ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿಯಲ್ಲಿ ಮೀಸಲಾತಿಯನ್ನು ತೆಗೆದುಹಾಕುವ ಅವಕಾಶವಿರುವ ನೂತನ ಕರಡು ಮಾರ್ಗಸೂಚಿಯನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹೊರಡಿಸಿತ್ತು. ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗೆ ಮೀಸಲಾದ ಹುದ್ದೆಗಳನ್ನು ಮೀಸಲಾತಿಯಿಂದ ಹೊರಗಿಡುವ ಉದ್ದೇಶದ ಈ ಕರಡು ಮಾರ್ಗಸೂಚಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರವು, ‘ಮೀಸಲಾತಿ ತೆಗೆಯಲು ಅವಕಾಶವಿಲ್ಲ’ ಎಂದಷ್ಟೇ ಹೇಳಿದೆ. ಆದರೆ ಈ ಮಾರ್ಗಸೂಚಿಯನ್ನು ವಾಪಸ್ ಪಡೆಯುತ್ತೇವೆ ಅಥವಾ ಅದನ್ನು ಜಾರಿಗೆ ತರುವುದಿಲ್ಲ ಎಂದು ಹೇಳಿಲ್ಲ. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೇಮಕಾತಿ ಮತ್ತು ಪ್ರವೇಶಾತಿಯಲ್ಲಿ ವಿವಿಧ ಹಂತಗಳಲ್ಲಿ ಮೀಸಲಾತಿಯನ್ನು ತೆಗೆದುಹಾಕುವ ಹಲವು ಅಂಶಗಳು ಈ ಕರಡು ಮಾರ್ಗಸೂಚಿಯಲ್ಲಿವೆ.

ಯುಪಿಎ ಜಾರಿಗೆ ತಂದಿದ್ದ ಮಾರ್ಗಸೂಚಿ

ಯುಪಿಎ ಸರ್ಕಾರವು ಅಧಿಕಾರದಲ್ಲಿ ಇದ್ದಾಗ ಜಾರಿಗೆ ತಂದಿದ್ದ ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯ ಅನುಷ್ಠಾನ ಮಾರ್ಗಸೂಚಿ–2006’ ಅಡಿಯಲ್ಲಿ ಮೀಸಲಾತಿ ನೀಡಲಾಗುತ್ತಿತ್ತು. ಮೀಸಲಾತಿಯನ್ನು ಹೇಗೆ ಜಾರಿ ಮಾಡಬೇಕು, ಬ್ಯಾಕ್ಲಾಗ್ ಹುದ್ದೆಗಳನ್ನು ಹೇಗೆ ಭರ್ತಿ ಮಾಡಬೇಕು ಎಂಬ ವಿವರಗಳನ್ನು ಈ ಮಾರ್ಗಸೂಚಿಯಲ್ಲಿ ನೀಡಲಾಗಿತ್ತು. ಅಂತಹ ಅಂಶಗಳು ಹೀಗಿವೆ:

1. ಸೆಕ್ಷನ್ 6(ಸಿ): ಎರಡು ಅಥವಾ ಎರಡಕ್ಕಿಂತ ಹೆಚ್ಚು ವಿಶ್ವವಿದ್ಯಾಲಯಗಳ ನಡುವೆ ಅಂತರ ವರ್ಗಾವಣೆಗೆ ಅವಕಾಶವಿದ್ದರೆ, ಆ ಎಲ್ಲಾ ವಿಶ್ವವಿದ್ಯಾಲಯಗಳ ಹುದ್ದೆಗಳನ್ನು ಒಂದೇ ಗುಂಪು ಎಂದು ಪರಿಗಣಿಸಬೇಕು. ಯಾವುದೇ ವಿಶ್ವವಿದ್ಯಾಲಯ ಅಥವಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಹುದ್ದೆಗಳನ್ನು ವಿಭಾಗವಾರು ಎಂದು ವರ್ಗೀಕರಣ ಮಾಡಬಾರದು. ಮೀಸಲಾತಿಯನ್ನು ತಪ್ಪಿಸುವ ಉದ್ದೇಶದಿಂದ ವಿಭಾಗವಾರು ವರ್ಗೀಕರಣ ಮಾಡುವ ಮೂಲಕ ವಿಭಾಗಕ್ಕೆ ಒಂದೇ ಹುದ್ದೆ ಇದೆ ಎಂದು ಕಾರಣವೊಡ್ಡಿ, ಮೀಸಲಾತಿಯನ್ನು ತೆಗೆದುಹಾಕುವುದನ್ನು ನಿಷೇಧಿಸಿದೆ.

