ರಾಜ್ಯದ ಮೈಸೂರು ಭಾಗದಲ್ಲಿ ಮಹಿಷ ದಸರಾ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಬಾರಿಯೂ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಸಿದ್ಧತೆ ನಡೆದಿದೆ. ಆದರೆ, ಈ ಬಾರಿ ಅದಕ್ಕೆ ವಿರೋಧ ವ್ಯಕ್ತವಾಗಿದೆ. ಮಹಿಷ ದಲಿತ/ತುಳಿತಕ್ಕೆ ಒಳಗಾದವನು. ಹೀಗಾಗಿ ಆತನ ದಸರಾ ಆಚರಿಸುತ್ತೇವೆ ಎಂಬುವವರು ಒಂದೆಡೆಯಾದರೆ, ಮಹಿಷ ದಸರಾಕ್ಕೆ ಅವಕಾಶ ನೀಡುವುದಿಲ್ಲ ಎನ್ನುವವರು ಇನ್ನೊಂದೆಡೆ. ಇದರ ಮಧ್ಯೆ, ಮಹಿಷ ನಿಜಕ್ಕೂ ಯಾವ ಸಮುದಾಯದ ಪ್ರತಿನಿಧಿ? ಚಾಮುಂಡಿ ಯಾರು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ

ಈಚೆಗೆ ಮಹಿಷಾಸುರನ ಬಗ್ಗೆ ಎದ್ದಿರುವ ವಾದ ವಿವಾದಗಳು ಒಂದು ದೃಷ್ಟಿಯಿಂದ ಬಹುಜನ ಸಮಾಜವು ತನ್ನ ಸಂಸ್ಕೃತಿಯನ್ನು ಮರುಪಡೆದುಕೊಳ್ಳುವ (ರಿಕ್ಲೇಮಿಂಗ್ ಕಲ್ಚರ್) ದೃಷ್ಟಿಯಿಂದ ನಡೆದಿರುವ ಹೋರಾಟ. ಇನ್ನೊಂದು ದೃಷ್ಟಿಯಿಂದ ಐದು ಸಾವಿರ ವರ್ಷಗಳ ಕಾಲ ಜಾಗತಿಕ ನೆಲೆಯಲ್ಲಿ ಜಾರಿಯಲ್ಲಿರುವ ಸಾಂಸ್ಕೃತಿಕ- ಧಾರ್ಮಿಕ ನೆಲೆಯ ಸಂಸ್ಕೃತಿ ಪಠ್ಯಗಳನ್ನು ಮರುಪರಿಶೀಲನೆಗೊಳಪಡಿಸುವ ಅಗತ್ಯದ ಕಡೆಗೆ ಬೆರಳು ಮಾಡುತ್ತಿದೆ. ಜಾಗತಿಕ ಎನ್ನುವುದರ ಪ್ರಸ್ತುತತೆ ಏನೆಂದರೆ ಕೋಣ-ದೇವಿ-ಬಲಿ-ಧಾರ್ಮಿಕ ಆಚರಣೆ ಜಗತ್ತಿನ ಹಲವಾರು ಸಂಸ್ಕೃತಿಗಳಲ್ಲಿ ಇದೆ.

ಸಮಾಜದಲ್ಲಿ ಆಗುತ್ತಿರುವ ಸ್ಥಿತ್ಯಂತರಗಳಿಂದಾಗಿ, ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣೆಗಳು ಪ್ರಶ್ನೆಗೊಳಗಾಗುತ್ತಿವೆ. ನಂಬಿಕೆಗಳಲ್ಲಿ ಬದಲಾವಣೆಗಳು ಅತ್ಯಂತ ಸಹಜ. ಆದರೆ ಹೊಸ ವಾದ ಮಂಡಿಸುವಾಗ ಅದರಲ್ಲಿ ಹುರುಳಿಲ್ಲದಿದ್ದರೆ ಅದರ ನಿರಾಕರಣೆಯೂ ಸಹಜ. ಪ್ರಸ್ತುತ ಮಹಿಷಾಸುರ ಮತ್ತು ಅವನನ್ನು ಕೊಂದ ದೇವಿಯ ಬಗ್ಗೆ ಚಿತ್ರವಿಚಿತ್ರ ವಾದಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕೆಲವು ಸಂಗತಿಗಳನ್ನು ಗಮನಿಸೋಣ.

