ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ–ಅಗಲ | ಪತಂಜಲಿ ಕಂಪನಿಯಲ್ಲಿ ಬಿರುಗಾಳಿ

Published 11 ಜುಲೈ 2024, 1:12 IST
Last Updated 11 ಜುಲೈ 2024, 1:12 IST
ಅಕ್ಷರ ಗಾತ್ರ
ಸದಾ ಕಾಷಾಯ ಬಟ್ಟೆ ಧರಿಸುವ ರಾಮದೇವ್, ಭಾರತದ ಸಂಸ್ಕೃತಿ, ಯೋಗಾಭ್ಯಾಸ, ದೇಶೀಯ ಔಷಧ ಪದ್ಧತಿಗಳ ಪ್ರಬಲ ಪ್ರತಿಪಾದಕರು. ಅವುಗಳ ಬಗ್ಗೆ ಪ್ರಚಾರ ಮಾಡುತ್ತಲೇ ಸಾವಿರಾರು ಕೋಟಿ ರೂಪಾಯಿಯ ವರಮಾನ ತರುವ ಪತಂಜಲಿ ಕಂಪನಿಯನ್ನು ಕಟ್ಟಿ ಬೆಳೆಸಿದರು. ಅದನ್ನು ದಶದಿಕ್ಕುಗಳಿಗೆ ವಿಸ್ತರಿಸಿದರು. ಆದರೆ, ಅವರ ಪ್ರತಿಪಾದನೆಗಳ ಬಗ್ಗೆ ಅನುಮಾನಗಳು, ಅವರ ಮಾತುಗಳ ಬಗ್ಗೆ ವಿವಾದಗಳು ಹುಟ್ಟಿಕೊಂಡು, ಅವು ಕಂಪನಿಯನ್ನು ಕಟಕಟೆಯಲ್ಲಿ ನಿಲ್ಲಿಸಿವೆ; ಪತಂಜಲಿಯ ಉತ್ಪನ್ನಗಳ ಮಾರಾಟಕ್ಕೂ ಕುತ್ತು ತಂದಿವೆ

ಭಾರತದ ಸರಕು ಸೇವಾ ಮಾರುಕಟ್ಟೆಯಲ್ಲಿ ಪತಂಜಲಿ ಬ್ರ್ಯಾಂಡ್‌ನದ್ದು ಪ್ರಮುಖ ಹೆಸರು. ಆದರೆ, ಪತಂಜಲಿ ಕಂಪನಿಯು ಪದೇ ಪದೇ ಸುದ್ದಿಗೆ ಗ್ರಾಸವಾಗುತ್ತಿದೆ. ಅದಕ್ಕೆ ಕಾರಣ, ಪತಂಜಲಿಯ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಬಂದ ಆರೋಪಗಳು ಮತ್ತು ಆ ಕಂಪನಿಯ ಎಂ.ಡಿ ಆಚಾರ್ಯ ಬಾಲಕೃಷ್ಣ ಮತ್ತು ಯೋಗ ಗುರು ರಾಮದೇವ್ ಸುಪ್ರೀಂ ಕೋರ್ಟ್‌ನಿಂದ ತರಾಟೆಗೆ ಗುರಿಯಾಗಿರುವುದು.

