ಅನ್ವರ್ ಮಾಣಿಪ್ಪಾಡಿ ವರದಿ ಸುತ್ತ ರಾಜಕಾರಣ
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ 2012ರಲ್ಲಿ ವಕ್ಫ್ ಆಸ್ತಿಗಳನ್ನು ಮರುವಶಕ್ಕೆ ಪಡೆಯುವ ಕಾರ್ಯಕ್ಕೆ ದೊಡ್ಡಮಟ್ಟದ ಯತ್ನ ಆರಂಭವಾಗಿತ್ತು. ಅಲ್ಪಸಂಖ್ಯಾತ ಆಯೋಗದ ಅಂದಿನ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ವಕ್ಫ್ ಆಸ್ತಿಗಳ ಸ್ಥಿತಿಗತಿಗಳ ಸಂಬಂಧ ವರದಿ ಸಿದ್ದಪಡಿಸಿ, ಯಡಿಯೂರಪ್ಪ ಸರ್ಕಾರಕ್ಕೆ 2012ರ ಫೆಬ್ರುವರಿ 24ರಂದು ಸಲ್ಲಿಸಿದ್ದರು. ಆದರೆ ಸರ್ಕಾರವು ವರದಿಯನ್ನು ವಿಧಾನ ಮಂಡಲದಲ್ಲಿ ಮಂಡಿಸಿರಲಿಲ್ಲ. ಕಾಂಗ್ರೆಸ್‌ನ ಹಲವು ನಾಯಕರು, ಉದ್ಯಮಿಗಳು ಅಕ್ರಮವಾಗಿ ವಕ್ಫ್ ಆಸ್ತಿಗಳನ್ನು ಕಬಳಿಸಿದ್ದಾರೆ. ಅವರಿಂದ ಆ ಆಸ್ತಿಗಳನ್ನು ಮರುವಶಕ್ಕೆ ಪಡೆದುಕೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2013ರಲ್ಲಿ ಅಧಿಕಾರಕ್ಕೆ ಬಂದಾಗ ವರದಿಯನ್ನು ಪರಿಶೀಲಿಸಲಾಗಿತ್ತು. ಆದರೆ 2016ರ ಮಾರ್ಚ್ ಮೂರರಂದು ಈ ವರದಿಯ ಶಿಫಾರಸುಗಳನ್ನು ತಿರಸ್ಕರಿಸಿ ಅಧಿಸೂಚನೆ ಹೊರಡಿಸಲಾಗಿತ್ತು. 2020ರಲ್ಲಿ ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿಯಾದಾಗ, ಅನ್ವರ್ ಮಾಣಿಪ್ಪಾಡಿ ವರದಿಯ ಶಿಫಾರಸುಗಳ ಜಾರಿಗೆ ಕ್ರಮವಹಿಸಿತು. 2020ರ ಸೆಪ್ಟೆಂಬರ್ 23ರಂದು ವಿಧಾನಸಭೆಯಲ್ಲಿ ಮತ್ತು ಅದೇ 25ರಂದು ವಿಧಾನ ಪರಿಷತ್ತಿನಲ್ಲಿ ವರದಿಯನ್ನು ಮಂಡಿಸಲಾಯಿತು. ವರದಿಯ ಬಗ್ಗೆ ಎರಡೂ ಸದನಗಳಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ. ಆದರೆ ವರದಿಯನ್ನು ಸ್ವೀಕರಿಸಿದ್ದ ಕಾರಣಕ್ಕೆ, ವಕ್ಫ್ ಆಸ್ತಿಗಳನ್ನು ಮರುವಶಕ್ಕೆ ಪಡೆದುಕೊಳ್ಳಲು ಕ್ರಮ ತೆಗೆದುಕೊಳ್ಳಲು ಸಂಬಂಧಿತ ಇಲಾಖೆಗಳಿಗೆ ಸೂಚಿಸಲಾಗಿತ್ತು. ಅದರಂತೆ ರಾಜ್ಯದಾದ್ಯಂತ ಎಲ್ಲ ವಕ್ಫ್ ಆಸ್ತಿಗಳ ಸರ್ವೆಯನ್ನು ಕೈಗೊಳ್ಳಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕಂದಾಯ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಮಟ್ಟದಲ್ಲಿ ಹಲವು ಆದೇಶಗಳನ್ನು ಹೊರಡಿಸಲಾಗಿತ್ತು. 2023ರಲ್ಲಿ ಸರ್ಕಾರ ಬದಲಾದರೂ ಈ ಕೆಲಸಗಳು ನಡೆಯುತ್ತಲೇ ಇದ್ದವು. ಈಗ ನೋಟಿಸ್ ಜಾರಿಯಾದ ಹೊತ್ತಲ್ಲೇ, ‘ಅನ್ವರ್ ಮಾಣಿಪ್ಪಾಡಿ ವರದಿಯನ್ನು ಜಾರಿಗೆ ತನ್ನಿ’ ಎಂದು ಬಿಜೆಪಿ ಪಟ್ಟು ಹಿಡಿದಿದೆ.