ಅಸುರನನ್ನು ಕೊಂದ ದುರ್ಗೆಯೇ ನಮ್ಮ ದೇವತೆ ಎಂದು ನಂಬಿ ಪೂಜಿಸಲು ಸಕಲರಿಗೂ ಸರ್ವ ಸ್ವಾತಂತ್ರ್ಯವಿದೆ. ಹಾಗೆಯೇ ಮಹಿಷಾಸುರನೇ ನಮ್ಮ ದೇವರು, ಅವನನ್ನೇ ಪೂಜಿಸುತ್ತೇವೆ ಎಂದವರಿಗೂ ಹಾಗೇ ಮಾಡಲು ಸರ್ವ ಸ್ವಾತಂತ್ರ್ಯವಿದೆ. ನವರಾತ್ರಿ ಉತ್ಸವ ಬೇಡ ಎನ್ನಲೂ ಮಹಿಷದಸರಾ ಬೇಡ ಎನ್ನಲೂ ಇಬ್ಬರಿಗೂ ಸ್ವಾತಂತ್ರ್ಯವಿಲ್ಲ. ಯಾಕೆಂದರೆ ಎರಡೂ ಗುಂಪುಗಳಿಗೆ ತಮ್ಮ ಮನಸೋ ಆಚರಣೆಯ ಸ್ವಾತಂತ್ರ್ಯವನ್ನು ಸಂವಿಧಾನ ಕೊಟ್ಟಿದೆ.

ಆದರೆ ಇಲ್ಲಿ ಘರ್ಷಣೆಗೆ ಹಲವಾರು ಕಾರಣಗಳಿವೆ. ಮುಖ್ಯವಾಗಿ ಮಹಿಷಾಸುರ ಮತ್ತು ದುರ್ಗೆ ಎರಡಕ್ಕೂ ಮೂಲ ಒಂದೇ: ದೇವಿ ಮಹಾತ್ಮೆ. ಅದನ್ನು ಬಿಟ್ಟು ಬೇರೆ ಪಠ್ಯಗಳಿಲ್ಲ. ಅದೊಂದೇ ಕಥೆಯ ಬೇರೆಬೇರೆ ಅವತರಣಿಕೆಗಳು ಇವೆ. ಅವೆಲ್ಲವೂ ಪುರಾಣಗಳೇ. ಮಹಿಷಾಸುರನ ಅತ್ಯಂತ ಪುರಾತನ ಉಲ್ಲೇಖ ಪುರಾಣದಲ್ಲಿದೆ ಹೊರತು ಚರಿತ್ರೆಯಲ್ಲಿಲ್ಲ. ಪುರಾಣವನ್ನು ನೇರವಾಗಿ ಇತಿಹಾಸದ ದಾಖಲೆ ಎನ್ನಲು ಸಾಧ್ಯವಿಲ್ಲ. ಹಾಗಾಗಿ ಮಹಿಷಾಸುರ ಪೌರಾಣಿಕ ವ್ಯಕ್ತಿಯೇ ಹೊರತು ಚಾರಿತ್ರಿಕ ವ್ಯಕ್ತಿ ಅಲ್ಲ. ಒಂದು ವೇಳೆ ಮಹಿಷಾಸುರ ಚಾರಿತ್ರಿಕ ವ್ಯಕ್ತಿ ಎಂದು ಒಪ್ಪಿಕೊಂಡರೆ ದೇವಿಯ ಅಸ್ತಿತ್ವವನ್ನೂ ಚಾರಿತ್ರಿಕ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಅದನ್ನು ಸಾಬೀತು ಮಾಡುವ ಭರದಲ್ಲಿ ದುರ್ಗೆಯ ಬಗ್ಗೆ ಅಸಂಬದ್ಧವಾಗಿ ಬಾಯಿಗೆ ಬಂದಂತೆ ಹೇಳುತ್ತಾ (ಚಾಮುಂಡಿ ಆರ್ಯ ಮಹಿಳೆ, ವೇಶ್ಯೆ, ಮೋಸದಿಂದ ಮಹಿಷಾಸುರನನ್ನು ಕೊಂದವಳು ಇತ್ಯಾದಿ) ಉದ್ದೇಶಪೂರ್ವಕ ಗೊಂದಲ ಎಬ್ಬಿಸುವ ಪ್ರಯತ್ನ ಪ್ರಶ್ನಾರ್ಹ. ದಮನಿತರದು ಮೌಖಿಕ ಇತಿಹಾಸವಾದ್ದರಿಂದ ದಾಖಲೆಯಾಗಿಲ್ಲ ಸರಿ. ಅದನ್ನು ಭಾಗಶಃ ಒಪ್ಪಿ ಉಳಿದದ್ದನ್ನು ನಿರಾಕರಿಸಲು ಹೊರಟರೆ ಯಾರ ಸತ್ಯ ಯಾವುದು ಎನ್ನುವ ಗೊಂದಲ ಆಗುತ್ತದೆ.

