಮತಿ ಆಶ್ರಮಕ್ಕೂ ಭೇಟಿ ನೀಡಿದ್ದರು. ಈ ವೇಳೆಯಲ್ಲಿ ಅಹಮದಾಬಾದ್‌ನಿಂದ ಆಶ್ರಮದವರೆಗಿನ ರಸ್ತೆಯುದ್ದಕ್ಕೂ ಬಿಳಿ ಪರದೆ ಹಾಕುವುದರ ಮೂಲಕ ಕೊಳೆಗೇರಿಗಳನ್ನು ಮುಚ್ಚಿಡಲಾಗಿತ್ತು. ಇದೇ ಸಂದರ್ಭದಲ್ಲಿ, ಕೊಳೆಗೇರಿಗಳಿಗೆ ಅಡ್ಡಲಾಗಿ ಹಾಕಲಾಗಿದ್ದ ಬಿಳಿ ಪರದೆಯನ್ನು ಎತ್ತಿ ಕೆಲವು ಮಕ್ಕಳು ರಸ್ತೆಗೆ ಮುಖಮಾಡಿ ಕುಳಿತಿದ್ದ ಚಿತ್ರವೊಂದನ್ನು ಬಹಿರಂಗವಾಗಿತ್ತು. ‘ಇದು ಮೋದಿ ಅವರ ನವಭಾರತ. ಜಾನ್ಸನ್‌ಗಾಗಿ ಕೊಳೆಗೇರಿಯನ್ನು ಮರೆಮಾಚಲಾಗಿದೆ’ ಎಂದೂ ಜರೆಯಲಾಯಿತು. ಆದರೆ, ಇದು ತಿರುಚಲಾದ ಮಾಹಿತಿಯಾಗಿತ್ತು.
ಜಾನ್ಸನ್ ಬಂದಾಗ ಕೊಳೆಗೇರಿಗೆ ಪರದೆ ಹೊದಿಸಲಾಗಿತ್ತಾದರೂ, ಹಂಚಿಕೊಳ್ಳಲಾಗಿದ್ದ ಚಿತ್ರಕ್ಕೂ ಆ ಸುದ್ದಿಗೂ ಸಂಬಂಧವಿರಲಿಲ್ಲ. ಈ ಚಿತ್ರ ತೆಗೆದದ್ದು 2021ರ ಮಾರ್ಚ್‌ನಲ್ಲಿ. ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸಬರಮತಿ ಆಶ್ರಮದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಈ ವೇಳೆ ಆಶ್ರಮಕ್ಕೆ ಸಾಗುವ ರಸ್ತೆ ಬದಿಗಳಲ್ಲಿ ಇರುವ ಕೊಳೆಗೇರಿಗಳನ್ನು ಮುಚ್ಚಿಡಲು ಬಿಳಿ ಪರದೆಗಳನ್ನು ಹಾಕಲಾಗಿತ್ತು! ಈ ಬಗ್ಗೆ ‘ದಿ ಕ್ವಿಂಟ್’ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳು ಫ್ಯಾಕ್ಟ್‌ಚೆಕ್ ಪ್ರಕಟಿಸಿವೆ. ಜೊತೆಗೆ ಅಹಮದಾಬಾದ್ ಮಿರರ್ ಕೂಡ ವರದಿ ಪ್ರಕಟಿಸಿದೆ.