‘ದತ್ತು ಸ್ವೀಕಾರ ಎಂಬುದು ಪೌರಾಣಿಕ ಭಾರತದಿಂದಲೂ ಚಾಲ್ತಿಯಲ್ಲಿರುವ ಒಂದು ಸಂಗತಿ. ಮಗ ಮಾತ್ರವೇ ತಂದೆಗೆ ಮೋಕ್ಷ ದೊರಕಿಸಿಕೊಡಬಲ್ಲ ಎಂಬ ನಂಬಿಕೆಯ ಕಾರಣ, ಗಂಡುಮಕ್ಕಳು ಇಲ್ಲದವರು ದತ್ತು ತೆಗೆದುಕೊಳ್ಳುವ ಪರಿಪಾಟಕ್ಕೆ ಕಾರಣ. ಹಿಂದೂ ಧಾರ್ಮಿಕ ಗ್ರಂಥಗಳಲ್ಲೂ ಇದನ್ನು ಉಲ್ಲೇಖಿಸಲಾಗಿದೆ. ಈಗಿನ ಕಾಲದಲ್ಲೂ ದತ್ತು ಸ್ವೀಕಾರ ಎಂಬುದು ಅತ್ಯಂತ ಪ್ರಸ್ತುತವಾದ ಸಂಗತಿಯಾಗಿದೆ’ ಎನ್ನುತ್ತದೆ ಕಾನೂನು ಆಯೋಗ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯ ಕಾರ್ಯಸಾಧ್ಯತೆಗಳ ಬಗ್ಗೆ ವರದಿ ನೀಡಿ ಎಂದು ಕೇಂದ್ರ ಸರ್ಕಾರ ನೀಡಿದ್ದ ಸೂಚನೆ ಪ್ರಕಾರ, ಕಾನೂನು ಆಯೋಗವು ಸಿದ್ಧಪ ಡಿಸಿದ್ದ ವರದಿಯಲ್ಲಿ ಇರುವ ಉಲ್ಲೇಖವಿದು.

ಎಲ್ಲಾ ಧರ್ಮಗಳೂ ದತ್ತಕವನ್ನು ಭಿನ್ನವಾಗಿ ಪರಿಗಣಿಸುತ್ತವೆ. ಕೆಲವು ಧರ್ಮಗಳಲ್ಲಿ ದತ್ತು ಸ್ವೀಕಾರಕ್ಕೆ ಅವಕಾಶವಿದ್ದರೆ, ಕೆಲವು ಧರ್ಮಗಳಲ್ಲಿ ದತ್ತು ಸ್ವೀಕಾರ ನಿಷಿದ್ಧ. ಇನ್ನೂ ಕೆಲವು ಧರ್ಮಗಳಲ್ಲಿ ಮೃತ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸುವವರಿಗೆ ಮಾತ್ರ ದತ್ತುಪುತ್ರನಾಗಲು ಅವಕಾಶವಿದೆ. ದತ್ತು ಸ್ವೀಕಾರದ ಸಂಬಂಧದ ಕಾನೂನುಗಳೂ ವೈಯಕ್ತಿಕ ಕಾನೂನುಗಳ ಅಡಿಯಲ್ಲೇ ಬರುವ ಕಾರಣ ಏಕರೂಪ ನಾಗರಿಕ ಸಂಹಿತೆಯ ಕಾರ್ಯಸಾಧ್ಯತೆಯ ಬಗ್ಗೆ ನಡೆಸಿದ ಅಧ್ಯಯನದಲ್ಲಿ, ಈ ಕಾನೂನುಗಳನ್ನೂ ಕಾನೂನು ಆಯೋಗವು ಒಳಗೊಂಡಿತ್ತು.

ಇದನ್ನೂ ಓದಿ: ಆಳ–ಅಗಲ | ಏಕರೂಪ ನಾಗರಿಕ ಸಂಹಿತೆ: ಸಂವಿಧಾನ ರಚನಾ ಸಭೆಯಲ್ಲಿ ಬೇಕು, ಬೇಡಗಳ ಚರ್ಚೆ

ಭಾರತದ ವೈಯಕ್ತಿಕ ಕಾನೂನುಗಳಲ್ಲಿ ದತ್ತು ಸ್ವೀಕಾರದ ಅವಕಾಶ, ಪ್ರಕ್ರಿಯೆಗಳು, ದತ್ತು ಪಡೆದ ಮಕ್ಕಳ ಹಕ್ಕುಗಳ, ದತ್ತು ಪಡೆದವರ ಹಕ್ಕು ಮತ್ತು ಕರ್ತವ್ಯಗಳು, ದತ್ತು ನೀಡಿದವರ ಹಕ್ಕು ಮತ್ತು ಕರ್ತವ್ಯಗಳನ್ನು ಬಹಳ ಸ್ಪಷ್ಟವಾಗಿ ವಿವರಿಸಲಾಗಿದೆ. ದೇಶದಲ್ಲಿರುವ ಎಲ್ಲಾ ವೈಯಕ್ತಿಕ ಕಾನೂನುಗಳಲ್ಲಿ ಹಿಂದೂ ದತ್ತಕ ಕಾಯ್ದೆಯೇ ಅತ್ಯಂತ ವಿಸ್ತೃತ ಹಾಗೂ ಸ್ಪಷ್ಟತೆಯಿಂದ ಕೂಡಿದೆ. ಆರಂಭದಲ್ಲಿ ಈ ಕಾಯ್ದೆಯನ್ನು ರಚಿಸಿದಾಗ ಹಲವು ಕೊರತೆಗಳಿದ್ದವು. ಕಾನೂನು ಆಯೋಗವು ನೀಡಿದ ಶಿಫಾರಸುಗಳ ಆಧಾರದಲ್ಲಿ ಈ ಕಾಯ್ದೆಯನ್ನು ಹಲವು ಬಾರಿ ತಿದ್ದುಪಡಿ ಮಾಡಲಾಗಿದೆ. ಹೀಗೆ ಈ ಕಾಯ್ದೆಯು ಸುಧಾರಣೆ ಆಗಿದ್ದರೂ, ಇನ್ನೂ ಕೆಲವು ಅಂಶಗಳನ್ನು ಸುಧಾರಿಸಲು ಅವಕಾಶ ವಿದೆ ಎಂದು ಕಾನೂನು ಆಯೋಗವು ಹೇಳಿದೆ.

ಮುಸ್ಲಿಮರಲ್ಲಿ ದತ್ತು ಸ್ವೀಕಾರಕ್ಕೆ ಅವಕಾಶವಿಲ್ಲ. ಹೀಗಾಗಿ ದತ್ತು ಸ್ವೀಕಾರದ ಸಂಬಂಧ ಯಾವುದೇ ಕಾನೂನು ಇಲ್ಲ. ಆದರೆ, ಮುಸ್ಲಿಂ ವೈಯಕ್ತಿಕ ಕಾನೂನುಗಳಲ್ಲಿ ಏತಕ್ಕಾಗಿ ದತ್ತು ಸ್ವೀಕರಿಸಬಾರದು ಎಂಬುದನ್ನು ವಿವರಿಸಲಾಗಿದೆ. ಭಾರತೀಯ ಕ್ರೈಸ್ತರಲ್ಲಿ ದತ್ತು ಸ್ವೀಕಾರಕ್ಕೆ ಅವಕಾಶವಿದ್ದರೂ, ಈ ಸಂಬಂಧ ಯಾವುದೇ ಪ್ರತ್ಯೇಕ ಕಾನೂನುಗಳು ಭಾರತದಲ್ಲಿ ಇಲ್ಲ. ಪಾರ್ಸಿಗಳಲ್ಲೂ ದತ್ತು ಸ್ವೀಕಾರಕ್ಕೆ ಅವಕಾಶವಿಲ್ಲ.

ಹೀಗೆ ಪ್ರತಿಯೊಂದು ಧರ್ಮವೂ ದತ್ತು ಸ್ವೀಕಾರವನ್ನು ಸಂಪೂರ್ಣ ಭಿನ್ನವಾಗಿಯೇ ನೋಡುತ್ತವೆ. ಆದರೆ ದತ್ತು ಸ್ವೀಕಾರ ನಿಷೇಧವಿದ್ದರೂ, ದತ್ತು ಸ್ವೀಕರಿಸಬೇಕಾದ ಅನಿವಾರ್ಯತೆ ಎಲ್ಲಾ ಧರ್ಮೀಯರಿಗೆ ಬಂದೊದಗಿದೆ. ಈ ಸಂಬಂಧ ಭಾರತದ ವಿವಿಧ ನ್ಯಾಯಾಲಯಗಳಲ್ಲಿ ಹಲವು ಪ್ರಕರಣಗಳು ನಡೆದು, ದತ್ತು ಸ್ವೀಕಾರಕ್ಕೆ ಅವಕಾಶ ನೀಡಿದ ಮತ್ತು ಅವಕಾಶ ನಿರಾಕರಿಸಿದಂತಹ ತೀರ್ಪುಗಳು ಬಂದಿವೆ. ಹಿಂದೂಗಳನ್ನು ಹೊರತುಪಡಿಸಿ ಬೇರೆ ಧರ್ಮಗಳಲ್ಲಿ ದತ್ತು ಸ್ವೀಕಾರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಾನೂನು ಇಲ್ಲದಿರುವುದು ಒಂದು ತೊಡಕಾಗಿದೆ ಎಂದು ಕಾನೂನು ಆಯೋಗವು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಆಳ–ಅಗಲ | ಏಕರೂಪ ಎಲ್ಲರಿಗೂ ಅನ್ವಯ: ಸಂವಿಧಾನ ರಚನಾ ಸಭೆಯಲ್ಲಿ ಪ್ರತಿಪಾದನೆ

ಮುಸ್ಲಿಮರಲ್ಲಿ ದತ್ತು ಸ್ವೀಕಾರಕ್ಕೆ ನಿಷೇಧವಿದ್ದರೂ ಮುಸ್ಲಿಂ ದಂಪತಿ, ಮುಸ್ಲಿಂ ವ್ಯಕ್ತಿಗಳು ದತ್ತು ಸ್ವೀಕರಿಸಲು ಅವಕಾಶ ಮಾಡಿಕೊಡುವ ಕಾನೂನೊಂದು ಭಾರತದಲ್ಲಿ ಜಾರಿಯಲ್ಲಿದೆ. ಜೂವನೈಲ್ ಜಸ್ಟಿಸ್ (ಆರೈಕೆ ಮತ್ತು ಮಕ್ಕಳ ರಕ್ಷಣೆ) ಕಾಯ್ದೆ–2015ರಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರೂ ದತ್ತು ಪಡೆಯಲು ಅವಕಾಶ ನೀಡಲಾಗಿದೆ. ಈ ಕಾಯ್ದೆ ಪ್ರಕಾರ ಎಲ್ಲಾ ಅರ್ಹ ನಾಗರಿಕರೂ ದತ್ತು ಸ್ವೀಕರಿಸಬಹುದಾಗಿದೆ. ಈ ಕಾಯ್ದೆಯನ್ನೇ ಇನ್ನಷ್ಟು ಸುಧಾರಿಸಿ, ಅದರ ವ್ಯಾಪ್ತಿಯನ್ನು ಹೆಚ್ಚಿಸಿದರೆ ಇದು ಎಲ್ಲಾ ಧರ್ಮದವರಿಗೂ ಸಮಾನವಾಗಿ ಅನ್ವಯವಾಗುವ ಕಾಯ್ದೆಯಾಗಲಿದೆ. ಹೀಗಾಗಿ ಏಕರೂಪ ನಾಗರಿಕ ಸಂಹಿತೆ ರಚನೆಯ ಬದಲಿಗೆ, ಈ ಕಾಯ್ದೆಯನ್ನೇ ಸುಧಾರಿಸುವತ್ತ ಗಮನ ಹರಿಸಬಹುದು ಎಂದು ಕಾನೂನು ಆಯೋಗವು ತಾನು ಸಲ್ಲಿಸಿದ್ದ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಹಿಂದೂ ದತ್ತಕ ಕಾಯ್ದೆ–1956

* ಈ ಕಾಯ್ದೆಯನ್ನು ರೂಪಿಸಿದಾಗ ಹಿಂದೂ ಪುರುಷ ಮಾತ್ರ ದತ್ತು ಸ್ವೀಕರಿಸಲು ಅರ್ಹ ಎಂಬ ಷರತ್ತು ಹಾಕಲಾಗಿತ್ತು. ಹಿಂದೂ ಮಹಿಳೆ ದತ್ತು ಸ್ವೀಕರಿಸಲು ಈ ಕಾಯ್ದೆಯಲ್ಲಿ ಅವಕಾಶವಿರಲಿಲ್ಲ. ಜತೆಗೆ ಪುರುಷನೊಬ್ಬ ದತ್ತು ಸ್ವೀಕರಿಸುವಾಗ ತನ್ನ ಪತ್ನಿಯ ಒಪ್ಪಿಗೆ ಪಡೆಯಬೇಕು ಎಂದಷ್ಟೇ ಮೂಲ ಕಾಯ್ದೆಯಲ್ಲಿ ಹೇಳಲಾಗಿತ್ತು. ಆದರೆ, 2010ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಹಿಂದೂ ವಿವಾಹಿತ ಮಹಿಳೆಯೂ ದತ್ತು ಸ್ವೀಕರಿಸಲು ‘ವೈಯಕ್ತಿಕ ಕಾನೂನುಗಳ ತಿದ್ದುಪಡಿ ಕಾಯ್ದೆ–2010’ರಲ್ಲಿ ಅವಕಾಶ ಮಾಡಿಕೊಡಲಾಯಿತು

* ಈ ಕಾಯ್ದೆಯು ಹಿಂದೂಗಳು, ಬೌದ್ಧ, ಜೈನ, ಸಿಖ್ ಧರ್ಮದವರಿಗೆ ಅನ್ವಯವಾಗುತ್ತದೆ. ಆದರೆ ದತ್ತು ಪಡೆಯಲು ಈ ಕಾಯ್ದೆಯ ಅಡಿಯಲ್ಲಿ ಹಲವು ನಿಬಂಧನೆಗಳಿವೆ

* ದತ್ತಕಕ್ಕೆ ಒಳಗಾಗಲಿರುವ ಮಗು 15 ವರ್ಷಕ್ಕಿಂತ ಕಡಿಮೆ ವಯಸ್ಸಿನದ್ದಾಗಿರಬೇಕು. ಹಿಂದೂಗಳು ದತ್ತು ಪಡೆಯುತ್ತಿದ್ದರೆ, ಆ ಮಗು ಹಿಂದೂವೇ ಆಗಿರಬೇಕು. ಧಾರ್ಮಿಕ ಆಚರಣೆಯ ಕಾರಣದಿಂದ ಕೆಲವು ಸಂದರ್ಭಗಳಲ್ಲಿ 15 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರನ್ನು ದತ್ತು ಪಡೆಯಲು ಅವಕಾಶವಿದ್ದರೂ, ದತ್ತಕಕ್ಕೆ ಒಳಗಾಗಲಿರುವ ವ್ಯಕ್ತಿ ವಿವಾಹವಾಗಿರಬಾರದು

ಇದನ್ನೂ ಓದಿ: ಆಳ–ಅಗಲ | ರಾಜ್ಯನೀತಿ ನಿರ್ದೇಶಕ ತತ್ವಗಳಲ್ಲಿ ಉಳಿದ ಏಕರೂಪ ನಾಗರಿಕ ಸಂಹಿತೆ

* ಯಾವುದೇ ಹಿಂದೂ ದಂಪತಿ ಗಂಡು ಮಗುವನ್ನು ದತ್ತು ಪಡೆಯುತ್ತಿದ್ದರೆ, ದತ್ತಕದ ಸಂದರ್ಭದಲ್ಲಿ ಅವರಿಗೆ ಅವರದ್ದೇ ಆದ ಗಂಡುಮಗು ಇರಬಾರದು. ಆ ದಂಪತಿಯ ಗಂಡುಮಗ ಮೃತಪಟ್ಟಿದ್ದು, ಆತನಿಗೂ ಗಂಡುಮಗುವಿರಬಾರದು

* ಯಾವುದೇ ಹಿಂದೂ ದಂಪತಿ ಹೆಣ್ಣುಮಗುವನ್ನು ದತ್ತು ಪಡೆಯುತ್ತಿದ್ದರೆ, ದತ್ತಕದ ಸಂದರ್ಭದಲ್ಲಿ ಅವರಿಗೆ ಅವರದ್ದೇ ಆದ ಹೆಣ್ಣುಮಗು ಇರಬಾರದು. ಆ ದಂಪತಿಯ ಗಂಡುಮಗ ಮೃತಪಟ್ಟಿದ್ದು, ಆತನಿಗೂ ಹೆಣ್ಣುಮಗುವಿರಬಾರದು

* ದತ್ತು ಪಡೆಯುವ ವ್ಯಕ್ತಿ ಪುರುಷನಾಗಿದ್ದು, ಹೆಣ್ಣುಮಗುವನ್ನು ದತ್ತು ಪಡೆಯುವಂತಿದ್ದರೆ ಆತನಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು

* ದತ್ತು ಪಡೆಯುವ ವ್ಯಕ್ತಿ ಮಹಿಳೆಯಾಗಿದ್ದು, ಗಂಡುಮಗುವನ್ನು ದತ್ತು ಪಡೆಯುವಂತಿದ್ದರೆ ಆಕೆಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು

* ಈ ಕಾಯ್ದೆಯ ಅಡಿಯಲ್ಲಿ ಹೆಣ್ಣುಮಗುವನ್ನು ದತ್ತು ಪಡೆಯುವಾಗ ಅನ್ವಯವಾಗುವ ನಿಯಮಗಳು ಬೇರೆ, ಗಂಡುಮಗುವನ್ನು ದತ್ತು ಪಡೆಯುವಾಗ ಅನ್ವಯವಾಗುವ ನಿಯಮಗಳು ಬೇರೆ

* ಈ ಕಾಯ್ದೆ ಅಡಿ ದತ್ತು ಪಡೆದ ಮಗುವಿಗೆ ಆ ಕುಟುಂಬದ ವಾರಸುದಾರಿಕೆ ಮತ್ತು ಉತ್ತರಾಧಿಕಾರದ ಎಲ್ಲಾ ಹಕ್ಕುಗಳೂ ದೊರೆಯುತ್ತವೆ

ಮುಸ್ಲಿಮರಲ್ಲಿ ದತ್ತಕ ಇಲ್ಲ

* ಯಾವುದೇ ಮಗುವನ್ನು ಅವರ ನಿಜವಾದ ತಂದೆ ಮತ್ತು ತಾಯಿಯಿಂದ ಬೇರ್ಪಡಿಸಬಾರದು ಎಂಬ ನಂಬಿಕೆ ಇರುವ ಕಾರಣ ದತ್ತು ಸ್ವೀಕಾರಕ್ಕೆ ಅನುಮತಿ ಇಲ್ಲ. ಜತೆಗೆ ಮುಸ್ಲಿಂ ವ್ಯಕ್ತಿಯ ಸ್ವಂತ ಮಕ್ಕಳಷ್ಟೇ ಆತನ ವಾರಸುದಾರಿಕೆ ಮತ್ತು ಉತ್ತರಾಧಿಕಾರದ ಹಕ್ಕುದಾರರು ಎಂಬ ನಂಬಿಕೆ ಇರುವ ಕಾರಣದಿಂದಲೂ ದತ್ತು ಸ್ವೀಕಾರಕ್ಕೆ ಅವಕಾಶವಿಲ್ಲ

* ಆದರೆ ಯಾವುದೇ ಮುಸ್ಲಿಂ ಕುಟುಂಬದ ಸಂಬಂಧಿ ಕುಟುಂಬದಲ್ಲಿ ಮಕ್ಕಳು ಅನಾಥರಾದರೆ, ಅಂತಹ ಮಕ್ಕಳನ್ನು ಸಲಹುವ ಹೊಣೆಗಾರಿಕೆಯನ್ನು ಹೊರಲು ಅವಕಾಶವಿದೆ. ಆದರೆ, ಅಂತಹ ಮಕ್ಕಳಿಗೆ ಸ್ವಂತ ಮಕ್ಕಳ ಸ್ಥಾನ ಮತ್ತು ಹಕ್ಕುಗಳು ದೊರೆಯುವುದಿಲ್ಲ. ಅವರನ್ನು ಸಲಹಿದ ಕುಟುಂಬದ ಆಸ್ತಿ, ವಾರಸುದಾರಿಕೆ ಮತ್ತು ಉತ್ತರಾಧಿಕಾರದ ಹಕ್ಕುಗಳು ಅಂತಹ ಮಕ್ಕಳಿಗೆ ದೊರೆಯುವುದಿಲ್ಲ