ಉತ್ತರದವರು ಚಂಡಿ, ಚಾಮುಂಡಾ ಎನ್ನುತ್ತಾರೆ. ಅವಳು ಘೋರ ರೂಪಿ. ಅವಳ ಮೂರ್ತಿಕಲ್ಪನೆ ದುರ್ಗೆಗೆ ಸಂಪೂರ್ಣ ವ್ಯತಿರಿಕ್ತ. ದೇವಿ ಮಹಾತ್ಮೆಯಲ್ಲಿ ಚಂಡಿಯ ವರ್ಣನೆಯನ್ನು ವಿವರವಾಗಿ ಗಮನಿಸಿದರೆ ಅದು ಮಹಾಭಾರತದಲ್ಲಿ ಶಲ್ಯ, ಕರ್ಣನನ್ನು ಹೀಯಾಳಿಸಲು ನಿಮ್ಮ ಆದಿವಾಸಿ ಹೆಣ್ಣುಗಳು ಎಷ್ಟು ಅಸಹ್ಯ ಎಂದು ವರ್ಣಿಸಿದ್ದು ನೆನಪಾಗುತ್ತದೆ. ಅವರ ಆಕಾರ ಗುಣ ಎಲ್ಲವನ್ನೂ ಅವನು ಬಹಳ ಕೇವಲವಾಗಿ ಧಿಕ್ಕರಿಸುತ್ತಾನೆ. ಹಾಗಾಗಿ ವಾಸ್ತವವಾಗಿ ಮಹಿಷಾಸುರನನ್ನು ಮರುವ್ಯಾಖ್ಯಾನಿಸುವ ಬಹುಜನರು, ಬೇಡರ ದೇವತೆ ಚಾಮುಂಡಿಯನ್ನು ಬೇಡರವಳೋ ಅಥವಾ ಆರ್ಯಳೋ ಎನ್ನುವುದನ್ನು ಮೊದಲು ನಿರ್ಣಯ ಮಾಡಬೇಕಾಗುತ್ತದೆ.

