ಕೇರಳದಲ್ಲಿ ನಿಪಾ ವೈರಾಣು ಈಗ ನಾಲ್ಕನೇ ಬಾರಿಗೆ ಕಾಣಿಸಿಕೊಂಡಿದೆ. ಈ ಹಿಂದಿಗಿಂತ ಹೆಚ್ಚು ಕಠಿಣವಾದ ನಿಯಂತ್ರಣ ಕ್ರಮಗಳನ್ನು ತೆಗೆದುಕೊಂಡಿರುವ ಕಾರಣ, ಬೆರಳೆಣಿಕೆಯ ಮಂದಿಗಷ್ಟೇ ನಿಪಾ ಹರಡಿದ್ದು, ಸಾವಿನ ಪ್ರಮಾಣವೂ ಕಡಿಮೆ ಇದೆ. ಹಣ್ಣು ತಿನ್ನುವ ಬಾವಲಿಗಳ ಪ್ರಭೇದಕ್ಕೆ ಸೇರಿದ ‘ಪ್ಲೈಯಿಂಗ್ ಫಾಕ್ಸ್’ ಬಾವಲಿಗಳಲ್ಲಿ ಈ ವೈರಾಣು ಇರುತ್ತದೆ ಮತ್ತು ಆ ಬಾವಲಿಗಳಿಂದಲೇ ಇದು ಹರಡುತ್ತದೆ ಎಂಬುದು ಈಗಾಗಲೇ ಪತ್ತೆಯಾಗಿದೆ. ಭಾರತದ ಬಹುತೇಕ ಕಡೆ ಇಂತಹ ಬಾವಲಿಗಳಿದ್ದರೂ, ಕೇರಳದಲ್ಲಿ ಮಾತ್ರ ನಿಪಾ ಹರಡುತ್ತಿರುವುದು ಇಂಥದ್ದೇ ಕಾರಣಕ್ಕೆ ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ನಿಪಾ ವೈರಾಣು ಕಾಣಿಸಿಕೊಂಡಾಗಲೆಲ್ಲಾ ರಾಷ್ಟ್ರೀಯ ವೈರಾಣು ವಿಜ್ಞಾನ ಸಂಸ್ಥೆಯ ತಂಡ ಕೇರಳಕ್ಕೆ ಭೇಟಿ ಅಧ್ಯಯನ ನಡೆಸುತ್ತದೆ. ಆದರೆ, ಈ ಸಂಬಂಧ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.