ಕೋವಿಡ್ ಬಿಕ್ಕಟ್ಟಿನ ಕಾಲದಲ್ಲಿ ದೇಶ ವಿದೇಶಗಳ ಔಷಧ ತಯಾರಿಕಾ ಕಂಪನಿಗಳು ಭಾರಿ ವ್ಯಾಪಾರ ಹಾಗೂ ಲಾಭ ಮಾಡಿದ್ದವು. ಅಂಥ ಕಂಪನಿಗಳ ಪೈಕಿ ಪತಂಜಲಿಯೂ ಒಂದು. ದೇಶದಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡುತ್ತಿದ್ದಾಗ ರಾಮದೇವ್‌ ತಮ್ಮ ಪತಂಜಲಿ ಕಂಪನಿಯಿಂದ ಆಯುರ್ವೇದದ ಕೊರೊನಿಲ್‌ ಎಂಬ ಮಾತ್ರೆಗಳನ್ನು ಪರಿಚಯಿಸಿದ್ದರು. ಸೋಂಕನ್ನು ಏಳು ದಿನದಲ್ಲಿ ನಿಯಂತ್ರಿಸುತ್ತೇವೆ ಎಂದು ರಾಮದೇವ್‌ ಮತ್ತು ಅವರ ಶಿಷ್ಯ ಆಚಾರ್ಯ ಬಾಲಕೃಷ್ಣ ಘೋಷಿಸಿದ್ದರು. ಸಂಸ್ಥೆಯ ಅಧೀನದಲ್ಲಿರುವ ದಿವ್ಯ ಫಾರ್ಮಸಿಯಲ್ಲಿ ಈ ಔಷಧಗಳು ತಯಾರಾಗಿವೆ, ಇವನ್ನು ಎಲ್ಲ ರೀತಿಯ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ ಮತ್ತು ಕ್ಲಿನಿಕಲ್‌ ಟ್ರಯಲ್‌ ಕೂಡ ನಡೆದಿದೆ ಎಂದು ಪ್ರಚಾರ ಮಾಡಲಾಗಿತ್ತು. 

ಪತಂಜಲಿಯು ಕೊರೊನಿಲ್ ಬಗ್ಗೆ ಜಾಹೀರಾತುಗಳನ್ನೂ ನೀಡಿತ್ತು. ರಾಮದೇವ್‌ ಮಾತನ್ನು ನಂಬಿದ ಜನ ಮಾತ್ರೆಗಳಿಗೆ ಮುಗಿಬಿದ್ದರು. ಕೊರೊನಿಲ್‌ಗೆ ಬೇಡಿಕೆ ಹೆಚ್ಚಾಗಿತ್ತು. ದಿನಕ್ಕೆ 10 ಲಕ್ಷ ಮಾತ್ರೆಗಳಿಗೆ ಬೇಡಿಕೆ ಬರುತ್ತಿದೆ ಎಂದು ರಾಮದೇವ್ ಅವರೇ ಹೇಳಿದ್ದರು. ಆದರೆ, ಬಿಕ್ಕಟ್ಟಿನ ಕಾಲದಲ್ಲಿ ಅವರ ವರ್ತನೆಗೆ ಆಕ್ಷೇಪಗಳು ಕೇಳಿಬರತೊಡಗಿದವು. ಕೊರೊನಿಲ್‌ನ ಮಾರುಕಟ್ಟೆ ತಂತ್ರಗಾರಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಆಯುಷ್‌ ಸಚಿವಾಲಯವು, ಕೊರೊನಿಲ್ ಬಗ್ಗೆ ಜಾಹೀರಾತು ನೀಡಬಾರದು; ಔಷಧದ ವಿವರಗಳನ್ನು ಸಲ್ಲಿಸಬೇಕು ಎಂದು ಪತಂಜಲಿಗೆ ನೋಟಿಸ್‌ ನೀಡಿತ್ತು. ಆದರೂ ಅದನ್ನು ಸಮರ್ಥಿಸಿಕೊಂಡಿದ್ದ ಪತಂಜಲಿಯು, ಔಷಧದ ಬಗ್ಗೆ ನಾವು ಯಾವುದೇ ಜಾಹೀರಾತು ನೀಡಿಲ್ಲ, ಅದರ ಪ್ರಯೋಜನಗಳ ಬಗ್ಗೆ ಜನರಿಗೆ ಮಾಹಿತಿಯನ್ನಷ್ಟೇ ನೀಡಿದ್ದೇವೆ ಎಂದಿತ್ತು. 