ಅವಳು ಪಾನಾಲಸಾಮತ್ತಳು, ರಕ್ತವರ್ಣೆ, ರಕ್ತಾಕ್ಷಿ, ಬಡಕಲು ಪ್ರೇತದಂತಹ ದೇಹದವಳು. ಜೋತ ಮೊಲೆ ಉಳ್ಳವಳು. ಸತ್ತ ನರಿಯನ್ನೇ ಸೊಂಟಕ್ಕೆ ಕಟ್ಟಿಕೊಂಡಿದ್ದಾಳೆ. ಅವಳ ಸುತ್ತ ರಕ್ತಕ್ಕಾಗಿ ಬಾಯಿ ಬಿಡುವ ಪ್ರೇತಗಣಗಳಿವೆ. ಅವಳೇ ರಕ್ತಬೀಜನನ್ನು ನುಂಗಲು ನಾಲಿಗೆಯನ್ನು ನೆಲದಷ್ಟಕ್ಕೂ ಹಾಸಿ ಅವನ ರಕ್ತ ಕುಡಿದವಳು. ಬಲಿ ಕೇಳುವ ಶಕ್ತಿ ದೇವತೆ. ಅವಳೇ ಮಾರಮ್ಮ. ಮಾರಮ್ಮನ ವರ್ಣಸಂಕರದ ಕಥೆಯೇ ಚಾಮುಂಡೇಶ್ವರಿ ಎನ್ನುವ ಹೆಸರಿನಲ್ಲಿ ಮಹಿಷಾಸುರಮರ್ಧಿನಿ ಬೆಟ್ಟದ ಮೇಲೆ ನೆಲೆಸಿದರೆ, ತಪ್ಪಲಿನ ಉತ್ತನಹಳ್ಳಿಯಲ್ಲಿ ಮಾರಮ್ಮನಾಗಿ ಮತ್ತೆ ಸಂಸ್ಕೃತೀಕರಣಗೊಂಡು ಜ್ವಾಲಾಮುಖಿಯಾಗಿದ್ದಾಳೆ ಎಂಬ ಪರಿಕಲ್ಪನೆ ಇದೆ.

ಮುಖ್ಯವಾಗಿ ಸಂತಾಲರು ಮಹಿಷಾಸುರ ನಮ್ಮ ದೊರೆ ಎಂದು ನಂಬಿದ್ದಾರೆ. ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ ಮತ್ತು ನೇಪಾಳದಲ್ಲಿ ಬಹುಸಂಖ್ಯೆಯಲ್ಲಿ ವಾಸವಾಗಿರುವ ಸಂತಾಲರಿಗೆ ಮಹಿಷಾಸುರ ರಾಜ. ಅತ್ತ ಮಹಿಷಾಸುರನು ಬ್ರಹ್ಮರ್ಷಿ ಕಶ್ಯಪನ ಮೊಮ್ಮಗ, ಕಶ್ಯಪನ ಮಗ ಬ್ರಹ್ಮನಿಂದ ವರ ಪಡೆದ ರಂಭಾಸುರ ಮಹಿಷಾಸುರನ ತಂದೆ ಎನ್ನುವ ಕಥೆ ಪರಿಗಣಿಸಿದರೆ ಕಶ್ಯಪನಿಂದಲೇ ಕಾಶ್ಮೀರ ಎನ್ನುವ ಹೆಸರು ಬಂದಿತು. ಹಾಗಾಗಿ ಕಾಶ್ಮೀರದಲ್ಲೂ ಮಹಿಷಾಸುರಮರ್ಧಿನಿಯ ಕತೆ ಇದೆ.

ಐದನೇ ಶತಮಾನದ ಬೌದ್ಧ ತತ್ವಜ್ಞಾನಿ ಬುದ್ಧಘೋಷ ನೀಡಿರುವ ವಿವರಣೆಯಂತೆ ಅಸುರರ ಹೆಸರು ಬಂದಿದ್ದು ಶಕ್ರ ಎನ್ನುವ ಸುರನ ಕೈಯಲ್ಲಿ ಸೋತಾಗ. ಅಸುರರು ಕುಡಿದು ಉನ್ಮತ್ತರಾಗಿ ಕೆಟ್ಟದಾಗಿ ನಡೆದುಕೊಂಡಾಗ ಅವರನ್ನು ಸುಮೇರು ಪರ್ವತದಿಂದ ಹೊರಗೆ ತಳ್ಳಲಾಯಿತು. ಅಂದಿನಿಂದ ಅವರು ಸುರಾಪಾನ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದರು. ಬೌದ್ಧ ಸಾಹಿತ್ಯದಲ್ಲಿ ಅವರನ್ನು ಪೂರ್ವದೇವರೆಂದು (ಪಾಳಿಯಲ್ಲಿ ಪುಬ್ಬದೇವ) ಕರೆಯಲಾಗಿದೆ. ಬೌದ್ಧ ಪುರಾಣದಲ್ಲಿ ಹೇಳಿರುವ ಸುಮೇರು ಪರ್ವತದ ತಪ್ಪಲಿನಲ್ಲಿ ವಾಸವಾಗಿದ್ದ ಅಸುರರಲ್ಲಿ ಮಹಿಷಾಸುರನೂ ಒಬ್ಬ. ಮಹಾಯಾನ ಪಠ್ಯಗಳ ಪ್ರಕಾರ ಅಸುರರು ಸುಮೇರು ಪರ್ವತದ ಉತ್ತರಭಾಗದಲ್ಲಿ ಸಮುದ್ರದ ಕೆಳಗೆ 84,000 ಯೋಜನೆ ವಿಸ್ತಾರದಲ್ಲಿ ವಾಸಿಸುತ್ತಾರೆ. ಅಂದರೆ ಯಾವುದೇ ಬೌದ್ಧ ಪಠ್ಯಗಳಲ್ಲಿ ಅಸುರರು ದಕ್ಷಿಣ ಭಾರತದಲ್ಲಿ ಇದ್ದರು ಎಂದಾಗಲೀ, ಮಹಿಷಾಸುರ ಮಾಹಿಷ್ಮತಿಯನ್ನು ಆಳುತ್ತಿದ್ದ ಬೌದ್ಧ ದೊರೆ ಎನ್ನುವುದಕ್ಕಾಗಲೀ ಯಾವುದೇ ಸಾಕ್ಷಿ ಸಿಗುವುದಿಲ್ಲ. ರಾಜಸ್ಥಾನದಲ್ಲಿ ಮಣ್ಣು ಅಚ್ಚಕೆಂಪಾಗಿರಲು ಕಾರಣ ಮಹಿಷಾಸುರನ ರಕ್ತದಿಂದ ಎನ್ನುತ್ತಾರೆ. ಇನ್ನು ಉಳಿದ ಕಡೆಗಳ ಕಥೆಗಳನ್ನು ಬಿಡಿ. ಇವರೆಲ್ಲರೂ ತಮ್ಮ ಮಹಿಷಾಸುರನನ್ನು ಮೈಸೂರಿಗೇ ಸೀಮಿತಗೊಳಿಸಲು ಒಪ್ಪುತ್ತಾರೆಯೇ? ಹಾಗೆ ಮಾಡಿದರೆ ದೇಶದಾದ್ಯಂತ ಸಂಸ್ಕೃತಿ ಕದನಕ್ಕೆ ಕಾರಣವಾಗಿ ಬಿಡಬಹುದು.

ಇಷ್ಟಲ್ಲದೆ ಬಲಿಯ ಕೋಣ (the sacrificial bull) ಎನ್ನುವ ಪರಿಕಲ್ಪನೆ ಆರ್ಯ, ದ್ರಾವಿಡ, ಗ್ರೀಕ್, ಸುಮೇರಿಯನ್, ಜೋರಾಷ್ಟ್ರಿಯನ್, ಬೌದ್ಧ, ಆಫ್ರಿಕನ್, ಚೀನಿ, ಜಪಾನ್, ಇಂಡೋನೇಷ್ಯನ್, ಬರ್ಮನ್, ಕಾಂಬೋಡಿಯನ್ ಇತ್ಯಾದಿ ಇನ್ನೂ ಅನೇಕ ಸಂಸ್ಕೃತಿಗಳಲ್ಲಿ ಹಾಸುಹೊಕ್ಕಾಗಿದೆ. ಅಂದರೆ ಈಗ ಅವುಗಳ ನಡುವೆ ಸಂಬಂಧ ಕಲ್ಪಿಸುವ ಅಥವಾ ವ್ಯತ್ಯಾಸ ಗುರುತಿಸುವ ಕೆಲಸ ಬಹಳ ಕಷ್ಟ. ಶಕ್ತಿಶಾಲೀ ಹೆಣ್ಣೊಬ್ಬಳು ಕೋಣವನ್ನು ಕೊಂದ ಪರಿಕಲ್ಪನೆ ಇವೆಲ್ಲವುಗಳಲ್ಲಿ ಸಾಮಾನ್ಯವಾಗಿದೆ ಮತ್ತು ಅವಷ್ಟೂ ಸಂಸ್ಕೃತಿಗಳು ಮಹಿಷನನ್ನು ತಮ್ಮವನು ಎಂದು ಹೇಳುತ್ತವೆ. ಮಹಿಷಾಸುರನ ಮೂಲ ನೆಲೆ ಯಾವುದು?

ಆದರೆ ಮೌಖಿಕ ಚರಿತ್ರೆಯನ್ನೇ ನಂಬಿ ಬಂದ ದಲಿತ ಬಹುಜನ ಸಮಾಜ ಮಹಿಷಾಸುರನನ್ನು - ಹಲವು ಗೊಂದಲಗಳ ನಡುವೆಯೂ - ತಮ್ಮ ‘ರಿಕ್ಲೇಮಿಂಗ್ ಕಲ್ಚರ್’ ಹೋರಾಟಕ್ಕೆ ಒಂದು ಐಕಾನ್ ಆಗಿ ಮಾಡಿಕೊಂಡರೆ, ಮಹಿಷ ದಸರಾ ಆಚರಿಸಬೇಕೆಂದು ಬಯಸಿದರೆ ಅದಕ್ಕೆ ಭಯ ಬಿದ್ದು ಅದನ್ನು ವಿರೋಧಿಸುವುದು, ಮಾಡಲು ಬಿಡುವುದಿಲ್ಲವೆಂದು ಧರಣಿ ಕೂರುವುದು, ಗಲಾಟೆ ಮಾಡುವುದು ಇತ್ಯಾದಿಗಳ ಅಗತ್ಯವಿಲ್ಲ. ಐದು ಸಾವಿರ ವರ್ಷಗಳಲ್ಲಿ ಆಗದೇ ಇರುವ ಹಾನಿ ಈಗೇನೂ ಆಗುವುದಿಲ್ಲ.

ಚಿನುವಾ ಅಚೆಬೆ ಹೇಳಿದಂತೆ ‘ಸಿಂಹಗಳು ತಮ್ಮದೇ ಆದ ಇತಿಹಾಸಕಾರರನ್ನು ಹೊಂದುವವರೆಗೆ, ಬೇಟೆಯ ಇತಿಹಾಸವು ಯಾವಾಗಲೂ ಬೇಟೆಗಾರನನ್ನು ವೈಭವೀಕರಿಸುತ್ತದೆ’. ಹಾಗೆಂದು ಪುರಾಣ ಮತ್ತು ಇತಿಹಾಸದ ನಡುವಿನ ವ್ಯತ್ಯಾಸ ಗೊತ್ತಿಲ್ಲದಿದ್ದರೆ ಅಪಾಯ ಕಟ್ಟಿಟ್ಟಿದ್ದು.

ಲೇಖಕಿ: ಪತ್ರಕರ್ತೆ, ಕವಯತ್ರಿ

ಮಹಿಷನಿಗಷ್ಟೇ ಸೀಮಿತವೇ?