2. ಸೆಕ್ಷನ್ 7(ಸಿ): ಶಾರ್ಟ್ಫಾಲ್ (ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗೆ ಮೀಸಲಿಟ್ಟ ಹುದ್ದೆಗಳು ಮತ್ತು ನೇಮಕಾತಿಯಲ್ಲಿ ಭರ್ತಿಯಾದ ಹುದ್ದೆಗಳ ನಡುವಣ ವ್ಯತ್ಯಾಸ. ಉದಾಹರಣೆಗೆ ಮೀಸಲಿದ್ದ 100 ಹುದ್ದೆಗಳಲ್ಲಿ 80 ಹುದ್ದೆಗಳಷ್ಟೇ ಭರ್ತಿಯಾದರೆ, 20 ಹುದ್ದೆಗಳು ಶಾರ್ಟ್ಫಾಲ್ ಎನಿಸಿಕೊಳ್ಳುತ್ತವೆ) ಮತ್ತು ಬ್ಯಾಕ್ಲಾಗ್ ಹುದ್ದೆಗಳಿಗೆ ನೇಮಕಾತಿ ನಡೆಸುವಾಗ ಒಟ್ಟು ಮೀಸಲಾತಿಯ ಮಿತಿ ಅನ್ವಯವಾಗುವುದಿಲ್ಲ. ಅಂದರೆ, ‘ಒಂದು ನೇಮಕಾತಿಯಲ್ಲಿ ಒಟ್ಟು ಹುದ್ದೆಗಳಲ್ಲಿ ಮೀಸಲಾತಿಗೆ ಒಳಪಟ್ಟ ಹುದ್ದೆಗಳ ಪ್ರಮಾಣ ಶೇ 50ರಷ್ಟನ್ನು ಮೀರುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್ ಹೇರಿದ್ದ ಮಿತಿ ಅನ್ವಯವಾಗುವುದಿಲ್ಲ.

3. ಸೆಕ್ಷನ್ 9(6): ಯಾವುದೇ ಶೈಕ್ಷಣಿಕ ವರ್ಷದಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗೆ ಮೀಸಲಾದ ಸೀಟುಗಳಿಗೆ ಅರ್ಹ ಅಭ್ಯರ್ಥಿಗಳು ಸಿಗಲಿಲ್ಲವೆಂದು, ಆ ಹುದ್ದೆಗಳನ್ನು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಮಂಜೂರು ಮಾಡುವಂತಿಲ್ಲ. ಬದಲಿಗೆ ಅಂತಹ ಸೀಟುಗಳು ಖಾಲಿ ಇವೆ ಎಂದು ಪ್ರಚಾರ ಮಾಡಬೇಕು. ಆ ಸೀಟುಗಳು ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗೇ ದೊರೆಯುವಂತೆ ಮಾಡಲು ಎಲ್ಲಾ ಯತ್ನಗಳನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು.

* ಈ ಸ್ವರೂಪದ ಯಾವುದೇ ನಿಯಮ ಮತ್ತು ಷರತ್ತುಗಳು ಇಲ್ಲ.