ರಾಮದೇವ್ ಆಯುರ್ವೇದ ವೈದ್ಯ ಪದ್ಧತಿಯ ಪ್ರತಿಪಾದಕರು. ಅದನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಅವರು ಆಲೋಪಥಿ ಬಗ್ಗೆ ಆಡಿದ ಮಾತು ವಿವಾದವಾಗಿ ಪರಿಣಮಿಸಿತು. ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಕೋವಿಡ್ 19ಕ್ಕೆ ಆಲೋಪಥಿ ಔಷಧಿ ತೆಗೆದುಕೊಂಡು ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಮದೇವ್ ಹೇಳಿದ್ದರು. ಜತೆಗೆ ಆಲೋಪಥಿ ಒಂದು ಮೂರ್ಖ ವಿಜ್ಞಾನ ಎಂದು ಟೀಕಿಸಿದ್ದರು. ಈ ಹೇಳಿಕೆಯು ರಾಮದೇವ್‌ ಅವರನ್ನು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತುವಂತೆ ಮಾಡಿತು.

ಭಾರತೀಯ ವೈದ್ಯಕೀಯ ಸಂಘವು (ಐಎಂಎ) 2022ರಲ್ಲಿ ರಾಮದೇವ್‌ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತು.  ಪತಂಜಲಿ ಆಯುರ್ವೇದ ಕಂಪನಿಯು ಆಲೋಪಥಿ ವಿಚಾರದಲ್ಲಿ ತಪ್ಪುದಾರಿಗೆ ಎಳೆಯುವ ಜಾಹೀರಾತು ನೀಡಿದೆ ಎಂದು ಆಕ್ಷೇಪಿಸಿತ್ತು. ನ್ಯಾಯಾಲಯವು, ಆಲೋಪಥಿಯನ್ನು ಅವಮಾನಿಸುವ ಯಾವ ಯತ್ನವನ್ನೂ ನಡೆಸಬಾರದು ಎಂದು ರಾಮದೇವ್‌ ಮತ್ತು ಅವರ ಆಪ್ತ ಬಾಲಕೃಷ್ಣ ಅವರಿಗೆ ಎಚ್ಚರಿಕೆ ನೀಡಿತ್ತು. ಜತೆಗೆ ಇಬ್ಬರೂ ಬಹಿರಂಗವಾಗಿ ಕ್ಷಮೆ ಯಾಚಿಸುವಂತೆ ಮಾಡಿತ್ತು. ಇದೀಗ ಸಂಸ್ಥೆಯ 14 ಉತ್ಪನ್ನಗಳ ಮಾರಾಟಕ್ಕೆ ತಡೆ ಬಿದ್ದಿದೆ.

14 ಉತ್ಪನ್ನಗಳ ಮಾರಾಟಕ್ಕೆ ಕುತ್ತು  

ಐಎಂಎ ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಹಲವು ತಿರುವು ಪಡೆಯುತ್ತಿದೆ. ಅದು ಪತಂಜಲಿ ಪಾಲಿಗೆ ಹಲವು ವಿಧದಲ್ಲಿ ಮುಳುವಾಗುತ್ತಿದೆ. ಪತಂಜಲಿ ಆಯುರ್ವೇದ ಲಿಮಿಟೆಡ್ ಮತ್ತು ದಿವ್ಯ ಫಾರ್ಮಸಿಯ 14 ಉತ್ಪನ್ನಗಳ ತಯಾರಿಕೆ ಪರವಾನಗಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಉತ್ತರಾಖಂಡ ರಾಜ್ಯ ಪರವಾನಗಿ ಪ್ರಾಧಿಕಾರವು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಹೀಗಾಗಿ ಪತಂಜಲಿಯು 14 ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸಿದೆ.

ಈ ವಿಚಾರವನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಿರುವ ಕಂಪನಿಯು, ತನ್ನ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳುವಂತೆ 5,606 ಫ್ರಾಂಚೈಸಿ ಸ್ಟೋರ್‌ಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದೆ. ಈ 14 ಉತ್ಪನ್ನಗಳ ಜಾಹೀರಾತುಗಳನ್ನೂ ಹಿಂಪಡೆಯಲಾಗುವುದು ಎಂದಿದೆ. 

