ಮಹಿಳೆಯರನ್ನು ಸಾರ್ವಜನಿಕವಾಗಿ ಬೆತ್ತಲುಗೊಳಿಸಿದ ಸಾವಿರಾರು ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಿದ್ದರೂ ಅವು ಸದ್ದು ಮಾಡುವುದೇ ಇಲ್ಲ. ಕೆಲವೇ ಪ್ರಕರಣಗಳು ದೊಡ್ಡ ಸುದ್ದಿಯಾದರೆ, ಉಳಿದವು ಯಾರ ಗಮನಕ್ಕೂ ಬರುವುದಿಲ್ಲ. ಸುದ್ದಿಯಾದ ಪ್ರಕರಣಗಳು ವಿವಿಧ ಕಾರಣಗಳಿಂದಾಗಿ ತ್ವರಿತವಾಗಿ ಇತ್ಯರ್ಥವಾಗುತ್ತವೆ, ರಾಜಕೀಯವೂ ಆಗುತ್ತವೆ. ಆದರೆ ಸುದ್ದಿಯಾಗದೇ ಇರುವ ಸುದ್ದಿಗಳ ಕತೆಯೇ ಬೇರೆ. ಎಫ್ಐಆರ್ ದಾಖಲಾದರೂ, ನ್ಯಾಯಾಲಯದಲ್ಲಿ ಇತ್ಯರ್ಥವಾದರೂ ಅವು ದಾಖಲೆಗಳಲ್ಲಷ್ಟೇ ಉಳಿಯುತ್ತವೆ. ಇಂತಹ ಕೃತ್ಯಗಳೂ ಹೀನವಾದವು ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಇಲ್ಲ. ಇದೇ ಕಾರಣಕ್ಕೆ, ಸಾವಿರಾರು ಕೃತ್ಯಗಳು ನಡೆಯುತ್ತಿದ್ದರೂ ಅವು ಜನರ ಅರಿವಿಗೇ ಬರುವುದಿಲ್ಲ ಮತ್ತು ಆ ಬಗ್ಗೆ ಆಕ್ರೋಶವೂ ವ್ಯಕ್ತವಾಗುವುದಿಲ್ಲ.

ಬೆಳಗಾವಿಯಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಥಳಿಸಿದ ಪ್ರಕರಣಕ್ಕೆ ಸರ್ಕಾರವು ತಕ್ಷಣದಲ್ಲಿಯೇ ಸ್ಪಂದಿಸಿ ಆರೋಪಿಗಳಲ್ಲಿ ಕೆಲವರನ್ನು ಬಂಧಿಸಿತು. ಸರ್ಕಾರವೇ ಅತಿವೇಗವಾಗಿ ಸ್ಪಂದಿಸಿದ ಕಾರಣಕ್ಕೆ ಜನಸಾಮಾನ್ಯರಿಗೆ ಆಕ್ರೋಶ ವ್ಯಕ್ತಪಡಿಸಲು ಅವಕಾಶವೇ ಆಗಲಿಲ್ಲ ಎಂದು ಕಾಣುತ್ತದೆ... ರಾಜ್ಯದಲ್ಲಿ ದಾಖಲಾದ ಇಂತಹ ಸಾವಿರಾರು ಪ್ರಕರಣಗಳ ಬಗ್ಗೆ ಪ್ರಶ್ನಿಸಿದಾಗ ಸಾಮಾಜಿಕ ಕಾರ್ಯಕರ್ತೆ, ಹೊಸಪೇಟೆಯ ನಸ್ರೀನ್ ಮಿಠಾಯಿ ಅವರು ವ್ಯಕ್ತಪಡಿಸಿದ ಅಭಿಪ್ರಾಯವಿದು.