ಮಹಿಷಾಸುರನಿಗೆ ಉಗ್ರವೀರ್ಯ, ಉಗ್ರಾಸ್ಯ, ಪ್ರಲಂಬ, ಪ್ರಭಂಜನ, ಸಾರಣ, ಕೃಕಲಾಸ, ಕಾಕವಕ್ರ, ವಿಶಂಕಟ ಎನ್ನುವ ಬಲಶಾಲೀ ಮಕ್ಕಳಿದ್ದರು. ಅವರೆಲ್ಲ ಯುದ್ಧಕ್ಕೆ ಬಂದರು. ಜೊತೆಗೆ ಭೇರುಂಡ, ಕಾಕತುಂಡ, ಕುರಂಡ, ಚಂಡ ವಿಕ್ರಮ, ಭಾಂಡೀರ, ಡಿಂಭ, ಕ್ರಕಚ, ಕಾಚಕಾಂತ, ಕಾಟೊತ್ಕಟ ಎನ್ನುವ ಒಂಬತ್ತು ಮಂತ್ರಿಗಳಿದ್ದರು. ಇವರೆಲ್ಲ ಒಬ್ಬೊಬ್ಬರೂ ಕೋಟಿಗಟ್ಟಲೆ ಸೈನ್ಯಸಹಿತ ಯುದ್ಧಕ್ಕೆ ಬಂದರು. ಅಷ್ಟೆಲ್ಲ ಸೈನ್ಯ ಮತ್ತು ಮಹಾವೀರರನ್ನು ದೇವಿ ಸಂಹರಿಸಿ, ಮಹಿಷಾಸುರನನ್ನೂ ವಧಿಸಿದ ನಂತರವೂ ಯುದ್ಧ ಮುಗಿಯಲಿಲ್ಲ. ಕೊನೆಗೆ ಶುಂಭ ನಿಶುಂಭರ ವಧೆಯಾಗುವವರೆಗೆ ಮುಂದುವರಿಯಿತು ಎಂದೂ ಪುರಾಣ ಹೇಳುತ್ತದೆ. ಈ ಎಲ್ಲಾ ಅಸುರ ವೀರರನ್ನೂ ಬಹುಜನರು ತಮ್ಮವರೆಂದು ಒಪ್ಪಿಕೊಳ್ಳುತ್ತಾರೆಯೇ? ಅಥವಾ ಮಹಿಷಾಸುರನಿಗೆ ಮಾತ್ರ ಇದು ಸೀಮಿತವೇ?

ಬಹುಜನ ದಲಿತರ ವಾದಕ್ಕೆ ಧಕ್ಕೆ?

ಮಹಿಷಾಸುರನಿಗೂ ಮೊದಲು, ಚಂಡ ಮುಂಡ ಎನ್ನುವ ಇಬ್ಬರು ಅಸುರರನ್ನು ಕೊಂದು ಅವರ ಶಿರಗಳನ್ನು ತಂದು ಕಾಳಿಯು ಮಹಾದೇವಿ ದುರ್ಗೆಯ ಕಾಲ ಬಳಿ ಇಟ್ಟಾಗ ದೇವಿ, ಚಂಡ ಮುಂಡರನ್ನು ಕೊಂದಿದ್ದರಿಂದ ಇನ್ನುಮುಂದೆ ನೀನು ಚಾಮುಂಡಾ ಎಂದು ಪ್ರಖ್ಯಾತಿಯಾಗು ಅನ್ನುತ್ತಾಳೆ. ಮೈಸೂರಿನಲ್ಲಿ ನೆಲೆಯಾಗಿರುವವಳು ಚಾಮುಂಡೇಶ್ವರಿ. ಚಂಡಮುಂಡರನ್ನು ಕೊಂದವಳು. ಆದರೆ ಅದೊಂದು ಸಣ್ಣ ವಿವರಣೆ.