ಸಾವಿರಾರು ಕೋಟಿ ವರಮಾನ

2023–24ನೇ ಆರ್ಥಿಕ ವರ್ಷದಲ್ಲಿ ಪತಂಜಲಿ ಫುಡ್ಸ್‌ ಲಿಮಿಟೆಡ್‌ (ಈ ಮೊದಲು ರುಚಿ ಸೋಯಾ ಇಂಡಸ್ಟ್ರೀಸ್‌ ಲಿಮಿಟೆಡ್‌) ತನ್ನ ಕಾರ್ಯಾಚರಣೆಗಳ ಮೂಲಕ ಒಟ್ಟು ₹31721 ಕೋಟಿ ವರಮಾನ ಗಳಿಸಿದೆ. ಈ ಪೈಕಿ ಆಹಾರ ಮತ್ತು ಎಫ್‌ಎಂಸಿಜಿ ವಲಯದಲ್ಲಿನ ಮಾರಾಟದಿಂದ ₹9643 ಕೋಟಿ ಗಳಿಸಿದೆ. ಇದು ಕಂಪನಿಯೇ ನೀಡಿರುವ ಮಾಹಿತಿ.  2022–23ನೇ ಆರ್ಥಿಕ ವರ್ಷದಲ್ಲಿ ಆಹಾರ ಮತ್ತು ಎಫ್‌ಎಂಸಿಜಿ ವಲಯದಲ್ಲಿನ ಕಾರ್ಯಾಚರಣೆ ವರಮಾನವು ಶೇ 19.49ರಷ್ಟಿತ್ತು. 2023–24ನೇ ಸಾಲಿನಲ್ಲಿ ಶೇ 30.06ರಷ್ಟು ಏರಿಕೆಯಾಗಿದೆ ಎಂದು ಕಂಪನಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.  2023–24ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ₹496 ಕೋಟಿ ಆಗಿದೆ. ಪೂರ್ಣ ಆರ್ಥಿಕ ವರ್ಷದಲ್ಲಿ ₹1518 ಕೋಟಿ ಆಗಿದೆ.  ಕಂಪನಿಯ ಬ್ರ್ಯಾಂಡ್‌ ಅನ್ನು ಜನಪ್ರಿಯಗೊಳಿಸಲು ಹೆಚ್ಚಿನ ಹಣವನ್ನು ವಿನಿಯೋಗಿಸುತ್ತಿದೆ. ಇದಕ್ಕಾಗಿ ಒಟ್ಟಾರೆ ವರಮಾನದಲ್ಲಿ ಶೇ 0.34ರಷ್ಟು ಹಣವನ್ನು ವೆಚ್ಚ ಮಾಡಿದೆ. ಕಬಡ್ಡಿ ಲೀಗ್‌– 2024 ಫಿವರ್‌ ಎಫ್‌ಎಂ ಕೆಕೆಆರ್‌ ಐಪಿಎಲ್‌ 24ರ ರೇಡಿಯೊ ಪಾರ್ಟರ್‌ಶಿಪ್‌ ಹೊಂದಲಾಗಿತ್ತು ಎಂದು ತಿಳಿಸಿದೆ.