ಕೇರಳದ ಕೋಯಿಕ್ಕೋಡ್‌ನ ಸೂಪ್ಪಿಕ್ಕಡ ಬಳಿಯ ಗ್ರಾಮವೊಂದರಲ್ಲಿ 2018ರ ಮೇನಲ್ಲಿ ನಿಪಾ ವೈರಾಣು ಕಾಣಿಸಿಕೊಂಡಿತ್ತು. ಆಗ ನಿಪಾಗೆ 17 ಮಂದಿ ಬಲಿಯಾಗಿದ್ದರು. ಮೊದಲು ವೈರಾಣು ಕಾಣಿಸಿಕೊಂಡಿದ್ದ ಮಹಿಳೆಯ ಹಲವು ದಿನಗಳ ದಿನಚರಿಯನ್ನು ಅಧ್ಯಯನ ಮಾಡಿದ ನಂತರ, ಆಕೆ ಬಾವಲಿಯೊಂದನ್ನು ಬರಿಗೈನಿಂದ ಮುಟ್ಟಿದ್ದರು ಎಂಬುದು ಗೊತ್ತಾಗಿತ್ತು. ಅವರಲ್ಲಿದ್ದ ವೈರಾಣು ಮತ್ತು ಆ ಜಾತಿಯ ಬಾವಲಿಗಳಲ್ಲಿನ ಮಾದರಿಗಳನ್ನು ಅಧ್ಯಯನ ಮಾಡಿದಾಗ, ನಿಪಾ ವೈರಾಣು ಆ ಬಾವಲಿಯಿಂದಲೇ ಬಂದಿದ್ದು ಎಂಬುದು ಪತ್ತೆಯಾಗಿತ್ತು. ಕೇರಳದಲ್ಲಿ 2019ರಲ್ಲಿ, 2021ರಲ್ಲೂ ನಿಪಾ ವೈರಾಣು ಕಾಣಿಸಿಕೊಂಡಿತ್ತು. ಇಷ್ಟೂ ವರ್ಷಗಳ ಅವಧಿಯಲ್ಲಿ ನಿಪಾ ವೈರಾಣು ಬಗ್ಗೆ ಕೇರಳದ ವಿವಿಧ ಸಂಸ್ಥೆಗಳು ಅಧ್ಯಯನ ನಡೆಸುತ್ತಲೇ ಇದ್ದವು. ರಾಷ್ಟ್ರೀಯ ವೈರಾಣು ವಿಜ್ಞಾನ ಸಂಸ್ಥೆ ಸಹ ಕೇರಳದ ಹಲವೆಡೆ ಬಾವಲಿಗಳಲ್ಲಿ ವೈರಾಣುಗಳ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಿತ್ತು. ಕೇರಳದಲ್ಲಿರುವ ಫ್ಲೈಯಿಂಗ್ ಫಾಕ್ಸ್ ಬಾವಲಿಗಳಲ್ಲಿ ನಿಪಾ ವೈರಾಣು ಇದ್ದು, ಇದು ಇಡೀ ಕೇರಳದಲ್ಲಿ ಹರಡುವ ಸಾಧ್ಯತೆ ಇದೆ ಎಂದು ಹೇಳಿತ್ತು. ಆದರೆ, ಕೇರಳದ ಕೋಯಿಕ್ಕೋಡ್ ಮತ್ತು ಮಲ್ಲಪ್ಪುರ ಜಿಲ್ಲೆಯ ಕೆಲವು ಗ್ರಾಮಗಳಲ್ಲಷ್ಟೇ ನಿಪಾ ವೈರಾಣು ಕಾಣಿಸಿಕೊಳ್ಳುತ್ತಿದೆ. ವೈರಾಣು ಕಾಣಿಸಿಕೊಂಡ ಗ್ರಾಮಗಳೆಲ್ಲವೂ ಹತ್ತಾರು ಕಿ.ಮೀ. ದೂರದ ವ್ಯಾಪ್ತಿಯಲ್ಲಿಯೇ ಇವೆ ಎಂಬುದು ವಿಜ್ಞಾನಿಗಳ ಗಮನ ಸೆಳೆದ ಅಂಶ.

2019ರಲ್ಲಿ ತಿರುವನಂತಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಂಟುರೋಗ ವಿಭಾಗವು ನಿಪಾ ವೈರಾಣು ಬಗ್ಗೆ ಅಧ್ಯಯನ ನಡೆಸಿತ್ತು. ತ್ರಿಶ್ಶೂರ್‌ನ ಹವಾಮಾನ ಬದಲಾವಣೆ ಮತ್ತು ಪರಿಸರ ವಿಜ್ಞಾನ ಕಾಲೇಜು ಸಹ ಈ ಅಧ್ಯಯನದಲ್ಲಿ ಜತೆಯಾಗಿತ್ತು. ನಿಪಾ ವೈರಾಣು ಫ್ಲೈಯಿಂಗ್ ಫಾಕ್ಸ್ ಬಾವಲಿಗಳಲ್ಲಿ ಸದಾ ಇದ್ದೇ ಇರುತ್ತವೆ. ಆದರೆ, ಅವು ಬಾವಲಿಗಳ ದೇಹದಿಂದ ಹೊರಗೆ ಬೀಳುವುದಿಲ್ಲ. ಹೊರಗೆ ಬಿದ್ದಾಗ ಮಾತ್ರ ಅವು ಬೇರೆ ಪ್ರಾಣಿಗಳಿಗೆ ಮತ್ತು ಮನುಷ್ಯನಿಗೆ ಹರಡುವ ಅಪಾಯವಿರುತ್ತದೆ ಎಂಬುದು ಅಧ್ಯಯನದಿಂದ ಗೊತ್ತಾಗಿತ್ತು. ಹಾಗಿದ್ದಲ್ಲಿ, ಯಾವ ಸಂದರ್ಭದಲ್ಲಿ ನಿಪಾ ವೈರಾಣು ಬಾವಲಿಗಳ ಮಲ–ಮೂತ್ರ ಮತ್ತು ಜೊಲ್ಲಿನ ಮೂಲಕ ಹೊರಬರುತ್ತವೆ ಎಂಬುದನ್ನು ಪತ್ತೆ ಮಾಡುವತ್ತ ವಿಜ್ಞಾನಿಗಳ ತಂಡ ಗಮನ ಕೇಂದ್ರೀಕರಿಸಿತ್ತು.

