ಕಠಿಣವಾಗುತ್ತಿದೆ ಭಾರತದ ನಿಲುವು
ಸಿಂಧೂ ಜಲ ಒಪ್ಪಂದ ಏರ್ಪಟ್ಟ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಮೊದಲಾದ ತೀವ್ರ ಬಿಕ್ಕಟ್ಟಿನ ಪರಿಸ್ಥಿತಿಗಳು ಎದುರಾದಾಗಲೂ, ಈ ಒಪ್ಪಂದವನ್ನು ಕೈಬಿಡಲು ಎರಡೂ ದೇಶಗಳು ಮುಂದಾಗಿರಲಿಲ್ಲ. ಆದರೆ ಕೆಲ ವರ್ಷಗಳಿಂದ ನಡೆಯುತ್ತಿರುವ ಭಯೋತ್ಪಾದಕ ದಾಳಿ, ಒಪ್ಪಂದದ ಭವಿಷ್ಯವನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ. ಒಪ್ಪಂದಕ್ಕೆ ತಿಲಾಂಜಲಿ ಹಾಡುವ ಧಾಟಿಯಲ್ಲಿ ಕೆಲವು ನಾಯಕರು ಮಾತನಾಡಿದ್ದಾರೆ.
2001–02ರ ಸಮಯದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಸೇನಾ ಬಿಕ್ಕಟ್ಟು ಉಂಟಾಗಿತ್ತು. ಭಾರತದ ಜಲಸಂಪನ್ಮೂಲ ಸಚಿವಾಲಯದ ಅಂದಿನ ಸಚಿವ ಬಿಜೊಯ್ ಚಕ್ರವರ್ತಿ ಅವರು ಒಪ್ಪಂದವನ್ನು ರದ್ದುಗೊಳಿಸುವ ಕುರಿತು ಮಾತನಾಡಿದ್ದರು. ‘ಒಂದು ವೇಳೆ ನಾವು ಒಪ್ಪಂದದಿಂದ ಹಿಂದೆ ಸರಿದರೆ, ಪಾಕಿಸ್ತಾನದಲ್ಲಿ ಬರ ಉಂಟಾಗಲಿದೆ. ಪ್ರತಿ ಹನಿ ನೀರಿಗಾಗಿ ಪಾಕಿಸ್ತಾನ ಬೇಡುವ ಪರಿಸ್ಥಿತಿ ಉಂಟಾಗುತ್ತದೆ’ ಎಂದು ಅವರು ಅಂದು ಎಚ್ಚರಿಕೆ ನೀಡಿದ್ದರು.
ಜಮ್ಮು ಕಾಶ್ಮೀರದ ಉರಿ ಸೇನಾನೆಲೆಯ ಮೇಲೆ 2016ರಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಈ ಸಮಯದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ‘ನೀರು ಮತ್ತು ರಕ್ತ ಒಂದೇ ಮಾರ್ಗದಲ್ಲಿ ಹರಿಯಲು ಸಾಧ್ಯವಿಲ್ಲ’ ಎಂದು ಹೇಳಿದ್ದರು.
2019ರಲ್ಲಿ, ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾರತದ 40 ಯೋಧರು ಮೃತಪಟ್ಟಿದ್ದರು. ಈ ವೇಳೆ ಮಾತನಾಡಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಸ್ಥಗಿತಗೊಳಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದ್ದರು. ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಜಲ ಒಪ್ಪಂದಕ್ಕೆ ಧಕ್ಕೆಯಾಗದ ರೀತಿಯಲ್ಲಿ ತಡೆಯುವ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ ಎಂದು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು 2019ರ ಆಗಸ್ಟ್‌ನಲ್ಲಿ ಹೇಳಿದ್ದರು.
ಆದರೆ ಒಪ್ಪಂದದಿಂದ ಏಕಪಕ್ಷೀಯವಾಗಿ ಹಿಂದೆ ಸರಿಯುವುದರಿಂದ ಭಾರತಕ್ಕೆ ಲಾಭವಾಗುವುದಿಲ್ಲ ಎನ್ನುತ್ತಾರೆ ತಜ್ಞರು. ಒಂದು ವೇಳೆ ಒಪ್ಪಂದವನ್ನು ಭಾರತ ರದ್ದುಗೊಳಿಸಿದರೆ, ಪಾಕಿಸ್ತಾನವು ಇದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಿ, ಅನುಕಂಪ ಗಿಟ್ಟಿಸುವ ಸಾಧ್ಯತೆಯಿದೆ. ಇದಕ್ಕಿಂತ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವುದು ಒಳಿತು ಎಂದು ವಿಶ್ಲೇಷಿಸಲಾಗಿದೆ.