ಎನ್ಡಿಎ ತರಲು ಹೊರಟಿರುವ ಕರಡು ಮಾರ್ಗಸೂಚಿ

ಯುಜಿಸಿ ಈಗ ಸಾರ್ವಜನಿಕರ ಅಭಿಪ್ರಾಯ ಮತ್ತು ಆಕ್ಷೇಪವನ್ನು ಆಹ್ವಾನಿಸಿದ್ದ ಅಂತಿಮ ಕರಡು ಮಾರ್ಗಸೂಚಿಯಲ್ಲಿ, ಮೀಸಲಾತಿ ಅಡಿಯಲ್ಲಿ ನೇಮಕಾತಿ ನಡೆಸಲು ಕಠಿಣ ನಿಯಮಗಳನ್ನು ರೂಪಿಸಲಾಗಿದೆ. ಈಗ ಜಾರಿಯಲ್ಲಿರುವ ಮೀಸಲಾತಿ ಮಾರ್ಗಸೂಚಿಗೆ ಸಂಪೂರ್ಣ ವ್ಯತಿರಿಕ್ತವಾದಂತಹ ಹಲವು ಅಂಶಗಳು ಈ ಕರಡು ಮಾರ್ಗಸೂಚಿಯಲ್ಲಿ ಇವೆ

1. ಸೆಕ್ಷನ್ 1(ಡಬ್ಲ್ಯು): ಒಂದು ನೇಮಕಾತಿ ವರ್ಷದಲ್ಲಿ ಒಂದೇ ಹುದ್ದೆ ಸೃಷ್ಟಿಯಾದರೆ, (ಅದು ಎಸ್ಸಿ ಅಥವಾ ಎಸ್ಟಿ ಅಥವಾ ಒಬಿಸಿ ಸಮುದಾಯಕ್ಕೆ ಮೀಸಲು ಎಂದಾದರೂ) ಆ ಹುದ್ದೆಯನ್ನು ಮೀಸಲಾತಿಯಿಂದ ಹೊರಗೆ ಇಡಬೇಕು ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನೇ ನೇಮಕ ಮಾಡಬೇಕು. ಮೀಸಲಾತಿ ಹುದ್ದೆಯನ್ನು ಮುಂದಿನ ವರ್ಷಕ್ಕೆ ವರ್ಗಾಯಿಸಬೇಕು. ಮುಂದಿನ ವರ್ಷದಲ್ಲೂ ಒಂದೇ ಹುದ್ದೆ ಇದ್ದರೆ, ಅದನ್ನು ಮೀಸಲು ಹುದ್ದೆ ಎಂದು ಪರಿಗಣಿಸಬೇಕು. ಆ ವರ್ಗದ ಅಭ್ಯರ್ಥಿಗಳು ಲಭ್ಯವಿದ್ದರೆ ನೇಮಕಾತಿ ಮಾಡಬೇಕು.

2. ಸೆಕ್ಷನ್ 7.1(III): ಶಾರ್ಟ್ಫಾಲ್ ಹುದ್ದೆಗಳು ಎಷ್ಟೇ ಇದ್ದರೂ, ನೇಮಕಾತಿಯ ವೇಳೆ ನೀಡಲಾಗುವ ಒಟ್ಟು ಮೀಸಲಾತಿ ಪ್ರಮಾಣ ಶೇ 50ರ ಮಿತಿಯನ್ನು ದಾಟುವಂತಿಲ್ಲ. ಉದಾಹರಣೆಗೆ: 100 ಹುದ್ದೆಗಳಿಗೆ ನೇಮಕಾತಿ ನಡೆಸಬೇಕಿದೆ. ಅವುಗಳಲ್ಲಿ ಶಾರ್ಟ್ಫಾಲ್ ಹುದ್ದೆಗಳು 70 ಇದ್ದರೂ, ಅಷ್ಟೂ ಹುದ್ದೆಗಳನ್ನು ಮೀಸಲಾತಿ ಅಡಿಯಲ್ಲಿ ತರುವಂತಿಲ್ಲ. ಬದಲಿಗೆ 49–50 ಹುದ್ದೆಗಳನ್ನಷ್ಟೇ ಮೀಸಲಾತಿ ಅಡಿ ತರಬೇಕು. ಉಳಿದ 20–21 ಶಾರ್ಟ್ಫಾಲ್ ಹುದ್ದೆಗಳನ್ನು ಮುಂದಿನ ವರ್ಷಕ್ಕೆ ವರ್ಗಾಯಿಸಬೇಕು.

* ಬ್ಯಾಕ್ಲಾಗ್ ಎಂದು ಪರಿಗಣಿಸಲಾದ ಹುದ್ದೆಗಳಿಗೆ ಈ ಮಿತಿ ಅನ್ವಯವಾಗುವುದಿಲ್ಲ.

3. ಸೆಕ್ಷನ್ 14.1: ಯಾವುದೇ ಶೈಕ್ಷಣಿಕ ವರ್ಷದಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗೆ ಮೀಸಲಾದ ಸೀಟುಗಳಿಗೆ ಅರ್ಹ ಅಭ್ಯರ್ಥಿಗಳು ಸಿಗಲಿಲ್ಲವಾದರೆ, ಆ ಸೀಟುಗಳನ್ನು ಭರ್ತಿ ಮಾಡಲು ಹೆಚ್ಚುವರಿಯಾಗಿ ಇನ್ನೂ ಎರಡು ಯತ್ನಗಳನ್ನು ಮಾಡಬೇಕು. ಆಗಲೂ ಭರ್ತಿಯಾಗದೇ ಇದ್ದರೆ, ಆ ಸೀಟುಗಳನ್ನು ರದ್ದು ಮಾಡಬೇಕು. ಸೀಟುಗಳನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ ವರ್ಗಾಯಿಸಬಾರದು. ಪಿಎಚ್.ಡಿ ಸೀಟುಗಳಿಗೂ ಇದು ಅನ್ವಯವಾಗುತ್ತದೆ. ಸೀಟು ಪಡೆಯಲು ಅರ್ಹತೆ ಏನು ಎಂಬುದನ್ನು ಶಿಕ್ಷಣ ಸಂಸ್ಥೆಗಳು ಸ್ಪಷ್ಟವಾಗಿ ಘೋಷಿಸಿರಬೇಕು.

* ಒಂದು ಶೈಕ್ಷಣಿಕ ವರ್ಷದಲ್ಲಿ ಐದು ಪಿಎಚ್.ಡಿ ಸೀಟುಗಳು ಇದ್ದು, ಅವುಗಳಲ್ಲಿ ನಾಲ್ಕಷ್ಟೇ ಭರ್ತಿಯಾಗುತ್ತವೆ. ಒಂದು ಮೀಸಲು ಸೀಟು ಖಾಲಿ ಉಳಿಯುತ್ತದೆ. ಹೊಸ ಕರಡು ಮಾರ್ಗಸೂಚಿಯ ಪ್ರಕಾರ ಆ ಮೀಸಲು ಸೀಟು ರದ್ದಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತೆ ಐದು ಸೀಟುಗಳು ಲಭ್ಯವಾಗುತ್ತವೆ. ಹಿಂದಿನ ವರ್ಷದಲ್ಲಿ ಖಾಲಿ ಉಳಿದಿದ್ದ ಸೀಟು ರದ್ದಾಗುವುದರಿಂದ ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗೆ ಒಂದು ಸೀಟು ನಷ್ಟವಾಗುತ್ತದೆ.

ಸರ್ಕಾರದ ಸಮರ್ಥನೆ...

ಮೀಸಲಾತಿ ತೆಗೆದುಹಾಕುವ ಯಾವ ಪ್ರಸ್ತಾವವೂ ಇಲ್ಲ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಯುಜಿಸಿ ಭಾನುವಾರವೇ ಸ್ಪಷ್ಟೀಕರಣ ನೀಡಿವೆ. ಜತೆಗೆ ಎಲ್ಲಾ ನೇಮಕಾತಿಗಳನ್ನು ‘ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳ (ಶಿಕ್ಷಕರ ನೇಮಕಾತಿಯಲ್ಲಿ ಮೀಸಲಾತಿ) ಕಾಯ್ದೆ–2019’ರ ಅನ್ವಯವೇ ನಡೆಸಬೇಕು. ಮೀಸಲಾತಿಯನ್ನು ತೆಗೆದುಹಾಕುವುದನ್ನು ಈ ಕಾಯ್ದೆಯು ನಿಷೇಧಿಸುತ್ತದೆ ಎಂದು ಸಚಿವಾಲಯ ಮತ್ತು ಯುಜಿಸಿ ಎರಡೂ ಹೇಳಿವೆ. ಆದರೆ ಕಾಯ್ದೆಯಲ್ಲಿ ಅಂತಹ ನಿಷೇಧದ ಬಗ್ಗೆ ಯಾವುದೇ ಉಲ್ಲೇಖ ಇಲ್ಲ.

ಮೀಸಲಾತಿ ತೆಗೆದುಹಾಕುವ ಅಂಶದ ಬಗ್ಗೆ ಮಾತ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಮೀಸಲಾತಿಯನ್ನು ತೆಗೆದುಹಾಕುವ ಅಥವಾ ಮುಂದೂಡುವ ಅಥವಾ ಕಡಿತ ಮಾಡುವ ಇತರ ಹಲವು ಅಂಶಗಳ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಅಲ್ಲದೇ, ಈ ಮಾರ್ಗಸೂಚಿಯನ್ನು ವಾಪಸ್ ಪಡೆಯುತ್ತೇವೆ ಅಥವಾ ರದ್ದು ಪಡಿಸುತ್ತೇವೆ ಎಂಬುದನ್ನೂ ಸರ್ಕಾರ ಹೇಳಿಲ್ಲ.

ಮೀಸಲಾತಿ ತೆಗೆದುಹಾಕಲು ಅವಕಾಶ

ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗೆ ಮೀಸಲಾದ ಹುದ್ದೆಗಳಿಗೆ ನೇಮಕಾತಿ ಆಗದೇ ಇದ್ದರೆ, ಆ ಹುದ್ದೆಗಳನ್ನು ಮೀಸಲಾತಿಯಿಂದ ಹೊರಗೆ ಇಡಬಹುದು ಎಂದು ನೂತನ ಕರಡು ಮಾರ್ಗಸೂಚಿಯ 10ನೇ ಅಧ್ಯಾಯದಲ್ಲಿ ವಿವರಿಸಲಾಗಿದೆ. ಆದರೆ ಹೀಗೆ ಮಾಡುವುದಕ್ಕೂ ಮುನ್ನ ಹಲವು ಹಂತದ ಪ್ರಕ್ರಿಯೆಗಳನ್ನು ಪೂರೈಸಬೇಕು ಎಂದು ಕರಡು ಮಾರ್ಗಸೂಚಿಯಲ್ಲೇ ವಿವರಿಸಲಾಗಿದೆ.

ಗ್ರೂಪ್ ‘ಎ’ ಹುದ್ದೆಗಳಲ್ಲಿನ ಮೀಸಲಾತಿಯನ್ನು ತೆಗೆದುಹಾಕುವ ಮುನ್ನ,

* ಆ ಹುದ್ದೆ ಖಾಲಿ ಬಿಡಲು ಏಕೆ ಸಾಧ್ಯವಿಲ್ಲ ಎಂಬುದನ್ನು ವಿವರಿಸಬೇಕು

* ಮೀಸಲಾತಿ ಅಡಿಯಲ್ಲೇ ಆ ಹುದ್ದೆ ತುಂಬಲು ನಡೆಸಿದ ಯತ್ನಗಳ ವಿವರ ಇರಬೇಕು. ಅಭ್ಯರ್ಥಿಗಳನ್ನು ಅನರ್ಹಗೊಳಿಸಿದ್ದು ಏಕೆ ಎಂಬುದನ್ನು ವಿವರಿಸಬೇಕು

ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳಿಗೆ ಇದ್ದ ಮೀಸಲಾತಿಯನ್ನು ತೆಗೆದುಹಾಕುವ ಮುನ್ನ ವಿಶ್ವವಿದ್ಯಾಲಯವು ಆ ಸಂಬಂಧ, ಶಿಕ್ಷಣ ಸಚಿವಾಲಯಕ್ಕೆ ಅರ್ಜಿ ಹಾಕಬೇಕು. ಮೇಲೆ ವಿವರಿಸಲಾದ ಎಲ್ಲಾ ವಿವರಗಳು ಮತ್ತು ಅವಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆ ಅರ್ಜಿಯು ಒಳಗೊಂಡಿರಬೇಕು. ಸಚಿವಾಲಯವು ಒಪ್ಪಿಗೆ ನೀಡಿದರೆ, ಮೀಸಲಾತಿಯನ್ನು ತೆಗೆದುಹಾಕಬಹುದು. ಗ್ರೂಪ್ ‘ಸಿ’ ಮತ್ತು ‘ಡಿ’ಗಳಿಗೆ ಹುದ್ದೆಗಳಿಗೆ ಇದ್ದ ಮೀಸಲಾತಿಯನ್ನು ತೆಗೆದುಹಾಕುವ ನಿರ್ಧಾರವನ್ನು ವಿಶ್ವವಿದ್ಯಾಲಯಗಳ ಕಾರ್ಯಕಾರಿ ಸಮಿತಿಯೇ ತೆಗೆದುಕೊಳ್ಳಬಹುದು. ಬಡ್ತಿಗೂ ಇದೇ ಸ್ವರೂಪದ ನಿಯಮಗಳು ಅನ್ವಯವಾಗುತ್ತದೆ ಎಂದು ಕರಡು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

‘ಸೇವಾ ಪುಸ್ತಕದ ಮೇಲೆ ಜಾತಿ ಹೆಸರು ನಮೂದಿಸಿ’

ಮೀಸಲಾತಿ ಅಡಿಯಲ್ಲಿ ನೇಮಕವಾದ ನೌಕರರ ಸೇವಾ ಪುಸ್ತಕದ ಮೇಲೆ, ಅವರು ಯಾವ ಜಾತಿಯವರು ಎಂಬ ‘ಲೇಬಲ್’ ಹಚ್ಚಬೇಕು ಎಂದು ಕರಡು ಮಾರ್ಗಸೂಚಿಯ 11.3ನೇ ಸೆಕ್ಷನ್ನಲ್ಲಿ ವಿವರಿಸಲಾಗಿದೆ.

ಅಂತಹ ನೌಕರರ ಹೆಸರು, ವಿಳಾಸ, ಜಾತಿ–ಸಮುದಾಯ, ರಾಜ್ಯ ಮತ್ತಿತರ ವಿವರಗಳನ್ನು ಆ ಲೇಬಲ್ನಲ್ಲಿ ನಮೂದಿಸಿರಬೇಕು. ಆ ನೌಕರರ ಮೀಸಲಾತಿ ವಿವರಗಳನ್ನು ಪರಿಶೀಲಿಸಲು ಮತ್ತು ಅಂತಹ ಕಡತಗಳನ್ನು ಸುಲಭವಾಗಿ ಪತ್ತೆ ಮಾಡುವ ಉದ್ದೇಶದಿಂದ ಹೀಗೆ ಮಾಡಬೇಕು. ನೇಮಕಾತಿಯ ಆರಂಭದಲ್ಲಿ ಪರಿಶೀಲನೆಗೆ ಮತ್ತು ಬಡ್ತಿ ಸಂದರ್ಭದಲ್ಲಿ ಇದು ಅನುಕೂಲಕ್ಕೆ ಬರಲಿದೆ ಎಂದು ವಿವರಿಸಲಾಗಿದೆ.

ಆಧಾರ: ಯುಜಿಸಿ, ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀತಿಯ ಅನುಷ್ಠಾನ ಮಾರ್ಗಸೂಚಿಗಳು’ ಕರಡು–2023, ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀತಿಯ ಅನುಷ್ಠಾನ ಮಾರ್ಗಸೂಚಿಗಳು–2006, ‘ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳ (ಶಿಕ್ಷಕರ ನೇಮಕಾತಿಯಲ್ಲಿ ಮೀಸಲಾತಿ) ಕಾಯ್ದೆ–2019’, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.