* ದತ್ತಕಕ್ಕೆ ಅವಕಾಶವಿಲ್ಲದೇ ಇರುವ ಕಾರಣದಿಂದಲೇ ಮುಸ್ಲಿಮರಲ್ಲಿ ಉಯಿಲು ಬರೆದಿಡಲೂ ಅವಕಾಶವಿಲ್ಲ. ಮುಸ್ಲಿಂ ವ್ಯಕ್ತಿಯು ತಾವು ಸಲಹಿದ, ತಮ್ಮ ಸಂಬಂಧಿಗಳ ಮಕ್ಕಳಿಗೆ ಉಯಿಲು ಬರೆದುಕೊಡಲು ಅವಕಾಶವಿಲ್ಲ. ಹೆಚ್ಚೆಂದರೆ ತಮ್ಮ ಆಸ್ತಿಯ ಮೂರನೇ ಒಂದರಷ್ಟು ಭಾಗವನ್ನು ಅಂತಹ ಮಕ್ಕಳಿಗೆ ನೀಡಬಹುದಷ್ಟೆ

ಪಾರ್ಸಿಗಳಲ್ಲಿ ಅಂತ್ಯಸಂಸ್ಕಾರಕ್ಕಷ್ಟೇ ಸೀಮಿತ

* ಪಾರ್ಸಿಗಳಲ್ಲಿ ದತ್ತು ಸ್ವೀಕರಿಸಲು ಅವಕಾಶವಿಲ್ಲ

* ಪಾರ್ಸಿ ಕುಟುಂಬವೊಂದರ ಯಜಮಾನ ಮೃತಪಟ್ಟಿದ್ದು, ಆತನಿಗೆ ಗಂಡುಮಕ್ಕಳು ಇಲ್ಲದೇ ಇದ್ದರೆ ಮಾತ್ರ ಆತನ ಪತ್ನಿ ಗಂಡುಮಗುವನ್ನು ದತ್ತು ಸ್ವೀಕರಿಸಬಹುದು. ಅದೂ ಮೃತ ವ್ಯಕ್ತಿಯ ಅಂತ್ಯಸಂಸ್ಕಾರ ಮತ್ತು ನಂತರದ ವಿಧಿವಿಧಾನಗಳನ್ನು ಪೂರೈಸುವವರೆಗಷ್ಟೇ ದತ್ತಕಕ್ಕೆ ಮಾನ್ಯತೆ ಇರುತ್ತದೆ. ಈ ಅವಧಿಯಲ್ಲಿ ದತ್ತು ಮಗನಿಗೆ ಬೇರೆ ಯಾವುದೇ ಹಕ್ಕುಗಳು ಇರುವುದಿಲ್ಲ

ಜೂವನೈಲ್ ಜಸ್ಟಿಸ್ ಕಾಯ್ದೆ

ಇದು ಮೂಲತಃ ದತ್ತಕ ಕಾಯ್ದೆ ಅಲ್ಲ. ಇದು ಕಾನೂನಿನೊಟ್ಟಿಗೆ ಸಂಘರ್ಷಕ್ಕೆ ಒಳಗಾದ ಮಕ್ಕಳ ಆರೈಕೆ ಮತ್ತು ರಕ್ಷಣೆಯ ಉದ್ದೇಶದ ಕಾಯ್ದೆ. ಅನಾಥರಾದ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಪುನರ್ವಸತಿ ಷರತ್ತಿನ ಅಡಿಯಲ್ಲಿ ಅಂತಹ ಮಕ್ಕಳನ್ನು ದತ್ತು ನೀಡಲು, ದತ್ತು ಸ್ವೀಕರಿಸಲು ಅವಕಾಶವಿದೆ. ದತ್ತು ಸ್ವೀಕಾರ ಸಂಬಂಧ ಎಲ್ಲರಿಗೂ ಅನ್ವಯವಾಗುವ ಕಾಯ್ದೆ ಇಲ್ಲದೇ ಇರುವ ಸಂದರ್ಭದಲ್ಲಿ, ದತ್ತು ಸ್ವೀಕಾರಕ್ಕೆ ಈ ಕಾಯ್ದೆಯನ್ನೇ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರದ ಸಂಸ್ಥೆಗಳ ಮೂಲಕವಷ್ಟೇ ಈ ದತ್ತಕ ಪ್ರಕ್ರಿಯೆ ನಡೆಯುತ್ತದೆ

