ದೇಶದಲ್ಲಿ ಟೊಮೆಟೊ ಬೆಲೆ ವಿಪರೀತ ಎನ್ನುವಷ್ಟರ ಮಟ್ಟಿಗೆ ಏರಿಕೆಯಾಗಿದೆ. ‘ಮೊದಲು, ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುತ್ತಿತ್ತು. ಆದರೆ ಈಗ ಟೊಮೆಟೊ ಕತ್ತರಿಸುವಾಗಲೂ ಕಣ್ಣೀರು ಬರುತ್ತದೆ’. ಟೊಮೆಟೊ ಬೆಲೆ ಏರಿಕೆಯ ತೀವ್ರತೆಯನ್ನು ವ್ಯಕ್ತಪಡಿಸಲು ಹುಟ್ಟಿಕೊಂಡ ಮಾತಿದು. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಪೋಸ್ಟ್‌ಗಳು, ಹೇಳಿಕೆಗಳು ಭಾರಿ ಸಂಖ್ಯೆಯಲ್ಲಿ ಓಡಾಡುತ್ತಿವೆ. ಟೊಮೆಟೊ ಬೆಲೆ ಏರಿಕೆಯಾಗುತ್ತಿದೆ ಎಂದು ಜನರು ಹೌಹಾರುತ್ತಿರುವುದು ಒಂದೆಡೆ. ಹೊಲದಲ್ಲಿರುವ, ಸಾಗಾಟದಲ್ಲಿರುವ, ಮಾರುಕಟ್ಟೆಯಲ್ಲಿರುವ, ಅಂಗಡಿಗಳಲ್ಲಿ ಇರುವ ಟೊಮೆಟೊಗಳನ್ನು ಕಾಪಾಡಿಕೊಳ್ಳುವ ಹೊಸತಂತ್ರಗಳು ಮತ್ತೊಂದೆಡೆ. ಇದರ ಮಧ್ಯೆ ಟೊಮೆಟೊ ಬೆಲೆ ಏರಿಕೆಯಾಗುತ್ತಿರುವುದು ಏಕೆ ಎಂಬುದರತ್ತಲೂ ಗಮನ ಹರಿಸಬೇಕಿದೆ.

ದೇಶದ ಎಲ್ಲಾ ರಾಜ್ಯಗಳಲ್ಲಿ ಟೊಮೆಟೊ ಬೆಳೆಯುವುದಿಲ್ಲ. ದೇಶದ ಒಟ್ಟು ಟೊಮೆಟೊ ಇಳುವರಿಯ ಶೇ 60ರಷ್ಟು ಪಾಲು ದಕ್ಷಿಣದ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಇನ್ನು ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸಗಢ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶಗಳಲ್ಲಿನ ಬೆಳೆಯನ್ನು ಲೆಕ್ಕಕ್ಕೆ ಸೇರಿಸಿಕೊಂಡರೆ ಅದು ಒಟ್ಟು ದೇಶದ ಶೇ 90ರಷ್ಟು ಟೊಮೆಟೊ ಇಳುವರಿಯಾಗುತ್ತದೆ. ದಕ್ಷಿಣದ ರಾಜ್ಯಗಳಲ್ಲಿ ಜೂನ್–ಸೆಪ್ಟೆಂಬರ್, ಅಕ್ಟೋಬರ್–ಫೆಬ್ರುವರಿ, ಜನವರಿ–ಜೂನ್ ಎಂದು ಮೂರು ಅವಧಿಗಳಲ್ಲಿ ಟೊಮೆಟೊ ಬೆಳಯಲಾಗುತ್ತದೆ. ಈ ಮೂರೂ ಅವಧಿಯಲ್ಲಿ ಮಳೆ ಮತ್ತು ಚಳಿಯಲ್ಲಿ ಬದಲಾವಣೆಯಾದರೆ, ಅದು ಟೊಮೊಟೊ ಬೆಳೆಯನ್ನು ಬಾಧಿಸುತ್ತದೆ.