ಮಹಿಳೆಯ ಮೇಲೆ ನಡೆಸುವ ಹಿಂಸೆಯು ಸಾಮಾಜಿಕ ಪಿಡುಗು. ಅದು ಅತ್ಯಾಚಾರ ಅಥವಾ ಬೆತ್ತಲೆಗೊಳಿಸುವುದು, ದೌರ್ಜನ್ಯ ಎಸಗುವುದು ಇತ್ಯಾದಿ– ಇವು ಹಿಂಸೆಯ ಬೇರೆ ಬೇರೆ ಸ್ವರೂಪ. ಮಹಿಳೆಯನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸುವ ಪ್ರಕರಣಗಳ ಸಂಖ್ಯೆಯ ವಿಭಾಗದಲ್ಲಿ ಇತರೆ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕವು ಮೂರನೇ ಸ್ಥಾನದಲ್ಲಿದೆ. ಇಂಥ ಪ್ರಕರಣಗಳು ಇಷ್ಟೊಂದು ಪ್ರಮಾಣದಲ್ಲಿ ನಡೆಯುತ್ತಿದೆ ಮತ್ತು ಈ ಪ್ರಕರಣಗಳಲ್ಲಿ ಎಫ್ಐಆರ್ ಕೂಡ ದಾಖಲಾಗುತ್ತಿದೆ. ಆದರೆ, ಹೀಗೆ ದಾಖಲಾದ ಪ್ರಕರಣಗಳ ಸ್ಥಿತಿಗತಿ ಏನು ಎಂದು ಮಾತ್ರ ತಿಳಿಯುತ್ತಿಲ್ಲ.

‘ಮಹಿಳೆಯ ಮೇಲೆ ಹಿಂಸೆ ಮಾಡುವುದು ಸಹಜ ಎಂಬ ಭಾವನೆ ಇತ್ತೀಚಿನ ವರ್ಷಗಳಲ್ಲಿ ಜನಮಾನಸದಲ್ಲಿ ಬೇರೂರಿದೆ. ಮಹಿಳೆಯೊಬ್ಬಳನ್ನು ಬೆತ್ತಲು ಮಾಡುವುದು ಎಂದರೆ, ಮಹಿಳೆಯೊಬ್ಬಳಿಗೆ ಮಾಡಿದ ಅತಿ ದೊಡ್ಡ ಅವಮಾನ ಎಂದು ಕೃತ್ಯ ಎಸಗುವವರಿಗೆ ಗೊತ್ತಿದೆ. ಕೃತ್ಯ ಎಸಗುವುದು ತಪ್ಪು ಎಂದು ತಿಳಿದಿದ್ದರೂ ಮಹಿಳೆಯರಿಗೆ ಅವಮಾನ ಮಾಡಬೇಕು ಎನ್ನುವ ದೃಷ್ಟಿಯಿಂದಲೇ ಇಂಥ ಕೃತ್ಯಗಳನ್ನು ಪುರುಷರು ಎಸಗುತ್ತಿದ್ದಾರೆ’ ಎನ್ನುತ್ತಾರೆ ನಸ್ರೀನ್.

ವ್ಯಾವಹಾರಿಕ ಕಾರಣಕ್ಕಾಗಿ, ಹೆಂಡತಿ ಮೋಸ ಮಾಡಿದಳು ಎಂದು, ಮಗನ ಮೇಲಿನ ದ್ವೇಷಕ್ಕಾಗಿ ತಾಯಿಯ ಮೇಲೆ ಇಂತಹ ಕೃತ್ಯ ಎಸಗುವುದು... ಮಹಿಳೆಯರನ್ನು ಸಾರ್ವಜನಿಕವಾಗಿ ಬೆತ್ತಲುಗೊಳಿಸಿದ ಕೃತ್ಯಗಳ ಹಿಂದಿನ ಸಾಮಾನ್ಯ ಕಾರಣಗಳಿವು. 2022ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿತ್ತು, 2021ರಲ್ಲಿ ಬೀದರ್ನ ಹುಮನಾಬಾದ್ನಲ್ಲಿ, 2020ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ, 2019ರಲ್ಲಿ ಬೆಂಗಳೂರಿನ ಕೆಂಗೇರಿಯಲ್ಲಿ ಇಂಥ ಪ್ರಕರಣ ನಡೆದಿತ್ತು. ಕೆಂಗೇರಿಯ ಪ್ರಕರಣದಲ್ಲಿ, ಪ್ರೇಮಿಗಳನ್ನು ಸುಲಿಗೆ ಮಾಡಲು ಬಂದಿದ್ದ ದುಷ್ಕರ್ಮಿಗಳು ಕೊನೆಗೆ ಯುವತಿಯನ್ನು ಬೆತ್ತಲೆಗೊಳಿಸಿ ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದರು.

‘ಮಹಿಳೆಯರನ್ನು ಬೆತ್ತಲುಗೊಳಿಸುವ ಕೃತ್ಯವನ್ನು ಸಾಮಾನ್ಯವಾಗಿ ಮಹಿಳೆಯ ಕುಟುಂಬಸ್ಥರೇ ನಡೆಸುತ್ತಾರೆ. ಇಲ್ಲವೇ ಸ್ನೇಹಿತರು, ಪರಿಚಿತರೇ ನಡೆಸುತ್ತಾರೆ. ಇದೇ ಕಾರಣಕ್ಕಾಗಿ ಇಂಥ ಪ್ರಕರಣಗಳು ಹೆಚ್ಚು ವರದಿಯಾಗುವುದೂ ಇಲ್ಲ, ದಾಖಲಾಗುವುದೂ ಇಲ್ಲ. ಪ್ರಕರಣಗಳು ದಾಖಲಾದರೂ ಅವು ನ್ಯಾಯಾಲಯ ಮುಟ್ಟುವಷ್ಟರಲ್ಲಿ ರಾಜಿ–ಸಂಧಾನ ನಡೆದುಹೋಗಿರುತ್ತದೆ’ ಎನ್ನುವುದು ದೊಡ್ಡಬಳ್ಳಾಪುರದ ‘ಯುವ ಸಂಚಲನ’ದ ಚಿದಾನಂದ್ ಅವರ ಅಭಿಪ್ರಾಯ. ಇಂತಹ ಕಾರಣಗಳಿಂದಲೇ ನ್ಯಾಯಾಲಯಗಳಲ್ಲಿ ಈ ಪ್ರಕರಣಗಳ ವಿಚಾರಣೆ ಮುಂದುವರಿಯುವುದೇ ಇಲ್ಲ ಎಂದೂ ಅವರು ಹೇಳುತ್ತಾರೆ.

ಇಂಥ ಪ್ರಕರಣಗಳು ದೊಡ್ಡಮಟ್ಟದಲ್ಲಿ ಸುದ್ದಿಯಾಗುವುದು ಕೂಡ ವಿರಳ ಎನ್ನಬಹುದು. ಜನಸಾಮಾನ್ಯರು ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುವುದಿಲ್ಲ. 2019–2022ರ ಮಧ್ಯೆ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ವರದಿಯಾದ ಇಂತಹ ಪ್ರಕರಣಗಳ ಸಂಖ್ಯೆ 10ರ ಗಡಿ ಮುಟ್ಟುವುದಿಲ್ಲ. ಆದರೆ ಈ ಅವಧಿಯಲ್ಲಿ ರಾಜ್ಯದಾದ್ಯಂತ ದಾಖಲಾದ ಇಂತಹ ಪ್ರಕರಣಗಳ ಸಂಖ್ಯೆ 5,000ದ ಆಸುಪಾಸಿನಲ್ಲಿದೆ. ಮಹಿಳೆಯನ್ನು ಬೆತ್ತಲು ಮಾಡುವುದೂ ಅತ್ಯಂತ ಹೀನ ಕೃತ್ಯ ಎಂಬುದರ ಬಗ್ಗೆ ಅರಿವು ಇಲ್ಲದೇ ಇರುವುದೇ ಇದಕ್ಕೆ ಕಾರಣ ಎಂಬುದು ಸಾಮಾಜಿಕ ಕಾರ್ಯಕರ್ತರ ಅಭಿಪ್ರಾಯ.

ಇಂತಹ ಕೆಲವು ಕೃತ್ಯಗಳಷ್ಟೇ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತವೆ. ಅದು ಮಣಿಪುರದ ಕೃತ್ಯವಿರಬಹುದು ಅಥವಾ ಬೆಳಗಾವಿಯ ಕೃತ್ಯವಿರಬಹುದು. ಇಂತಹ ಕೃತ್ಯಗಳಲ್ಲಿ ಸಂತ್ರಸ್ತೆಯರ ಗುರುತು ಪತ್ತೆಯಾಗುವಂತಹ ವಿಡಿಯೊ, ಚಿತ್ರ ಮತ್ತು ಮಾಹಿತಿಗಳೂ ದೊಡ್ಡಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ. ಗೂಗಲ್ನಂತಹ ಹುಡುಕುತಾಣದಲ್ಲಿ ಈ ಪ್ರಕರಣಗಳ ಕುರಿತು ಮಾಹಿತಿಗಾಗಿ ಅಕ್ಷರಗಳ ಟೈಪಿಸುತ್ತಿದ್ದರೆ, ‘ಮಣಿಪುರ ರೇಪ್ ಅನ್ಎಡಿಟೆಡ್ ವಿಡಿಯೊ’ ಎಂದು ಗೂಗಲ್ ಸಜೆಸ್ಟ್ ಮಾಡುತ್ತದೆ. ಅಂತಹ ವಿಡಿಯೊಗಳನ್ನು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಹುಡುಕಿದ್ದರಷ್ಟೇ ಆಟೊಫಿಲ್ನಲ್ಲಿ ಹಾಗೆ ಬರುತ್ತದೆ. ಈಗ ಬೆಳಗಾವಿಯ ಪ್ರಕರಣದಲ್ಲೂ ಹೀಗೇ ಆಗಿದೆ. ಆ ಪ್ರಕರಣವು ದೊಡ್ಡಮಟ್ಟದಲ್ಲಿ ಸುದ್ದಿಯಾದ ಬೆನ್ನಲ್ಲೇ ಸಾವಿರಾರು ಮಂದಿ, ಕೃತ್ಯದ ಅನ್ಎಡಿಟೆಡ್ ವಿಡಿಯೊಗಾಗಿ ಗೂಗಲ್ನಲ್ಲಿ ಹುಡುಕಿದ್ದಾರೆ. ಅತ್ಯಾಚಾರವಷ್ಟೇ ಹೀನ ಕೃತ್ಯ, ಬೆತ್ತಲೆ ಮಾಡಿ ಹಲ್ಲೆ ಮಾಡುವುದು ಹೀನವಲ್ಲ ಎಂಬ ಮನಃಸ್ಥಿತಿ ಇರುವುದರಿಂದಲೇ ಈ ರೀತಿ ಆಗುತ್ತಿದೆ. ಈ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂಬುದು ಸಾಮಾಜಿಕ ಕಾರ್ಯಕರ್ತರ ಅನಿಸಿಕೆ.

ಅತಿ ಹೆಚ್ಚು ಪ್ರಕರಣಗಳು ದಾಖಲಾದ ಮೊದಲ ನಾಲ್ಕು ರಾಜ್ಯಗಳು

l ಇಂತಹ ಅತಿಹೆಚ್ಚು ಪ್ರಕರಣಗಳು ದಾಖಲಾಗಿರುವುದು ಒಡಿಶಾದಲ್ಲಿ

l ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶವಿದೆ

l ಅತಿಹೆಚ್ಚು ಪ್ರಕರಣ ದಾಖಲಾಗಿರುವ ಮೂರನೇ ರಾಜ್ಯದ ಸ್ಥಾನವು ಅಸ್ಸಾಂ ಮತ್ತು ಕರ್ನಾಟಕದ ಮಧ್ಯೆ ಅದಲು ಬದಲಾಗುತ್ತಿದೆ

l ದೇಶದಲ್ಲಿ ದಾಖಲಾಗುತ್ತಿರುವ ಒಟ್ಟು ಪ್ರಕರಣಗಳ ಮೂರನೇ ಎರಡರಷ್ಟು ಪ್ರಕರಣಗಳು ಈ ನಾಲ್ಕು ರಾಜ್ಯಗಳಲ್ಲೇ ದಾಖಲಾಗುತ್ತಿವೆ

ಐಪಿಸಿ ಸೆಕ್ಷನ್ 354ಬಿ: ಏನು, ಎತ್ತ...

ಮಹಿಳೆಯನ್ನು ವಿವಸ್ತ್ರಗೊಳಿಸುವ ಉದ್ದೇಶದಿಂದ ಅವಳ ಮೇಲೆ ಹಲ್ಲೆ ನಡೆಸುವುದು ಅಥವಾ ಬಲ ಪ್ರಯೋಗಿಸುವುದು ಶಿಕ್ಷಾರ್ಹ ಅಪರಾಧ ಎಂದು ಭಾರತೀಯ ದಂಡ ಸಂಹಿತೆಯ 354ಬಿ ಸೆಕ್ಷನ್ ಹೇಳುತ್ತದೆ. ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದ ಎಲ್ಲಾ ಕೃತ್ಯಗಳನ್ನು 354 ಸೆಕ್ಷನ್ ಮತ್ತು ಅದರ ಉಪಸೆಕ್ಷನ್ಗಳಲ್ಲಿ ವಿವರಿಸಲಾಗಿದೆ. 354ಬಿ ಅಂತಹ ಒಂದು ಸೆಕ್ಷನ್. ಬಲಪ್ರಯೋಗದ ಮೂಲಕ ಮಹಿಳೆಯನ್ನು ವಿವಸ್ತ್ರಗೊಳಿಸುವುದು ಕೃತ್ಯದ ಸ್ವರೂಪವಾದರೂ, ಆಕೆಯ ಗೌರವಕ್ಕೆ ಧಕ್ಕೆ ತರುವುದೇ ಅಂತಹ ಕೃತ್ಯದ ಉದ್ದೇಶ ಎಂದು ಪರಿಗಣಿಸಲಾಗುತ್ತದೆ. ರಾಜ್ಯ ಪೊಲೀಸ್ ಇಲಾಖೆಯ ‘ಅಪರಾಧ ಪರಿಶೀಲನೆ’ ಮಾಸಿಕ ವರದಿಯಲ್ಲೂ 354ಬಿ ಅನ್ನು ‘ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಕೃತ್ಯ’ಗಳ ಅಡಿಯಲ್ಲೇ ಸೇರಿಸಲಾಗಿದೆ.

ಮಹಿಳೆಯನ್ನು ವಿವಸ್ತ್ರಗೊಳಿಸುವ ಯತ್ನ, ಆಕೆಯ ಬಟ್ಟೆಯನ್ನು ಎಳೆದಾಡುವಂತಹ ಕೃತ್ಯಗಳೂ ಇದೇ ವ್ಯಾಪ್ತಿಗೆ ಬರುತ್ತವೆ. ಇವೆಲ್ಲವೂ ಶಿಕ್ಷಾರ್ಹ ಅಪರಾಧಗಳೇ ಆಗಿವೆ. ಇಂತಹ ಕೃತ್ಯಕ್ಕೆ ಮೂರು ವರ್ಷಗಳಿಂದ ಏಳು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಲು ಅವಕಾಶವಿದೆ. ಜತೆಗೆ ದಂಡ ವಿಧಿಸಲೂ ಅವಕಾಶವಿದೆ.

ಪ್ರತಿ ವರ್ಷ ದೇಶದಾದ್ಯಂತ ಇಂತಹ ಸರಿಸುಮಾರು 10 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಕೆಲವು ವರ್ಷಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ 10 ಸಾವಿರವನ್ನೂ ದಾಟಿದೆ. ಇಂತಹ ಕೃತ್ಯಗಳು ಸಾವಿರಾರು ಸಂಖ್ಯೆಯಲ್ಲಿ ನಡೆಯುತ್ತಿದ್ದರೂ, ಕೆಲವು ಪ್ರಕರಣಗಳಷ್ಟೇ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿವೆ. ಮಹಿಳೆಯನ್ನು ಸಂಪೂರ್ಣವಾಗಿ ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ, ಥಳಿಸಿದಂತಹ ಪ್ರಕರಣಗಳಷ್ಟೇ ಸುದ್ದಿಯಾಗುತ್ತಿವೆ. ಉಳಿದ ಕೃತ್ಯಗಳೂ ಅಷ್ಟೇ ಹೀನವಾಗಿದ್ದರೂ ಶಿಕ್ಷಾರ್ಹ ಅಪರಾಧವಾಗಿದ್ದರೂ ಅವು ಪೊಲೀಸ್ ದಾಖಲೆಗಳಲ್ಲಿ ಮಾತ್ರ ಉಳಿಯುತ್ತಿವೆ.

ಎನ್ಸಿಆರ್ಬಿ ದಾಖಲೆಗಳಲ್ಲೂ 354ಬಿ ಕೃತ್ಯಗಳ ಬಗ್ಗೆ ವಿಸ್ತೃತ ದತ್ತಾಂಶ ಲಭ್ಯವಿಲ್ಲ. ಇಂತಹ ಪ್ರಕರಣಗಳ ಸ್ಥಿತಿಗತಿ ಏನು? ಎಷ್ಟು ಪ್ರಕರಣಗಳು ಸುಳ್ಳು ಎಂದು ವಜಾ ಆಗಿವೆ? ಎಷ್ಟೆಲ್ಲಾ ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿವೆ ಎಂಬುದಕ್ಕೆ ಸಂಬಂಧಿಸಿದ ರಾಜ್ಯವಾರು ವಿವರಗಳು ಇಲ್ಲ. ನ್ಯಾಯಾಲಯಗಳು ವಿಲೇವಾರಿ ಮಾಡಿದ ಇಂತಹ ಪ್ರಕರಣಗಳ ಕುರಿತೂ ರಾಜ್ಯವಾರು ವಿಸ್ತೃತ ವರದಿ ಲಭ್ಯವಿಲ್ಲ. ಹೀಗಾಗಿ ಈ ಹೊತ್ತಿಗೆ ಇವುಗಳಲ್ಲಿ ವಿಲೇವಾರಿಯಾದ ಪ್ರಕರಣಗಳೆಷ್ಟು? ಎಷ್ಟೆಲ್ಲಾ ಸುಳ್ಳು ಪ್ರಕರಣಗಳು, ಎಷ್ಟೆಲ್ಲಾ ಪ್ರಕರಣಗಳಲ್ಲಿ ಶಿಕ್ಷೆಯಾಯಿತು ಎಂಬ ಮಾಹಿತಿ ಲಭ್ಯವಿಲ್ಲ.

ಪ್ರಜಾವಾಣಿ ಸೂಕ್ಷ್ಮತೆ ಮೆರೆದಿದೆ ಎಂದು ಹೈಕೋರ್ಟ್ ಶ್ಲಾಘನೆ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಹೊಸ ವಂಟಮೂರಿ ಗ್ರಾಮದ ಮಹಿಳೆಯನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿ ಥಳಿಸಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಹೈಕೋರ್ಟ್, ಘಟನೆಯ ವರದಿಗಾರಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳ ವಿರುದ್ಧ ತೀವ್ರ ಅಸಮಾಧಾನ ದಾಖಲಿಸಿದೆ. ಈ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಾಲ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಮಂಗಳವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಈ ಪ್ರಕರಣವನ್ನು ಮುಕ್ತ ನ್ಯಾಯಾಲಯದಲ್ಲಿ ಪ್ರಸ್ತಾಪಿಸಿತು.

‘ಒಂದೆಡೆ, ದೇಶವು 76ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಇಂತಹ ಘಟನೆ ನಡೆದಿರುವುದು ನಮ್ಮೆಲ್ಲರ ಅಂತಃಕರಣವನ್ನು ಕಲಕಿ, ತಲೆತಗ್ಗಿಸುವಂತೆ ಮಾಡಿದೆ. ಇದೊಂದು ಹೃದಯ ಮಿಡಿಯುವ ಆಘಾತಕಾರಿ ಘಟನೆ‘ ಎಂದು ದಿಗ್ಭ್ರಮೆ ವ್ಯಕ್ತಪಡಿಸಿದೆ.

ಸಂತ್ರಸ್ತೆಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸಂತೈಸುತ್ತಿರುವ ಚಿತ್ರವು ಮಂಗಳವಾರದ (ಡಿ.12) ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ಉಲ್ಲೇಖಿಸಿದ ನ್ಯಾಯಪೀಠ, ‘ಈ ವಿಷಯದಲ್ಲಿ ‘ಪ್ರಜಾವಾಣಿ‘ಯಂತಹ ದಿನಪತ್ರಿಕೆ ತನ್ನ ಸೂಕ್ಷ್ಮತೆ ಮೆರೆದಿದೆ. ಆದರೆ, ಇನ್ನುಳಿದಂತೆ ಹಲವು ಮಾಧ್ಯಮ ಅದರಲ್ಲೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಅತ್ಯಂತ ಬೇಜವಾಬ್ದಾರಿ ಮತ್ತು ಅಸೂಕ್ಷ್ಮತೆಯಿಂದ ನಡೆದುಕೊಂಡಿವೆ‘ ಎಂದು ಚಾಟಿ ಬೀಸಿದೆ.

‘ಸಂತ್ರಸ್ತೆಯ ವೈಯಕ್ತಿಕ ಘನತೆಯನ್ನು ಕಾಪಾಡಬೇಕಿದೆ’ ಎಂದ ನ್ಯಾಯಪೀಠ, ‘ಇನ್ನು ಮುಂದೆ ರಾಷ್ಟ್ರೀಯ, ರಾಜ್ಯ ಮತ್ತು ಯಾವುದೇ ಸ್ತರದ ಮಾಧ್ಯಮಗಳು ಸಂತ್ರಸ್ತೆಯ ಸಂದರ್ಶನ ಅಥವಾ ವಿಡಿಯೊಗ್ರಾಫ್ ಪ್ರಸಾರ ಮಾಡಬಾರದು‘ ಎಂದು ನಿರ್ದೇಶಿಸಿತು. ಈಗಾಗಲೇ ಮಾಡಿದ್ದರೆ ಅವುಗಳನ್ನು ತೆಗೆದುಹಾಕುವಂತೆಯೂ ತಾಕೀತು ಮಾಡಿತು.

‘ಸುದ್ದಿ ಪ್ರಸಾರ ಮಾಡುವುದಕ್ಕೆ ಮಾಧ್ಯಮಗಳ ಮೇಲೆ ನಿಷೇಧ ಹೇರುತ್ತಿಲ್ಲ‘ ಎಂದ ನ್ಯಾಯಪೀಠ, ‘ನ್ಯಾಯಾಲಯ, ಮಾಧ್ಯಮದ ಸ್ವಾತಂತ್ರ್ಯವನ್ನು ಯಾವತ್ತೂ ಮನ್ನಿಸುತ್ತದೆ‘ ಎಂದು ಸ್ಪಷ್ಟಪಡಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ 14ರಂದು ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರಿಗೆ ನಿರ್ದೇಶಿಸಿತು.

ಆಧಾರ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊವಿನ ‘ಭಾರತದಲ್ಲಿ ಅಪರಾಧ’ ವರದಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.