2018 ಮತ್ತು 2019ರಲ್ಲಿ ನಿಪಾ ವೈರಾಣು ಕಾಣಿಸಿಕೊಂಡಿದ್ದು ಏಪ್ರಿಲ್–ಮೇ ತಿಂಗಳಿನಲ್ಲಿ. ಫ್ಲೈಯಿಂಗ್ ಫಾಕ್ಸ್ ಬಾವಲಿಗಳ ಸಂತಾನೋತ್ಪತಿ ಅವಧಿ ಡಿಸೆಂಬರ್–ಮೇ. ಈ ಅವಧಿಯಲ್ಲಿ ಈ ಬಾವಲಿಗಳ ದೈನಂದಿನ ಚಟುವಟಿಕೆಗಳು ಅತ್ಯಂತ ಒತ್ತಡದಿಂದ ಕೂಡಿರುತ್ತವೆ. ಈ ಬಾವಲಿಗಳ ಮೇಲೆ ಒತ್ತಡ ಹೆಚ್ಚಾದಾಗ ನಿಪಾ ವೈರಾಣು ಅವುಗಳ ದೇಹದಿಂದ ಹೊರಗೆ ಬೀಳುತ್ತದೆ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಆದರೆ, ಹಾಗಿದ್ದಲ್ಲಿ ಅಂತಹ ಬಾವಲಿಗಳು ಇರುವೆಡೆಯೆಲ್ಲಾ, ಅವುಗಳ ಸಂತಾನೋತ್ಪತಿ ಅವಧಿಯಲ್ಲಿ ನಿಪಾ ವೈರಾಣು ಹರಡಬೇಕಿತ್ತು. ಆದರೆ, ಬೇರೆ ಕಡೆ ಹಾಗಾಗುತ್ತಿಲ್ಲ. ಜತೆಗೆ 2021ರಲ್ಲಿ ನಿಪಾ ವೈರಾಣು ಕಾಣಿಸಿಕೊಂಡಿದ್ದು ಸೆಪ್ಟೆಂಬರ್ ತಿಂಗಳಿನಲ್ಲಿ. ಹೀಗಾಗಿ ಈ ಬಾವಲಿಗಳ ದೇಹದಿಂದ ನಿಪಾ ವೈರಾಣು ಹೊರಬೀಳುವುದು ಸಂತಾನೋತ್ಪತಿ ಅವಧಿಯ ಒತ್ತಡದಿಂದ ಮಾತ್ರವಲ್ಲ. ಬದಲಿಗೆ ಬಾಹ್ಯ ಒತ್ತಡಗಳೂ ಇದನ್ನು ಪ್ರಭಾವಿಸುತ್ತಿವೆ. ಹಾಗಿದ್ದಲ್ಲಿ ನಿಪಾ ವೈರಾಣು ಹೊರಬೀಳುವಂತೆ ಮಾಡುತ್ತಿರುವ ಬಾಹ್ಯ ಒತ್ತಡ ಯಾವುದು ಎಂಬುದರತ್ತಲೂ ವಿಜ್ಞಾನಿಗಳ ತಂಡ ಗಮನ ನೀಡಿತು.