ಇದನ್ನೂ ಓದಿ: ಆಳ–ಅಗಲ | ಏಕರೂಪ ನಾಗರಿಕ ಸಂಹಿತೆ; ವಾರಸುದಾರಿಕೆ, ಉತ್ತರಾಧಿಕಾರಕ್ಕೆ ಪರ್ಯಾಯವೇನು?

* ಯಾವುದೇ ಧರ್ಮದ ದಂಪತಿ ಅಥವಾ ವ್ಯಕ್ತಿ, ಯಾವುದೇ ಧರ್ಮದ ಮಗುವನ್ನು ಈ ಕಾಯ್ದೆಯ ಅಡಿಯಲ್ಲಿ ದತ್ತು ಪಡೆಯಬಹುದು. ಇದು ಸಂಪೂರ್ಣ ಕಾನೂನುಬದ್ಧವಾಗಿದ್ದು, ದತ್ತು ಸ್ವೀಕರಿಸಲಾದ ಮಗುವಿಗೆ ವಾರಸುದಾರಿಕೆ ಮತ್ತು ಉತ್ತರಾಧಿಕಾರದ ಹಕ್ಕುಗಳು ದೊರೆಯುತ್ತವೆ

* ಮುಸ್ಲಿಂ ಪುರುಷ ಅಥವಾ ಮುಸ್ಲಿಂ ಮಹಿಳೆ ಅಥವಾ ಮುಸ್ಲಿಂ ದಂಪತಿ ಯಾವುದೇ ಧರ್ಮದ ಮಗುವನ್ನು ಈ ಕಾಯ್ದೆ ಅಡಿಯಲ್ಲಿ ದತ್ತು ಪಡೆಯಬಹುದು. ಇದು ಸಂಪೂರ್ಣ ಕಾನೂನುಬದ್ಧವಾಗಿದ್ದು, ದತ್ತು ಸ್ವೀಕರಿಸಲಾದ ಮಗುವಿಗೆ ವಾರಸುದಾರಿಕೆ ಮತ್ತು ಉತ್ತರಾಧಿಕಾರದ ಹಕ್ಕುಗಳು ದೊರೆಯುತ್ತವೆ

* ಕೇರಳದ ತಿರುವಾಂಕೂರಿನ ಸಿರಿಯನ್ ಕ್ರೈಸ್ತರಿಗೆ ಮಾತ್ರ ದತ್ತು ಸ್ವೀಕರಿಸಲು ಪ್ರತ್ಯೇಕ ಕಾನೂನು ಇದೆ. ಆದರೆ, ದೇಶದ ಎಲ್ಲಾ ಕ್ರೈಸ್ತರೂ ಈ ಕಾಯ್ದೆಯ ಅಡಿಯಲ್ಲಿ ದತ್ತು ಸ್ವೀಕರಿಸಲು ಅವಕಾಶವಿದೆ

* ದತ್ತು ಸ್ವೀಕಾರಕ್ಕೆ ಪಾರ್ಸಿ ವೈಯಕ್ತಿಕ ಕಾನೂನಿನಲ್ಲಿ ನಿಷೇಧವಿದ್ದರೂ, ಈ ಕಾಯ್ದೆ ಅಡಿ ಪಾರ್ಸಿ ದಂಪತಿ ಅಥವಾ ಪಾರ್ಸಿ ಪುರುಷ ಅಥವಾ ಪಾರ್ಸಿ ಮಹಿಳೆಯು ದತ್ತು ಪಡೆಯಬಹುದು

* ಈ ಕಾಯ್ದೆ ಅಡಿಯಲ್ಲಿ ದತ್ತು ಸ್ವೀಕರಿಸುವವರಿಗೆ ಗರಿಷ್ಠ ವಯಸ್ಸಿನ ಮಿತಿ ಇಲ್ಲ. ವ್ಯಕ್ತಿ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಸುಸ್ಥಿತಿಯಲ್ಲಿ ಇರಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.