ಗುಣಮಟ್ಟದ ಪರೀಕ್ಷೆಯಲ್ಲಿ ಫೇಲ್ ಜೈಲು ಶಿಕ್ಷೆ

ಪತಂಜಲಿಯು ಆಯುರ್ವೇದ ಔಷಧಿಗಳು ನೈಸರ್ಗಿಕ ಸೌಂದರ್ಯವರ್ಧಕಗಳು ಆಹಾರ ಉತ್ಪನ್ನಗಳು ಸೇರಿ ನೂರಾರು ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ವಿನಾಶದ ಹಾದಿಯಲ್ಲಿರುವ ಹಲವು ವೈದ್ಯಕೀಯ ಗಿಡಮೂಲಿಕೆಗಳನ್ನು ದಿವ್ಯಯೋಗ ಮಂದಿರ ಮತ್ತು‍ ಪತಂಜಲಿ ಯೋಗಪೀಠದ ಮೂಲಕ ತಮ್ಮ ಜಮೀನಿನಲ್ಲೇ ಬೆಳೆಯುತ್ತೇವೆ ಎಂದು ಸಂಸ್ಥೆ ತಿಳಿಸಿದೆ. ಆದರೆ ಪತಂಜಲಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಕೆಲವು ಆರೋಪಗಳು ಕೂಡ ಇವೆ. 2017ರಲ್ಲಿ ಆರ್‌ಟಿಐ ಅಡಿ ವ್ಯಕ್ತಿಯೊಬ್ಬರು ಪಡೆದಿದ್ದ ಮಾಹಿತಿಯಲ್ಲಿ ಕೆಲವು ಪತಂಜಲಿ ಉತ್ಪನ್ನಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ ಎನ್ನುವ ಅಂಶ ಬೆಳಕಿಗೆ ಬಂದಿತ್ತು. ದೇಶದಲ್ಲಿ ಶೇ 40ರಷ್ಟು ಆಯುರ್ವೇದ ಔಷಧಿಗಳು ಕಳಪೆಯಾಗಿದ್ದು ಅದರಲ್ಲಿ ಪತಂಜಲಿಯ ಹಲವು ಉತ್ಪನ್ನಗಳಿವೆ ಎಂದು ಹರಿದ್ವಾರದ ಆಯುರ್ವೇದ ಮತ್ತು ಯುನಾನಿ ಪ್ರಯೋಗಾಲಯ ಮಾಹಿತಿ ನೀಡಿತ್ತು. ಪತಂಜಲಿಯ ದಿವ್ಯ ಆಮ್ಲ ರಸ ಮತ್ತು ಶಿವಲಿಂಗ ಬೀಜದಲ್ಲಿ ಬೇರೆ ಪದಾರ್ಥಗಳು ಮಿಶ್ರಣಗೊಂಡಿದ್ದು ಅವು ಗುಣಮಟ್ಟ ಪರೀಕ್ಷೆಯಲ್ಲಿ ಪಾಸಾಗಿಲ್ಲ ಎಂದು ವರದಿ ತಿಳಿಸಿತ್ತು. 2024ರ ಮೇ ತಿಂಗಳಲ್ಲಿಯೂ ಇಂಥದ್ದೇ ಒಂದು ಪ್ರಕರಣ ವರದಿಯಾಗಿದೆ. ಪತಂಜಲಿಯ ಸೋನ್ ಪಾಪ್ಡಿ ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ ಕಂಪನಿಯ ಮೂವರು ಸಿಬ್ಬಂದಿಗೆ ಉತ್ತರಾಖಂಡ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.

ಸಾವಿರ ಎಕರೆಯ ಒಡೆಯರು

ತಮ್ಮದು ವ್ಯಾಪಾರ ಅಲ್ಲ ಸೇವೆ ಎನ್ನುವುದು ರಾಮದೇವ್ ಅವರ ಪ್ರತಿಪಾದನೆ. ‘ನಮ್ಮ ಕಂಪನಿಗೆ ನಾನೇ ಬ್ರ್ಯಾಂಡ್ ಅಂಬಾಸಿಡರ್’ ಎನ್ನುವ ಅವರು ಅದಕ್ಕೆ ತಾವಾಗಲಿ ಕಂಪನಿಯ ಶೇ 90ಕ್ಕೂ ಹೆಚ್ಚು ಷೇರುಗಳ ಮಾಲೀಕರಾಗಿರುವ ಆಚಾರ್ಯ ಬಾಲಕೃಷ್ಣ ಅವರಾಗಲಿ ಒಂದು ಪೈಸೆಯನ್ನೂ ಪಡೆಯುವುದಿಲ್ಲ ಎಂದು ಹೇಳಿದ್ದರು. ತಮ್ಮ ಕಂಪನಿಯು ದೇಶದ ವಿವಿಧೆಡೆ ಒಂದು ಸಾವಿರ ಎಕರೆ ಹೊಂದಿದೆ ಎಂದು ರಾಮದೇವ್‌ ಅವರೇ ಹಿಂದೊಮ್ಮೆ ಹೇಳಿಕೊಂಡಿದ್ದರು.  ಭ್ರಷ್ಟಾಚಾರ ಸ್ವದೇಶಿ ಆಂದೋಲನ ಇತ್ಯಾದಿಗಳ ಬಗ್ಗೆ ರಾಮದೇವ್ ಆಗಾಗ್ಗೆ ಉಪನ್ಯಾಸ ನೀಡುತ್ತಿರುತ್ತಾರೆ. ಆದರೆ ತೆರಿಗೆ ಬಾಕಿ ಭೂಮಿ ಒತ್ತುವರಿ ಮತ್ತಿತರ ಆರೋಪಗಳಿಗೆ ಸಂಬಂಧಿಸಿದಂತೆ ಪತಂಜಲಿ ಸಂಸ್ಥೆಯ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ. 