ದಕ್ಷಿಣದ ರಾಜ್ಯಗಳಲ್ಲಿ ಜನವರಿ–ಫೆಬ್ರುವರಿಯಲ್ಲಿ ಬಿತ್ತನೆ ಮಾಡಿದ ಟೊಮೆಟೊ ಜೂನ್–ಜುಲೈನಲ್ಲಿ ಮಾರುಕಟ್ಟೆಗೆ ಬರಬೇಕಿತ್ತು. ಆದರೆ, ದೀರ್ಘ ಚಳಿ, ಕಡುಬೇಸಿಗೆ ಮತ್ತು ಮಳೆ ವಿಳಂಬದ ಕಾರಣದಿಂದ ನಿರೀಕ್ಷಿತ ಇಳುವರಿ ಬಂದಿಲ್ಲ. ಕರ್ನಾಟಕ, ಆಂಧ್ರಪ್ರದೇಶದ ಟೊಮೆಟೊ ಹೊಲಗಳಲ್ಲಿ ಎಲೆಸುತ್ತು ಶಿಲೀಂಧ್ರ ರೋಗಗಳು ಕಾಣಿಸಿಕೊಂಡ ಕಾರಣ ಇಳುವರಿ ಕುಂಠಿತವಾಗಿದೆ. ಇದೇ ಅವಧಿಯಲ್ಲಿ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಟೊಮೆಟೊ ಬೆಳೆಗೂ ಬೇರೆ–ಬೇರೆ ಶಿಲೀಂಧ್ರ ರೋಗಗಳು ಕಾಣಿಸಿಕೊಂಡಿವೆ. ಮಧ್ಯ ಭಾರತ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಅಕಾಲಿಕ ಮಳೆಯ ಕಾರಣದಿಂದ ಟೊಮೆಟೊ ಬೆಳೆ ನಾಶವಾಗಿದೆ. ಒಟ್ಟಾರೆಯಾಗಿ ಟೊಮೆಟೊ ಇಳುವರಿ ಕಡಿಮೆಯಾಗಿದ್ದರಿಂದ, ಬೆಲೆ ವಿಪರೀತ ಎನ್ನುವಷ್ಟರ ಮಟ್ಟಿಗೆ ಏರಿಕೆಯಾಗಿದೆ.

ಟೊಮೆಟೊ ಬೆಲೆಯಲ್ಲಿ ಆಗುವ ಏರಿಳಿತಕ್ಕೆ ಸಂಬಂಧಿಸಿದಂತೆ ಕೇಂದ್ರ ಕೃಷಿ ಸಚಿವಾಲಯವು ಪ್ರತೀ ತಿಂಗಳು ಬೆಲೆ ವರದಿಯನ್ನು ಪ್ರಕಟಿಸುತ್ತಿತ್ತು. 2020ರ ಮೇವರೆಗಿನ ವರದಿ ಲಭ್ಯವಿದ್ದು, ದೇಶದಲ್ಲಿ ಟೊಮೆಟೊ ಸಗಟು ಸರಾಸರಿ ಬೆಲೆಯನ್ನು ಈ ವರದಿ ದಾಖಲಿಸಿದೆ. ಈ ವರದಿಗಳ ಪ್ರಕಾರ 2015ರಿಂದ 2020ರ ಮೇವರೆಗಿನ ಅತ್ಯಂತ ಕನಿಷ್ಠ ಬೆಲೆ ₹10 (ಸಗಟು ಬೆಲೆ). ಆದರೆ, ಈ ಅವಧಿಯಲ್ಲಿ ಕರ್ನಾಟಕದಲ್ಲಿ ಪ್ರತಿ ಕೆ.ಜಿ. ಟೊಮೆಟೊ ಬೆಲೆ 50 ಪೈಸೆಗಿಂತ ಕಡಿಮೆಯಾಗಿದ ಉದಾಹರಣೆಗಳು ಸಾಕಷ್ಟು ಇವೆ.

–ಆಧಾರ: ಕೇಂದ್ರ ಕೇಷಿ ಸಚಿವಾಲಯ, ಪಿಟಿಐ

ಬಾಹ್ಯಾಕಾಶದಲ್ಲಿ ಟೊಮೆಟೊ ಬೀಜೋತ್ಪಾದನೆಗೆ 4 ದಶಕ

ಬೆಂಗಳೂರು: ಬೆಲೆ ಕುಸಿದಾಗ ರಸ್ತೆಗೆ ಬೀಳುವ ಹಾಗೂ ಬೆಲೆ ಏರಿದಾಗ ಬಂದೂಕಿನ ಭದ್ರತೆ ಪಡೆಯುವ ಟೊಮೆಟೊ ಸದ್ಯ ಚರ್ಚೆಯಲ್ಲಿರುವ ತರಕಾರಿ.

ಟೊಮೆಟೊ ಬೀಜವನ್ನು ಬಾಹ್ಯಾಕಾಶದಲ್ಲಿಟ್ಟು ಆರು ವರ್ಷಗಳ ನಂತರ ಭೂಮಿ ಮೇಲೆ ಬೆಳೆಯುವ ನಾಸಾದ ಪ್ರಯೋಗಕ್ಕೆ ಈಗ ನಾಲ್ಕು ದಶಕದ ಸಂಭ್ರಮ.

ನೆಲದ ಮೇಲೆ ಬಲು ಪ್ರಸಿದ್ಧಿ ಪಡೆದ ಟೊಮೆಟೊವನ್ನು ಬಾಹ್ಯಾಕಾಶದಲ್ಲಿ ದೀರ್ಘಕಾಲದವರೆಗೆ ಸಂಸ್ಕರಿಸಿ ಇಡುವ ಪ್ರಯತ್ನವನ್ನು ನಾಸಾ 1984ರಲ್ಲಿ ನಡೆಸಿತ್ತು. ಸುಮಾರು 1.25 ಕೋಟಿ ಬೀಜವನ್ನು ವಿಶೇಷ ಉಪಗ್ರಹದಲ್ಲಿಟ್ಟು ಬಾಹ್ಯಾಕಾಶಕ್ಕೆ ಕಳುಹಿಸಿತ್ತು.

ನಿರಂತರವಾಗಿ ಆರು ವರ್ಷಗಳ ಕಾಲ ತನ್ನ ಕಕ್ಷೆಯಲ್ಲೇ ಟೊಮೆಟೊ ಬೀಜ ಹೊತ್ತ ಈ ಉಪಗ್ರಹ ಭೂಮಿಯನ್ನು ಸುತ್ತಿತು. ಆರು ವರ್ಷಗಳ ನಂತರ ಕೊಲಂಬಿಯಾ ಬಾಹ್ಯಾಕಾಶ ನೌಕೆಯ ಮೂಲಕ ತೆರಳಿದ ವಿಜ್ಞಾನಿಗಳು, ಈ ಉಪಗ್ರಹವನ್ನು ಮರಳಿ ಭೂಮಿಗೆ ತಂದಿದ್ದರು. ಬಾಹ್ಯಾಕಾಶದಲ್ಲಿದ್ದ ಈ ಬೀಜದಿಂದ ಸಸಿ ಬೆಳೆಯಲು ಪ್ರಯೋಗದ ಭಾಗವಾಗಿ ವಿದ್ಯಾರ್ಥಿಗಳಿಗೆ ನಾಸಾ ನೀಡಿತ್ತು.

ಆಶ್ಚರ್ಯವೆಂದರೆ ಭೂಮಿಯಲ್ಲಿ ಬೀಜೋತ್ಪಾದನೆ ಮಾಡಿದ ಟೊಮೆಟೊಗಿಂತ, ಬಾಹ್ಯಾಕಾಶದಲ್ಲಿದ್ದ ಬೀಜಗಳಿಂದ ಬೆಳೆದ ಟೊಮೆಟೊಗಳು ಹೆಚ್ಚು ರುಚಿಕರವಾಗಿ, ರಸಭರಿತವಾಗಿ ಹಾಗೂ ಸಿಹಿಯಾಗಿದ್ದವು ಎಂದು ವಿದ್ಯಾರ್ಥಿಗಳು ತಮ್ಮ ವರದಿಯನ್ನು ನಾಸಾಗೆ ನೀಡಿದರು. ಇದನ್ನು ಆಧರಿಸಿದ ನಾಸಾ, ಯಾವುದೇ ಸಸ್ಯದ ಬೀಜಗಳನ್ನು ಬಾಹ್ಯಾಕಾಶದಲ್ಲಿ ದೀರ್ಘಕಾಲದವರೆಗೆ ಇಟ್ಟರೂ, ಅದರ ಫಲವಂತಿಕೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ನಾಸಾ ತನ್ನ ವರದಿಯಲ್ಲಿ ಹೇಳಿದೆ.

ಹೀಗೆ ವರದಿ ಸಲ್ಲಿಸಿದ ಮಕ್ಕಳಲ್ಲಿ ಅಮೆರಿಕಾದ ಒಂಟಾರಿಯೊದ 2ನೇ ತರಗತಿಯ ವಿದ್ಯಾರ್ಥಿ ಮ್ಯಾಟ್ ಬರೆದ ಪತ್ರ ಹೀಗಿತ್ತು. ‘ಪ್ರೀತಿಯ ನಾಸಾ. ನನ್ನ ಹೆಸರು ಮ್ಯಾಟ್. ನಾನು 2ನೇ ತರಗತಿಯಲ್ಲಿ ಓದುತ್ತಿದ್ದೇನೆ. ಗಿಡಗಳನ್ನು ಬೆಳೆಸುವುದನ್ನು ಹೆಚ್ಚಾಗಿ ಸಂಭ್ರಮಿಸುತ್ತೇನೆ. ಇದು ನನಗೆ ಲಭಿಸಿದ ಫಲಿತಾಂಶ. ಭೂಮಿಯಲ್ಲಿದ್ದ ಬೀಜವನ್ನು ಚೆನ್ನಾಗಿ ಬೆಳೆಯಲಿಲ್ಲ. ಬಾಹ್ಯಾಕಾಶದಲ್ಲಿದ್ದ ಬೀಜ ಚೆನ್ನಾಗಿ ಬೆಳೆಯಿತು’ ಎಂದಿತ್ತು.

ಒಂದಲ್ಲಾ ಒಂದು ತಿನಿಸುಗಳ ಮೂಲಕ ನಿತ್ಯ ಹೊಟ್ಟೆ ಸೇರುವ ಟೊಮೆಟೊ ಈಗ ಬಲು ದುಬಾರಿ. ಇಷ್ಟೊಂದು ಸುದ್ದಿಯಲ್ಲಿರುವ ಟೊಮೆಟೊ ದಕ್ಷಿಣ ಅಮೆರಿಕದ ಪೆರು ದೇಶದಿಂದ ಜಗತ್ತಿಗೆ ಪರಿಚಯಗೊಂಡು ಅತ್ಯಂತ ಜನಪ್ರಿಯ ತರಕಾರಿ ಎನಿಸಿಕೊಂಡಿದೆ. ತಿಳಿಸಾರಿನಿಂದ ಹಿಡಿದು ಪಿಟ್ಜಾವರೆಗೂ ಟೊಮೆಟೊ ಹಲವು ರೂಪದಲ್ಲಿ ಬಳಕೆಯಾಗುತ್ತಿದೆ.

ಕೆಲವೆಡೆ ತಾಜಾ ತರಕಾರಿಯಾಗಿ, ಇನ್ನೂ ಕೆಲವೆಡೆ ಕೆಚಪ್ ಆಗಿ, ಮತ್ತೂ ಕೆಲವೆಡೆ ಜ್ಯಾಮ್ ರೂಪದಲ್ಲೂ ಟೊಮೆಟೊ ನಿತ್ಯ ಬಳಕೆಯಲ್ಲಿದೆ. ಟೊಮೆಟೊ ಭಾರತಕ್ಕೆ ಬಂದ ಬಗೆಯನ್ನು ಪ್ರೊ. ಬಿ.ಜಿ.ಎಲ್.ಸ್ವಾಮಿ ಅವರು ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ’ ಕೃತಿಯಲ್ಲಿ ಹಲವು ಸ್ವಾರಸ್ಯಕರ ಸಂಗತಿಯನ್ನು ದಾಖಲಿಸಿದ್ದಾರೆ.

ಕಾಡಿನಲ್ಲಿ ಪುಟ್ಟ ಹಣ್ಣುಗಳ ರೀತಿಯಲ್ಲಿ ಪತ್ತೆಯಾದ ಟೊಮೆಟೊ ತರಕಾರಿಯೂ ಹೌದು, ಹಣ್ಣೂ ಹೌದು. ಸ್ಪ್ಯಾನಿಷ್ ಭಾಷೆಯಲ್ಲಿ ಕರೆಯಲಾಗುತ್ತಿದ್ದ ‘ತೊಮ್ಯಾಟೆ’ ಎಂಬ ಪದವು ಈಗ ಟೊಮೆಟೊ ಆಗಿದೆ. ತೊಮಟ್ಸ್ ಎಂದರೆ ‘ಉಬ್ಬಿಕೊಂಡು ರಸ ಉಕ್ಕುವ’ ಎಂಬ ಅರ್ಥವಾಗಿದ್ದು, ಇದು ಟೊಮೆಟೊದ ನಿಜ ಸ್ವರೂಪವನ್ನು ವಿವರಿಸುತ್ತದೆ.

ಮೆಣಸಿನಕಾಯಿ, ಬದನೆಕಾಯಿ ಕುಟುಂಬಕ್ಕೆ ಸೇರಿದ ಸೊಲನೇಸಿ ಸಸ್ಯ ಪ್ರಬೇಧಕ್ಕೆ ಟೊಮೆಟೊ ಸೇರಿದೆ. ಕಾಡಿನಲ್ಲಿ ಪುಟ್ಟ ಹಣ್ಣುಗಳಾಗಿ ಪರಿಚಯಗೊಂಡ ಟೊಮೆಟೊ ಈಗ ಆಧುನಿಕ ಸ್ವರೂಪ ಪಡೆದಿದೆ. ಅಲೆಕ್ಸಾಂಡರ್ ಲಿವಿಂಗ್‌ಸ್ಟನ್ ಎಂಬುವವರು ತಮ್ಮ ಬಾಲ್ಯದಲ್ಲಿ ತಾಯಿಯ ಎಚ್ಚರಿಕೆಯ ನಡುವೆಯೂ ಕುತೂಹಲಕ್ಕೆ ಈ ಟೊಮೆಟೊ ಹಣ್ಣಿಗೆ ಬಾಯಿ ಹಾಕಿದ್ದರು. ಮುಂದೆ ಅದೇ ತರಕಾರಿಗೆ ಆಧುನಿಕ ಸ್ವರೂಪ ನೀಡುವ ಸಸ್ಯ ವಿಜ್ಞಾನಿಯಾದರು. ಇದರ ಆಧಾರದಲ್ಲಿ 1850ರಲ್ಲಿ ‘ಲಿವಿಂಗ್‌ಸ್ಟನ್’ ಎಂಬ ಸಸ್ಯ ತಳಿ ಕಂಪನಿಯನ್ನೂ ಆರಂಭಿಸಿದರು.

-ಆಧಾರ: ನಾಸಾ, ನ್ಯಾಷನಲ್ ಜಿಯಾಗ್ರಾಫಿಕ್

ಭಾರತದಲ್ಲಿ ಬೆಳೆಯುತ್ತಿದೆ ಟೊಮೆಟೊ ಉತ್ಪನ್ನಗಳ ಉದ್ಯಮ

ಭಾರತದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಇಲ್ಲದ ಊಟವನ್ನು ನಿರೀಕ್ಷಿಸಬಹುದು. ಆದರೆ ಟೊಮೆಟೊ ಇಲ್ಲದ ಊಟ ಇಲ್ಲದಿರಲು ಸಾಧ್ಯವಿಲ್ಲ. ಅಂದರೆ ವಾರ್ಷಿಕ ಸುಮಾರು 20ಸಾವಿರ ಟನ್ ಟೊಮೆಟೊ ದೇಶದಲ್ಲಿ ಬೆಳೆಯಲಾಗುತ್ತಿದೆ. ಆದರೆ 2028ರ ಹೊತ್ತಿಗೆ ಸಂಸ್ಕರಿಸಿದ ಟೊಮೆಟೊ ಉದ್ಯಮ ದೊಡ್ಡಮಟ್ಟದಲ್ಲಿ ಬೆಳೆಯುವ ಸಾಧ್ಯತೆ ಇದೆ ಎಂದು ಐಎಂಎಆರ್‌ಸಿ ಸಮೂಹ ವರದಿ ಹೇಳಿದೆ. 2028ರ ಹೊತ್ತಿಗೆ ಈ ಉದ್ಯಮದ ಗಾತ್ರ ಶೇ 6.06ರ ವೃದ್ಧಿದರದಲ್ಲಿ ₹15,848 ಕೋಟಿಗೆ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ.

ಇಡೀ ಜಗತ್ತಿನಲ್ಲಿ ಚೀನಾದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯಲಾಗುತ್ತಿದೆ. ಇದು ಜಾಗತಿಕ ಮಟ್ಟದ ಶೇ 34.75ರಷ್ಟಾಗಿದೆ. ಭಾರತದ ಪಾಲು ಶೇ 10. ಜಗತ್ತಿನಲ್ಲೇ ಎರಡನೇ ಅತಿ ಹೆಚ್ಚು ಟೊಮೆಟೊ ಉತ್ಪಾದನೆ ಹೊಂದಿರುವ ಭಾರತದಲ್ಲಿ ಶೇ 1.45ರಂತೆ ಪ್ರತಿ ವರ್ಷ ಉತ್ಪಾದನೆ ಹೆಚ್ಚುತ್ತಿದೆ. ನಂತರದ ಸ್ಥಾನಗಳಲ್ಲಿ ಟರ್ಕಿ ಹಾಗೂ ಅಮೆರಿಕಾ ಇವೆ. ಹೀಗಿದ್ದರೂ ರಫ್ತು ಕ್ಷೇತ್ರದಲ್ಲಿ ಮೆಕ್ಸಿಕೊ ರಾಷ್ಟ್ರ ಶೇ 26ರಷ್ಟು ಪಾಲುದಾರಿಕೆ ಹೊಂದುವ ಮೂಲಕ ಅಗ್ರಸ್ಥಾನ ಕಾಯ್ದುಕೊಂಡಿದೆ.

ತಾಜಾ ಟೊಮೆಟೊ ಬಳಕೆಯ ಜತೆಗೆ ಪಾಶ್ಚಿಮಾತ್ಯ ಆಹಾರ ಶೈಲಿಯನ್ನು ಭಾರತೀಯರು ವೇಗವಾಗಿ ಅಳವಡಿಸಿಕೊಳ್ಳುತ್ತಿರುವ ಪರಿಣಾಮ ಟೊಮೆಟೊ ಪೇಸ್ಟ್, ಜ್ಯೂಸ್, ಸಾಸ್, ಕೆಚಪ್ ತಯಾರಿಸುವ ಸ್ಟಾರ್ಟ್‌ಅಪ್‌ಗಳು ಹಾಗೂ ಉದ್ಯಮಗಳು ಹೆಚ್ಚುತ್ತಿವೆ. ಅದರಲ್ಲೂ ದೇಶದಲ್ಲೇ ಅತಿ ಹೆಚ್ಚು ಟೊಮೆಟೊ ಬೆಳೆಯುವ ಆಂಧ್ರಪ್ರದೇಶ, ಮಧ್ಯಪ್ರದೇಶ ಹಾಗೂ ಕರ್ನಾಟಕದಲ್ಲಿ ಟೊಮೆಟೊ ಉತ್ಪನ್ನಗಳ ತಯಾರಿಕೆಯೂ ಬೆಳೆವಣಿಗೆ ಹಾದಿಯಲ್ಲಿದೆ.

ಟೊಮೆಟೊ ಉದ್ಯಮ ಬೆಳೆಯುತ್ತಿದ್ದರೂ ಬೆಳೆಗಾರನಿಗೆ ಅದರ ಸಂಪೂರ್ಣ ಲಾಭ ಸಿಗುತ್ತಿಲ್ಲ ಎಂಬ ಅಳಲು ಇದ್ದೇ ಇದೆ. ಬಹುತೇಕ ಟೊಮೆಟೊ ಬೆಳೆಗಾರರು ತಾವು ಬೆಳೆದ ಉತ್ಪನ್ನವನ್ನು ಸ್ಥಳೀಯ ಮಾರುಕಟ್ಟೆಯಲ್ಲೇ ಮಾರುತ್ತಾರೆ. ಹೀಗಾಗಿ ಇಲ್ಲಿ ಅವರಿಗೆ ಲಭ್ಯವಾಗುತ್ತಿರುವುದು ಶೇ 30ರಿಂದ 50ರಷ್ಟು ದರ ಮಾತ್ರ. ಆದರೆ ಉಳಿದ ಹಣ ಮಧ್ಯವರ್ತಿಗಳ ಪಾಲಾಗುತ್ತಿದೆ. ಆದರೆ ಇದಕ್ಕೆ ಪರಿಹಾರವೆಂಬಂತೆ ಕೆಲವೆಡೆ ಕೃಷಿ ಉತ್ಪನ್ನ ಕಂಪನಿಗಳು ರೈತರಿಂದ ಟೊಮೆಟೊ ಖರೀದಿಸಿ, ಹಲವು ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿವೆ.

ಟೊಮೆಟೊ ಬಗ್ಗೆ ಮತ್ತಷ್ಟು ಸ್ವಾರಸ್ಯಕರ ಸಂಗತಿಗಳು

* ಕೆಂಪು ಬಣ್ಣದಲ್ಲಿ ಇರುವುದು ಮಾತ್ರ ಟೊಮೆಟೊ ಅಲ್ಲ. ಬದಲಿಗೆ ಹಳದಿ, ಗುಲಾಬಿ, ನೇರಳೆ, ಕಪ್ಪು ಹಾಗೂ ಬಿಳಿ ಬಣ್ಣಗಳ ಟೊಮೆಟೊಗಳು ಇವೆ.

* ಯುರೋಪ್‌ನಲ್ಲಿ ಮೊದಲ ಬಾರಿಗೆ ಬೆಳೆದ ಟೊಮೆಟೊ ಹಳದಿ ಬಣ್ಣದ್ದಾಗಿತ್ತು. ಹೀಗಾಗಿ ಅಲ್ಲಿ ಇದನ್ನು ಆರಂಭದಲ್ಲಿ ‘ಪೊಮೊ ಡಿ‘ಒರೊ’ (ಚಿನ್ನದ ಸೇಬು) ಎಂದು ಕರೆಯಲಾಗಿತ್ತು.

* ಜಗತ್ತಿನಾದ್ಯಂತ ಟೊಮೆಟೊದ ಸುಮಾರು 10 ಸಾವಿರ ತಳಿಗಳಿವೆ ಎಂದು ಸಸ್ಯ ವಿಜ್ಞಾನಿಗಳು ಹೇಳುತ್ತಾರೆ.

* ಅಮೆರಿಕಾದ ಫ್ಲೋರಿಡಾದಲ್ಲಿರುವ ವಾಲ್ಟಡ್ ಡಿಸ್ನಿ ರೆಸಾರ್ಟ್‌ನಲ್ಲಿ ಈವರೆಗೂ ಪತ್ತೆಯಾದ ಟೊಮೆಟೊ ಗಿಡಗಳಲ್ಲಿ ಅತ್ಯಂತ ದೊಡ್ಡದು. ಈ ಗಿಡ 56.73 ಚದರ ಮೀಟರ್‌ನಷ್ಟು ವ್ಯಾಪ್ತಿ ಹೊಂದಿದೆ.

* ಹಾಗೆಯೇ ಜಗತ್ತಿನ ಅತಿ ದೊಡ್ಡ ಟೊಮೆಟೊ 1986ರಲ್ಲಿ ಅಮೆರಿಕಾದ ಒಕ್ಲಹೊಮಾದಲ್ಲಿ ಪತ್ತೆಯಾಗಿತ್ತು. ಒಂದು ಟೊಮೆಟೊ 3.5 ಕೆ.ಜಿ. ತೂಗುತ್ತಿತ್ತು.

* ಸ್ಪೇನ್‌ನಲ್ಲಿ ನಡೆಯುವ ಲಾ ಟೊಮಾಟಿನಾ ಎಂಬ ವಾರ್ಷಿಕ ಹಬ್ಬದಲ್ಲಿ ಸುಮಾರು 1.5ಲಕ್ಷ ಟೊಮೆಟೊವನ್ನು ಹೋಳಿ ಹಬ್ಬದ ಬಣ್ಣದ ರೀತಿಯಲ್ಲಿ ಜನರು ಪರಸ್ಪರ ಎರಚಿಕೊಂಡು ಸಂಭ್ರಮಿಸುತ್ತಾರೆ. ಈ ವರ್ಷ ಆಗಸ್ಟ್ 30ರಂದು ಈ ಹಬ್ಬಕ್ಕೆ ದಿನಾಂಕ ನಿಗದಿಯಾಗಿದೆ.

* ‘ ಝಿಂದಗಿ ನಾ ಮಿಲೇಗಿ ದೊಬಾರಾ’ ಹಿಂದಿ ಚಿತ್ರದಿಂದ ಪ್ರೇರಣೆಗೊಂಡು ಬೆಂಗಳೂರು ಹಾಗೂ ಮೈಸೂರಿನಲ್ಲಿ ಆಯೋಜನೆಗೊಂಡಿದ್ದ ಟೊಮೆಟೊ ಎರೆಚುವ ಮೋಜಿನಾಟ (ಲಾ ಟೊಮಾಟಿನಾ)ಕ್ಕೆ ಕೋಲಾರದ ಟೊಮೆಟೊ ಬೆಳಗಾರರು, ಪರಿಸರವಾದಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅದನ್ನು ರದ್ದುಪಡಿಸಲಾಗಿತ್ತು.

* ಅಮೆರಿಕಾದ ಒಹಿಯೊದಲ್ಲಿ ಟೊಮೆಟೊ ಪೇಯವನ್ನು ಆ ರಾಜ್ಯದ ಅಧಿಕೃತ ಪೇಯವಾಗಿ ಘೋಷಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.