ಸೂಕ್ಷ್ಮ ವಿವರಗಳನ್ನು ಬಿಟ್ಟು ಅವಳೇ ಮಹಿಷಾಸುರಮರ್ಧಿನಿ ಎಂದು ಭಾವಿಸಿದರೂ ಅವಳು ರಕ್ತವರ್ಣೆ, ದ್ರಾವಿಡ ಹೆಣ್ಣು. ಯಾಕೆಂದರೆ ಸ್ಥಳೀಯ ದ್ರಾವಿಡ ಸಂಸ್ಕೃತಿಯ ದೇವರುಗಳನ್ನು ವೈದಿಕ ದೇವಗಣಗಳಲ್ಲಿ ಮೇಳೈಸಿಕೊಳ್ಳುವ ಪರಿಪಾಟ ಬಹಳವಾಗಿದ್ದರಿಂದ ಬೇಡರ ದೇವತೆ ಚೌಡಿಯನ್ನು ಅವರು ದುರ್ಗೆ ಎಂದು ಸೇರಿಸಿಕೊಂಡುಬಿಟ್ಟರು. ತಮಿಳರು ಇನ್ನೂ ಬಲವಾಗಿ ತಮ್ಮ ಕೊಟ್ರಾವೈ ಎನ್ನುವ ಬೇಡರ ದೇವತೆಯೇ ದುರ್ಗೆ ಎಂದು ವಾದಿಸುತ್ತಿದ್ದಾರೆ. ಈ ವಾದದ ಅನುಸಾರ ದ್ರಾವಿಡ ಬೇಡರ ಹೆಣ್ಣನ್ನು ವೈದಿಕರ ಆರ್ಯ ದುರ್ಗೆಯಾಗಿ ಮಾರ್ಪಡಿಸಿಕೊಂಡರು ಎಂದು ಒಪ್ಪಿಕೊಂಡರೆ, ಮಹಿಷಾಸುರನನ್ನು ಆರ್ಯರ ಹೆಣ್ಣು ಚಾಮುಂಡಿ/ದುರ್ಗೆ ಮೋಸದಿಂದ ಸಂಹರಿಸಿದಳು ಎನ್ನುವ ವಾದಕ್ಕೆ ಧಕ್ಕೆಯಾಗುವುದಿಲ್ಲವೇ?

ಉಲ್ಲೇಖಗಳು

* ರಾಮಾಯಣದಲ್ಲಿ ದುರ್ಗಿಯ ಉಲ್ಲೇಖ - ಕ್ರಿ.ಪೂ. 8 ನೇ ಶತಮಾನ

* ಮಹಾಭಾರತದಲ್ಲಿ ದುರ್ಗಿ ಮತ್ತು ಮಹಿಷಮಂಡಲ, ಮಾಹಿಷ್ಮತಿಯ ಪ್ರಸ್ತಾಪ. - ಕ್ರಿ.ಪೂ. 3 ನೇ ಶತಮಾನ

* ಬುದ್ಧನ ಕಾಲ 563 - ಕ್ರಿ.ಪೂ. 480

* ತಮಿಳಿನ ತೊಳ್ಕಾಪ್ಪಿಯಂನಲ್ಲಿ ಎರುಮೈನಾಡು ಪ್ರಸ್ತಾಪ, ಕೊಟ್ರಾವೈ ದೇವಿ, ಇವಳೇ ದುರ್ಗೆ ಎನ್ನುತ್ತಾರೆ - ಕ್ರಿ.ಪೂ. ಕಾಲ ನಿರ್ಣಯ ನಿರ್ಧಾರವಿಲ್ಲ

* ಅಶೋಕನ ತಂದೆ ಬಿಂದುಸಾರನ ಕಾಲದಲ್ಲಿ ಮಹಿಷಮಂಡಲದ ಪ್ರಸ್ತಾಪ - ಕ್ರಿ.ಪೂ. 297 – 272

* ಅಶೋಕ ಮಹಿಷಮಂಡಲಕ್ಕೆ ಥೇರ ಮಹಾದೇವ ಭಿಕ್ಕುವನ್ನು ಕಳಿಸಿದ್ದು - ಕ್ರಿ.ಪೂ. 245

* ಹಾಗಾಗಿ ಭಿಕ್ಕು ಥೇರ ಮಹದೇವನೇ ಮಹಿಷಾಸುರನಾಗುವುದು, ಸಂಹಾರದ ನಂತರ ಮಹಿಷನೂರು - ಮಹಿಶೂರು - ಮೈಸೂರು ಎಂದು ಹೆಸರಾಗುವುದು ಎನ್ನುವ ವಾದಕ್ಕೆ ಬಲವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.