ಈ ಅಧ್ಯಯನವು ಇನ್ನೂ ನಡೆಯುತ್ತಿದ್ದು, ನಿಪಾ ವೈರಾಣು ಯಾವ ಸಂದರ್ಭದಲ್ಲಿ ಬಾವಲಿಗಳಿಂದ ಹೊರಬೀಳಬಹುದು ಎಂಬುದಕ್ಕೆ ಬೇರೆ ಸಾಧ್ಯತೆಗಳನ್ನು ಊಹಿಸಿದೆ. ಕೇರಳದಲ್ಲಿ ಈವರೆಗೆ ನಾಲ್ಕು ಬಾರಿ ನಿಪಾ ಕಾಣಿಸಿಕೊಂಡಿರುವ ಗ್ರಾಮಗಳು ಜಾನಕಿಕ್ಕಾಡ್ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡೇ ಇವೆ. ಕಲ್ಲಾಡ, ಸೂಪ್ಪಿಕ್ಕಡ, ಪಳೂರು ಗ್ರಾಮಗಳು ಈ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡೇ ಇದ್ದು, ಈ ಎಲ್ಲಾ ಗ್ರಾಮಗಳ ಭೌಗೋಳಿಕ ಲಕ್ಷಣಗಳು ಒಂದೇ ತೆರನಾಗಿವೆ. ಒಂದೆಡೆ ಅರಣ್ಯ ಪ್ರದೇಶ, ಮತ್ತೊಂದೆಡೆ ನದಿಯಿದೆ. ಅಡಿಕೆ ತೋಟಗಳು, ಮಾವಿನ ಮರಗಳು, ಅರಳೀ ಮರಗಳು ಈ ಪ್ರದೇಶದಲ್ಲಿ ಹೇರಳವಾಗಿವೆ. ಇಲ್ಲಿ ಪ್ಲೈಯಿಂಗ್ ಫಾಕ್ಸ್ ಬಾವಲಿಗಳು ಹೇರಳವಾಗಿವೆ. ಈ ಪ್ರದೇಶದಲ್ಲಿ ಅತಿಯಾದ ಉಷ್ಣಾಂಶ, ಅತಿಯಾದ ಮಳೆಯಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ನಿಪಾ ವೈರಸ್ ಕಾಣಿಸಿಕೊಂಡಿದೆ. 2018 ಮತ್ತು 2019ರಲ್ಲಿ ಅತಿಯಾದ ಮಳೆ, 2021 ಮತ್ತು 2023ರಲ್ಲಿ ಮಳೆ ಕೊರತೆಯುಂಟಾದಾಗ ನಿಪಾ ಕಾಣಿಸಿಕೊಂಡಿದೆ. ಅಂದರೆ ಫ್ಲೈಯಿಂಗ್ ಫಾಕ್ಸ್ ಬಾವಲಿಗಳು ಇರುವ ಪರಿಸರದಲ್ಲಿ ಬದಲಾವಣೆ ಉಂಟಾದಾಗ ಅವು ವಿಚಲಿತವಾಗುತ್ತವೆ ಮತ್ತು ಅಂತಹ ಸಂದರ್ಭದಲ್ಲಿ ಅವುಗಳ ದೇಹದಿಂದ ನಿಪಾ ವೈರಾಣು ಹೊರಬೀಳುತ್ತದೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಈ ಪ್ರತಿಪಾದನೆಯು ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಇದನ್ನು ದೃಢಪಡಿಸಿಕೊಳ್ಳಲು ಇನ್ನಷ್ಟು ಅಧ್ಯಯನದ ಅವಶ್ಯಕತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಹರಡುವುದು ಹೇಗೆ

* ಫ್ಲೈಯಿಂಗ್ ಫಾಕ್ಸ್ ಬಾವಲಿಗಳಲ್ಲಿ ನಿಪಾ ವೈರಾಣು ಇರುತ್ತದೆ. ಈ ಬಾವಲಿಗಳ ಮಲ–ಮೂತ್ರ ಮತ್ತು ಜೊಲ್ಲಿನ ಮೂಲಕ ವೈರಾಣುಗಳು ಹೊರಬೀಳುತ್ತವೆ. ಬಾವಲಿಗಳು ಕೂತ ಎಳನೀರು, ಬಾಳೆಗೊನೆಗಳ ಮೇಲೆ ಈ ವೈರಾಣು ಕೂತಿರುತ್ತದೆ. ಬಾವಲಿಗಳು ತಿಂದುಬಿಟ್ಟ ಹಣ್ಣುಗಳಲ್ಲೂ ಈ ವೈರಾಣು ಇರುತ್ತದೆ

* ಬಾವಲಿಗಳು ಅರ್ಧಂಬರ್ಧ ತಿಂದುಬಿಟ್ಟ ಹಣ್ಣುಗಳನ್ನು ತಿನ್ನುವ ಪ್ರಾಣಿಗಳಿಗೆ ಈ ಸೋಂಕು ಹರಡುತ್ತದೆ
(ಮಲೇಷ್ಯಾದಲ್ಲಿ ಈ ರೀತಿ ಹಂದಿಗಳಿಗೆ ಸೋಂಕು ಹರಡಿತ್ತು. ಫಿಲಿಪ್ಪೀನ್ಸ್‌ನಲ್ಲಿ ಕುದುರೆಗಳಿಗೆ ಹರಡಿತ್ತು. ಅವುಗಳ ಸಂಪರ್ಕದಲ್ಲಿ ಇದ್ದ ಮನುಷ್ಯರಿಗೆ ಸೋಂಕು ತಗುಲಿತ್ತು)