ಶ್ರೀಮಂತರ ಪಟ್ಟಿ ಸೇರಿದ ಬಾಲಕೃಷ್ಣ

ಕೈಯಲ್ಲಿ ದೊಡ್ಡ ಬಂಡವಾಳ ಇಲ್ಲದೆ ಕೇವಲ ತಮ್ಮ ಸಂಕಲ್ಪ ಶಕ್ತಿ ತಮ್ಮ ಇಮೇಜ್‌ನಿಂದಲೇ ಆಯುರ್ವೇದ ಸರಕು ಉತ್ಪಾದನೆಯ ದೊಡ್ಡ ಕಂಪನಿ ರೂಪಿಸಿದವರು ರಾಮದೇವ್. ಈ ಕೆಲಸದಲ್ಲಿ ಅವರಿಗೆ ಹೆಗಲೆಣೆಯಾಗಿದ್ದವರು ಆಚಾರ್ಯ ಬಾಲಕೃಷ್ಣ. ನೇಪಾಳದಲ್ಲಿ ಹುಟ್ಟಿ, ಹರಿಯಾಣದಲ್ಲಿ ಬೆಳೆದ ಬಾಲಕೃಷ್ಣ, ಪತಂಜಲಿಯ ಯಶಸ್ಸಿನ ಹಿಂದಿನ ಶಕ್ತಿ ಎನ್ನುವವರೂ ಇದ್ದಾರೆ. ದಾಖಲೆ ಪ್ರಕಾರ, ಅವರೇ ಕಂಪನಿ ಮಾಲೀಕರು. ಆದರೆ, ಜನರ ಮಟ್ಟಿಗೆ ಪತಂಜಲಿ ಎಂದರೆ ರಾಮದೇವ್. ಬಲಾಢ್ಯ ಬಹುರಾಷ್ಟ್ರೀಯ ಕಂಪನಿಗಳನ್ನೂ ಮೀರಿಸಿ ಪತಂಜಲಿಯನ್ನು ಒಂದು ಬ್ರ್ಯಾಂಡ್ ಆಗಿ ರೂಪಿಸಿದವರು ರಾಮದೇವ್.

ಇಂದು ಪತಂಜಲಿ ಹೊರತುಪಡಿಸಿದ ಆಯುರ್ವೇದ ಉತ್ಪನ್ನಗಳ ಬಗ್ಗೆ ಯೋಚನೆ ಮಾಡುವುದು ಅಸಾಧ್ಯ ಎನ್ನುವಂತಹ ಸ್ಥಿತಿ ಇದೆ. ನರೇಂದ್ರ ಮೋದಿ ಸರ್ಕಾರದಿಂದ ರಾಮದೇವ್‌ ಹಲವು ರೀತಿಯ ನೆರವು ಪಡೆದಿದ್ದಾರೆ ಎನ್ನುವ ಆರೋಪವೂ ಇದೆ.

ಆಚಾರ್ಯ ಬಾಲಕೃಷ್ಣ ಅವರ ವಿರುದ್ಧವೂ ಹಲವು ಆರೋಪಗಳಿವೆ. ಅವರು ದೇಶದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಫೋಬ್ಸ್‌ನ 13ನೇ ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ ಬಾಲಕೃಷ್ಣ 365ನೇ ಸ್ಥಾನ
ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT