ಪಿಂಚಣಿ ಎನ್ನುವುದು ಸರ್ಕಾರಿ ನೌಕರಿಯ ಪ್ರಮುಖ ಆಕರ್ಷಣೆಯಾಗಿದ್ದ ಕಾಲವೊಂದಿತ್ತು. 2004ರಲ್ಲಿ ಹೊಸ ಪಿಂಚಣಿ ಯೋಜನೆ ಜಾರಿ ಮೂಲಕ ದಶಕಗಳಿಂದ ಅಸ್ತಿತ್ವದಲ್ಲಿದ್ದ ಪಿಂಚಣಿ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಯಿತು. ಅದರಲ್ಲಿ ಹಲವು ಗೊಂದಲಗಳು ಇದ್ದು, ನಿಶ್ಚಿತ ಆದಾಯದ ಬಗ್ಗೆ ಅನುಮಾನಗಳಿವೆ ಎಂದು ನೌಕರರು ವಿರೋಧ ವ್ಯಕ್ತಪಡಿಸಿದರು. ಅದು ರಾಜಕೀಯ ಪರ–ವಿರೋಧದ ವಿಚಾರವೂ ಆಗಿ, ಚುನಾವಣಾ ವಿಷಯವಾಯಿತು. ಕೇಂದ್ರ ಸರ್ಕಾರ ಈಗ ಮತ್ತೆ ಪಿಂಚಣಿ ಯೋಜನೆಗೆ ಬದಲಾವಣೆ ತಂದಿದೆ. ಸರ್ಕಾರದ ಮೇಲೆ ಹೊರೆ ಹೆಚ್ಚಾದರೂ ನೌಕರರ ಅನುಕೂಲಕ್ಕಾಗಿ ಏಕೀಕೃತ ಪಿಂಚಣಿ ಯೋಜನೆ ಜಾರಿಗೊಳಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೆ, ಅದರ ಬಗ್ಗೆಯೂ ವಿರೋಧದ ಧ್ವನಿಗಳು ಕೇಳಿಬಂದಿವೆ.