* ಬಾವಲಿಗಳು ಕೂತಿದ್ದ ಎಳನೀರು, ಬಾಳೆಗೊನೆಗಳನ್ನು ಮುಟ್ಟುವ ಮನುಷ್ಯರಿಗೆ ನಿಪಾ ವೈರಾಣು ತಗಲುತ್ತದೆ.

* ಸೋಂಕು ತಗುಲಿರುವ ಪ್ರಾಣಿಗಳ ಸಂಪರ್ಕಕ್ಕೆ ಬರುವ ಮನುಷ್ಯನಿಗೂ ಸೋಂಕು ಹರಡುತ್ತದೆ.

* ಸೋಂಕು ತಗುಲಿರುವ ಮನುಷ್ಯನ ಸಂಪರ್ಕಕ್ಕೆ ಬಂದ ವ್ಯಕ್ತಿಗಳಿಗೂ ಸೋಂಕು ಹರಡುತ್ತದೆ.

ಸೋಂಕಿನ ಲಕ್ಷಣಗಳು

ನಿಪಾ ವೈರಾಣುವಿನಿಂದ ಬರುವ ಆರೋಗ್ಯದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಯಾವುದೇ ಪ್ರತ್ಯೇಕ ಔಷಧಗಳು ಲಭ್ಯವಿಲ್ಲ. ಬದಲಿಗೆ ನಿಪಾದಿಂದ ಕಾಣಿಸಿಕೊಳ್ಳುವ ಅನಾರೋಗ್ಯದ ಲಕ್ಷಣಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ನಿಪಾ ಹರಡುವುದನ್ನು ತಡೆಗಟ್ಟುವ ಲಸಿಕೆ ಸಹ ಲಭ್ಯವಿಲ್ಲ. ನಿಪಾ ತಗುಲಿದವರಲ್ಲಿ ಶೇ 75ರಷ್ಟು ಮಂದಿ ಸಾವನ್ನಪ್ಪುತ್ತಾರೆ ಎಂಬುದನ್ನು ಈವರೆಗಿನ ದತ್ತಾಂಶಗಳು ಹೇಳುತ್ತವೆ.

* ಅತಿಯಾದ ಜ್ವರ

* ಉಸಿರಾಟದ ತೊಂದರೆ

* ಮೈ–ಕೈ ನೋವು

* ತೀವ್ರ ತಲೆನೋವು

* ಅತಿಯಾದ ವಾಂತಿ

ಮಲೇಷ್ಯಾ –ಸಿಂಗಪುರ–ಬಾಂಗ್ಲಾದೇಶ–ಭಾರತ

1999ರಲ್ಲಿ ಮಲೇಷ್ಯಾದಲ್ಲಿ ಮೊದಲ ಬಾರಿಗೆ ನಿಪಾ ವೈರಾಣು ಕಂಡುಬಂದಿತು. ಸುಂಗೈ ನಿಪಾ ಎನ್ನುವ ಗ್ರಾಮದಲ್ಲಿ ಹಂದಿ ಸಾಕಣಿಕೆಯಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರಲ್ಲಿ ಈ ವೈರಾಣು ಕಾಣಿಸಿತು. ನಿಪಾ ಎನ್ನುವ ಗ್ರಾಮದಲ್ಲಿ ಈ ವೈರಾಣು ಮೊದಲ ಬಾರಿಗೆ ಕಾಣಿಸಿಕೊಂಡಿದ್ದರಿಂದ ಇದಕ್ಕೆ ‘ನಿಪಾ’ ಎಂದೇ ನಾಮಕರಣ ಮಾಡಲಾಯಿತು. 1994ರಲ್ಲಿ ಮೊದಲ ಬಾರಿಗೆ ಹೆನ್‌ಡ್ರಾ ಎನ್ನುವ ವೈರಾಣು ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಂಡಿತ್ತು. ಈ ವೈರಾಣುವಿನ ಶೇ 98ರಷ್ಟು ಗುಣಲಕ್ಷಣಗಳನ್ನು ನಿಪಾ ಹೊಂದಿದೆ.

ಫ್ಲೈಯಿಂಗ್ ಫಾಕ್ಸ್ ಬಾವಲಿಗಳು ತಿಂದು ಬಿಟ್ಟ ಹಣ್ಣುಗಳನ್ನು ತಿಂದ ಹಂದಿಗಳಲ್ಲಿ ವೈರಾಣು ಹರಡಿ, ಹಂದಿಗಳ ಸಾಕಣಿಕೆಯಲ್ಲಿ ತೊಡಗಿದ್ದ ಮನುಷ್ಯರಲ್ಲಿಯೂ ಸೋಂಕು ಕಾಣಿಸಿಕೊಂಡಿತು. ಮಲೇಷ್ಯಾದ ಹಲವು ಭಾಗಗಳಲ್ಲಿ ಇರುವ ಹಂದಿಗಳಲ್ಲೂ ನಿಪಾ ಬಹುಬೇಗ ಕಾಣಿಸಿಕೊಳ್ಳತೊಡಗಿತು ಮತ್ತು ಈ ಮೂಲಕ ಹಂದಿಗಳ ಸಂರ್ಪಕಕ್ಕೆ ಬಂದ ಮನುಷ್ಯರನ್ನೂ ತಗುಲಿತು. ಇದೇ ವೇಳೆಗೆ ನಿಪಾ ಸಿಂಗಪುರದ ಕುದುರೆಗಳಿಗೂ ಹರಡಿ, ಕುದುರೆಗಳನ್ನು ತಿನ್ನುವ ಮನುಷ್ಯರಿಗೂ ಹಬ್ಬಿತು. ಮಲೇಷ್ಯಾದಲ್ಲಿ ಸುಮಾರು 300 ನಿಪಾ ಪ್ರಕರಣಗಳು ವರದಿಯಾಗಿ, ಸುಮಾರು 105 ಮಂದಿ ಮೃತಪಟ್ಟಿದ್ದರು. ಅಲ್ಲಿನ ಸರ್ಕಾರವು ಕ್ಷಿಪ್ರ ಕಾರ್ಯ ನಡೆಸಿ, ವೈರಾಣು ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಂಡಿತು. ದೇಶದಲ್ಲಿ ಇದ್ದ ಸುಮಾರು 850 ಹಂದಿ ಸಾಕಣಿಕೆ ಕೇಂದ್ರವನ್ನು ತೀವ್ರ ನಿಗಾವಣೆಯಲ್ಲಿ ಇರಿಸಿ, ಈ ಸೋಂಕು ಹತ್ತಿದ್ದ ಹಂದಿಗಳನ್ನು ಸಾಮೂಹಿಕವಾಗಿ ಕೊಲ್ಲುವ ನಿರ್ಧಾರ ತೆಗೆದುಕೊಂಡಿತು. ಎರಡು ಹಂತಗಳಲ್ಲಿ ಸುಮಾರು 11 ಲಕ್ಷ ಹಂದಿಗಳನ್ನು ಸರ್ಕಾರ ಹತ್ಯೆ ಮಾಡಿತು. 1999ರಿಂದ ಈಚೆಗೆ ಮಲೇಷ್ಯಾದಲ್ಲಿ ನಿಪಾ ಸೋಂಕು ಕಾಣಿಸಿಕೊಂಡಿಲ್ಲ ಮತ್ತು ಇದಕ್ಕೆ ಕಾರಣವು ಇನ್ನುವರೆಗೂ ತಿಳಿದಿಲ್ಲ.

2001ರ ಹೊತ್ತಿಗೆ ಬಾಂಗ್ಲಾದೇಶದಲ್ಲಿ ನಿಪಾ ಪತ್ತೆಯಾಯಿತು. ಮಲೇಷ್ಯಾದಲ್ಲಿ ಕಾಣಿಸಿಕೊಂಡ ನಿಪಾ ತಳಿಗಿಂತ ಇದು ಭಿನ್ನವಾಗಿತ್ತು. ಇದೇ ವರ್ಷದಲ್ಲಿ ಭಾರತದ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಿಪಾ ಕಂಡುಬಂತು. ಬಾಂಗ್ಲಾದೇಶದ ನಿಪಾ ತಳಿಯು ಸಿಲಿಗುರಿಯಲ್ಲಿ ಕಾಣಿಸಿಕೊಂಡ ತಳಿಗೆ ಸಾಮ್ಯತೆ ಇತ್ತು. ಫ್ಲೈಯಿಂಗ್ ಫಾಕ್ಸ್ ಬಾವಲಿಗಳು ಕೂರುವ ತಾಳೆ ಮರದಲ್ಲಿನ ತಾಳೆ ಹೆಂಡಗಳನ್ನು ಕುಡಿದು ಬಾಂಗ್ಲಾದೇಶದಲ್ಲಿ ಮನುಷ್ಯನಿಗೆ ನಿಪಾ ಹರಡಿತು. ಬಾಂಗ್ಲಾದೇಶಕ್ಕೆ ಸಿಲಿಗುರಿ ಹತ್ತಿರ ಇರುವ ಕಾರಣ ಇಲ್ಲೂ ಸೋಂಕು ಹರಡಿಕೊಂಡಿತು.

ಮಲೇಷ್ಯಾದಲ್ಲಿ ಮತ್ತೆಂದೂ ಸೋಂಕು ಕಾಣಿಸಿಕೊಳ್ಳದಿದ್ದರೂ ಭಾರತ ಹಾಗೂ ಬಾಂಗ್ಲಾದೇಶದಲ್ಲಿ ಪ್ರತಿ ವರ್ಷವೂ ನಿಪಾ ಸೋಂಕಿನ ಪ್ರಕರಣಗಳು, ಸೋಂಕಿನಿಂದ ಸಾವಿನ ಪ್ರಕರಣಗಳೂ ವರದಿಯಾಗುತ್ತಲೇ ಇದೆ.

ಮಲೇಷ್ಯಾದಲ್ಲಿ ಬಾವಲಿಗಳಿಂದ ಹಂದಿಗಳಿಗೆ ಹರಡಿತು. ಆದ್ದರಿಂದ, ಸೋಂಕು ಹರಡಿದ್ದ ಎಲ್ಲ ಹಂದಿಗಳನ್ನು ಸರ್ಕಾರ ಹತ್ಯೆ ಮಾಡಿತು. ಹಂದಿ ಸಾಕಣಿಕೆಯಲ್ಲಿ ತೊಡಗಿದ್ದ ಹಾಗೂ ಹಂದಿಗಳನ್ನು ಹತ್ಯೆ ಮಾಡಿದ ಸೈನಿಕರಿಗೆ, ಪ್ರಯೋಗಾಲಯದ ಕೆಲವರಿಗೆ ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದ ಕೆಲವು ವ್ಯಕ್ತಿಗಳಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿತ್ತು. ಆದ್ದರಿಂದ ಮಲೇಷ್ಯಾದಲ್ಲಿ ಹಂದಿಗಳಿಂದ ಮನುಷ್ಯರಿಗೆ ನಿಪಾ ಹರಡಿತು ಮತ್ತು ಇಲ್ಲಿ ಮನುಷ್ಯರಿಂದ ಮನುಷ್ಯರಿಗೆ ಸೋಂಕು ಹರಡಲೇ ಇಲ್ಲ. ಆದರೆ, ಭಾರತ ಹಾಗೂ ಬಾಂಗ್ಲಾದೇಶದಲ್ಲಿ ಮಾತ್ರ ಮನುಷ್ಯರಿಂದ ಮನುಷ್ಯರಿಗೆ ಸೋಂಕು ಹರಡುತ್ತಿದೆ. ಇದೇ ಕಾರಣದಿಂದಲೇ ವೈರಾಣುವನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿದೆ.

ಆಧಾರ: ರಾಷ್ಟ್ರೀಯ ವೈರಾಣುವಿಜ್ಞಾನ ಸಂಸ್ಥೆಯ ಅಧ್ಯಯನ ವರದಿಗಳು, ವಿಶ್ವ ಆರೋಗ್ಯ ಸಂಸ್ಥೆಯ ನಿಪಾ ಕೈಪಿಡಿ, ರಾಯಿಟರ್ಸ್, ಪಿಟಿಐ, ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ ಸಂಸ್ಥೆಯ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.